RSS

Category Archives: ಯಾವಲ್ಲೋಚನ ಗೋಚರಾ

ಕೊಳಲ ದನಿಯ ಉಂಗುರಗಳ ಹಾಡು ಕಾಡುವಾಗ

ಯಾವಲ್ಲೋಚನ ಗೋಚರಾ//ರಘುನಂದನ ಕೆ.

ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ;
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ!

ಅರೆ, ಅವಳ್ಯಾಕೆ ನಕ್ಕ ಹಾಗೆ ನಟಿಸುತ್ತಿದ್ದಾಳೆ, ಅವಳ ನಟನೆ ಯಾರಿಗಾಗಿ, ಅವನದ್ಯಾಕೆ ಸುಮ್ಮನೆ ನಗು ಎನ್ನುತ್ತಿದ್ದಾನೆ, ನಗುವನ್ನ ಹುಟ್ಟಿಸಲು ಅವನಲ್ಲಿ ಕಾರಣಗಳೇ ಕಳೆದು ಹೋಗಿದ್ಯಾ, ಅವಳ ಸಹಜ ನಗುವನ್ನ ಕದ್ದು ನಟಿಸುವಂತೆ ಮಾಡಿದ್ಯಾವದು, ಅವಳಲ್ಲಿ ಅವಳ ಒಲವಿನ ಒಳಮನೆಯಲ್ಲಿ ಅದ್ಯಾವ ಕಾವು ಸುಡುತ್ತಿದೆ, ಕತ್ತಲೆ ಏಕೆ ಆವರಿಸಿದೆ, ಅವನು ಬೆಳಕಾಗಿಸಲು ತಂಪಾಗಿಸಲು ಏನು ಮಾಡಲಾರನಾ, ಅವನದ್ಯಾಕೆ ಹಾರೈಕೆಯ ಮಾತನ್ನಾಡುತ್ತಿದ್ದಾನೆ ಹೀಗೆಲ್ಲ ಪ್ರಶ್ನೆಗಳ ಹುಟ್ಟಿಸುತ್ತ ಎದುರಾಗುತ್ತದೆ ಕೆ. ಎಸ್. ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದ ಮೊದಲೆರಡು ಸಾಲು.

ಕವನದ ಪೂರ್ಣತೆಯಲ್ಲಿ ಹೀಗೊಂದು ಅವಳು ಹಾಗೊಬ್ಬ ಅವನು ಸಿಕ್ಕುತ್ತಾರೆ. ಆದರೆ ಈ ಎರಡು ಸಾಲುಗಳಲ್ಲಿ ಅವಳು ಅವನೂ ಆಗಬಹುದು, ಅವನು ಅವಳೂ. ಅಷ್ಟಕ್ಕೂ ಮನಸ್ಸೆನ್ನುವುದು ಅವಳಿಗೂ ಅವನಿಗೂ ಇಬ್ಬರಿಗೂ ಇರುತ್ತದಲ್ವಾ. ಒಳಮನೆಯಲ್ಲಿ ಕಾವು ಯಾರಿಗೂ ಕಾದಿರಬಹುದು ತಾನೆ. ಅಷ್ಟಕ್ಕೂ ಸುಮ್ಮನೆ ನಗುವೊಂದು ಅರಳುತ್ತದಾ. ಸುಮ್ಮಸುಮ್ಮನೆ ನಕ್ಕುಬಿಟ್ಟರೆ ಅದು ನಟನೆಯಾಗದಾ. ಅವಳೊಲವಿನ ಒಳಮನೆಯಲ್ಲಿ ಕುಳಿತಿರುವವರಾರು, ಆ ಒಳಮನೆಯ ಕಾವು, ಕತ್ತಲೆ ಅವನನ್ನ ಕಾಡುತ್ತಿದೆಯಾ, ಅವನನ್ನ ಖುಷಿಯಾಗಿಡಲು ಅವಳು ನಕ್ಕ ಹಾಗೆ ನಟಿಸುತ್ತಿದ್ದಾಳಾ, ಅದು ಗೊತ್ತಾಗಿ ಅವನ ಜೀವ ಚಡಪಡಿಸಿ ಅವಳ ಒಳಮನೆಯಲ್ಲಿ ಬೆಳಕಾಗಲಿ, ತಂಪಾಗಲಿ ಎಂದು ಹಾರೈಸುತ್ತಿದ್ದಾನಾ?? ಎರಡೇ ಸಾಲುಗಳು ಎಲ್ಲೆಲ್ಲೋ ಕರೆದೊಯ್ದು ಏನೇನೋ ಹುಡುಕಾಟಕ್ಕೆ ಹಚ್ಚಿಬಿಟ್ಟು ಸತಾಯಿಸುತ್ತದೆ. ಹೀಗೆ ಹುಡುಕುತ್ತ ಹೋದರೆ ಎರಡೇ ಸಾಲು ನಮ್ಮೊಳಗೊಂದು ಅವ್ಯಕ್ತ ನೋವಿನ ಕಥೆಯನ್ನೇ ತಂದು ಬಿಡಬಲ್ಲದೇನೋ.

ಹೀಗೆ ಒಂದಷ್ಟು ಪ್ರಶ್ನೆಗಳ ಮೂಡಿಸುತ್ತ ಶುರುವಾಗುತ್ತದೆ ಕವನ. ಮುಂದುವರೆಯುತ್ತ ಅಷ್ಟಷ್ಟೆ ಸ್ಪಷ್ಟವಾಗುತ್ತಾ, ಸ್ಪಷ್ಟವಾದ ಮೇಲೂ ಅಸ್ಪಷ್ಟವಾಗಿಯೇ ಉಳಿಯುತ್ತ ಬೆಳೆಯುತ್ತ ಹೋಗುತ್ತದೆ. ಹಾರೈಕೆಯೊಂದಿಗೆ ಶುರುವಾದಂತಿರುವ ಕವನ ಮುಂದಿನ ಸಾಲುಗಳಿಗೆ ಹೊರಳುವಷ್ಟರಲ್ಲಿ ಮತ್ತಷ್ಟು ಹಾರೈಕೆಗಳಾಗುತ್ತದೆ. ಮೊದಲೆರಡು ಸಾಲುಗಳ ವಿಷಾದವನ್ನ ದಾಟಿ ಸುಖದ ಆಶಯದ ಬೆಳದಿಂಗಳ ಚೆಲ್ಲುತ್ತದೆ ಕವನ ಈ ಮುಂದಿನ ಸಾಲುಗಳಲ್ಲಿ.

ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ!
ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!

ಬಾನತುಂಬ ತಾರೆ ಮಿನುಗಿ, ನಿನಗೆ ಶುಭವ ಕೋರಲಿ!
ಹೂ ಬೇಲಿಯ ಹಾದಿಯಲ್ಲಿ ಬೆಳ್ಳಿಹಕ್ಕಿ ಹಾಡಲಿ!.

ಬೆಳದಿಂಗಳು ಅರಳುವ ಅಲೆಗಳ ಸೊಗಸನ್ನ ಒಲವಾಗಿಸಿ, ಆ ಒಲವ ತೆರೆಗಳಲ್ಲಿ ಮತ್ತಷ್ಟು ಬೆಳದಿಂಗಳ ತುಂಬಿ ಮಲ್ಲಿಗೆ ಹೂವರಳಿಸುವ ಹಸಿರು ಕನಸಿನ ಆಶಯ ಅವನದು. ತಾರೆ, ಚಂದ್ರ, ಬೆಳದಿಂಗಳೆಲ್ಲವ ಕರೆದು ಶುಭ ಕೋರುತ್ತವೆ ಸಾಲುಗಳು. ಅವಳ ಕನಸನ್ನ ಹಸಿರಾಗಿಸಿ ಮಲ್ಲಿಗೆಯರಳಿಸಿ ಒಲವ ಬೆಳದಿಂಗಳಲ್ಲಿ ಹೊರಳುವ ಆಸೆಯಿರಬಹುದಾ ಅವನಿಗೆ. ಯಾರು ಯಾರಿಗೂ ಹಾರೈಸಬಹುದಾದ ಸುಲಭ ಸಾಲುಗಳಂತೆ ಗೋಚರಿಸುತ್ತಲೇ ಮೊದಲೆರಡು ಸಾಲಿನ ವಿಷಾದಕ್ಕೆ ಹೊಂದಿ, ಅವಳ ಕನಸಲ್ಲಿ ಇವೆಲ್ಲ ಈಗ ಯಾಕಿಲ್ಲ ಎನ್ನುವ ಸಣ್ಣ ಸಂದೇಹವೊಂದನ್ನ ಉಳಿಸಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಮತ್ತೆ ಹೂ ಬೇಲಿಯ ಬಂಧನಕ್ಕೆ ತಳ್ಳುತ್ತದೆ. ನಿಜ, ಮೂರು ಸಾಲುಗಳ ದಾಟುತ್ತಿದ್ದಂತೆ ಸಣ್ಣ ತಡೆ, ಹೂ ಬೇಲಿಯ ಹಾದಿ ಕೇಳಲೇನೋ ಚೆನ್ನ ಹಾರೈಕೆಯೇ ಎನಿಸಿದರೂ, ಹೂವಿನದ್ದೇ ಆದರೂ ಬೇಲಿ ಬೇಲಿಯೇ ಅಲ್ಲವಾ. ಅಲ್ಲಿಗೆ ಹಾದಿ ನಿಚ್ಚಳ, ಹೂ ಬೇಲಿಯ ನಡುವೆಯೇ ಸಾಗಬೇಕು. ಕನಸಲ್ಲಿ ಮಲ್ಲಿಗೆ ಅರಳುವಾಗ ಹಾದಿಯನ್ನ ಹೂ ಬೇಲಿ ಬಂಧಿಸುತ್ತದೆ. ಅಲ್ಲಿಗೆ ಎಲ್ಲ ಹಾರೈಕೆಯ ಖುಷಿಗೂ ಒಂದು ಬಂಧನವಿದೆ. ಒಂದು ದಾರಿಯಿದೆ. ಎಲ್ಲ ಹಾರೈಕೆಗಳೂ ಆ ಹಾದಿಯಲ್ಲೇ ಹಾಡಾಗಬೇಕು. ಹಸಿರು ಕನಸಿನ ಲೋಕದಲ್ಲಿ ತಾರೆ, ಬೆಳದಿಂಗಳಿನಂತ ಎತ್ತರೆತ್ತರದ ಆಶಯ, ಆದರೆ ವಾಸ್ತವದ ಉಸಿರ ನಡೆಯಲ್ಲಿ ಪಾದ ಮಾತ್ರ ಹಾದಿಯಲ್ಲೇ ಸಾಗಬೇಕು. ಬೆಳ್ಳಿಹಕ್ಕಿಯ ಹಾಡಲ್ಲೆ ಖುಷಿ ಕಾಣಬೇಕು.

