RSS

Monthly Archives: ಸೆಪ್ಟೆಂಬರ್ 2013

ನಾಗರಿಕತೆಯ ತೊಟ್ಟಿಲಲ್ಲಿ ಜೀವಂತಿಕೆಯ ಕನಸು

ಯಾವಲ್ಲೋಚನ ಗೋಚರಾ//ರಘುನಂದನ ಕೆ.

ಅನಂತ ವಿಶ್ವ, ಈ ಭೂಮಿ ಎಷ್ಟೋ ನಾಗರಿಕತೆಗಳಿಗೆ ತೊಟ್ಟಿಲು. ಕಾಲನ ಗರ್ಭದಲ್ಲಿ ಅನಾದಿ ಕಾಲದಿಂದ ಅಸಂಖ್ಯ ನಾಗರಿಕತೆಗಳು ಹುಟ್ಟಿ ಕರಗಿ ಮರೆಯಾಗಿವೆ. ಬೆಳೆದು ಬಂದದ್ದೆಷ್ಟು, ಉಳಿದು ನಿಂತದ್ದೆಷ್ಟು, ಕಳೆದು ಹೋದದ್ದೆಷ್ಟು ಎಂದು ಹುಡುಕುತ್ತಲೇ ಇದ್ದಾನೆ ಇಂದಿನ ನಾಗರಿಕತೆಯ ಮನುಷ್ಯ. ಅವನಿಗೆ ತನ್ನದೇ ಮಹಾನ್ ನಾಗರಿಕತೆ ಎಂದು ಭ್ರಮಿಸುವ ಚಪಲ. ಕಾಡ ನಡುವೆ, ನದಿ ಬಯಲುಗಳಲ್ಲಿ ಅರಳಿದ, ಬೆಳೆದ ಬದುಕ ವಿಧಾನಗಳನ್ನು ನಾಗರಿಕತೆ ಎಂದು ಒಪ್ಪಿಕೊಳ್ಳಲಾರ. ಆದಿಕಾಲದ ಮಾನವನ ನೆಮ್ಮದಿಯ ಜೀವನ ಇಂದಿನವನ ಪಾಲಿಗೆ ನಾಗರಿಕತೆ ಆಗದಿರುವುದೇ ಹೆಚ್ಚು. ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವನ ಸಮಾಜ ಅಥವಾ ಸಂಸ್ಕøತಿಯೇ ನಾಗರಿಕತೆ ಎನ್ನವುದು ವ್ಯಾಖ್ಯಾನ. ವ್ಯವಸ್ಥಿತ ಹಂತ ತಲುಪಿದ ನಂತರ ಬೆಳವಣಿಗೆ ನಿಲ್ಲುತ್ತದಾ, ನಾಗರಿಕತೆಯೆಂದರೆ ಬೆಳೆಯುತ್ತಲೇ ಇರುವ ಪದ್ಧತಿಯಾ. ವ್ಯವಸ್ಥಿತ ಹಂತ ಯಾವುದು ಎನ್ನುವುದು ಪ್ರತೀ ಕಾಲಘಟ್ಟದಲ್ಲಿಯೂ ಪ್ರಶ್ನೆಯೇ. ಇಂದಿನವನಿಗೆ ಈಗಿರುವುದು ವ್ಯವಸ್ಥಿತ ಹಂತ, ಹಿಂದಿನದು ಚರಿತ್ರೆ. ಬದಲಾವಣೆ ಕಾಲದ ನಿಯಮ. ಪ್ರಕೃತಿ ತನ್ನ ಒಡಲಲ್ಲಿ ಎಷ್ಟೋ ವಿಸ್ಮಯಗಳನ್ನ ಅಡಗಿಸಿಕೊಳ್ಳುತ್ತ ಹೊಸ ಹೊಸ ನಾಗರಿಕತೆಗಳ ಸೃಷ್ಟಿಸುತ್ತ ಮತ್ತೆ ಮತ್ತೆ ಪುನರಾವರ್ತಿತವಾಗುತ್ತಲೇ ಇದೆ.

