RSS

ಮರೆಯುವ ಬದುಕು-ಬಂಧ

03 Oct

ದೇವಾಮೃತಗಂಗೆ//ರಘುನಂದನ ಕೆ.

ನಿನ್ನ ಬೆರಳ ತುದಿಯ ಸ್ಪರ್ಶಕ್ಕೆ
ನನ್ನೆದೆಯ ಕರಘಂಟೆ ಮೊಳಗಿ
ಬಾಗಿಲು ತೆರೆದರೆ
ಎದುರುಗೊಂಡಿದ್ದು ನೀನಲ್ಲ
ನಿನ್ನ ಕಿಲಕಿಲ ನಗೆ
ಬೆಚ್ಚಗಿನ ಒಲವ ಬಗೆ.

ಅದೇ ಬೆರಳ ತುದಿಯಿಂದ
ಹರಿದ ಎಸ್ಸೆಮ್ಮೆಸ್ ಪ್ರೇಮ
ನನ್ನ ಬೆರಳ ತುದಿಯ ಸ್ಪರ್ಶಿಸಲು
ಅರಳಿದ್ದು ನೂರು ರಿಂಗ್‍ಟೋನ್‍ಗಳು
ಈಗ ಕೈಗಳಲ್ಲಿ ಕೈಗಳು ಬೆಸೆಯುವುದಿಲ್ಲ
ಬೆರಳ ತುದಿಗಳಿಗೆ ಪುರುಸೊತ್ತಿಲ್ಲ..!!

ಸಾಪ್ಟ್ ವೇರ್‍ಗಳ ಲೋಕದಲ್ಲಿ
ಮುಳುಗಿದ್ದಾಳೆ ಸಾಪ್ಟ್ ಹುಡುಗಿ
ಪುಟ್ಟ ಪೆಟ್ಟಿಗೆಯೊಳಗೆ
ಬ್ರಹ್ಮಾಂಡವೇ ಕಾಣುತ್ತದೆ
ಬಾಯ್ತೆರೆದು ಬ್ರಹ್ಮಾಂಡ ತೋರಿದ
ಕೃಷ್ಣ ಕೂಡ ಕಂಪ್ಯೂಟರೊಳಗೆ ಬಂಧಿ
ತುಂಟ ಹುಡುಗಿಯ ಕೈಯ ಹಿಡಿತಕ್ಕೆ
ಸಿಕ್ಕ ಮೌಸ್ ಬಾಲ ಅಲ್ಲಾಡಿಸಿದೆ…!!

ಪಾಳಿಯಲ್ಲಿ ಹಗಲಿರುಳುಗಳ ನುಂಗಿ
ಕಾಂಚಾಣ-ಕಾರ್ಡುಗಳ ರಾಶಿಯಲ್ಲಿ
ಪರ್ಸುಗಳು ಭಾರವಾಗಿವೆ
ವಾರದ ಕೊನೆಯಲ್ಲಿ
ಎಲ್ಲಕ್ಕೂ ಹೊರಗಿಣುಕುವ ತವಕ

ಪಬ್ಬು-ಕ್ಲಬ್ಬುಗಳ ನಶೆಯಲ್ಲಿ
ವೀಕೆಂಡುಗಳ ಹುಡುಕಿ
ಓಡುವವರ ವಿಚಿತ್ರ ಲೋಕದಲ್ಲಿ
ಬಂಧಗಳು ವೀಕ್ ಆಗಿದ್ದು
ತಿಳಿವ ಮೊದಲೇ
ಕಂಪ್ಯೂಟರ್ ಕರೆಯುತ್ತದೆ
ಬದುಕು ಮರೆಯುತ್ತದೆ…!!

 

ದಿನಾಂಕ: 03.10.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/?p=65458 .

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)
 

Leave a comment