ನೀನೆಲ್ಲೂ ನಿಲ್ಲಬೇಡ; ಹೆಜ್ಜೆ ಹಾಕು ಬೆಳಕಿಗೆ;
ಚಲಿಸು, ನಲ್ಲೆ, ಸೆರಗ ಬೀಸಿ ಮೌನದಿಂದ ಮಾತಿಗೆ.

ಇದುವರೆಗೆ ಯಾರು ಯಾರಿಗಾದರೂ ಹೇಳುತ್ತಿದ್ದಿರಬಹುದಾದ ಮಾತುಗಳು ಈ ಸಾಲಿನಲ್ಲಿ ‘ನಲ್ಲೆ’ಯ ಪ್ರವೇಶವಾಗುವುದರೊಂದಿಗೆ ಪಾತ್ರಗಳು ಸ್ಪಷ್ಟವಾಗುತ್ತವೆ. ಮುಂದಿನ ಸಾಲುಗಳೆಲ್ಲಾ ಹೀಗೆ ಅಷ್ಟಷ್ಟೆ ಸ್ಪಷ್ಟವಾಗುತ್ತ ಹೋಗುತ್ತವೆ. ಮೊದಲೆರಡು ಸಾಲುಗಳಲ್ಲಿ ಮೂಡುವಂತದ್ದೇ ಪ್ರಶ್ನೆಗಳು ಮತ್ತಿಲ್ಲೂ ಎದುರಾಗುತ್ತವೆ. ಅವಳ್ಯಾಕೆ ನಿಂತಿದ್ದಾಳೆ, ಅವಳ ಮೌನಕ್ಕೇನು ಕಾರಣ, ಅವಳ್ಯಾಕೆ ಮಾತಾಡಬೇಕು, ಅವಳ ಮೌನ ಅವನನ್ನ ಕಾಡುತ್ತಿದೆಯಾ, ಕೊಲ್ಲುತ್ತಿದೆಯಾ, ಅವಳು ಮಾತಿಗೆ ಚಲಿಸಲಾಗದ್ದಂತದ್ದನ್ನ ಅವನೇನು ಮಾಡಿದ್ದಾನೆ, ಅವ ಹೇಳುತ್ತಿರುವ ಬೆಳಕು ಅವಳಿಗೂ ಬೆಳಕಾಗಬಲ್ಲದಾ?? ನಿಲ್ಲಬೇಡ ಎಂದರೆ ಅವಳೀಗ ನಿಂತಿದ್ದಾಳಾ, ನಿಲ್ಲುವ ಯೋಚನೆಯಲ್ಲಿದ್ದಾಳಾ, ಚಲಿಸು ಎನ್ನುವ ಮಾತಲ್ಲೆ ನಿಂತು ಬಿಡಬಲ್ಲ ಭಯವೂ ಇದೆಯಾ ಹೀಗೆಲ್ಲ ಎನ್ನಿಸಿ ಭಾವ, ಪ್ರಶ್ನೆ ಮತ್ತಷ್ಟು ದಟ್ಟವಾಗುತ್ತದೆ. ಅವಳಿಗೆ ಶುಭ ಹಾರೈಸಿ ನಡೆಯುವಂತೆ ಅವನೇಕೆ ಉದ್ದೀಪಿಸುತ್ತಿದ್ದಾನೆ. ಅವ ಜೊತೆಗಿದ್ದು ನಡೆಸಲಾರನಾ ಅಥವಾ ನಾ ನಿಲ್ಲುತ್ತೇನೆ ನೀನು ಬೆಳಕಿಗೆ ಹೆಜ್ಜೆ ಹಾಕು ಎನ್ನುತ್ತಿದ್ದಾನಾ, ಅವಳದ್ಯಾಕೆ ಮಾತು ಬಿಟ್ಟಿದ್ದಾಳೆ, ಮಾತಿನೆಡಗೆ ಏಕೆ ಚಲಿಸಬೇಕು, ಮೌನವನ್ನ ಅರ್ಥೈಸಿಕೊಳ್ಳುವ ಹಂತ ದಾಟಿ ಪ್ರೀತಿಗೆ ಮಾತಿನ ಅನಿವಾರ್ಯತೆ ಮೂಡಿಬಿಟ್ಟಿದೆಯಾ ಅವರ ನಡುವೆ. ಅವಳ ಮಾತನ್ನ ಅವನೇ ಕಸಿದಿರಲೂಬಹುದಾ, ಯಾವ ನೋವು ಮಾತ ನಿಲ್ಲಿಸಿ ಮೌನಕ್ಕೆ ದೂಡಿದೆ.

* * * * * * *

ಇಲ್ಲಿಯವರೆಗೆ ಆಂತರಂಗಿಕ ಭಾವಗಳ ಲೋಕದಲ್ಲಿ ಸಂಚರಿಸುತ್ತಿದ್ದ ಕವನ ಇಲ್ಲಿಂದ ಮುಂದೆ ಬಾಹ್ಯ ಪ್ರಪಂಚದೆಡೆಗೆ ಸರಿಯುತ್ತದೆ. ಹಾಗೆ ಬಹಿರಂಗವಾಗುತ್ತಲೇ ಇದುವರೆಗೆ ಮೂಡಿದ್ದ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರವನ್ನೂ ನೀಡುತ್ತ ಹೋಗುತ್ತದೆ. ಸಾಂಗತ್ಯದ ಸುಖ ಹಾಗೂ ನಿಧಾನವಾಗಿ ಆವರಿಸಿಬಿಡುವ ವಿಷಾದವನ್ನ ಕಟ್ಟಿಕೊಡುತ್ತ ಮುಂದುವರೆಯುವ ಕವನದಲ್ಲಿ ಮುಂದಿನ ಸಾಲುಗಳು ಇಂಟರ್ವಲ್ ನಂತರದ ಸಿನೆಮಾದಂತೆ, ಸಣ್ಣ ಪ್ಲ್ಯಾಷ್‍ಬ್ಯಾಕ್, ಒಂದಷ್ಟು ಹಳೆಯ ಮಧುರ ನೆನಪು, ಮುಂದಿನ ಬದುಕ ಬಗ್ಗೆ ಭರವಸೆ, ಒಲವನ್ನಲ್ಲದಿದ್ದರೂ ಅವಳನ್ನಾದರೂ ಉಳಿಸಿಕೊಳ್ಳುವ ಆಸೆ, ಜೊತೆಗೆ ನಡೆಯುವ ನಿರೀಕ್ಷೆ ಇವೆಲ್ಲ ದಾಖಲಾಗುತ್ತ ಹೋಗುತ್ತವೆ.

ಬೆಟ್ಟದಾಚೆಗೊಂದು ಬಯಲು; ಅದರ ತುಂಬ ಹಸುಗಳು,
ನಿನ್ನ ದನಿಗೆ ಕೊರಲನೆತ್ತಿ ಕುಣಿವ ಕಂದು ಕರುಗಳು

ನಿನ್ನ ಹಾಗೆ ನಿನ್ನೊಲವಿನ ಚಿಲುಮೆಯಂತೆ ಹನಿಗಳು;
ಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು.

ನೀನು ಬಂದ ದಿಕ್ಕಿನಲ್ಲಿ ತಂಗಾಳಿಯ ಪರಿಮಳ;
ಹೂವರಳಿತು ಹಿಗ್ಗಿನಿಂದ ಹಾದಿಗುಂಟ ಎಡಬಲ.

ಹಾರೈಕಗಳ ಮೂಲಕ ಅವಳನ್ನ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವ ಈಗ ಹಳೆಯ ಮಧುರ ದಿನಗಳನ್ನ ನೆನಪಿಸಿಯಾದರೂ ಅವಳನ್ನ ನಗಿಸಬಹುದೇ ಎನ್ನುವ ಪ್ರಯತ್ನಕ್ಕಿಳಿದಿದ್ದಾನೆ ಇಲ್ಲಿ. ಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು ಎನ್ನುತ್ತ ಹತ್ತಿರದ ಮನೆಯಲ್ಲಿನ ಸಾಂಗತ್ಯ, ಜೊತೆಗೂಡಿ ನಡೆದ ದಾರಿ, ಬೆಟ್ಟದಾಚೆಯ ಬಯಲಲ್ಲಿ ಒಲವಿನ ಹನಿಗಳು ಚಿಲುಮೆಯಾದ ಕಾಲವನ್ನ ನೆನಪಿಸುತ್ತಾನೆ. ಅವಳ ದನಿಗೆ ಕೊರಲನೆತ್ತಿ ಕುಣಿವ ಕರುಗಳು ಎನ್ನುತ್ತಲೆ ತಾನೂ ಹಾಗೇ ಅಲ್ಲವೆ ಅನ್ನುವ ಭಾವವನ್ನೂ ಬಚ್ಚಿಡುತ್ತಾನೆ. ಅವಳು ಬಂದ ದಿಕ್ಕು ಅವನಿಗೆ ತಂಗಾಳಿಯಾಗಿಯೂ ಪರಿಮಳವಾಗಿಯೂ ಸೋಕುತ್ತದೆ, ಅದೇ ಹಿಗ್ಗಿನಲ್ಲಿ ಬದುಕ ಒಲವ ದಾರಿಯ ಹೂವರಳಿದ್ದನ್ನು ಹೇಳುತ್ತಾನೆ. ಈ ಸಾಲುಗಳಲ್ಲೆಲ್ಲ ಖುಷಿಯ ತುಣುಕುಗಳೇ. ವಿಷಾದ ಹಾಗೂ ಪ್ರಶ್ನೆಗಳಲ್ಲಿದ್ದ ಕವನ ಇಲ್ಲಿ ಸುಖದೆಡೆಗೆ ಹೊರಳುತ್ತದೆ. ಅದೇ ಸುಖದಲ್ಲಿ ನಿಲ್ಲುವಂತಿಲ್ಲ ಮುಂದಿನ ಸಾಲು ಹಿಂದಿನ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ವಿಷಾದದ ಕಾರಣವನ್ನು ತೆರೆದಿಡುತ್ತದೆ.

ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ, ತಿಳಿಯದು:
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು.