ಇತಿಹಾಸ ಕಥೆ ಹೇಳುತ್ತದೆ. ಬೆಳೆದು ಬಂದ ನಾಗರಿಕತೆಗಳ ಪಳೆಯುಳಿಕೆಗಳ ತೆರೆದಿಡುತ್ತದೆ. ಹರಪ್ಪಾ ಮೆಹಂಜೋದಾರ್‍ನಲ್ಲಿನ ವ್ಯವಸ್ಥಿತ ನಗರಗಳ, ನೈಲ್ ನದಿಯ ದಡದಲ್ಲಿ ಹಬ್ಬಿ ನಿಂತ ಷಹರಗಳ ಚರಿತ್ರೆಯಲ್ಲಿ ಅಂದಿನ ನಾಗರಿಕತೆ ಸಿಗುತ್ತದೆ. ಆದರೆ, ಅಂದಿನ ಜನರ ಮಸ್ಥಿತಿ ಇತಿಹಾಸವನ್ನು ಮೀರಿದ್ದಲ್ಲವಾ! ಇಂದು ಬೆಳೆದು ನಿಂತ ಮಾನವ ಜನಾಂಗದ ನಾಗರಿಕತೆಯಲ್ಲೂ ದೂರದ ಕಾಡುಗಳಲ್ಲಿ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ, ಆಫ್ರಿಕಾದ ಹೆಸರರಿಯದ ಪ್ರದೇಶಗಳಲ್ಲಿ, ದಕ್ಷಿಣ ಅಮೆರಿಕಾದ ಬ್ರೆಜಿಲ್, ಅಮೇಜಾನ್ ಅರಣ್ಯ ಪ್ರದೇಶಗಳಲ್ಲಿಯೂ ಚರಿತ್ರೆ ದಾಖಲಿಸಲು ಮರೆತ ನಾಗರಿಕತೆಗಳಿದೆಯಲ್ಲ. ಸಂಸ್ಕøತಿ, ಪರಂಪರೆ, ಗಿಡ, ಬಳ್ಳಿ, ಪಶು, ಪಕ್ಷಿಗಳ ಬಗೆಗಿನ ಜ್ಞಾನವನ್ನು ಅನುಭವದಿಂದಲೇ ಶೋಧಿಸಿಕೊಳ್ಳುತ್ತ ನಿಸರ್ಗದೊಂದಿಗೆ ಭಕ್ತಿಪೂರ್ವಕ ಸಂಬಂಧವಿಟ್ಟುಕೊಂಡ ಕಾಡು ಮನುಷ್ಯನ ಮನೋಧೈರ್ಯ, ಲ್ಯಾಬ್‍ಗಳಲ್ಲಿ ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತ ನಾಗರೀಕನೆನ್ನುವವನಿಗೆ ಎಲ್ಲಿದೆ. ಪರಂಪರೆಯ ಹರಿವಿನಿಂದ ಪಡೆದ ಬುದ್ಧಿವಂತಿಕೆಯಿಂದ ಮರೆತಿರಬಹುದಾಗಿದ್ದ ವಿಜ್ಞಾನದ ಜ್ಞಾನವನ್ನು ಪುನಃ ಪಡೆದು ಹಿಂದಿನದಕ್ಕೆ ಅನಾಗರಿಕತೆಯ ತೆರೆ ಸರಿಸುತ್ತಾನೆ ಮಾನವ. ಗಿರಿ ಶಿಖರಗಳ ಹತ್ತಬೇಕು, ಇಳಿಯಬೇಕು, ಮಳೆ ಛಳಿಗೆ ತುತ್ತಾಗಬೇಕು, ಕಾಡು ಪ್ರಾಣಿಗಳೊಂದಿಗೆ ಹೊಡೆದಾಡಬೇಕು, ಒಡನಾಡಬೇಕು, ನದಿ ತೀರದಲ್ಲೋ ಜಲಸಿರಿಯ ಮೈದಾನಗಳಲ್ಲೋ ಗೆಡ್ಡೆ ಗೆಣಸು ತಿನ್ನುತ್ತ ಭೇಟೆಯಾಡುತ್ತ ಸರಳವಾಗಿ ಬದುಕಿದ್ದ ಜನ ಇಂದಿನ ನಾಗರಿಕತೆಯಲ್ಲಿ ಆದಿವಾಸಿಗಳಾಗಿಯೂ ಅನಾಗರಿಕತೆಯ ಲೇಪದೊಂದಿಗೆ ಗುರುತಿಸಲ್ಪಡುವುದು ಕಾಲದ ಸೋಜಿಗ.