ಎನ್ನುವಾಗ, ಜತೆಯಲ್ಲಿದ್ದ ಅವಳನ್ನ ಬಿಟ್ಟು ಅವ ಮುಂದೆ ಹೋಗಿಬಿಟ್ಟಿದ್ದಾನೆ. ಅವಳ ಹಸಿರು ಕನಸುಗಳಲ್ಲಿದ್ದ ಅವ ಮುನ್ನಡೆದಿದ್ದಾನೆ. ಅವಳು ಮಾತು ಮರೆತಿದ್ದಾಳೆ. ನಗುವೆನ್ನುವುದು ಕಳೆದು ನಟನೆಯಾಗಿದೆ. ಒಂದು ಕಾಲದಲ್ಲಿ ಒಲವ ಪರಿಮಳಕ್ಕೆ ಕಾರಣವಾಗಿದ್ದ ‘ಎಡಬಲ ಹಬ್ಬಿದ ಹೂವರಳಿದ ಹಾದಿ’ ಅವಳು ಹಿಂದೆ ಉಳಿದಾಗ ‘ಹೂ ಬೇಲಿಯ ಹಾದಿ’ ಯಾಗಿ ಇಂದಿಗೆ ಬೇಲಿಯಾಗಿ ಬೆಳೆಯಿತೇ ಎನ್ನುವುದು ಕಾಡುತ್ತದೆ. ಹಿಂದೆ ಮೂಡಿದ್ದ ಪ್ರಶ್ನೆಗಳಿಗೆ ಉತ್ತರವನ್ನ ಅಸ್ಪಷ್ಟವಾಗಿ ನೀಡುತ್ತಲೆ ಇಲ್ಲಿ ಮತ್ತಷ್ಟು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ ಈ ಸಾಲು. ಜತೆಯಲ್ಲಿದ್ದ ಅವಳು ಅದೇಕೆ ಹಿಂದೆ ಬಿದ್ದಳು, ಅವನೇಕೆ ಮುಂದೆ ಹೋದ, ಅವಳನ್ನ ಮೀರಿದ ಅಂತ ತುರ್ತು ಅವನಿಗೇನಿತ್ತು, ಅವಳು ಸುಸ್ತಾದಳಾ, ಅವನೊಂದಿಗೆ ನಡೆಯದಾದಳಾ ಎನ್ನಿಸಿ, ಅವನಿಗೆ ತಿಳಿಯದ ಅವಳು ಹಿಂದೆ ಬಿದ್ದ ಕಾರಣವ ಹುಡುಕತೊಡಗುತ್ತೇವೆ. ಹಿಂದೆ ಬಿದ್ದರೆ ಅವ ಮತ್ತೆ ಹಿಂದೆ ಬಂದಾನು ಎನ್ನುವ ನಿರೀಕ್ಷೆಯಾ, ಅವ ಹಿಂತಿರುಗಿ ಅವಳ ಕೈ ಹಿಡಿದು ಮತ್ತೆ ಜೊತೆಗೆ ಕರೆದೊಯ್ದಾನು ಎನ್ನುವ ಆಸೆಯಾ, ಹಿಂದೆ ಉಳಿದು ಅವನ ಗಮನವ ತನ್ನೆಡೆಗೆ ತಿರುಗಿಸಿಕೊಳ್ಳುವ ತನ್ನಿರುವ ನೆನಪಿಸುವ ತಿಳಿಯಪಡಿಸುವ ತುಡಿತವಾ ಯಾವುದಿರಬಹುದು ಅವಳು ಹಿಂದೆ ಬೀಳಲು ಕಾರಣ.

ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು ಎನ್ನುವಲ್ಲಿ ಖುಷಿಯನ್ನೂ ವಿಷಾದವನ್ನೂ ಒಂದೇ ಸಾಲಲ್ಲಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಇದು ನಕ್ಕ ಹಾಗೆ ನಟಿಸಬೇಡ ಎನ್ನುವ ಸಾಲಿಗೆ ಕನೆಕ್ಟಿವಿಟಿಯನ್ನು ಕೊಡುತ್ತಿರುವಂತೆ ಅನಿಸುತ್ತದೆ. ಮಲ್ಲಿಗೆ ಮುಡಿಯುವುದು ಸಂತಸ ಸಂಭ್ರಮದ ಸೂಚಕ, ಬಿಳಿಯ ಸೀರೆ ವಿಷಾದ ವೈಧವ್ಯದ ಸೂಚಕವೂ ಆಗಬಹುದು. ಅಲ್ಲಿಗೆ ಮನದಲ್ಲಿ ಪ್ರೇಮಭಾವಕ್ಕೆ ವೈಧವ್ಯದ ಸೂತಕವಾ, ಹಾಗಾಗೇ ನಗುವ ನಟನೆ ಅನಿವಾರ್ಯವಾ, ವಿಷಾದವನ್ನ ಮುಚ್ಚಿಡಲು, ತೋರಿಕೆಗಾಗಿ ಮಲ್ಲಿಗೆಯ ಮುಡಿವ ಸಂಭ್ರಮದ ನಟನೆಯಾ ಎಂದೆಲ್ಲ ಅನ್ನಿಸಿ, ಪೂರ್ಣ ಕವನ ಇದೇ ಸಾಲುಗಳಲ್ಲಿ ಅಡಗಿದೆಯೇನೋ ಅನ್ನುವಂತೆ ಕಾಡತೊಡಗುತ್ತದೆ.

ಬಿದಿರ ಮೆಳೆಯ ಬಂಗಾರದ ಸೀಮೆಯಾಚೆಗೇನಿದೆ?
ಕೊಳಲ ದನಿಯ ಉಂಗುರಗಳ ಸಂಜೆ ಹಾಡು ಹಬ್ಬಿದೆ.

ಎನ್ನುವಲ್ಲಿ, ಮುಂದಿನ ಬದುಕಿನ ಪ್ರಶ್ನೆಯನ್ನ ಮುಂದಿಟ್ಟು ಉತ್ತರವಾಗುತ್ತಾನೆ. ಅವರ ಚಲನೆ ಬಂಗಾರದ ಸೀಮೆಯಾಚೆಗಾ. ಅಲ್ಲಿ ಹೋಗುವ ಪಯಣದಲ್ಲಿ ಅವಳು ಹಿಂದೆ ಬಿದ್ದಳಾ, ಅಲ್ಲಿ ಯಾಕೆ ಹೋಗಬೇಕು, ಅಲ್ಲಿ ಏನಿದೆ ಎಂದು ಕೇಳುತ್ತಲೆ ಕೊಳಲ ದನಿಗಳ ಸಂಜೆ ಹಾಡು ಕೇಳುವ ಸಲುವಾಗಿ ಎನ್ನುವ ಉತ್ತರವನ್ನೂ ಆತನೇ ನೀಡುತ್ತಾನೆ. ಸಂಜೆ ಹಾಡು ಎನ್ನುವುದು ಬದುಕಿನ ಇಳಿ ಸಂಜೆಯ ಕಾಲವೂ ಆಗಿರಬಹುದು. ನಿನಗೆ ನಾನು ನನಗೆ ನೀನು ಎನ್ನುವ ಆಸರೆ ಬಯಸುವ ಬದುಕ ಮುಸ್ಸಂಜೆಯಲ್ಲಿ ನಟನೆಯಿಂದ ಸಹಜತೆಗೆ ಅವಳನ್ನ ತರುವ ಪ್ರಯತ್ನದಲ್ಲಿ ಅವನಿದ್ದಾನಾ.

ಬಾ ಹತ್ತಿರ, ಬೆರಳ ಹಿಡಿದು, ಮುಂದೆ ಸಾಗು ಸುಮ್ಮನೆ.
ನಕ್ಕುಬಿಡು, ನೋಡುತ್ತಿದೆ ಲೋಕವೆಲ್ಲ ನಮ್ಮನೆ.

ಇದುವರೆಗೆ ಅವಳಿಗೆ ಹಾರೈಕೆಯನ್ನೂ, ಹಿಂದಿನ ನೆನಪುಗಳನ್ನು ಭವಿಷ್ಯದ ನಿರೀಕ್ಷೆಗಳನ್ನೆಲ್ಲ ಹೇಳುತ್ತ ಬಂದ ಅವ ಇಲ್ಲಿ ಅವಳಿಗೆ ಸೋತವನಂತೆ ಮಾತಾಡುತ್ತಾನೆ. ಬಾ ಹತ್ತಿರ ಎಂದು ಕರೆಯುತ್ತಾನೆ. ಅವ ಹಿಂದೆ ಹೋಗಿ ಅವಳನ್ನ ಕೈ ಹಿಡಿದು ತರಲಾರನಾ, ಕಳೆದ ಕಾಲದಲ್ಲಿ ಯಾರೂ ಹಿಂದಿರುಗಿ ಹೋಗಲಾರರೇನೋ. ದೂರ ಸಾಕು ಹತ್ತಿರವಾಗುವ ಎನ್ನುತ್ತಾನೆ. ಇದುವರೆಗೆ ನಾ ಮುನ್ನಡೆದೆ, ನಿ ಹಿಂದೆ ಬಿದ್ದೆ, ಇನ್ನು ಸಾಕು, ನೀನೇ ಬೆರಳು ಹಿಡಿದು ಮುನ್ನಡೆಸು ಎನ್ನುತ್ತಾನೆ. ಅವಳಲ್ಲಿ ಮತ್ತೆ ಸಹಜತೆ ಹುಟ್ಟದಿದ್ದರೂ ಅವಳಾದರೂ ಜೊತೆಗಿರಲಿ ಎನ್ನುವ ಹಂತಕ್ಕೆ ತಲಪುತ್ತಾನೆ. ನಕ್ಕ ಹಾಗೆ ನಟಿಸಬೇಡ ಎಂದವನೇ ಲೋಕವೆಲ್ಲ ನಮ್ಮನ್ನ ನೋಡುತ್ತಿದೆ ಅದಕ್ಕಾದರೂ ನಕ್ಕು ಬಿಡು ಎನ್ನುವಲ್ಲಿಗೆ ಮತ್ತೆ ನಟನೆಯನ್ನಾದರೂ ಒಪ್ಪುವ ಹಂತಕ್ಕೆ ಬರುತ್ತಾನೆ. ಅವಳನ್ನ ಒಲಸಿಕೊಳ್ಳಲಾಗದ ಅಸಹಾಯಕತೆಯಾಗಿ ಕಾಣುವ ಈ ಸಾಲು ಅವನ ಇದುವರೆಗಿನ ಪ್ರಯತ್ನವೆಲ್ಲ ಲೋಕ ನೋಡುತ್ತಿದೆ ಎನ್ನುವುದಕ್ಕಾಗಿಯೂ ಇರಬಹುದಾ ಎನ್ನಿಸುವಂತೆಯೂ ಮಾಡಿ ಮತ್ತೆ ಮೊದಲೊನಿಂದ ಕವನವನ್ನ ಓದುವಂತೆ ಮಾಡುತ್ತದೆ ಎನ್ನುವಲ್ಲಿಗೆ ಕವನ ಕೊನೆಯಾಗುತ್ತದೆ.

* * * * * * *

ಕವನವೊಂದು ತನ್ನ ಸಾಲುಗಳ ಮೂಲಕ ಬಿಡಿಬಿಡಿಯಾಗಿ ಧಕ್ಕುವುದೇ ಬೇರೆ, ಪೂರ್ಣವಾಗಿ ಸಮಗ್ರವಾಗಿ ಧಕ್ಕುವುದೇ ಬೇರೆ. ಇದುವರೆಗೆ ಬಿಡಿ ಸಾಲುಗಳಲ್ಲಿ ಏನೆಲ್ಲ ಹುಡುಕಿದ್ದೆವಲ್ಲ ಅದೆಲ್ಲ ಪೂರ್ಣತೆಯಲ್ಲಿ ಸರಳವಾಗಿ ಗೋಚರಿಸುತ್ತದೆ. ಕವನದೊಳಗೊಂದು ಕಥೆ ಸೇರಿ ಕಥನ ಕವನವಾಗಿ ನಮಗೆ ಕಾಣುತ್ತದೆ. ಕಥೆ ಇಷ್ಟೆ, ಅವಳು ಅವನು ಹತ್ತಿರದ ಎತ್ತರದ ಮನೆಗಳಲ್ಲಿ ಬೆಳೆದವರು, ಅಲ್ಲೆ ಎಲ್ಲೋ ಬೆಟ್ಟದಾಚೆಯ ಬಯಲಿನಲ್ಲಿ ಹಸುಗಳ ನಡುವಿನಲ್ಲಿ ಪ್ರೇಮ ಮೊಳೆತಿದೆ. ಜೊತೆ ನಡೆದಿದ್ದಾರೆ. ಜೊತೆ ನಡೆವ ಪಯಣದಲ್ಲಿ ಅವಳು ಹಿಂದೆ ಬಿದ್ದು ಅವ ಮುಂದೆ ನಡೆದಿದ್ದಾನೆ. ಈ ಹಿನ್ನಡೆ ಅವಳ ಸಹಜತೆಯನ್ನ ಕಳೆದಿದೆ. ಅದು ಅವನಿಗೆ ಅರ್ಥವಾಗುವಷ್ಟರಲ್ಲಿ ಅವಳು ಸಹಜತೆಗೆ ಮರಳಲಾಗದಷ್ಟು ಹಿಂದೆ ಉಳಿದಿರುವುದು ಗೊತ್ತಾಗಿದೆ. ಅವಳಿಗೆ ಹಾರೈಸುತ್ತಾನೆ, ಅನುನಯಿಸುತ್ತಾನೆ, ಊಹೂಂ ಅವಳು ಸಹಜತೆಗೆ ಮರಳಲಾರಳು, ಕೊನೆಗೆ ನೋಡುವ ಲೋಕದ ಕಾರಣಕ್ಕಾದರೂ ಜೊತೆ ನಡೆಯೋಣ ಎನ್ನುವಲ್ಲಿಗೆ ಕಥೆ ಅಂತ್ಯವಾಗುತ್ತದೆ.

ಇದು ಪ್ರೇಮ ಗೀತೆಯೂ ಅಗಬಹುದು, ದಾಂಪತ್ಯ ಗೀತೆಯೂ. ಆರಂಭದ ದಿನಗಳಲ್ಲಿ ಅವಳಿಗೆ ಅವನು ಅವನಿಗೆ ಅವಳು ಎನ್ನುವ ಪ್ರೇಮದ ಕಾಲ. ಒಮ್ಮೆ ಜೊತೆಯಾದೆವು ಎನ್ನಿಸಿದಾಗ ಪ್ರಾಮುಖ್ಯತೆ ಬದಲಾಗುತ್ತದೆ. ಜೊತೆಯಾಗುವವರೆಗೆ ಪರಸ್ಪರ ಪ್ರಾಮುಖ್ಯತೆ ಅವಳನ್ನ ಗೆಲ್ಲುವ ಹಪಹಪಿ. ಗೆದ್ದು ಜೊತೆಯಾದ ಮೇಲೆ ಭವಿತವ್ಯ ಕಾಡತೊಡಗುತ್ತದೆ. ಪುರುಷ ಮುಂದಿನ ಬದುಕಿನ ಸುಖಕ್ಕಾಗಿ ಅವಳನ್ನ ಬಿಟ್ಟು ಮುನ್ನಡೆಯುತ್ತಾನೆ. ಮುಂದಿನ ಸುಖದ ದಿನಗಳ ನಿರ್ಮಾಣ ಮಾಡುವಷ್ಟರಲ್ಲಿ ವೃದ್ದಾಪ್ಯ ಎದುರು ನಿಂತಿರುತ್ತದೆ. ಆಗ ಮತ್ತೆ ಆಸರೆ ಬೇಕು, ಅವಳನ್ನ ಹುಡುಕಿದರೆ ಅವಳು ಹಿಂದೆಯೇ ಉಳಿದುಬಿಟ್ಟಿದ್ದಾಳೆ. ಅವನಿಗೆ ತಪ್ಪೆಲ್ಲಿ ಆಗಿದೆ ಎಂದು ಗೊತ್ತಾಗುವಷ್ಟರಲ್ಲಿ ಸರಿ ಮಾಡಲಾಗದಷ್ಟು ದೂರ ನಡೆದಾಗಿರುತ್ತದೆ. ಹತ್ತಿರವಿದ್ದ ಭಾವಗಳು ಕಳೆದಿರುತ್ತವೆ. ಆದರೆ ಈ ಹಂತದಲ್ಲಿ ಆಯ್ಕೆಯಿಲ್ಲ. ಪರಸ್ಪರ ಆಸರೆ ಬೇಕು, ಜೊತೆ ನಡೆಯಲೇ ಬೇಕು. ಅದಕ್ಕಾಗಿ ಸರಿ ಮಾಡುವ ಒಂದು ಪ್ರಯತ್ನ, ಗೆದ್ದರೆ ಬದುಕು ಸುಂದರ, ಅಂತರಂಗಕ್ಕೆ ಬಹಿರಂಗದ ಆಸರೆ. ಇಲ್ಲದಿದ್ದರೆ ಲೋಕದ ಕಣ್ಣಿಗಾಗಿ ನಟನೆ, ಅಂತರಂಗಕ್ಕೆ ಹಳೆಯ ನೆನಪು ಅಷ್ಟೆ.

ಈ ಕವನದಲ್ಲಿ ಅವಳು ನಮಗೆ ಅಗೋಚರ ಪಾತ್ರ ಮಾತ್ರ. ಅವನು ಏನು ಹೇಳುತ್ತಿದ್ದಾನೆ ಎನ್ನುವುದರ ಮೇಲೆ ಅವಳ ಚಿತ್ರಣ ನಮ್ಮಲ್ಲಿ. ‘ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ’ ಎನ್ನುವಲ್ಲಿ ಅವಳ ನಕ್ಕ ಹಾಗೆ ನಟಿಸುವ ಕಾರಣವನ್ನ ನಾವು ಹುಡುಕಿಕೊಳ್ಳಬೇಕು. ಅದರಾಚೆಗೂ ಕಾರಣವಿರಬಹುದು, ಅವ ಹೇಳುವುದಿಲ್ಲ. ಇದು ಅವನ ಅನಿಸಿಕೆ ಮಾತ್ರ ಇರಲೂಬಹುದು, ಅವಳ ನೋವು ಬೇರೆಯೇ ಇರಬಹುದು, ಅದು ಅವನಿಗೆ ಅರ್ಥವಾಗದಿರುವುದಕ್ಕೂ ಅವಳಿಗೆ ವಿಷಾದವಿರಬಹುದು. ಇಲ್ಲಿಯೂ ಅವ ತಾನು ಮುನ್ನಡೆದೆ ಎನ್ನುವುದಿಲ್ಲ, ನೀನು ಹಿಂದೆ ಬಿದ್ದೆ ಎನ್ನುತ್ತಾನೆ. ಅವಳ್ಯಾಕೆ ಹಿಂದೆ ಬಿದ್ದಳು, ಅವ ಕಾರಣ ಹುಡುಕುವುದಿಲ್ಲ, ತನ್ನದೆ ಸರಿ ಎನ್ನುವ ಸಣ್ಣ ಅಹಂಕಾರ ಅವನಿಗೆ ಇರಲೂಬಹುದು. ಅವನೆ ಅವಳನ್ನ ಹಿಂದೆ ಬಿಟ್ಟಿರಲೂಬಹುದು. ಇದ್ಯಾವುದನ್ನು ಅವ ಹೇಳ ಹೋಗುವುದಿಲ್ಲ. ‘ನೀನೆಲ್ಲು ನಿಲ್ಲಬೇಡ, ಹೆಜ್ಜೆ ಹಾಕು ಬೆಳಕಿಗೆ’ ಎನ್ನುವಾಗಲೂ ಅವನಿಗೆ ತಾನು ಬೆಳಕಲ್ಲಿದ್ದೇನೆ, ನೀನೂ ಬೆಳಕಿಗೆ ಚಲಿಸು ಎನ್ನುವ ಭಾವ, ಅವಳಿರುವಲ್ಲೂ ಬೆಳಕಿರಬಹುದಾ, ಇವನೆ ಕತ್ತಲಲ್ಲಿರಬಹುದಾ ಇವಾವುದು ಇಲ್ಲಿ ವ್ಯಕ್ತವಾಗುವುದಿಲ್ಲ. ಇಲ್ಲಿ ಸರಿ ಎನ್ನುವುದು ಅವನದು ಮಾತ್ರ ಎನಿಸುತ್ತದೆ. ಅವಳು ನಮಗೆ ಅವನ ಕಣ್ಣಿಂದ ಮಾತ್ರ ಕಾಣುತ್ತಾಳೆ ಅಷ್ಟೆ.