ಮನುಷ್ಯ ತನ್ನ ಕೆಲಸಗಳ ತಾನೇ ಮಾಡಿಕೊಳ್ಳುತ್ತ ಸ್ವಾಲಂಭಿಯಾಗಿರುವಾಗ ಸಂತಸದಿಂದಿದ್ದ. ಸುಖದ ಹುಡುಕುವಿಕೆಯ ಅನ್ವೇಷಣೆಯಲ್ಲಿ ಹೊಸತುಗಳ ಆವಿಷ್ಕಾರ ಮಾಡಿ ಸಲಕರಣೆ ಯಂತ್ರಗಳ ಅವಲಂಬಿಯಾದಾಗ ಪ್ರಕೃತಿಯಿಂದ ದೂರ ಸರಿಯುತ್ತ ಅಂತರಂಗವನ್ನು ಕೊಂದುಕೊಳ್ಳುತ್ತ ಬದುಕನ್ನೇ ವಾಣಿಜ್ಯವಾಗಿಸಿ ಜೀವಿಸುವುದ ಮರೆತ. ನಾಗರೀಕನೆನಿಸಿಕೊಳ್ಳುವ ಮಾನವ ಆದಿವಾಸಿಗಳಷ್ಟು ಖುಷಿಯಲ್ಲ. ಖುಷಿಗಾಗಿ ಹುಡುಕಾಟವಿದೆ ಇಲ್ಲಿ. ಅವಲಂಬನೆ ಕೊಂದಿದ್ದು ಮನುಷ್ಯನ ಜೀವಂತಿಕೆಯೊಂದನ್ನೇ ಅಲ್ಲ ಅವನ ಆತ್ಮ ವಿಶ್ವಾಸ ಆತ್ಮ ಸ್ಥೈರ್ಯಗಳನ್ನು ಕೂಡ. ಎಲ್ಲ ಹೋರಾಟಗಳ ನಡುವೆಯೂ ಆತ್ಮವಿಶ್ವಾಸದಿಂದ ಮನುಷ್ಯ ಬೀಗುತ್ತಿದ್ದ ದಿನಗಳ ಕಾಲ ಕಂಡಿದೆ. ಇಂದು ಅದೇ ಕಾಲ ಚಿಕ್ಕಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಮನುಷ್ಯನ ಕಾಣುತ್ತಿದೆ. ಬದಲಾದದ್ದು ಕಾಲ ಅಲ್ಲ ಮನುಷ್ಯ. ಬೆಳೆಸಬೇಕೆಂದು ಆವಿಷ್ಕರಿಸಿದ್ದು ಬಳಸಿದ್ದು ಮನುಷ್ಯನ ಕೊಳೆಸುತ್ತಿದೆ.