* * * * * * *

ಬರೆದ ಮೇಲೆ ಕವನವೆನ್ನುವುದು ಕವಿಯದಲ್ಲ, ಓದುಗನದು. ಕವಿ ಏನನ್ನೇ ಹೇಳ ಹೊರಟರೂ ಓದುಗ ಅದನ್ನ ತನ್ನ ಮನಸ್ಥಿತಿಯೊಂದಿಗೆ ಮಾತ್ರ ಅರ್ಥ ಮಾಡಿಕೊಳ್ಳುತ್ತಾನೆ. ಅದರಲ್ಲಿ ಕವಿ ಹೇಳ ಹೊರಟಿರುವುದೂ ಇರಬಹುದು, ಇಲ್ಲದೆಯೂ ಇರಬಹುದು. ಬರೆದ ನಂತರ ಕವಿ ಕೂಡ ಅವನ ಕವನದ ಓದುಗನೇ ಆಗುತ್ತಾನೆ, ಬರೆವಾಗಿನ ಭಾವದ ಆಚೆಗೂ ಅವನ ಕವನ ಅವನಿಗೆ ಕಾಣಲೂಬಹುದು. ಬರೆವಾಗಿನ ತಾಧ್ಯಾತ್ಮವೇ ಬೇರೆ, ಓದುವಾಗಿನ ಹೊಳಹುಗಳೇ ಬೇರೆ ಆಗಲೂಬಹುದು. ಕವಿಯು ಹೇಳಲಿಕ್ಕಿರುವುದೊಂದು ನನ್ನ ಅರ್ಥೈಸುವಿಕೆ ಇನ್ನೊಂದು ಆಗುವ ಎಲ್ಲ ಸಾಧ್ಯತೆಯನ್ನು ಗಮನಿಸುತ್ತಲೇ ಕೆ ಎಸ್ ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದೊಳಗೆ ನನ್ನನ್ನ ಕಳೆದುಕೊಂಡು ಹುಡುಕಿಕೊಳ್ಳುತ್ತಲಿದ್ದೇನೆ. ಈ ಹುಡುಕಾಟದಲ್ಲಿ ಇಣುಕಿದ ಭಾವಗಳ ನಿಮ್ಮೆದುರು ಹರವಿ ಕೂತಾಗ ಮತ್ತೇನೋ ಧಕ್ಕೀತು ನನಗೆ ಎನ್ನುವ ನಂಬಿಕೆ. ಕೆಎಸ್‍ಎನ್‍ರ ಬಹುತೇಕ ಕವನಗಳಲ್ಲಿ ಬರುವಂತೆ ಇಲ್ಲಿಯೂ ಹಸಿರು, ಬಿಳಿ, ಕಂದು ಎನ್ನುವ ಬಣ್ಣಗಳು, ಮಲ್ಲಿಗೆ, ಬೆಳದಿಂಗಳು, ತಾರೆ, ಹಸು, ಕರು ಎನ್ನುವ ರೂಪಕಗಳು, ಸರಳವಾಗಿ ಓದಿಸಿಕೊಂಡು ಹೋಗುವ ಸಾಲುಗಳು ಇವುಗಳ ಬಗ್ಗೆ ಎಲ್ಲ ಮಾತನಾಡದೆ ಕೆಎಸ್‍ಎಸ್‍ರ ಇತರ ಕವನಗಳೊಂದಿಗೆ ಈ ಕವನದ ಸಾಮ್ಯತೆ ಹೋಲಿಕೆ ಇದಾವುದನ್ನೂ ಮಾಡದೆ ಈ ಕವನವೊಂದನ್ನೇ ಬಿಡಿ ಬಿಡಿಯಾಗಿ ನೋಡಿ ಹೀಗೆಲ್ಲ ಬರಹವಾಗಿದ್ದೇನೆ.

ಹೀಗೆ ಕಾಣುತ್ತ ಹೋದರೆ ಇನ್ನೂ ಏನೇನೋ ಕಂಡೀತು ಈ ಕವನದ ಸಾಲುಗಳಲ್ಲಿ. ಕಾಣ್ಕೆಗೆ ಮಿತಿಯಿರಬಾರದು ಆದರೆ ಈ ಬರಹಕ್ಕೆ ಇಷ್ಟು ಸಾಕು ಅಲ್ಲವೆ? ತುಂಬ ವಾಚ್ಯವೆನಿಸಿದರೂ ಇಷ್ಟು ಹೇಳದೆ ಉಳಿಯದಾದೆ ಎನ್ನುತ್ತ, ಅವಳು ಹತ್ತಿರ ಬಂದಳಾ, ಕೈ ಹಿಡಿದು ನಡೆದಳಾ, ಸಂಜೆ ಹಾಡು ಕೊಳಲ ದನಿಯ ಉಂಗುರವಾಯಿತಾ, ಲೋಕದ ಕಾಣ್ಕೆಯಾಚೆಗೂ ನಗು ಮೂಡಿತಾ ಎಂದೆಲ್ಲ ಸಂದೇಹಗಳನ್ನ ಮುಗಿದ ನಂತರವೂ ಹುಟ್ಟುಹಾಕಿಕೊಳ್ಳುತ್ತ ಕವನ ಎನ್ನುವುದು ಕಥನವಾಗಿ ಮುಂದುವರೆಯುತ್ತಲೇ ಹೋಗುತ್ತಿದೆ ನನ್ನೊಳಗೆ. ಬಹುಶಃ ನಿಮ್ಮೊಳಗೂ! ಒಳಗೊಂದು ಜೀವಭಾವ ತುಡಿಸುವ ಕೆಎಸ್‍ಎನ್‍ರ ನೆನಪಿಗೆ ಇದೊಂದು ನುಡಿ ಮಲ್ಲಿಗೆ ಅಷ್ಟೆ.

* * * * * * *

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನದ ಶತಮಾನೋತ್ಸವದ ಆಚರಣೆಯ ಸಂಭ್ರಮದ ಭಾಗವಾಗಿ, ಅವರ ಕವನಗಳ ಹೊಸ ಓದು ‘ಹೂ ಬುಟ್ಟಿ’ ಎನ್ನುವ ಪುಸ್ತಕ ಬಿಡುಗಡೆಯಾಯಿತು. ಪುಸ್ತಕಕ್ಕಾಗಿ ‘ದುಂಡು ಮಲ್ಲಿಗೆ’ ಕವನ ಸಂಕಲನದಿಂದ ಆಯ್ದ ‘ನಕ್ಕು ಬಿಡು’ ಕವನದ ಬಗ್ಗೆ ನಾನು ಬರೆದಿದ್ದ ಬರಹ ಇದು.

ಇದೇ ಬರಹವನ್ನು ದಿನಾಂಕ:06.02.2015ರಂದು ‘ಅವಧಿ’ಯಲ್ಲಿ ಪ್ರಕಟಿಸಲಾಗಿದೆ.

Advertisements
 

ನಾಗರಿಕತೆಯ ತೊಟ್ಟಿಲಲ್ಲಿ ಜೀವಂತಿಕೆಯ ಕನಸು

ಯಾವಲ್ಲೋಚನ ಗೋಚರಾ//ರಘುನಂದನ ಕೆ.

ಅನಂತ ವಿಶ್ವ, ಈ ಭೂಮಿ ಎಷ್ಟೋ ನಾಗರಿಕತೆಗಳಿಗೆ ತೊಟ್ಟಿಲು. ಕಾಲನ ಗರ್ಭದಲ್ಲಿ ಅನಾದಿ ಕಾಲದಿಂದ ಅಸಂಖ್ಯ ನಾಗರಿಕತೆಗಳು ಹುಟ್ಟಿ ಕರಗಿ ಮರೆಯಾಗಿವೆ. ಬೆಳೆದು ಬಂದದ್ದೆಷ್ಟು, ಉಳಿದು ನಿಂತದ್ದೆಷ್ಟು, ಕಳೆದು ಹೋದದ್ದೆಷ್ಟು ಎಂದು ಹುಡುಕುತ್ತಲೇ ಇದ್ದಾನೆ ಇಂದಿನ ನಾಗರಿಕತೆಯ ಮನುಷ್ಯ. ಅವನಿಗೆ ತನ್ನದೇ ಮಹಾನ್ ನಾಗರಿಕತೆ ಎಂದು ಭ್ರಮಿಸುವ ಚಪಲ. ಕಾಡ ನಡುವೆ, ನದಿ ಬಯಲುಗಳಲ್ಲಿ ಅರಳಿದ, ಬೆಳೆದ ಬದುಕ ವಿಧಾನಗಳನ್ನು ನಾಗರಿಕತೆ ಎಂದು ಒಪ್ಪಿಕೊಳ್ಳಲಾರ. ಆದಿಕಾಲದ ಮಾನವನ ನೆಮ್ಮದಿಯ ಜೀವನ ಇಂದಿನವನ ಪಾಲಿಗೆ ನಾಗರಿಕತೆ ಆಗದಿರುವುದೇ ಹೆಚ್ಚು. ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವನ ಸಮಾಜ ಅಥವಾ ಸಂಸ್ಕøತಿಯೇ ನಾಗರಿಕತೆ ಎನ್ನವುದು ವ್ಯಾಖ್ಯಾನ. ವ್ಯವಸ್ಥಿತ ಹಂತ ತಲುಪಿದ ನಂತರ ಬೆಳವಣಿಗೆ ನಿಲ್ಲುತ್ತದಾ, ನಾಗರಿಕತೆಯೆಂದರೆ ಬೆಳೆಯುತ್ತಲೇ ಇರುವ ಪದ್ಧತಿಯಾ. ವ್ಯವಸ್ಥಿತ ಹಂತ ಯಾವುದು ಎನ್ನುವುದು ಪ್ರತೀ ಕಾಲಘಟ್ಟದಲ್ಲಿಯೂ ಪ್ರಶ್ನೆಯೇ. ಇಂದಿನವನಿಗೆ ಈಗಿರುವುದು ವ್ಯವಸ್ಥಿತ ಹಂತ, ಹಿಂದಿನದು ಚರಿತ್ರೆ. ಬದಲಾವಣೆ ಕಾಲದ ನಿಯಮ. ಪ್ರಕೃತಿ ತನ್ನ ಒಡಲಲ್ಲಿ ಎಷ್ಟೋ ವಿಸ್ಮಯಗಳನ್ನ ಅಡಗಿಸಿಕೊಳ್ಳುತ್ತ ಹೊಸ ಹೊಸ ನಾಗರಿಕತೆಗಳ ಸೃಷ್ಟಿಸುತ್ತ ಮತ್ತೆ ಮತ್ತೆ ಪುನರಾವರ್ತಿತವಾಗುತ್ತಲೇ ಇದೆ.