ಎಂದೋ ತೊರೆದ ಗಂಡನ ಕಾಲಿಲ್ಲದ ಮಗನ ಪೊರೆಯುವ ಅಂಡಮಾನ್ ಕಾಡುಗಳ ಸಾಗರದೀಪದ ಹೆಂಗಸಿನ ಛಲ, ಆನಂದ ಷಹರದ ಮಾನವನ ಅರಿವಿಗೇ ನಿಲುಕದೆ ಸತಾಯಿಸುತ್ತದೆ. ಒಂದೇ ಸಮನೆ ತುಯ್ಯುವ ಅಲೆ ಸ್ವಲ್ಪ ಬೆಳೆದರೂ ಸಾಕು ಈ ಮನುಷ್ಯ ಕಂಗಾಲಾಗುತ್ತಾನೆ. ಆಸರೆಗೆ ಅವಲಂಬನೆಗೆ ಹುಡುಕುತ್ತಾನೆ. ಪ್ರಕೃತಿಯೇ ಸಿಡಿದೆದ್ದು ಬಡಿದರೂ ಏಕಾಂಗಿಯಾಗಿ ಎದುರಿಸುವ ಮನೋಧೈರ್ಯದ ಮನುಷ್ಯ ನಮ್ಮೊಳಗಿಂದ ಮತ್ತೆ ಹುಟ್ಟಬೇಕಿದೆ. ಅಂತಹ ಮನುಷ್ಯ ಐಷಾರಾಮಿ ಅಮಲುಗಳಲ್ಲಿ ಅರಳಲಾರ. ಪ್ರಕೃತಿಯೊಡನೆ ಬೆಸೆದ ಹಸಿರಲ್ಲಿ ಮೂಡಬಲ್ಲ. ಬಾಹ್ಯ ನಟನೆಗಿಂತ ಅಂತರಂಗದ ಸಹಜ ಆನಂದಗಳ ಹುಡುಕುವ ದಿನ ಬಂದಾಗ ಎಲ್ಲರ ಮನಸ್ಸಲ್ಲಿ ಮನುಷ್ಯರಾಗುವ ಜೀವಂತ ಕನಸುಗಳು ಅರಳುತ್ತವೇನೋ.

ಅಭಿವೃದ್ಧಿ ಮತ್ತು ಆಧುನಿಕತೆ ನೆಲದ ಸಂಸ್ಕøತಿಯಿಂದ ಮನುಷ್ಯನನ್ನು ದೂರ ಮಾಡಿದ್ದು ಹೇಗೆ? ಅರಿವಿಗೇ ನಿಲುಕದಂತೆ ಭಕ್ತಿ ಪೂರ್ವಕ ಬಂಧ ಹೊಂದಿದ್ದ ನಿಸರ್ಗವನ್ನ ಉಪಭೋಗದ ವಸ್ತುವನ್ನಾಗಿಸುವ ಅಹಂಕಾರವನ್ನು ಮನುಷ್ಯನಿಗೆ ಕಲಿಸಿದ ನಾಗರಿಕತೆ ಯಾವುದು? ಬೆಳೆದು ಬಂದ ಸಂಸ್ಕೃತಿ ಸಂಸ್ಕಾರವಾಗಿ ಮಾನವನ ಎದೆಯೊಳಗೆ ಇಳಿದಿದ್ದಲ್ಲದೆ ಮಾನವತೆ ಮೂಡದು, ಮಾನವತೆಯ ಜೀವಂತಿಕೆ ಇಲ್ಲದೆ ನಾಗರಿಕತೆ ಚರಿತ್ರೆಯ ಪಾಠ ಮಾತ್ರ. ವಿಕಾಸವಾದ ಹೇಳುತ್ತದೆ, ಪ್ರಬಲವಾದದ್ದು ಶಕ್ತಿಯುತವಾದದ್ದು ಉಳಿಯುತ್ತದೆಯೆಂದು. ನಾಗರಿಕತೆ ಸಾರುತ್ತಿದೆ, ಪ್ರಬಲತೆಯನ್ನು ನಿಯಂತ್ರಿಸಲಾಗದೆ ತನ್ನದೇ ಶಕ್ತಿ ಜ್ಞಾನದಿಂದ ನಾಗರಿಕತೆ ಸಾಯುತ್ತದೆಂದು.

ನಗ್ನ ಆದಿವಾಸಿಗಳ ಜರೆವ ನಾಗರೀಕನ ಮನಸ್ಸು ಬೆಳವಣಿಗೆಯ ಹಂತಗಳ ಅಣಕಿಸುತ್ತಿದೆ. ತಮ್ಮ ಕತ್ತಲ ಮುಚ್ಚಿಕೊಳ್ಳಲಾಗದವ ಉಳಿದವರ ಬೆತ್ತಲೆಯೆಡೆಗೆ ಕೈ ತೋರಿಸುವ ವ್ಯಂಗ್ಯಕ್ಕೆ ನಾಗರಿಕತೆ ನೋಯುತ್ತಿದೆ. ಆಧುನಿಕ ನಾಗರಿಕತೆ ಅನಾಗರೀಕರನ್ನು ಸೃಷ್ಟಿಸಿದೆ ಎನ್ನುವುದು ಇಂದಿನ ಬದುಕಿನ ಬಹುದೊಡ್ಡ ವ್ಯಂಗ್ಯ. ಜನನಿಬಿಡ ನಗರಗಳಲ್ಲಿ ಬದುಕುವವರಿಗಿಂತ ಪ್ರಕೃತಿಯ ಒಡಲಲ್ಲಿ ಬದುಕುವ ಜೀವಗಳು ಹೆಚ್ಚು ಆತ್ಮಗೌರವದವರೂ, ಜೀವಂತಿಕೆಯುಳ್ಳವರೂ ಆಗಿರುತ್ತಾರೆ. ಇವರಿಗೆ ಕೃತಕತೆಯ ಸೋಂಕಿಲ್ಲ, ಅಮ್ಮಂದಿರ ವೃದ್ಧಾಶ್ರಮಗಳಿಗೆ ನೂಕುವ ಹುಂಬತನವಿಲ್ಲ. ಸಹಜತೆಯಲ್ಲೇ ಕಿತ್ತಾಡುತ್ತಾರೆ. ಮರುಕ್ಷಣವೇ ಪ್ರೀತಿ ತೋರುತ್ತಾರೆ. ಪ್ರಕೃತಿಯ ತುಸು ನೋವಿಗೂ ರೋಧಿಸುತ್ತಾರೆ. ಎಲ್ಲರನ್ನ ಬದುಕಿನ ತೆಕ್ಕೆಯೊಳಗೆ ಕೈ ಚಾಚಿ ಬರಮಾಡಿಕೊಳ್ಳುತ್ತಾರೆ. ಯಾವುದಕ್ಕೂ ಯಾಂತ್ರಿಕತೆಯ ಕೃತಕತೆಯ ಲೇಪವಿಲ್ಲ. ಇಲ್ಲಿ ಎಲ್ಲವೂ ಸ್ವಚ್ಛ, ಸರಳ. ಎಲ್ಲೋ ದೂರದಲ್ಲಿ ಕನಸಲ್ಲೂ ಅಸ್ಪಷ್ಟವಾಗಿ ಕಾಣುತ್ತಿರುವ ನಮ್ಮದೇ ಹಿರಿಯರ ಇಂತಹ ಚಿತ್ರಗಳೆಲ್ಲ ಮತ್ತೆ ಮುನ್ನಲೆಗೆ ಬರಲಿ, ತನ್ನ ಪ್ರತಿಬಿಂಬಗಳನ್ನೇ ಗುರುತಿಸಲಾಗದ ಮುಖವಾಡದ ನಾಗರಿಕರಿಗೆ ದಾರಿ ತೋರಲಿ.

(ದಿನಾಂಕ: 31.08.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/2013/08/31/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%95%E0%B2%A5%E0%B3%86-%E0%B2%B9%E0%B3%87%E0%B2%B3%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86/)
Advertisements