ಇತಿಹಾಸ ಕಥೆ ಹೇಳುತ್ತದೆ. ಬೆಳೆದು ಬಂದ ನಾಗರಿಕತೆಗಳ ಪಳೆಯುಳಿಕೆಗಳ ತೆರೆದಿಡುತ್ತದೆ. ಹರಪ್ಪಾ ಮೆಹಂಜೋದಾರ್‍ನಲ್ಲಿನ ವ್ಯವಸ್ಥಿತ ನಗರಗಳ, ನೈಲ್ ನದಿಯ ದಡದಲ್ಲಿ ಹಬ್ಬಿ ನಿಂತ ಷಹರಗಳ ಚರಿತ್ರೆಯಲ್ಲಿ ಅಂದಿನ ನಾಗರಿಕತೆ ಸಿಗುತ್ತದೆ. ಆದರೆ, ಅಂದಿನ ಜನರ ಮಸ್ಥಿತಿ ಇತಿಹಾಸವನ್ನು ಮೀರಿದ್ದಲ್ಲವಾ! ಇಂದು ಬೆಳೆದು ನಿಂತ ಮಾನವ ಜನಾಂಗದ ನಾಗರಿಕತೆಯಲ್ಲೂ ದೂರದ ಕಾಡುಗಳಲ್ಲಿ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ, ಆಫ್ರಿಕಾದ ಹೆಸರರಿಯದ ಪ್ರದೇಶಗಳಲ್ಲಿ, ದಕ್ಷಿಣ ಅಮೆರಿಕಾದ ಬ್ರೆಜಿಲ್, ಅಮೇಜಾನ್ ಅರಣ್ಯ ಪ್ರದೇಶಗಳಲ್ಲಿಯೂ ಚರಿತ್ರೆ ದಾಖಲಿಸಲು ಮರೆತ ನಾಗರಿಕತೆಗಳಿದೆಯಲ್ಲ. ಸಂಸ್ಕøತಿ, ಪರಂಪರೆ, ಗಿಡ, ಬಳ್ಳಿ, ಪಶು, ಪಕ್ಷಿಗಳ ಬಗೆಗಿನ ಜ್ಞಾನವನ್ನು ಅನುಭವದಿಂದಲೇ ಶೋಧಿಸಿಕೊಳ್ಳುತ್ತ ನಿಸರ್ಗದೊಂದಿಗೆ ಭಕ್ತಿಪೂರ್ವಕ ಸಂಬಂಧವಿಟ್ಟುಕೊಂಡ ಕಾಡು ಮನುಷ್ಯನ ಮನೋಧೈರ್ಯ, ಲ್ಯಾಬ್‍ಗಳಲ್ಲಿ ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತ ನಾಗರೀಕನೆನ್ನುವವನಿಗೆ ಎಲ್ಲಿದೆ. ಪರಂಪರೆಯ ಹರಿವಿನಿಂದ ಪಡೆದ ಬುದ್ಧಿವಂತಿಕೆಯಿಂದ ಮರೆತಿರಬಹುದಾಗಿದ್ದ ವಿಜ್ಞಾನದ ಜ್ಞಾನವನ್ನು ಪುನಃ ಪಡೆದು ಹಿಂದಿನದಕ್ಕೆ ಅನಾಗರಿಕತೆಯ ತೆರೆ ಸರಿಸುತ್ತಾನೆ ಮಾನವ. ಗಿರಿ ಶಿಖರಗಳ ಹತ್ತಬೇಕು, ಇಳಿಯಬೇಕು, ಮಳೆ ಛಳಿಗೆ ತುತ್ತಾಗಬೇಕು, ಕಾಡು ಪ್ರಾಣಿಗಳೊಂದಿಗೆ ಹೊಡೆದಾಡಬೇಕು, ಒಡನಾಡಬೇಕು, ನದಿ ತೀರದಲ್ಲೋ ಜಲಸಿರಿಯ ಮೈದಾನಗಳಲ್ಲೋ ಗೆಡ್ಡೆ ಗೆಣಸು ತಿನ್ನುತ್ತ ಭೇಟೆಯಾಡುತ್ತ ಸರಳವಾಗಿ ಬದುಕಿದ್ದ ಜನ ಇಂದಿನ ನಾಗರಿಕತೆಯಲ್ಲಿ ಆದಿವಾಸಿಗಳಾಗಿಯೂ ಅನಾಗರಿಕತೆಯ ಲೇಪದೊಂದಿಗೆ ಗುರುತಿಸಲ್ಪಡುವುದು ಕಾಲದ ಸೋಜಿಗ.

ಮನುಷ್ಯ ತನ್ನ ಕೆಲಸಗಳ ತಾನೇ ಮಾಡಿಕೊಳ್ಳುತ್ತ ಸ್ವಾಲಂಭಿಯಾಗಿರುವಾಗ ಸಂತಸದಿಂದಿದ್ದ. ಸುಖದ ಹುಡುಕುವಿಕೆಯ ಅನ್ವೇಷಣೆಯಲ್ಲಿ ಹೊಸತುಗಳ ಆವಿಷ್ಕಾರ ಮಾಡಿ ಸಲಕರಣೆ ಯಂತ್ರಗಳ ಅವಲಂಬಿಯಾದಾಗ ಪ್ರಕೃತಿಯಿಂದ ದೂರ ಸರಿಯುತ್ತ ಅಂತರಂಗವನ್ನು ಕೊಂದುಕೊಳ್ಳುತ್ತ ಬದುಕನ್ನೇ ವಾಣಿಜ್ಯವಾಗಿಸಿ ಜೀವಿಸುವುದ ಮರೆತ. ನಾಗರೀಕನೆನಿಸಿಕೊಳ್ಳುವ ಮಾನವ ಆದಿವಾಸಿಗಳಷ್ಟು ಖುಷಿಯಲ್ಲ. ಖುಷಿಗಾಗಿ ಹುಡುಕಾಟವಿದೆ ಇಲ್ಲಿ. ಅವಲಂಬನೆ ಕೊಂದಿದ್ದು ಮನುಷ್ಯನ ಜೀವಂತಿಕೆಯೊಂದನ್ನೇ ಅಲ್ಲ ಅವನ ಆತ್ಮ ವಿಶ್ವಾಸ ಆತ್ಮ ಸ್ಥೈರ್ಯಗಳನ್ನು ಕೂಡ. ಎಲ್ಲ ಹೋರಾಟಗಳ ನಡುವೆಯೂ ಆತ್ಮವಿಶ್ವಾಸದಿಂದ ಮನುಷ್ಯ ಬೀಗುತ್ತಿದ್ದ ದಿನಗಳ ಕಾಲ ಕಂಡಿದೆ. ಇಂದು ಅದೇ ಕಾಲ ಚಿಕ್ಕಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಮನುಷ್ಯನ ಕಾಣುತ್ತಿದೆ. ಬದಲಾದದ್ದು ಕಾಲ ಅಲ್ಲ ಮನುಷ್ಯ. ಬೆಳೆಸಬೇಕೆಂದು ಆವಿಷ್ಕರಿಸಿದ್ದು ಬಳಸಿದ್ದು ಮನುಷ್ಯನ ಕೊಳೆಸುತ್ತಿದೆ.

ಎಂದೋ ತೊರೆದ ಗಂಡನ ಕಾಲಿಲ್ಲದ ಮಗನ ಪೊರೆಯುವ ಅಂಡಮಾನ್ ಕಾಡುಗಳ ಸಾಗರದೀಪದ ಹೆಂಗಸಿನ ಛಲ, ಆನಂದ ಷಹರದ ಮಾನವನ ಅರಿವಿಗೇ ನಿಲುಕದೆ ಸತಾಯಿಸುತ್ತದೆ. ಒಂದೇ ಸಮನೆ ತುಯ್ಯುವ ಅಲೆ ಸ್ವಲ್ಪ ಬೆಳೆದರೂ ಸಾಕು ಈ ಮನುಷ್ಯ ಕಂಗಾಲಾಗುತ್ತಾನೆ. ಆಸರೆಗೆ ಅವಲಂಬನೆಗೆ ಹುಡುಕುತ್ತಾನೆ. ಪ್ರಕೃತಿಯೇ ಸಿಡಿದೆದ್ದು ಬಡಿದರೂ ಏಕಾಂಗಿಯಾಗಿ ಎದುರಿಸುವ ಮನೋಧೈರ್ಯದ ಮನುಷ್ಯ ನಮ್ಮೊಳಗಿಂದ ಮತ್ತೆ ಹುಟ್ಟಬೇಕಿದೆ. ಅಂತಹ ಮನುಷ್ಯ ಐಷಾರಾಮಿ ಅಮಲುಗಳಲ್ಲಿ ಅರಳಲಾರ. ಪ್ರಕೃತಿಯೊಡನೆ ಬೆಸೆದ ಹಸಿರಲ್ಲಿ ಮೂಡಬಲ್ಲ. ಬಾಹ್ಯ ನಟನೆಗಿಂತ ಅಂತರಂಗದ ಸಹಜ ಆನಂದಗಳ ಹುಡುಕುವ ದಿನ ಬಂದಾಗ ಎಲ್ಲರ ಮನಸ್ಸಲ್ಲಿ ಮನುಷ್ಯರಾಗುವ ಜೀವಂತ ಕನಸುಗಳು ಅರಳುತ್ತವೇನೋ.

ಅಭಿವೃದ್ಧಿ ಮತ್ತು ಆಧುನಿಕತೆ ನೆಲದ ಸಂಸ್ಕøತಿಯಿಂದ ಮನುಷ್ಯನನ್ನು ದೂರ ಮಾಡಿದ್ದು ಹೇಗೆ? ಅರಿವಿಗೇ ನಿಲುಕದಂತೆ ಭಕ್ತಿ ಪೂರ್ವಕ ಬಂಧ ಹೊಂದಿದ್ದ ನಿಸರ್ಗವನ್ನ ಉಪಭೋಗದ ವಸ್ತುವನ್ನಾಗಿಸುವ ಅಹಂಕಾರವನ್ನು ಮನುಷ್ಯನಿಗೆ ಕಲಿಸಿದ ನಾಗರಿಕತೆ ಯಾವುದು? ಬೆಳೆದು ಬಂದ ಸಂಸ್ಕೃತಿ ಸಂಸ್ಕಾರವಾಗಿ ಮಾನವನ ಎದೆಯೊಳಗೆ ಇಳಿದಿದ್ದಲ್ಲದೆ ಮಾನವತೆ ಮೂಡದು, ಮಾನವತೆಯ ಜೀವಂತಿಕೆ ಇಲ್ಲದೆ ನಾಗರಿಕತೆ ಚರಿತ್ರೆಯ ಪಾಠ ಮಾತ್ರ. ವಿಕಾಸವಾದ ಹೇಳುತ್ತದೆ, ಪ್ರಬಲವಾದದ್ದು ಶಕ್ತಿಯುತವಾದದ್ದು ಉಳಿಯುತ್ತದೆಯೆಂದು. ನಾಗರಿಕತೆ ಸಾರುತ್ತಿದೆ, ಪ್ರಬಲತೆಯನ್ನು ನಿಯಂತ್ರಿಸಲಾಗದೆ ತನ್ನದೇ ಶಕ್ತಿ ಜ್ಞಾನದಿಂದ ನಾಗರಿಕತೆ ಸಾಯುತ್ತದೆಂದು.

ನಗ್ನ ಆದಿವಾಸಿಗಳ ಜರೆವ ನಾಗರೀಕನ ಮನಸ್ಸು ಬೆಳವಣಿಗೆಯ ಹಂತಗಳ ಅಣಕಿಸುತ್ತಿದೆ. ತಮ್ಮ ಕತ್ತಲ ಮುಚ್ಚಿಕೊಳ್ಳಲಾಗದವ ಉಳಿದವರ ಬೆತ್ತಲೆಯೆಡೆಗೆ ಕೈ ತೋರಿಸುವ ವ್ಯಂಗ್ಯಕ್ಕೆ ನಾಗರಿಕತೆ ನೋಯುತ್ತಿದೆ. ಆಧುನಿಕ ನಾಗರಿಕತೆ ಅನಾಗರೀಕರನ್ನು ಸೃಷ್ಟಿಸಿದೆ ಎನ್ನುವುದು ಇಂದಿನ ಬದುಕಿನ ಬಹುದೊಡ್ಡ ವ್ಯಂಗ್ಯ. ಜನನಿಬಿಡ ನಗರಗಳಲ್ಲಿ ಬದುಕುವವರಿಗಿಂತ ಪ್ರಕೃತಿಯ ಒಡಲಲ್ಲಿ ಬದುಕುವ ಜೀವಗಳು ಹೆಚ್ಚು ಆತ್ಮಗೌರವದವರೂ, ಜೀವಂತಿಕೆಯುಳ್ಳವರೂ ಆಗಿರುತ್ತಾರೆ. ಇವರಿಗೆ ಕೃತಕತೆಯ ಸೋಂಕಿಲ್ಲ, ಅಮ್ಮಂದಿರ ವೃದ್ಧಾಶ್ರಮಗಳಿಗೆ ನೂಕುವ ಹುಂಬತನವಿಲ್ಲ. ಸಹಜತೆಯಲ್ಲೇ ಕಿತ್ತಾಡುತ್ತಾರೆ. ಮರುಕ್ಷಣವೇ ಪ್ರೀತಿ ತೋರುತ್ತಾರೆ. ಪ್ರಕೃತಿಯ ತುಸು ನೋವಿಗೂ ರೋಧಿಸುತ್ತಾರೆ. ಎಲ್ಲರನ್ನ ಬದುಕಿನ ತೆಕ್ಕೆಯೊಳಗೆ ಕೈ ಚಾಚಿ ಬರಮಾಡಿಕೊಳ್ಳುತ್ತಾರೆ. ಯಾವುದಕ್ಕೂ ಯಾಂತ್ರಿಕತೆಯ ಕೃತಕತೆಯ ಲೇಪವಿಲ್ಲ. ಇಲ್ಲಿ ಎಲ್ಲವೂ ಸ್ವಚ್ಛ, ಸರಳ. ಎಲ್ಲೋ ದೂರದಲ್ಲಿ ಕನಸಲ್ಲೂ ಅಸ್ಪಷ್ಟವಾಗಿ ಕಾಣುತ್ತಿರುವ ನಮ್ಮದೇ ಹಿರಿಯರ ಇಂತಹ ಚಿತ್ರಗಳೆಲ್ಲ ಮತ್ತೆ ಮುನ್ನಲೆಗೆ ಬರಲಿ, ತನ್ನ ಪ್ರತಿಬಿಂಬಗಳನ್ನೇ ಗುರುತಿಸಲಾಗದ ಮುಖವಾಡದ ನಾಗರಿಕರಿಗೆ ದಾರಿ ತೋರಲಿ.

(ದಿನಾಂಕ: 31.08.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/2013/08/31/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%95%E0%B2%A5%E0%B3%86-%E0%B2%B9%E0%B3%87%E0%B2%B3%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86/)
 

ನಗರದೊಳಗೊಂದು ನಿನಾದ…

ಯಾವಲ್ಲೋಚನ ಗೋಚರಾ//ರಘುನಂದನ ಕೆ.

ಪುಟ್ ಪಾತಿನ ಮೇಲೆ ಯಾರದೋ ಖರೀದಿಗೆ ಕಾದಿರುವ ಪೋಸ್ಟರ್ ಗಳಲ್ಲಿನ ಬಣ್ಣದ ಜೀವಿಗಳಂತೆ ಯಾವುದೋ ಸುಂದರ ಕನಸಿಗೆ ವಿಹ್ವಲರಾಗಿ ಪರಿತಪಿಸುತ್ತಿರುವ, ದಿನದ ಧಾವಂತಗಳಲ್ಲಿ ಬದುಕಿನ ಸಣ್ಣ ಸಣ್ಣ ಖುಷಿಗಳ ಮರೆತು ಪುಟ್ಟ ಮಗುವಿನ…. ಆಟದ ಪೆಟ್ಟಿಗೆಯೊಳಗೆ ತುಂಬಿಟ್ಟ ಚಕ್ರಗಳಿಲ್ಲದ ಕಾರು, ತಲೆಗಳಿಲ್ಲದ ಗೊಂಬೆ, ಫ್ರಾಕು ಇಲ್ಲದ ರಾಜಕುಮಾರಿ, ಕತ್ತರಿಸಿ ಬಿದ್ದ ಇನ್ನೆಷ್ಟೋ ಚೂರುಗಳಂತಹ ಕನಸುಗಳನ್ನ ವಾರಾಂತ್ಯದಲ್ಲಿ ಹಣದಿಂದಲೇ ಖರೀದಿಸಿ ತಂಗಳ ಪೆಟ್ಟಿಗೆಯೊಳಗಿನ ಕೊತ್ತಂಬರಿ ಸೊಪ್ಪಿನಂತೆ ಜೋಪಾನವಾಗಿಡಬಹುದೆಂಬ ಭ್ರಮೆಗಳಲ್ಲಿ ಬದುಕುತ್ತಿರುವ ನಗರವಾಸಿ ಮಾನವರ ಬೆಳಗು ಸೂರ್ಯನ ಎಳೆಕಿರಣಗಳ ಸ್ಪರ್ಶದಿಂದ ಬೆಚ್ಚಗಾಗಿ ಮುದಗೊಳ್ಳಲಿ.

ಮನುಷ್ಯ ತನ್ನ ಅನಕೂಲತೆಗಳ ಆಡಂಬರಕ್ಕಾಗಿ ನಿರ್ಮಿಸಿಕೊಂಡ ನಗರಗಳು ಇಂದು ಅವನ ನರಮಂಡಲವನ್ನೇ ವ್ಯಾಪಿಸಿ… ಅಲ್ಲಿ ಇಲ್ಲಿ ಎಲ್ಲೆಲ್ಲೂ ರಸ್ತೆಗಳು, ನಗರವೆಂದರೆ ತರಹೇವಾರಿ ರಸ್ತೆಗಳು.. ಕೆಲವು ಹಿರಿದು ಕೆಲವು ಕಿರಿದು, ಒಂದರೊಳಗೊಂದು ಬೆಸೆದು ಒಂದರಿನ್ನೊಂದರಿಂದ ಕವಲೊಡೆದು ಈ ತುದಿಯಿಂದ ಆ ತುದಿಗೆ ಎಲ್ಲಿಂದೆಲ್ಲಿಗೋ ಸೇರಿಸುವ ಸದಾ ಗಿಜಗುಡುವ ರಸ್ತೆಗಳ ನರಮಂಡಲ, ನಗರದ ಮನುಷ್ಯನ ಮೈ ಸೇರಿ ಮಗುವಿನಾಟದ ಪೆಟ್ಟಿಗೆಗಳಂತಹ ವಾಹನಗಳ ದಟ್ಟಣೆಯಲ್ಲಿ ಕುಂಯ್ಗುಡುವ ಪೋಂ ಗುಡುವ ವಿಚಿತ್ರವಾಗಿ ನರಳುವ ವಿವಿದ ಶಬ್ದಗಳ ಹಾರ್ನ್ ಗಳ ಗದ್ದಲದಲ್ಲಿ ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಚಪ್ಪಟೆ ಜೀವಿಯಂತಾದ ಮನುಷ್ಯನ ಬದುಕ ಕನಸುಗಳಲ್ಲಿ ಪ್ಲಾಸ್ಟಿಕ್ ಹೂವುಗಳು ಅರಳಿ ಪರಿಮಳವ ಚೆಲ್ಲಲಿ…

ಸುಂದರ ಸಂಜೆಗಳಲ್ಲಿ ಪುಟ್ ಪಾತ್ ನಲ್ಲಿ ನಡೆವಾಗ, ನಗರದ ಸಂಜೆಗಳು ಸುಂದರವೆನ್ನುವ ಭ್ರಮೆ ಕವಿದಂತೆನ್ನಿಸಿ ಕಸಿವಿಸಿಗೊಳ್ಳುವ ಗೃಹಸ್ಥನಿಗೆ ದಿಡೀರ್ ಹೆಂಡತಿಯ ನೆನಪಾಗಿ.. ಮಲ್ಲಿಗೆಯ ಮಾಲೆ ಒಯ್ದು ದಿನಗಳೆಷ್ಟಾದವು.. ಎನ್ನಿಸುವ ವಿಚಿತ್ರ ಹೊಗೆ ಮಿಶ್ರಿತ ಧೂಳಿನಂತಹ ಮುಜುಗರ ಮನಸ್ಸನ್ನ ಕಾಡುವಾಗ, ಅಲ್ಲೇ ಮೂಲೆಯಲ್ಲಿ ಸುತ್ತಿಟ್ಟ ಮಲ್ಲಿಗೆಯ ಮಾಲೆ ಎಂದೋ ಕೇಳಿರಬಹುದಾದ ನರಸಿಂಹ ಸ್ವಾಮಿಯವರ ಕವನವಾದಂತೆನಿಸಿ ಎದುರು ಹೋಗಿ ನಿಂತ  ಮಧ್ಯಮ ವರ್ಗದ ಸಂಸಾರಿಗನೆದುರು, ಯಾವ ಕೃತಕತೆಯ ಎಳೆಯಿಲ್ಲದೆ ಬಾಹ್ಯ ಪ್ರಪಂಚದ ಎದುರು ಮುಖವಾಡ ಧರಿಸುವ ಹಂಗಿಲ್ಲದ ಪ್ರೀತಿಯೊಂದು ಅಮ್ಮನಾಗಿ ಪುಟ್ಟ ಮಗಳನ್ನ ಅಪ್ಪಿ ಮುದ್ದಿಸುವಾಗ ಮಗು ನಕ್ಕ ನಗುವಿನ ಪರಿಮಳ ಎದುರಿಗಿದ್ದ ಮಾನವನ ತುಸು ಉಬ್ಬು ಹೊಟ್ಟೆಗೆ ಬಿಗಿದಿಟ್ಟ ಬೆಲ್ಟ್ ನೊಳಗೆ ಬಂಧಿಯಾದ ಅಂಗಿಯ ಒಳಸೇರಿ ಕಚಗುಳಿಯಿಡುತ್ತದೆ. ಹಚ್ಚಿಟ್ಟ ಬೀದಿ ದೀಪಗಳ ಬೆಳಕಿಗೆ ಪುಳಕ…

ಪ್ರೇಮವೆಂದರೆ ದೇವಾನಂದನ ಕಾಲದ ಹಾಡು… ಕಿಶೋರ್ ಕುಮಾರನ ಕಂಠದ ನೋವು… ಈಗಷ್ಟೆ ಅರಳುತ್ತಿರುವ ಮಕ್ಕಳ ಕುತೂಹಲ ಹದಿಹರೆಯದವರ ಸಲ್ಲಾಪ ಮಾತ್ರವೆಂದುಕೊಳ್ಳುತ್ತ, ಸಿನೆಮಾ ಥಿಯೇಟರ್ ಗಳ ಕತ್ತಲ ಸೀಟುಗಳಲ್ಲಿ ಲಾಲ್ ಬಾಗ್ ಕಬ್ಬನ್ ಪಾರ್ಕುಗಳ ಕಲ್ಲ ಬೆಂಚುಗಳ ಮರೆಯಲ್ಲಿ ಮರಗಿಡಗಳ ಸಂದುಗೊಂದುಗಳಲ್ಲಿ ಎಂದೋ ಮರೆತು ಬಿಟ್ಟವರಂತೆ ಬದುಕುತ್ತಿರುವ ಮಧ್ಯ ವಯಸ್ಸಿನ ಮಾನವ ನಿದ್ದೆಯಲ್ಲಿ ಸ್ವಪ್ನಗಳ ಕಂಡು ತುಸು ನಾಚಿಕೆಯಿಂದ ಬೆಚ್ಚಿ ಎದ್ದು ಎಷ್ಟು ದಿನಗಳಾದವು… ಕಾಮನ ಬಿಲ್ಲ ಬಣ್ಣಗಳ ಎಣಿಸಿ ವರ್ಷಗಳೆಷ್ಟಾದವು.. ಅಷ್ಟಕ್ಕೂ ಕಾಮನ ಬಿಲ್ಲು ಅರಳಿ ಕಾಲವೆಷ್ಟಾಯಿತು.. ಎನ್ನುವ ಸಂದೇಹ ಕಾಡದಂತೆ ಓಡಿಸುತ್ತಿದೆ ನಗರ… ಬೆಳ್ಳಂಬೆಳಗ್ಗೆ ಕಛೇರಿಗೆ ತಡವಾಯಿತಲ್ಲ ಎಂದುಕೊಳ್ಳುತ್ತ ತುಂಬಿ ಬಿರಿದು ನಿಂತ ಹಲಸಿನ ಹಣ್ಣಿನಂತ ಬಸ್ಸಲ್ಲಿ ನುಗ್ಗಿ ಚೂರುಪಾರು ಜಾಗದಲ್ಲಿ ಎಲ್ಲೆಲ್ಲೋ ಏನೇನೋ ತಾಗಿದರೂ ಮುಜುಗರಗೊಳ್ಳದೆ ಟಿಕೇಟ್ ಕೇಳುವ ಕಂಡಕ್ಟರ್ ಗೆ ಬೈದುಕೊಳ್ಳುತ್ತ ಕಾಲು ತುಳಿದವನೊಡನೆ ಜಗಳವಾಡಿ ಕಛೇರಿ ಸೇರಿದಾಗ ಮನಸ್ಸು ಕಲ್ಲಚಪ್ಪಡಿಯಡಿಗಿನ ಶವ.. ಸುಂದರ ಮಂದಹಾಸದೊಂದಿಗೆ ಆರಂಭಿಸಬೇಕಿದ್ದ ದಿನಗಳನ್ನ ಮರೆಸಿ ಜಂಜಡಗಳ ಉಳಿಸುವ ಬದುಕಿನ ದುಸ್ತರ ಅಸಹಾಯಕತೆ ನಗರದ್ದಾ.. ನಾಗರಿಕನದ್ದಾ,,??

ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಜೀವಿಗಳಿಗಿರುವ ನಗೆ ಕೃತಕವಾ, ಸಹಜವಾ,,? ಪ್ರೇಮವೆಂದರೆ ಹದಿಹರೆಯದವರಿಗೆ ಮಾತ್ರ ಮೀಸಲಿಟ್ಟ ಭಾವವಾ..? ಕೆಂಪಂಗಿಯ ಯೂನಿಫಾರ್ಮ್ ತೊಟ್ಟು ಮುಂಜಾವಿನಲ್ಲಿ ರಸ್ತೆಗಳ ನರಮಂಡಲಗಳನ್ನ ಸ್ವಚ್ಛವಾಗಿಸುವ ಮಹಿಳೆಯ ಮಗುವಿನ ಕಣ್ಣ ಹೊಳಪು, ದಿನವಿಡಿ ವಿಚಿತ್ರ ಪಾತ್ರಗಳ ಜನರ ನಡುವೆ ನುಗ್ಗುತ್ತಲೆ ಪುಟ್ಟ ಮಾತಿನ ಅಪ್ಯಾಯತೆಗೆ ನಗುವರಳಿಸಿ ಕಥೆ ಹೇಳುವ ಕಂಡಕ್ಟರ್ ನ ಜೀವಂತಿಕೆ, ಬಣ್ಣದ ಬಲೂನುಗಳಲ್ಲಿ ಕನಸುಗಳ ತುಂಬಿ ಮಾರುವ ಹುಡುಗನ ಪೀಪಿಯ ಪೂಂ ಪೂಂ.. ಹಾಡು, ಬೆಳಗಿನ ಮಂಜಿನಲ್ಲಿ ಮಂಗನ ಟೊಪ್ಪಿ ಧರಿಸಿ ವಿಹಾರಕ್ಕೆ ಹೊರಟ ಹಿರಿ ಜೀವದ ಮೃದು ಹೆಜ್ಜೆಯ ಬಿಸುಪು, ರಸ್ತೆ ದಾಟುವಾಗ ಕಣ್ಣರಳಿಸಿ ನೋಡುತ್ತ ಭರ್ರೋ.. ಎಂದು ಬರುವ ವಾಹನಗಳ ತೀವ್ರತೆಗೆ ಬೆಚ್ಚಿ ಗೊತ್ತೇ ಆಗದಂತೆ ಜಗಳವಾಡಿ ಸಿಟ್ಟಾದ ಅಣ್ಣನ ಕೈ ಬೆರಳ ಹಿಡಿದುಬಿಡುವ ತಂಗಿಯ ಅಂಗೈಯಲ್ಲಿನ ಬೆಚ್ಚನೆಯ ಭಾವ, ರಾತ್ರಿ ಪಾಳಿ ಮುಗಿಸಿ ಬಂದು ಉಸ್ಸೆಂದು ಹಾಸಿಗೆ ಸೇರುವಾಗ ಗಂಡ ಮಾಡಿಕೊಟ್ಟ ಕಾಫಿಯಲ್ಲಿನ ಜೀವದ್ರವ್ಯ…. ಪುಟ್ ಪಾತ್ ನಲ್ಲಿ ಹೂ ಮಾರುವವಳು ಮಗಳ ಮುದ್ದಿಸಿದಾಗ ನಕ್ಕ ನಗುವಿನ ಕೆನ್ನೆಯ ಗುಳಿಯ ಒನಪು, ಅರೆತೆರೆದ ಮೈಯ ನಟಿಯ ಮೇಲೆ ಎಲ್ಲೆಲ್ಲೋ ಕೈ ಆಡಿಸುತ್ತ ನಿಧಾನವಾಗಿ ಸಿನೆಮಾ ಪೋಸ್ಟರ್ ಅಂಟಿಸುವ ಹುಡುಗನ ತುಂಟತನ.. ಇವೆಲ್ಲ ಪೇಪರ್ ಹಾಕುವ ಹುಡುಗನ ಸೈಕಲ್ ಏರಿ ಮನೆಮನೆಗೂ ಮನಗಳ ಒಳಗೂ ನುಸುಳಿ ನಗರದ ನಿಸ್ತೇಜಗಳಿಗೆ ಬಣ್ಣ ತುಂಬಲಿ… ಊರ ತೊರೆದು ನಗರ ಸೇರಿದವರ ನೆನಪುಗಳ ಕೆದಕಿ ಪುಳಕಗೊಳಿಸಲಿ..

ಕನಸುಗಳ ಮಾರುತ್ತಿರುವಂತೆ ಭ್ರಮೆ ಹುಟ್ಟಿಸುವ ನಗರವೇ, ನಿಂತಲ್ಲಿ ನಿಲ್ಲಗೊಡದೆ ಓಡಿಸುತ್ತಲೇ ಇರುವ ನಗರವೇ ನೀ ಮಾನವನಾಗಿಬಿಡುವ ಮಾಯೆಗೆ… ನಗರವಾಗಿ ಪರಿವರ್ತಿಸಲ್ಪಟ್ಟ ಮಾನವ ಕಾಯುತ್ತಿದ್ದಾನೆ… ಕಣ್ಣ ಎವೆಯಿಕ್ಕದೆ ಕಾಯುತ್ತಿರುವ ಪುಟಾಣಿಗಳ ಕಣ್ಗಳೆದುರು ನಗರ – ನಾಗರಿಕನಂತಾಗಿಬಿಡುವ ಜಾದೂ ನಡೆಯುವ ಕೌತುಕಕ್ಕಾಗಿ ತನ್ನನ್ನೇ ಮಾರಿಕೊಂಡ ಮನುಷ್ಯ ಕಾತರಿಸುತ್ತಿದ್ದಾನೆ… ಕಾಯುವಿಕೆಯ ಚಿಪ್ಪೊಳಗಿಂದ ಮುತ್ತು ಉದುರುವಂತೆ ಕನಸ ಕಾಣಬೇಕಿದೆ ಈಗ.. ಪುಟ್ಟ ಪುಟ್ಟ ಖುಷಿಗಳ ಜತನದಿಂದ ಆಯ್ದು ಉಸಿರಾಗಿಸಿಕೊಳ್ಳಬೇಕಿದೆ ಈಗ…

(ಬ್ಲಾಗ್ ಅಂಗಳದ ನನ್ನ ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:11-12-2011ರ ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ)