RSS

Category Archives: ಮೋಹಮತಿ ಕಥಾಮುಖಿ

ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ..!!

ಮೋಹಮತಿ ಕಥಾಮುಖಿ//ರಘುನಂದನ ಹೆಗಡೆ

ಪುಟ್ಟ ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ ಉಡುಗೊರೆ ಕಾದಿಟ್ಟ ಕನಸು, ಮನಸ್ಸಿನಲ್ಲಿ ಮಾನಸ ಸರೋವರದ ತಣ್ಣನೆಯ ಹಿಮರಾಶಿ. ಜಾರಬಹುದಾದ ದಾರಿಯೇ ಹಜಾರ್ ದೇತಾ ಹೈ, ಜಾರಿ ಬಿದ್ದರೆ ದಾರಿಯೂ ನಗುತ್ತದೆ. ಮುಗಿಲು ಮಾತ್ರ ನಾನಿಲ್ಲಿದ್ದೇನೆ ಬಾ ಎನ್ನುತ್ತದೆ. ನಿನಗಿನ್ನೂ ತ್ರಾಣವಿದೆ, ನಡೆಯಬೇಕಾದ ದಾರಿ ನೂರು, ಆದರೆ ನಾನು ಮಾತ್ರ ಒಂದೇ, ನಿನಗೆಂದೇ ಕಾಯುತ್ತಿರುವೆ, ಆಕಾಶ ಕೂಗಿ ಕರೆಯುತ್ತದೆ. ಪಾತಾಳ ಲೋಕದಲ್ಲೊಂದು ಕ್ಷೀಣ ಸ್ವರ, ಬರುತ್ತೇನೆ ಖಂಡಿತ ಎದ್ದು ಬರುತ್ತೇನೆ ಎಂಬ ಕನವರಿಕೆಯ ಸ್ವರ. ಮುಂಬಯಿಯ ಪುಟ್‍ಪಾತ್‍ಗಳಲ್ಲಿ, ಲೋಕಲ್ ರೈಲಿನ ಗಡಿಬಿಡಿಯ ಗಜಿಬಿಜಿಯಲ್ಲಿ, ಪಾವ್‍ಬಾಜಿವಾಲಾ ಲಾಟೀನ್ ಬೆಳಕಲ್ಲಿ ಬಿಸಿ ಬಿಸಿ ಕನಸುಗಳ ಮಾರುತ್ತಾನೆ. ಜೊತೆ ನಡೆದ ಬದುಕಿನ ಪುಸ್ತಕದಲ್ಲಿ ಇಂತ ನೂರು ನೆನಪ ಹಾಳೆಗಳಿವೆ. ಅವನ್ನೆಲ್ಲ ಅಳಿಸಿ ಹಾಕುವ ಕಾಲನ ಹೊಡೆತಕ್ಕೆ ಏನು ಹೇಳುವುದು.

ಭೂತಕಾಲವನ್ನು ನೆನಪುಗಳಾಗಿ ತಂದು ಕಣ್ಣ ಆಗಸದಲ್ಲಿ ವರ್ಷಿಸುತ್ತದೆ ವರ್ತಮಾನ. ಭವಿಷ್ಯತ್‍ಗೆ ಏನನ್ನ ಉಳಿಸಲಿ.  ಎದುರಿಗೆ ಕುಳಿತು ನೀನು ಶೂನ್ಯವನ್ನ ದಿಟ್ಟಿಸುತ್ತೀಯ, ನಾನು ನಿನ್ನನ್ನ. ತಳವಿಲ್ಲದ ಆಳ ನಿನ್ನ ಕಣ್ಣು. ಆದರೂ ಹುಡುಕುತ್ತೇನೆ ಏನಾದರೂ ಸಿಕ್ಕೀತು, ಉಹೂಂ, ಮತ್ತೂ ಆಳಕ್ಕೆ ಸೆಳೆಯುತ್ತೀಯ. ಒಳಸುಳಿಯಲ್ಲಿ ನಾನೇ ಮುಳುಗಿ ಹೋಗುತ್ತೇನೆ. ನನ್ನ ಆಳವನ್ನೆಲ್ಲ ಭೇದಿಸಿ ನನ್ನನ್ನ ಮುಳುಗಿಸುತ್ತೀಯ. ಆಳ ಧಕ್ಕದೆ ನಾನಲ್ಲಿ ತೇಲುತ್ತೇನೆ. ಕಂಗಾಲಾಗುತ್ತೇನೆ. ನನ್ನ ಬದುಕಿನಂತೆ ನಿನ್ನ ಕಣ್ಣುಗಳೂ, ಆಳ ತಳ ಧಕ್ಕದು. ನಿನ್ನನ್ನೆ ನೋಡುತ್ತ ಬದುಕೆಲ್ಲ ಕಳೆದು ಬಿಡಬಲ್ಲೆ ಅಂತೆಲ್ಲಾ ಮಾತಾಡುವವರೆಲ್ಲ ಎಷ್ಟು ದಿನ ನೋಡಬಲ್ಲರೋ ಗೊತ್ತಿಲ್ಲ. ನಾನು ಮಾತ್ರ ನೋಡುತ್ತ ಕುಳಿತೇ ಇದ್ದೇನೆ, ಎಷ್ಟು ವಸಂತ ಕಳೆದವೋ ಗೊತ್ತಿಲ್ಲ. ಒಂದಲ್ಲ ಒಂದು ದಿನ ಮತ್ತೆ ಎಲ್ಲ ಸರಿ ಹೋಗಬಹುದು ಎನ್ನುವ ಕನಸು.

ಸಮುದ್ರ ತೆರೆಗಳ ಭೋರ್ಗರೆತ. ಮನಸ್ಸಿನಲ್ಲಿ ದುಗುಡದ ಮರಳ ರಾಶಿ. ಮತ್ತೆ ಮತ್ತೆ ಅದೇ ಮಾತು ಅಲೆ ಅಲೆಯಾಗಿ ಅಪ್ಪಳಿಸುತ್ತದೆ. ನೀವು ಒಪ್ಪಿಗೆ ಕೊಟ್ರೆ ಕೊನೆಯ ಪ್ರಯತ್ನ ಮಾಡಬಹುದೇನೋ, ಆದರೂ ಗತವನ್ನ ನೆನಪುಗಳನ್ನ ಉಳಿಸಲಾಗದೇನೋ ಅನ್ಸುತ್ತೆ, ನೀವೇನು ಹೇಳ್ತೀರಿ. ಏನ್ ಹೇಳುವುದು, ಹೇಳಲಾಗದ್ದನ್ನ ಹೇಳು ಅಂದರೆ, ಹೇಳಬಾರದ್ದನ್ನ ಹೇಳಬೇಕಾಗಿ ಬಂದರೆ, ಆದರೂ ಹೇಳಲೇ ಬೇಕು. ಗತವನ್ನ ಉಳಿಸಲಾಗುವುದಿಲ್ಲ ಅಂದರೆ ಅಷ್ಟೇನು ಬೇಸರವಿರುತ್ತಿರಲಿಲ್ಲವೇನೋ ಎಂದು ಈಗೀಗ ಎನಿಸುತ್ತಿದೆ. ಏನಾಗುತ್ತಿತ್ತು, ನಿನ್ನ ಗತ ನಿನ್ನಲ್ಲಿ ಉಳಿಯದಿದ್ದರೆ, ನಮ್ಮ ಎಷ್ಟೋ ಹಳೆಯ ಕಳೆದ ದಿನಗಳು ಮರೆಯಾಗುತ್ತಿದ್ದವಷ್ಟೆ, ನಾನು ಮತ್ತೆ ಹೊಸದಾಗಿ ಪ್ರೇಮಿಯಾಗಿ, ನಿನಗೆ ಪ್ರಫೋಸ್ ಮಾಡಿ ಮತ್ತೆ ಜೊತೆ ಸೇರಿ, ರಾತ್ರಿಯ ನೀರವ ಬೀದಿಗಳಲ್ಲಿ ಸಂಚರಿಸಿ, ಬೆಳದಿಂಗಳಲ್ಲಿ ಮಲ್ಲಿಗೆ ಹುಡುಕುತ್ತ ಕಾಡುಗಳಲ್ಲಿ ಸುತ್ತಾಡಿ… ನಿನ್ನ ಮನೋ ಭೂಮಿಕೆಯಲ್ಲಿ ಹಳೆಯದಕ್ಕಿಂತ ಚೆಂದನೆಯ ಹೊಸ ನೆನಪುಗಳ ಉದ್ಯಾನವನ್ನ ಮೂಡಿಸಿ ಅಲ್ಲಿ ನಮ್ಮ ಪ್ರೇಮದ ಸರೋವರವನ್ನ ಪ್ರತಿಷ್ಠಾಪಿಸಿ ಇಬ್ಬರೂ ವಿಹರಿಸಬಹುದಿತ್ತು. ಆದರೆ ನನಗೆ ಗೊತ್ತಿತ್ತಲ್ಲ, ಭವಿಷ್ಯತ್ ಪುಟಗಳು ಕೂಡ ನಿನ್ನಲ್ಲಿ ಅರೆ ಕ್ಷಣಗಳಿಗಿಂತ ಹೆಚ್ಚು ದಾಖಲಾಗುವುದಿಲ್ಲ ಎಂದು. ಆದರೇನಂತೆ ಪ್ರತಿ ದಿನ ಪ್ರೇಮಿಯಾಗುವ ಅವಕಾಶ ಅಲ್ಲವಾ ಎನಿಸಿ ಹೂಂ ಅಂದೆನಾ, ವೈದ್ಯಶಾಸ್ತ್ರವನ್ನ ಮೀರಿದ ಶಕ್ತಿ ಮತ್ತೆ ಅದೇ ನಿನ್ನನ್ನ ನನ್ನವಳನ್ನಾಗಿಸಬಹುದು ಎನಿಸಿ, ನಿಮ್ಮ ಪ್ರಯತ್ನ ನೀವು ಮಾಡಿ ಎಂದೆನಾ ಗೊತ್ತಿಲ್ಲ. ಅವರ ಕೊನೆಯ ಪ್ರಯತ್ನ ಯಶಸ್ವಿಯಾಯಿತು, ನೀನು ಉಳಿದೆ ಆದರೆ ನನ್ನನ್ನ ಕಳೆದುಬಿಟ್ಟೆ.

* * * * * * * *

ಪ್ರಿಯತಮ, ನಿನ್ನ ನನ್ನ ಕಣ್ಣ ಕೊಳದೊಳಗೆ ಮುಳಗಿಸಿ ಕೊಲ್ಲಲು ಕಾಯುತ್ತಿರುವೆ,
ಬರದೆ ಇರಬೇಡ, ಕಣ್ಣು ಸೋಲುತ್ತಿದೆ.
ಕಿರುನಗೆಯ ತುತ್ತನಿಟ್ಟು ನಿನ್ನ ತುಟಿಗಳಿಂದ ಜಾರುವ ಮುತ್ತ ನುಂಗಲು ಹಸಿದು ಕಾದಿರುವೆ
ತಡಮಾಡಬೇಡ, ಕಿರುನಗೆ ಮಾಸುತ್ತಿದೆ.

ಅರೆ ಇಬ್ಬನಿಯ ರಾತ್ರಿಯಲ್ಲಿ ಕೈ ಹಿಡಿದು ನಡೆಸಿದ ಗೆಳೆಯ ಅವನೆಲ್ಲಿ ಹೋದಾ. ಅವನಿಗೆ ಗೊತ್ತಿಲ್ಲವೇ ನಾನಿನ್ನು ಬೆಳೆಯಬೇಕಿದೆ. ನನ್ನ ಕನಸುಗಳಲ್ಲಿನ ಅವನನ್ನು ಬದುಕಿಗೆ ಎಳೆದು ತಂದುಕೊಳ್ಳಬೇಕಿದೆ. ಮತ್ತೆ ಇಬ್ಬನಿಯ ರಾತ್ರಿಗಳಲ್ಲಿ ಜೊತೆ ಸೇರಿ ನಡೆಯಬೇಕಿದೆ. ಮಾತುಗಳ ಮೆಲ್ಲಬೇಕಿದೆ, ಕನಸುಗಳ ಖರೀದಿಸಬೇಕಿದೆ. ಈ ಬಿಳಿ ಬಿಳಿ ಚಾದರ, ಹಾಸಿಗೆ, ಘಮಗಳ ನಡುವಿಂದ ಎದ್ದು ಓಡಬೇಕಿದೆ. ಮನಸ್ಸಿನ ಕರೆ ಅರ್ಥವಾಗಿ ರಂಗಭೂಮಿಯ ತೆರೆ ಸರಿಸಿ, ಬಂದ ನಿನ್ನ ಕಣ್ಣಲ್ಲಿ ಪ್ರಶ್ನೆ. ಚೆನ್ನಾಗಿದ್ದೀಯಾ? ಆಡಿಯೂ ಬಿಟ್ಟೆ ನೀನು. ನಿನ್ನ ಪ್ರಶ್ನೆ ನಿನಗೇ ವಿಚಿತ್ರ ಅನ್ನಿಸದಾ, ಆಸ್ಪತ್ರೆಯಲ್ಲಿ ಮಲಗಿದವರನ್ನ ಚೆನ್ನಾಗಿದೀಯಾ ಎಂದು ಕೇಳಬಹುದಾ? ಅಂತೆಲ್ಲಾ ನಾನು ಅನ್ನುತ್ತಾ ಇದ್ದರೆ ನಿನ್ನಲ್ಲಿ ದುಗುಡ ಜಾಸ್ತಿ ಆಗುತ್ತದಾ. ಆದರೂ, ನನಗೇನಾಗುತ್ತಿದೆ, ಹೇಗೆ ಹೇಳಲಿ ನಿನಗೆ, ಅಷ್ಟಷ್ಟೆ ಕರಗುತ್ತಿರುವ ನಿನ್ನ ಕ್ಷಣಗಳನ್ನ ನನ್ನದಾಗಿಸಿಕೊಂಡಿದ್ದೇನೆಂದು.

ಬದುಕಿನ ದಾರಿಯಲ್ಲಿ ಒಂಟಿಯಾಗಿ ನಡೆಯುತ್ತಿದ್ದವಳಿಗೆ ನೀನು ಯಾಕೆ ಸಿಕ್ಕೆ ಅಂತ ನಾನು ಕೇಳಿಕೊಂಡಿದ್ದೇ ಇಲ್ಲ ಕಣೋ. ನಿನಗಾಗೇ ಕಾದಿದ್ದವಳ ಹಾಗೆ ಹೇಗೆಲ್ಲ ಒಪ್ಪಿಕೊಂಡು, ಅಪ್ಪಿಕೊಂಡು ಕಾಡಿದೆ ನಿನ್ನನ್ನ. ಗೋದಾವರಿ ನದಿ ತೀರದ ಬತ್ತದ ಗದ್ದೆಗಳಲ್ಲಿ ತಂಪು ತಂಪು ರಾತ್ರಿಯಲ್ಲಿ ಹೆಜ್ಜೆ ಇಡುವಾಗ ಬೆಚ್ಚಗಿನ ನಿನ್ನ ಹಿಡಿತದ ಸೊಬಗು,  ಹೆಸರಿಲ್ಲದ ಹಳ್ಳದ ನೀರ ಝರಿಯಿಂದ ನೀನು ನನ್ನ ಎಳೆದೊಯ್ಯುವಾಗ ಮೂಡುವ ಹಠ ಎಲ್ಲ ನಿನಗಾಗೇ ಕಾದಿರಿಸಿದ್ದು. ನೀನೋ ಮಹಾ ವಿಜ್ಞಾನಿ, ಅದೇನು ಶೋಧಿಸುತ್ತೀಯೋ. ಮೆದುಳಿನೊಳಗಿನ ನೆನಪ ಸಾಗರದಲ್ಲಿ ಒಂದನ್ನಾದರು ಹುಡುಕು ನೋಡೋಣ, ಎದೆಯಂಗಳದ ಬಯಲಲ್ಲಿ ಬೆಳೆದ ಪಾರಿಜಾತ ಅಂದರೇನೆಂದು ಗೊತ್ತಾ ಅಂತೆಲ್ಲ ನಿನ್ನ ಕಾಡುವಾಗ ಏನೂ ಮಾಡಲು ತಿಳಿಯದ ನೀನು ಬಾಚಿ ತಬ್ಬಿ ನನ್ನ ಸುಮ್ಮನುಳಿಸುತ್ತಿದ್ದರೆ ನನ್ನಲ್ಲಿ ಎಷ್ಟೆಲ್ಲ ಆಸೆಗಳ ಮೆರವಣಿಗೆ ಗೊತ್ತಾ.

ಕುಂಟಾಬಿಲ್ಲೆ ಆಡದೆ ಎಷ್ಟು ದಿನ ಆಯ್ತು ಗೊತ್ತಾ, ನನ್ನನ್ನ ಈ ಆಸ್ಪತ್ರೆಯ ಘಮದಿಂದ ಬಿಡಿಸಿಕೊಂಡು ಹೋಗು, ಬಿಳಿ ಚಾದರಗಳ ನಡುವಿಂದ ಎತ್ತೊಯ್ದು ಬಣ್ಣಬಣ್ಣದ ಹೂವಿನ ಚಾದರದೊಳಗೆ ಅಡಗಿಸಿಡು ಅಂತೆಲ್ಲ ನಾನು ಕೇಳಿದರೆ ನಿನ್ನ ಮುಖದಲ್ಲಿ ಪುಟ್ಟ ಮಂದಹಾಸ, ಯಾವುದು ಕಳೆದರೂ ಇದನ್ನ ಬಿಟ್ಟುಕೊಡಲಾರೆ ಎಂಬಂತೆ. ನಿನ್ನ ಮಂದಹಾಸವನ್ನ ನಾನು ಕದ್ದೊಯ್ಯುತ್ತಿದ್ದೇನಾ. ನೀನೇ ಹೇಳಿದ್ದು ಹಿಂದೊಮ್ಮೆ, ಲಾಸ್ಟ್ ಇಸ್ ಪಾಸ್ಟ್ & ಪಾಸ್ಟ್ ಇಸ್ ಆಲ್ವೇಯ್ಸ್ ಪಸ್ಟ್, ನೆನಪಿದೆಯಾ, ನಿರಾಸೆ ತುಂಬಿ ನಿಂತ ನನ್ನನ್ನ ಈ ಮಾತ ಹೇಳಿ ಮರಳ ತೀರದಲ್ಲಿ ಓಡಿಸಿ, ಕಾಡಿಸಿ, ಈಗ ನಿನ್ನ ಬಿಟ್ಟುಕೊಡಲಾರೆ ಎಂಬಂತೆ, ಮಾತಾಡಿದರೆ ಚೆನ್ನವಲ್ಲವೆನ್ನಿಸಿತೋ ಏನೋ, ಕಂಠ ಕಟ್ಟಿ ಕಣ್ಣಿಂದ ಪುಟ್ಟ ಬಿಂದು, ಆಕಾಶ ಕರೆಯುತ್ತಿದೆ, ನಿನಗಾಗಿ ನಕ್ಷತ್ರಗಳ ಸಿಂಗರಿಸಿ ಚಾದರವ ಕಾಯ್ದಿರಿಸಿರುವೆನೆಂದು, ಸೂರ್ಯನಿಂದ ಕಾಮನಬಿಲ್ಲನ್ನ ಚಂದಿರನಿಂದ ಬೆಳದಿಂಗಳನ್ನ ನಿನಗಾಗೇ ತೆಗೆದಿಟ್ಟಿರುವೆನೆಂದು.

* * * * * * * *

ನಿಮಗೆ ಗೊತ್ತಿದೆ, ಮೆದುಳು ಅತಿ ಸೂಕ್ಷ್ಮವಾದದ್ದು, ವಿಜ್ಞಾನ ಎಷ್ಟು ಪ್ರಯತ್ನಪಟ್ಟರೂ ಮೆದುಳಿನ ಫಿಜಿಕಲ್ ಸ್ವರೂಪವನ್ನ ಅರಿತಿದೆಯೇ ಹೊರತು ಅದರ ಆಳವನ್ನ ಅರಿಯಲು ಸಾಧ್ಯವಾಗಿಲ್ಲ. ಹಾಗೇ ಮೆದುಳಿಗೆ ಬರುವ ರೋಗಗಳಿಂದ ಉಂಟಾಗುವ ಪರಿಣಾಮಗಳಿಗೆ ಕೂಡ ಸೂಕ್ತ ಉತ್ತರ ದೊರೆಯುತ್ತಿಲ್ಲ, ಎಂದೆಲ್ಲ ಅವರು ಮಾತು ಆರಂಭಿಸಿದಾಗ ಏನೂ ಭಾವನೆಗಳೇ ಇಲ್ಲದಂತೆ ನೇರವಾಗಿ ಕೇಳಿದ್ದೆ, ಉಪೋದ್ಘಾತ ಸಾಕು, ಅವಳನ್ನ ಬದುಕಿಸಲು ಸಾಧ್ಯವಿಲ್ಲವಾ ಹೇಳಿ. ಅವರೆಂದಿದ್ದರು, ಕೊನೆಯ ಪ್ರಯತ್ನ ಮಾಡಬಹುದೇನೋ ಆದರೆ, ಬದುಕಿಸುವ ಪ್ರಯತ್ನದಲ್ಲಿ ಅವಳ ನೆನಪಿನ ಕೋಶಗಳು ಸಾಯುವ ಅಪಾಯವಿದೆ. ಬದುಕಿರುವವರೆಗೂ ಅವಳು ಪರಾವಲಂಬಿಯಾಗೇ ಬದುಕಬೇಕಾದೀತು. ಅಲ್ಜೀಮರ್ ಎನ್ನುವ ನೆನಪಿನ ಶಕ್ತಿಯನ್ನು ಕೊಲ್ಲುವ ರೋಗವಿದೆ. ಸಾಮಾನ್ಯವಾಗಿ ಬದುಕಿನ ಇಳಿ ಸಂಜೆಯಲ್ಲಿ ಆವರಿಸುವ ಈ ರೋಗ ಜ್ಞಾಪಕ ಶಕ್ತಿಯನ್ನ ಕಳೆಯುತ್ತದೆ. ಬದುಕಿನ ಹಿಂದಿನ ಪುಟಗಳೆಲ್ಲ ದಿಢೀರ್ ಖಾಲಿ ಖಾಲಿ. ಈ ರೋಗ ಆವರಿಸಿದವರು ಮಗುವಾಗಿಬಿಡುತ್ತಾರೆ. ಎಷ್ಟೋ ಬಾರಿ ದೈನಂದಿನ ಕೆಲಸಗಳನ್ನೂ ಮರೆತುಬಿಡುತ್ತಾರೆ. ಸಲಹುವುದಕ್ಕೆ ಅಪಾರ ಸಹನೆ ಬೇಕಾಗುತ್ತದೆ. ಬಹುಶಃ ಅವಳ ಮುಂದಿನ ಬದುಕು ಅಲ್ಜೀಮರ್ ರೋಗಿಗಳ ಬದುಕಿನಂತಾಗಬಹುದು.

ನಿಮಗೆ ವೈದ್ಯ ಶಾಸ್ತ್ರ ಹೊಸತಲ್ಲ. ನನಗಿಂತಲೂ ಬಲ್ಲವರು. ನಿಮಗೆ ತಿಳಿಯದ್ದೇನಿದೆ. ಎಂಥ ತಣ್ಣನೆಯ ಸ್ವರ. 25 ವರ್ಷದ ಹಿಂದೆ ಅವರು ತಣ್ಣಗೆ ಹೇಳುತ್ತಿದ್ದರೆ ನಾನು ಅರ್ಥವಾಗದವನಂತೆ ಅರ್ಥವಾಗಬಾರದು ಎನ್ನುವಂತೆ ನಿಂತಿದ್ದು ನೆನಪಾಗುತ್ತದೆ. ನನ್ನೆದುರು ಆಯ್ಕೆಯಿತ್ತು, ಜಾತ್ರೆಯಲ್ಲಿ ಗೊಂಬೆಯಾ ಮಿಠಾಯಿಯಾ ಎನ್ನುವ ಆಯ್ಕೆಗೆ ಗೊಂದಲಗೊಂಡ ಮಗುವಿನ ಹಾಗಲ್ಲ ಇದು, ಜೀವವಾ ಜೀವನವಾ ಎನ್ನುವ ಆಯ್ಕೆ. ವಿಚಿತ್ರ ಅನ್ನಿಸುತ್ತಲ್ಲ, ಜೀವ ಇದ್ದರೆ ಜೀವನವೂ ಇದ್ದಂತೆ ಅನ್ನಿಸಿಬಿಡುತ್ತಲ್ಲ, ಉಹೂಂ, ಅಷ್ಟು ಸುಲಭವಲ್ಲ ಎಲ್ಲ. ನನಗೆ ನಿನ್ನನ್ನ ಸಲಹುವ ಜೀವನವಿದೆ, ಆದರೆ ಜೀವ ಉಳಿದಿಲ್ಲ. ನಿನಗೆ ಜೀವ ಇದೆ, ಆದರೆ ಜೀವನವೇ ಇಲ್ಲ. ನಿನ್ನ ಜೀವವನ್ನ ನನ್ನದಾಗಿಸಿಕೊಂಡು ನನ್ನ ಜೀವನವನ್ನ ನಿನ್ನೊಂದಿಗೆ ಕಳೆಯುವ ಉದ್ದೇಶವೊಂದೆ ಸಾಕೇ ಬದುಕಿಗೆ. ಯಾಕೋ ಈಗೀಗ ಸೋಲುತ್ತಿದ್ದೇನೆ ಎನಿಸುತ್ತಿದೆ.

ಆವತ್ತು ಕನಿಷ್ಠ ನಿನ್ನನ್ನ ಉಳಿಸಿಕೊಳ್ಳಬೇಕೆನಿಸಿತ್ತು. ಮುಂದಿನ ಬದುಕೇ ಇಲ್ಲದಂತೆ ಖಾಲಿ ಖಾಲಿಯಾಗಿ ಇದ್ದುಬಿಡುವ ದಿನಗಳ ಅರಿವಿರಲಿಲ್ಲ. ಇವತ್ತು ಮೊದಲ ಬಾರಿಗೆ ಅನ್ನಿಸ್ತಿದೆ ಬದುಕು ತುಂಬಾ ಸಂಕೀರ್ಣವಾದದ್ದು ಅಂತ. ಇದರಲ್ಲಿ ಭಾವನೆಗಳಿಗೆ ಕನಸುಗಳಿಗೆಲ್ಲ ಬೆಲೆ ವಾಸ್ತವದ ಅವಶ್ಯಕತೆಗಳೆಲ್ಲ ಪೂರ್ಣಗೊಂಡಾಗ ಮಾತ್ರವೇನೋ. ಇಷ್ಟು ದಿನ ಕೇವಲ ಭಾವಗಳ ಪ್ರಪಂಚದಲ್ಲಿದ್ದು ವಾಸ್ತವವನ್ನ ಮರೆತಿದ್ದೆ. ಅವಶ್ಯಕತೆ ಹೀಗೆ ಹಿಂದಿನಿಂದ ಹೊಡೆಯಬಹುದು ಅಂದುಕೊಂಡಿರಲಿಲ್ಲ. ಅಫ್‍ಕೋರ್ಸ್ ಅವಶ್ಯಕತೆಗೆ ಬೆನ್ನು ಹಾಕಿ ನಿಂತರೆ ಅದು ಹಿಂದಿನಿಂದ ತಾನೇ ಹೊಡೆಯೋದು, ಬೆನ್ನು ಹಾಕದೇ ಇದ್ದಿದ್ದರೆ ಎಳೆದು ರಪ್ಪಂತ ಕೆನ್ನೆಗೆ ಬಾರಿಸುತ್ತಿತ್ತೇನೋ. ನನ್ನ ಬದುಕು ಮುಗಿಯುತ್ತಿದೆ, ನಿನ್ನ ಬದುಕು ಮುಗಿಯುವ ಲಕ್ಷಣಗಳೇ ಇಲ್ಲ, ನನ್ನ ನಂತರದ ನಿನ್ನನ್ನು ನೆನೆಸಿಕೊಳ್ಳಲಾರೆ ನಾನು.

* * * * * * *

ಅರೆ, ನೀನ್ಯಾಕೆ ನನ್ನ ಇಷ್ಟು ಪ್ರೀತಿಸುತ್ತೀಯ. ನಾವಿಬ್ಬರೂ ಗಂಡ ಹೆಂಡತಿಯಾ. ಮುಂಜಾನೆ ನನ್ನ ಎಬ್ಬಿಸಿ ರಂಗೋಲಿ ಹಾಕಿಸುತ್ತೀಯ ನೀನು, ನನಗೆ ಈ ಚುಕ್ಕಿ ಗೆರೆಗಳೇ ಅರ್ಥವಾಗುವುದಿಲ್ಲ. ಏನೇನೋ ಗೊಜಲು ಗೊಜಲು. ನನ್ನೇ ನೋಡುತ್ತ ಕುಳಿತ ನೀನು ಕೈ ಹಿಡಿದು ಎಷ್ಟು ಚೆಂದದ ಚಿತ್ರ ಮೂಡಿಸುತ್ತೀಯಲ್ಲ, ನಂಗೆ ತಡೆಯಲಾರದಷ್ಟು ಪ್ರೀತಿ ಬರುವ ಹಾಗೆ. ನನಗೇನಾಗಿದೆ ಎಂದೇ ಅರಿವಾಗುವುದಿಲ್ಲ, ಎಲ್ಲ ಒಮ್ಮೆಲೆ ಮರೆತು ಹೋಗುತ್ತೇನೆ, ಮತ್ತೆ ಏನೇನೋ ನೆನಪಾಗುತ್ತದೆ. ಎಲ್ಲಿ ನಿನ್ನನ್ನೂ ಮರೆತು ಬಿಡುತ್ತೇನೋ ಎಂದು ಭಯವಾಗುತ್ತದೆ. ಅರೆ, ಮರೆಯಲು ನಿನ್ನ ಬಗ್ಗೆ ನನಗೆ ಗೊತ್ತಿರುವುದಾದರೂ ಏನು, ಎಷ್ಟೋ ದಿನಗಳಿಂದ ನೀನು ನನ್ನ ಸಲಹುತ್ತಿದ್ದೇಯೆಂದು ಅನಿಸುತ್ತೆ, ಆದರೆ ಎಷ್ಟು ದಿನಗಳಿಂದ, ಅಷ್ಟಕ್ಕೂ ನೀನು ನನಗೇನಾಗಬೇಕು, ಗೆಳೆಯನಾ, ಗಂಡನಾ, ಪ್ರೇಮಿಯಾ ಉಹೂಂ ಗೊತ್ತಿಲ್ಲ. ಆದರೆ ನಿನ್ನ ಪ್ರೀತಿಯ ಅರಿವಿದೆ. ನೀನು ಕೈ ಹಿಡಿದು ನಡೆವಾಗ ಎಲ್ಲಿಂದ ಹೊರಟಿದ್ದು ಎಲ್ಲಿಗೆ ಹೋಗುತ್ತಿರುವುದು ಎನ್ನುವುದೇ ನೆನಪಾಗದು. ಎಷ್ಟೋ ಬಾರಿ ಅನಿಸಿದ್ದಿದೆ, ನಿನ್ನ ಹೊರತು ನನ್ನ ಅಸ್ತಿತ್ವವೇನು ಎಂದು, ನನ್ನ ಗತದ ಪುಟಗಳೇ ಕಳೆದುಹೋಗಿದೆ ಅಲ್ಲಾ ಎಂದು ಕೇಳಿದರೆ ನಿನ್ನ ಗತ ಭವಿಷ್ಯತ್ ಎಲ್ಲಾ ನಾನೆ ಕಣೇ ಅನ್ನುತ್ತೀಯ. ಅಷ್ಟಕ್ಕೂ ನೀನು ಯಾರು, ಕೇಳಲಾರೆ, ಕೇಳಿ ನಿನ್ನ ನೋಯಿಸಲಾರೆ. ನನ್ನ ಈ ಕ್ಷಣದಿಂದ ನಿನ್ನ ಯಾವ ಮರೆವಿನ ರಾಕ್ಷಸನೂ ಎತ್ತೊಯ್ಯದಿರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತೇನೆ.

ಸಮುದ್ರ ತೀರದ ಮರಳಲ್ಲಿ ಇಬ್ಬರೂ ಸೇರಿ ಮರಳ ಗೂಡು ಕಟ್ಟುವಾಗ, ನಕ್ಷತ್ರ ಮೀನುಗಳ ಆಯ್ದು ಸಮುದ್ರಕ್ಕೆ ಮತ್ತೆ ಎಸೆಯುವಾಗ, ಬೊಂಬೆ ಮಿಠಾಯಿಯ ಬಾಯಲ್ಲಿಟ್ಟು ಕರಗಿಸುವಾಗ, ಬಿರು ಮಳೆಯಲ್ಲಿ ಜೊತೆ ಸೇರಿ ನೆನೆಯುವಾಗ, ಮಧ್ಯ ರಾತ್ರಿ ಎದ್ದು ನೀರವ ಬೀದಿಗಳಲ್ಲಿ ಅಲೆದು ಪಾವ್‍ಬಾಜಿವಾಲಾನನ್ನು ಹುಡುಕುವಾಗ, ನಿನ್ನೊಡನೆ ಕುಳಿತು ಗಜಲ್ ಕೇಳುವಾಗ, ಆಕಾಶದ ನಕ್ಷತ್ರಗಳ ಎಣಿಸುತ್ತಾ ಅದು ನಿನ್ನದು ಇದು ನನ್ನದು ಎಂದೆಲ್ಲ ಜಗಳವಾಡುವಾಗ ನಿನ್ನ ಮೇಲೆ ತಡೆಯಲಾರದಷ್ಟು ಪ್ರೇಮ ಉಕ್ಕಿ ಪ್ರಪಂಚವೇ ಮರೆತು ಹೋಗುತ್ತೇನೆ. ಸಧ್ಯ ಇಂತಹ ಸಿಹಿ ಸಂಗತಿಗಳೆಲ್ಲ ಆಗಾಗ ನೆನಪಾಗುತ್ತೆ ನೋಡು.

* * * * * * * *

ನಿನ್ನ ಕಣ್ಣಲ್ಲಿ ನಾನು ಯಾರು ಎನ್ನುವ ಪ್ರಶ್ನೆ ಹಾದುಹೋಗುವಾಗ ವೇದನೆಯಾಗುತ್ತೆ ಕಣೆ. ಆದರೂ ನೀನು ಬಾಯ್ಬಿಟ್ಟು ಕೇಳದೆ ಇರುವ ಪ್ರಯತ್ನ ಮಾಡ್ತೀಯಲ್ಲ, ಆ ಒಂದು ಎಳೆ ನನ್ನ ಖುಷಿಯಾಗಿಟ್ಟಿದೆ. ಮಧ್ಯ ರಾತ್ರಿಯಲ್ಲಿ ನನ್ನ ಎಬ್ಬಿಸಿ ಐಸ್ ಕ್ರೀಮ್ ಬೇಕು ಎಂದು ನೀನು ಹಠ ಮಾಡುವಾಗ, ರಂಗೋಲಿ ಹಾಕುತ್ತ ಹಾಕುತ್ತ ಏನು ಮಾಡಬೇಕೆಂದೇ ಗೊತ್ತಾಗದೆ ನನ್ನೆಡೆ ಅಳು ಮುಖ ಮಾಡಿ ನೋಡುವಾಗ, ಕುಂಟಬಿಲ್ಲೆ ಆಡೋಣ ಬಾ ಎಂದು ಕರೆದೊಯ್ಯುವಾಗ, ಮರಳ ರಾಶಿಯ ಮೇಲೆ ಹೆಜ್ಜೆಯೊಳಗೆ ಹೆಜ್ಜೆ ಇಟ್ಟು ನಡೆವಾಗ ಎಷ್ಟೋ ಬಾರಿ ಅನ್ನಿಸುತ್ತೆ, ಕೇವಲ ಖುಷಿ ಕ್ಷಣಗಳನ್ನು ಮಾತ್ರ ಉಳಿಸುವುದಕ್ಕಾಗಿ ನಾವು ಬದುಕುತ್ತಿದ್ದೇವೇನೋ ಎಂದು. ನಿನಗೋ ಪ್ರತಿ ದಿನ ಹೊಸತು, ನನಗೆ ನಿನ್ನ ಪ್ರತಿ ಕ್ಷಣವನ್ನ ಹೊಸದಾಗಿಸುವ ಪ್ರೀತಿ. ಗತವೇ ಇಲ್ಲದ ನಿನ್ನ ನೋಡುತ್ತಾ ಭವಿಷ್ಯತ್ನ ಮರೆಯುತ್ತೇನೆ. ನಮ್ಮ ಬದುಕಿಗೆ ವರ್ತಮಾನದ ಸೊಗಸು ಮಾತ್ರ ಸಾಕು ಅಲ್ಲವಾ. ಕೈ ಹಿಡಿದು ನಡೆಯೋಣಾ, ಪ್ರತಿ ದಿನ ನಿನ್ನನ್ನ ನಾನು ನನ್ನನ್ನ ನೀನು ಹೊಸದಾಗಿ ಕಂಡುಕೊಳ್ಳೋಣ. ನಿನ್ನನ್ನ ನಾನು ಸಲಹುತ್ತಿದ್ದೇನೆನ್ನುವುದು ಸುಳ್ಳು, ನನ್ನನ್ನ ನೀನು ಪೊರೆಯುತ್ತಿದ್ದೀಯ. ನಿನಗೆ ಪ್ರತಿ ದಿನ ನನ್ನನ್ನ ನೆನಪಿಸುವುದರಲ್ಲೇ ನನ್ನ ಬದುಕಿನ ಪೂರ್ಣತೆಯನ್ನ ಕಂಡುಕೊಳ್ಳುತ್ತೇನೆ ನಾನು. ನೆನಪುಗಳಿಲ್ಲದ ಬದುಕಿಗೆ ಅಹಂಕಾರವೂ ಇಲ್ಲ, ಸಾಧನೆಗಳ ಚಪಲವೂ. ಮಗುವಂತೆ ಬದುಕುವ ಆನಂದಕ್ಕಾಗೇ ಅಲ್ಲವಾ ಎಲ್ಲ ಹೋರಾಟಗಳು. ಎಲ್ಲ ಸಾಧಿಸುವ ಭರದಲ್ಲಿ ನಮ್ಮನ್ನ ನಾವು ಕಳೆದುಕೊಳ್ಳುತ್ತೇವಲ್ಲ, ಹಾಗೆಲ್ಲ ಕಳೆದುಕೊಳ್ಳಲು ಬಿಡದೆ ನನ್ನನ್ನ ನನಗೇ ಉಳಿಸಿದವಳು ನೀನು. ನನ್ನ ಜೀವನವನ್ನ ನಿನಗೂ ನಿನ್ನ ಜೀವವನ್ನ ನನ್ನೊಳಗೂ ಇರಿಸಿಕೊಂಡು ಜೊತೆ ನಡೆಯೋಣ.

ಒಂದೇ ಬದುಕಲ್ಲಿ ಎಷ್ಟೊಂದು ಅಲೆ, ಎಷ್ಟು ಸೆಳವು, ಎಷ್ಟು ಸುಳಿ
ನಾನು ಶ್ರೀಮಂತ ಚಂದ್ರ, ನೀನು ಐಶಾರಾಮಿ ಬೆಳದಿಂಗಳು
ನಮ್ಮ ಜ್ಞಾಪಕಗಳ ಚಿತ್ರಶಾಲೆಯಲ್ಲಿ ಮಾತ್ರ ಕನಸುಗಳಿಲ್ಲ.

* * * * * * * *

Advertisements
 

ಕಾಡು ಹಾದಿಯ ಕನವರಿಕೆಗಳು . . .

ಮೋಹಮತಿ ಕಥಾಮುಖಿ//ರಘುನಂದನ ಕೆ.

ದೇವರನ್ನ ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ವೃತ, ಉಪವಾಸ ಮಾಡಿದರಷ್ಟೆ ಸಾಕು ಎಂದು ಯಾರು ಹೇಳಿ ಬಿಟ್ಟಿದ್ದಾರೋ. ಒಂದೊಂದು ಬೇಡಿಕೆಗೆ ಒಬ್ಬೊಬ್ಬ ದೇವರು. ಶಕ್ತಿಗೆ, ಸಂಪತ್ತಿಗೆ, ವಿದ್ಯೆಗೆ, ಪಾಪ ಪರಿಹಾರಕ್ಕೆ, ಹರಕೆಗೆ ಎಲ್ಲದಕ್ಕೂ ದೇವರು. ಎಷ್ಟಾದರೂ ಅವನು ಅನಂತನಲ್ಲವೇ. ಆದರೆ ಸೋಜಿಗ ಎಂದರೆ ಭಕ್ತಿಗೆ ದೇವರೇ ಸಿಗುತ್ತಿಲ್ಲ!!

ಅಕ್ಕ ಮಹಾದೇವಿಗೆ ಸಿಕ್ಕವ, ಮೀರಾಗೆ ಒಲಿದವ, ಶಬರಿಗೆ ಕಂಡವ ಉಹ್ಞೂಂ ಯಾರೂ ಭಕ್ತಿಯನ್ನ ಹುಟ್ಟಿಸುತ್ತಿಲ್ಲ. ಆದರೂ ಈ ಪ್ರಪಂಚದಲ್ಲಿ ಎಷ್ಟೊಂದು ದೇವರು, ಹಾದಿ ಬೀದಿಗೊಬ್ಬ ಧರ್ಮಗುರು. ಅಂತರಂಗದ ದೇವರಿಗೆ ಉಪವಾಸ, ಬಹಿರಂಗಕ್ಕೆ ಆಡಂಬರದ ಅಬ್ಬರ. ಕವಿತ್ವದಲ್ಲಿ, ಸಾಹಿತ್ಯದಲ್ಲಿ, ಬರಹದಲ್ಲಿ ಕೊನೆಗೆ ಜಗಳದಲ್ಲೂ ಆಧ್ಯಾತ್ಮದ್ದೆ ಉಗುಳು. ಅದರ ಮೇಲೆ ನಮ್ಮದು ಮತ್ತಿಷ್ಟು. ಆದರೆ ಮನಸ್ಸಲ್ಲಿ ಮಾತ್ರ ಅವ ಕಳೆದು ಹೋಗಿದ್ದಾನೆ.

ದೇವರೊಬ್ಬನಿದ್ದರೆ ಎಷ್ಟೊಂದು ಪಾಪ ಅಲ್ವಾ ಆತ ಎಂದು ಅವ ಈ ಕಾಡಲ್ಲಿ ಕುಳಿತು ಮಾತನಾಡುತ್ತಿದ್ದರೆ ನನ್ನಲ್ಲಿ ಬೆರಗು. ಬಹುಶಃ ಎಂದೋ ಕಳೆದು ಹೋಗಿದ್ದ ನೀನು ಮತ್ತೆ ನನಗೆ ಸಿಕ್ಕಂತಾಗಿ ಬೆಚ್ಚುತ್ತೇನೆ. ಕೊಡಚಾದ್ರಿಯ ಬೆಟ್ಟಗಳಲ್ಲಿ, ಕುಮಾರ ಪರ್ವತದ ತಪ್ಪಲಲ್ಲಿ, ದೂದ ಸಾಗರ ಜಲಪಾತದ ಎದುರಿನಲ್ಲಿ ಕೈ ಹಿಡಿದು ಕುಳಿತು ನೀನು ದೇವರ ಬಗ್ಗೆ, ದೇವರನ್ನ ಸೃಷ್ಟಿಸಿದ ಮನುಷ್ಯರ ಬಗ್ಗೆ, ಕಾಡಿನ ಬಗ್ಗೆ ಮಾತಾಡುತ್ತಿದ್ದರೆ ಕಣ್ಣುಗಳಲ್ಲಿ ವಿಸ್ಮಯ ತುಂಬಿಕೊಂಡು ಕಂಗಾಲಾಗುತ್ತಿದ್ದೆ ನಾನು. ಅಕಸ್ಮಾತಾಗಿ ಎಂಬಂತೆ ಸಿಕ್ಕ ನೀನು, ಸಿಕ್ಕಷ್ಟೆ ವೇಗವಾಗಿ ಕಳೆದು ಹೋಗದಿದ್ದರೆ ಇವತ್ತು ನಾನು ಈ ಕಾಡಲ್ಲಿ ಕುಳಿತು ಇವನ ಗಡ್ಡದಲ್ಲಿ, ಮಾತಿನಲ್ಲಿ ನಿನ್ನ ಹುಡುಕುತ್ತಿರಲಿಲ್ಲ. ಅಷ್ಟಕ್ಕೂ ನನಗೆ ಕಾಡು ಕಾಡುವಂತೆ ಮಾಡಿದ್ದು ನೀನೇ ಅಲ್ಲವೇ.

ಇರಲಿ ಬಿಡು, ನೀನಂತು ಕಳೆದು ಹೋದೆ, ಆದರೆ ನೀನೇ ಹೇಳುತ್ತಿದ್ದೆಯಲ್ಲ, ನಾಡು ಅರ್ಥವಾದ ಮೇಲೆ ಕಾಡಿಗೆ ಬಂದು ಕುಳಿತರೆ ನಮ್ಮಲ್ಲೊಂದು ಆಧ್ಯಾತ್ಮಿಕ ಅರಿವು ಜಾಗೃತವಾಗುತ್ತದೆ ಅಂತ. ಇವನಿಗೂ ಹಾಗೇ ಆಗಿರಬಹುದೇ ಎಂದರೆ, ಕಾಡಿನ ಬಗ್ಗೆ ಮಾತಾಡಿದಷ್ಟೆ ತಾಧ್ಯಾತ್ಮದಿಂದ ಇವ ಹೆಣ್ಣಿನ ಬಗ್ಗೂ ಮಾತಾಡಿ ನನ್ನನ್ನ ಗೊಂದಲಗೊಳಿಸಿ ಬಿಡುತ್ತಾನೆ. ಮತ್ತೇ, ಥೇಟ್ ನಿನ್ನಂತೆಯೇ..!! ಕಾಡ ಮಲ್ಲಿಗೆಯ ನೆರಳಲ್ಲಿ ನನ್ನರಿವಿನ ಪರಿಮಳ ಸಿಕ್ಕಿತೇನೋ ಎಂದು ಹುಡುಕಿ ಇಲ್ಲಿಯವರೆಗೆ ಬಂದಿದ್ದೇನೆ. ಮರೆತುಹೋಗಿದ್ದ ನೀನು ಸಿಗುತ್ತಿದ್ದೀಯ. ನಿನ್ನ ಅರಿಯುವುದೇ ನನ್ನ ಅರಿವಿನ ಮೂಲವೂ ಆದೀತು ಎಂದುಕೊಳ್ಳಲೇ.

“ಪುಟ್ಟಿ, ಬಾ ಇಲ್ಲಿ, ಜೀವ ಸ್ವಲ್ಪ ಬೆಚ್ಚಗಾಗಲಿ.” ಅವ ಬಿಸಿ ಬಿಸಿ ಹಸಿರು ಕಷಾಯ ಮಾಡಿದಂತಿದೆ. ಈ ಕಾಡ ಡೈರಿಗೆ ಈ ಬೆಳಗಿಗೆ ಇಷ್ಟು ಸಾಕು ಬರದದ್ದು. ಮತ್ತೆ ಬರೆಯುವಾಗ ನಿನ್ನೊಳಗಿನ ಕಾಡು ನನಗೆ ಸಿಕ್ಕಿರುತ್ತದಾ..?

* * * * * * *

ಈ ಕಷಾಯಕ್ಕೆ ಯಾವ ಎಲೆಯನ್ನ ಹಾಕಿದ್ದೀಯ, ಇದನ್ನ ಕುಡಿಯುತ್ತಿದ್ದರೆ ಎಷ್ಟೊಂದು ಖುಷಿಯಾಗುತ್ತೆ ಎನ್ನುತ್ತ ಬಂದವಳಿಗೆ, “ಯಾವ ಎಲೆಯಾದರೇನು ಪುಟ್ಟಿ, ನಾವು ಸೇವಿಸುವ ಆಹಾರದಲ್ಲಿ ಗಾಳಿಯಲ್ಲಿ ಜೀವಂತಿಕೆಯಿರಬೇಕು, ಆಗಲೇ ಆನಂದ ಅರಳೋದು ಅಷ್ಟೆ” ಎನ್ನುತ್ತ ತಲೆ ನೇವರಿಸಿ ಅವ ಹೊರಗೆ ಹೋಗಿದ್ದ. ನಿನ್ನೆ ಇದೇ ಹೊತ್ತಿಗೆ, ಮುಂಜಾನೆಯ ಅಂಗಳದಲ್ಲಿ ಸೂರ್ಯಕಿರಣ ನೆರಳುಗಳೊಂದಿಗೆ ಸೇರಿ ರಂಗೋಲಿ ಬಿಡಿಸುತ್ತಿದ್ದರೆ, ಅವ ಚೌರಾಸಿಯಾರವರ ಕೊಳಲ ಕೊರಳಿಂದ ಹೊಮ್ಮುವ ರಾಗದಲ್ಲಿ ತನ್ಮಯನಾಗಿ ಕಣ್ಮುಚ್ಚಿ ಕೂತಿದ್ದ. ಹಕ್ಕಿಗಳ ಚಿಲಿಪಿಲಿ, ಗುಬ್ಬಚ್ಚಿಗಳ ರೆಕ್ಕೆ ಸದ್ದು, ದೂರದಲ್ಲಿ ಹರಿಯುತ್ತಿರುವ ಜಲರಾಶಿಯ ಜುಳು ಜುಳು ನಾದ ಇವುಗಳ ಮಧ್ಯೆ ಕಳೆದು ಹೋಗಿದ್ದ ಅವನೆದುರು ಯಾವುದೋ ಅನ್ಯಗ್ರಹದಿಂದ ಪ್ರತ್ಯಕ್ಷವಾದಂತೆ, ನೀಲಿ ಜೀನ್ಸ್ ಮೇಲೆ ಪುಟ್ಟ ಶಾರ್ಟ್ ಹಾಕಿಕೊಂಡು, ಸೊಂಟಕ್ಕೊಂದು ಸ್ವೆಟರ್ ಕಟ್ಟಿಕೊಂದು, ಬೆನ್ನಿಗೊಂದು ಟ್ರೆಕಿಂಗ್ ಬ್ಯಾಗ್‍ನ್ನು ಕುತ್ತಿಗೆಗೊಂದು ಕ್ಯಾಮರಾವನ್ನು ಜೋಲಿ ಬಿಟ್ಟು ಎದುಸಿರು ಬಿಡುತ್ತ ನಿಂತಿದ್ದಳು ಅವಳು.

ನಾನು ಈ ಕಾಡಲ್ಲಿ ದಾರಿ ತಪ್ಪಿದೀನಿ ಅನ್ಸುತ್ತೆ. ಬೆಳಿಗ್ಗಿನ ನಾಲ್ಕರ ಜಾವದಲ್ಲಿ ಒಟ್ಟಿಗೆ ಹೊರಟದ್ದು ನಾವು, ಒಂದು ಕ್ಷಣ ಮೈ ಮರೆತು ಹರಿವ ವಿಚಿತ್ರ ಹಸಿರು ಹುಳದ ಪೋಟೋ ತೆಗೆಯುತ್ತ ನಿಂತೆ ನೋಡಿ, ಅವರೆಲ್ಲ ಮುಂದೋಗಿ ಬಿಟ್ಟಿದ್ರು, ಆಮೇಲೆ ಸಿಗಲೇ ಇಲ್ಲ. ತುಂಬಾ ಹಸಿವಾಗ್ತಿದೆ, ಭಯಾನೂ ಎಂದು ಒಂದೇ ಉಸಿರಲ್ಲಿ ಹೇಳಿ ಅವಳು ಅಂಗಳದ ತುಳಸಿ ಪೀಠದೆದುರು ಕುಸಿದು ಬಿಕ್ಕಳಿಸುತ್ತಿದ್ದರೆ, ಅವ ಆರಾಮು ಖುರ್ಚಿಯಿಂದ ಎದ್ದು ನಿಧಾನವಾಗಿ ಅವಳ ಬಳಿ ಬಂದು, “ಭಯ ಬೇಡ ಪುಟ್ಟಿ, ಸ್ವಲ್ಪ ರಿಲ್ಯಾಕ್ಸ್ ಆಗು, ಕಳೆದು ಹೋದ ನಿನ್ನನ್ನು ಹುಡುಕಿಕೊಳ್ಳುವುದಕ್ಕಾಗೇ ಅಲ್ಲವೆ ನೀ ಈ ಕಾಡೊಳಗೆ ಹೆಜ್ಜೆ ಇಟ್ಟದ್ದು, ಅದಾಗುವವರೆಗೆ ಕಾಡು ನಿನ್ನ ಬಿಡದು ಅಷ್ಟೆ” ಎಂದಿದ್ದ. ಮೊದಲೇ ಗೊಂದಲದಲ್ಲಿದ್ದವಳಿಗೆ, ಉತ್ತರಾಂಚಲದ ಕಾಡೊಳಗೆ ಕಂಡಿದ್ದ ಅಘೋರಿಗಳೆಲ್ಲ ನೆನಪಾಗಿ ವಿಚಿತ್ರ ಕಂಪನವಾಗಿತ್ತು. ಆದರೆ ಅವನ ಗಡ್ಡದಲ್ಲಿ ಏಕಕಾಲದಲ್ಲಿ ಠಾಗೋರರು, ಅರಬಿಂದೋ ಗುರುಗಳು ಕಂಡಂತಾಗಿ ಸಮಾಧಾನವೂ ಆಗಿತ್ತು.

* * * * * * *

ಈ ಕಾಡೊಳಗೆ ನಿಮಗೆ ಒಬ್ಬಂಟಿತನ ಕಾಡುವುದಿಲ್ಲವಾ?? ಎಲ್ಲಿಯ ಒಂಟಿತನ ಪುಟ್ಟಿ, ಇಷ್ಟೊಂದು ಮರಗಿಡ, ಹಕ್ಕಿಗಳ ಮಧ್ಯೆ ಸಮಯ ಕಳೆದದ್ದೆ ಗೊತ್ತಾಗದು. ನಮ್ಮೊಳಗಿನ ನಮ್ಮನ್ನು ಕಂಡುಕೊಳ್ಳುವುದಾದರೆ ಜನರಿಂದ ದೂರವೇ ಇರಬೇಕಾಗುತ್ತೆ. ಜೀವನ ಎಂದರೆ ನಮಗೆ ಬೇಕಾದಂತೆ ಮಾತ್ರ ಇರುವುದಲ್ಲ, ಅದು ಬಂದಂತೆ ಸ್ವೀಕರಿಸುವ, ಆ ಸ್ವೀಕೃತಿಯಲ್ಲಿ ನಮ್ಮೊಳಗು ಖುಷಿ ಪಡುವ ಹಂತಕ್ಕೆ ತಲುಪುವುದು. ಹಾಗೆ ತಲುಪಬೇಕಾದರೆ ನಮ್ಮೊಳಗೊಂದು ಕಾಡು ಮೂಡಬೇಕು. ಅದು ಜೀರ್ಣವಾಗಬೇಕು. ಸಂಬಂಧಗಳ ಸಂತೆ ಬಿಟ್ಟು ರಾಮ ಸೀತೆಯರು ತಮ್ಮನ್ನ ಕಂಡುಕೊಂಡ ಜಾಗ ಕಾಡು. ಆದರೆ ವಿಚಿತ್ರ ನೋಡು, ಮೂಲಗುಣ ಬಿಡದು ಅಂತಾರಲ್ಲಾ ಹಂಗೆ, ಕಾಡಿಂದ ಆಚೆ ಕಾಲಿಟ್ಟೊಡನೆ ರಾಮ ಸೀತೆಯನ್ನ ಬಿಟ್ಟ. ಅವನೊಳಗೆ ಕಾಡು ಮಾತ್ರ ಉಳಿದು ಬಿಟ್ಟಿತ್ತಾ, ಅಲ್ಲಿ ಸೀತೆಗೆ ಜಾಗವಿರಲಿಲ್ವಾ. ಕಾಡು ಅಂದರೆ ಪ್ರಕೃತಿ, ಅಂದರೆ ಹೆಣ್ಣು. ಎರಡೂ ಅಷ್ಟು ಸುಲಭದಲ್ಲಿ ಅರ್ಥವಾಗದು. ಹಾಗಾಗೇ ರಾಮ ಅರ್ಥೈಸಿಕೊಳ್ಳಲು ಸೋತನೇನೋ. ಇದೆಲ್ಲ ನಮ್ಮೊಳಗು ಮಾತ್ರ, ನಮ್ಮನ್ನ ಕಂಡುಕೊಳ್ಳುವುದಕ್ಕೆ ಅವನ ವಿಶ್ಲೇಷಣೆ. ಅವನ ಅರಿವು ನಮ್ಮದಕ್ಕಿಂತ ಹೆಚ್ಚಿದ್ದಾಗ ನಮಗೆ ಅವ ಹೇಗೆ ಅರ್ಥವಾಗಬೇಕು ಹೇಳು.

ಎಷ್ಟೊ ಜನ ಸಂತೆಯಿಂದ ಓಡುತ್ತಾರೆ, ತಮ್ಮೊಳಗಿನ ಏಕಾಂತದಿಂದಲೂ. ಏಕಾಂತದಲ್ಲಿ ನಮ್ಮೊಳಗಿನ ಗದ್ದಲ ಆಚೆ ಬರುತ್ತೆ, ಮುಖವಾಡಗಳು ತಪತಪನೆ ಕಳಚಿ ಬೀಳುತ್ತೆ. ಆ ಸತ್ಯವನ್ನ ಎದುರಿಸಲು ಹೆದರಿಕೆ ನಮಗೆ ಹಾಗಾಗೇ ಒಬ್ಬಂಟಿತನ ಭಯಗೊಳಿಸುತ್ತೆ. ಸಂತೆಯಲ್ಲೂ, ಅಂತರಂಗದ ಕತ್ತಲಲ್ಲೂ ತಾನೇ ತಾನಾಗಿ ಇರುವ ಶಕ್ತಿ ಬರೋವರೆಗೂ ಬದುಕು ಸಿಕ್ಕದೇನೋ ಅನ್ನಿಸುತ್ತೆ ನಂಗೆ. ನಾಡಿನ ಮುಖವಾಡಗಳ ಸಂತೆಯಲ್ಲಿ ಬದುಕುವಾಗ, ಪುರುಸೊತ್ತಿಲ್ಲದೆ ಗಡಿಯಾರ ಓಡುತ್ತಿರುವಾಗ, ಮನುಷ್ಯ ನಿರ್ಮಿತ ಗದ್ದಲಗಳು ಅಪ್ಪಳಿಸುವಾಗಲೂ ಒಬ್ಬಂಟಿತನ ಕಾಡುವುದಿಲ್ಲವೆ. ನೋಡು ಈ ದಡದಲ್ಲಿರುವುದೆಲ್ಲಾ ಆ ದಡದಲ್ಲೂ ಇರುತ್ತದೆ ಎನ್ನುತ್ತಾರೆ. ಕಾಡು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ, ನಾಡಿಂದ ನೇರವಾಗಿ ಕಾಡಿಗೆ ತಂದೆಸೆದ ಮನುಷ್ಯನಿಗೆ ಅಂತರಂಗದ ಗದ್ದಲಗಳು ಕೇಳಿ, ಅಚಾನಕ್ ಮೂಡಿದ ನಿರ್ವಾತದಿಂದ, ವಿರಾಮದಿಂದ ಹುಚ್ಚೂ ಹಿಡಿಯಬಹುದು, ಇಲ್ಲಾ ಬದುಕು ಅರ್ಥವಾಗಬಹುದು. ಕಾಡಲ್ಲೇ ಹುಟ್ಟಿ ಬೆಳೆದವಗೆ ಕಾಡು ಕೂಡ ಒಂದು ನಾಡೇ ಅಲ್ಲವೆ. ನಾಡಲ್ಲಿರುವವನಿಗೂ ಕಾಡಲ್ಲಿರುವವನಿಗೂ ಒಂದಲ್ಲ ಒಂದು ದಿನ ಕಾಡು ಸಿಕ್ಕಿಬಿಡಬಹುದು. ಬದುಕಿನ ಪಾಠ, ಅನುಭವಗಳಿಲ್ಲದೆ ಕಾಡು ಅರ್ಥವಾದೀತಾದರೂ ಹೇಗೆ. ಅದಕ್ಕೇ ಇರಬೇಕು ವಾನಪ್ರಸ್ತ ಮನುಷ್ಯ ಜೀವಿತದ ಕೊನೆಯ ಹಂತವಾಗಿದ್ದು.

* * * * * * * *

ನಿಜ, ನೀನು ಒಂದು ಕಾಲದಲ್ಲಿ ನನಗೆ ಸಿಕ್ಕು ಅಷ್ಟೆಲ್ಲಾ ಮಾತಾಡದೇ ಹೋಗಿದ್ದರೆ ಇವತ್ತು ಈ ಮಾತುಗಳ್ಯಾವುದೂ ನನಗೆ ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲವೇನೋ. ಕಾಡನ್ನು ಓದಲು ಕಲಿಸಿದ್ದೆ ನೀನು ತಾನೆ. ನಾಡೊಳಗಿನ ಬಿಸಿ ಬಿಸಿ ಬದುಕಿನಲ್ಲಿ ಕಾಡೆಂದರೆ ನಮಗೆಲ್ಲಾ ವೀಕೆಂಡ್ ತಾಣ ಮಾತ್ರ ಆಗಿತ್ತಲ್ಲ. ಒಂದಷ್ಟು ಮೋಜು, ಫೈರ್ ಕ್ಯಾಂಪ್, ಮತ್ತಷ್ಟು ಗಲಾಟೆ ಮಾಡಿ ಕಾಡು ನೋಡಿದ ಪೋಟೋಗಳನ್ನ ಪೇಸ್‍ಬುಕ್ ಗೋಡೆಗೆ ಅಂಟಿಸಿ ಎಷ್ಟು ಲೈಕು, ಮತ್ತೆಷ್ಟು ಕಮೆಂಟುಗಳು ಬಿದ್ದವು ಎನ್ನುವಷ್ಟರ ಮಟ್ಟಿಗೆ ಮಾತ್ರ ನಮಗೆ ಕಾಡು ಕಾಣುತ್ತಿದ್ದುದು. ಸಹಜೀವನದ ಗೆಳೆಯ ಧಿಕ್ಕರಿಸಿ ಹೋದಾಗ, ಹುಚ್ಚು ಸಂಪಾದನೆಯ ಕೆಲಸ ಬಿಡಬೇಕಾಗಿ ಬಂದಾಗ, ಅಪ್ಪ ಅಮ್ಮಂದಿರ ಮುಖ ಕಾಣುವುದೇ ಅಪರೂಪವಾಗಿ ಹೋದಾಗ, ತಲೆ ಕೆಟ್ಟು ಯಾವುದೋ ಚಾರಣಕ್ಕೆ ಅಪ್ಲಿಕೇಷನ್ ತುಂಬುತ್ತಿದ್ದಾಗ ಗೊತ್ತಿರಲಿಲ್ಲ ನೀನು ಸಿಗುತ್ತೀ ಅಂತ.

ನಾಡನ್ನ ಧಿಕ್ಕರಿಸಿ ಪೋಟೋ ಪ್ರೇಮ್‍ನಾಚೆಗೂ ಕಾಡನ್ನು ನೋಡಲು ಸಾಧ್ಯವಾದೀತಾ ಎಂದುಕೊಂಡು ಹೊರಟಾಗ ನನ್ನನ್ನ ಒಬ್ಬಂಟಿತನ ಸುಡುತ್ತಿತ್ತು. ಹದಿನೈದು ಜನರ ಚಾರಣ ತಂಡದಲ್ಲಿ ಎಲ್ಲರೂ ಪರಿಚಯದೊಂದಿಗೆ ಸ್ನೇಹಿತರೊಂದಿಗೆ ಬಂದಿದ್ದರೆ ನಾನು ಮಾತ್ರ ಒಬ್ಬಳೇ ಅಂದುಕೊಳ್ಳುತ್ತಿರುವಾಗ, ಯಾವುದೋ ಮರದಲ್ಲಿ ಏನನ್ನೋ ಹುಡುಕುತ್ತಿದ್ದ ನೀನು ಕಂಡು, ಅರೆ ಇವ ಕೂಡ ಒಂಟಿನೇ ಅನ್ನಿಸಿ ನಿನ್ನ ಮಾತಾಡಿಸಿದಾಗ, ಏಕಾಂತ ಭಂಗವಾದಂತೆ ಕೆಕ್ಕರಿಸಿದ್ದೆಯಲ್ಲ ನೀನು. ಅಲ್ಲಿಂದಲೇ ಶುರುವಾದದ್ದು ನೋಡು ಬದುಕು ದಿಕ್ಕು ತಪ್ಪಿದ್ದು ಅಂದುಕೊಂಡರೆ ನೀನು ಮಾತ್ರ ‘ದಿಕ್ಕು ತಪ್ಪುವುದಕ್ಕೆ ಇದು ಜನ ಜಾತ್ರೆಯಲ್ಲ. ಒಳಯಾತ್ರೆ. ಕಾಡು ಕಾಲು ತಪ್ಪಿಸಬಹುದು, ಕಾಲವನ್ನೂ, ಆದರೆ ಬದುಕನ್ನಲ್ಲ’ ಎಂದಾಗ, ನಂಗೆ ನಿಜ್ಜ, ಏನೇನೂ ಅರ್ಥವಾಗಿರಲಿಲ್ಲ. ಮೈಯೆಲ್ಲ ಬೆವತು ಇನ್ನು ಏರುವುದಕ್ಕೆ ಆಗುವುದೇ ಇಲ್ಲ ಎಂದು ಕುಳಿತಾಗ ಕೈ ಹಿಡಿದು ಎಳೆದುಕೊಂಡು ಹೋದದ್ದು ನೀನು. ಆವಾಗಿನಿಂದ ನಡೆಯುತ್ತಲೇ ಇದ್ದೇನೆ, ಏರುತ್ತಲೂ.

ಹೆಣ್ಣು ಕಣೋ ನಾನು, ನಿನ್ನ ಕಾಡದೇ ಬಿಡುವುದಿಲ್ಲ ಅಂತ ಹಠ ಹಿಡಿದ ನನ್ನ ಮನಸ್ಸನ್ನ ಅರ್ಥವಾಗಿಸಿಕೊಂಡೂ ಅರ್ಥವಾಗದಂತೆ ನಡೆದುಬಿಟ್ಟವ ನೀನು. ಕೊಡಚಾದ್ರಿಯ ಸರ್ವಜ್ಞ ಪೀಠದಲ್ಲಿ, ಅಜಂತಾದ ಪದ್ಮಪಾಣಿ ಗುಹೆಯಲ್ಲಿ, ಉತ್ತರಾಂಚಲದ ಅಘೋರ ಕಾಡುಗಳಲ್ಲಿ, ಎಷ್ಟೊಂದು ಜಲಪಾತಗಳ ಎದುರಲ್ಲಿ ನಾವು ಮಾತಾಗಿಲ್ಲ, ಮಾತು ಮರೆತು ಮೌನವಾಗಿಲ್ಲ. ಕುಮಾರಪರ್ವತದ ಕತ್ತಲೆಯ ರಾತ್ರಿಯಲ್ಲಿ ನಕ್ಷತ್ರ ಹುಡುಕುತ್ತ ದಾರಿ ತಪ್ಪೋಣ, ಕಾಡುವಂತೆ ತಪ್ಪೊಂದ ಮಾಡೋಣ, ನಕ್ಷತ್ರಗಳನ್ನೆಲ್ಲ ಮೈಯ ಮಚ್ಚೆಗಳಾಗಿಸಿ ಲೆಕ್ಕ ಮಾಡೋಣ ಅಂತೆಲ್ಲ ನೀ ಆಗಾಗ ಚೂರು ಪೋಲಿಯಾಗುತ್ತಿದ್ದರೆ ನನ್ನ ಕಣ್ಣಲ್ಲಿ ಎಷ್ಟು ನಿಹಾರಿಕೆ ಗೊತ್ತಾ. ಉಹ್ಞೂಂ, ನೀನು ಎಲ್ಲಿಯೂ ಕೆರಳಲಿಲ್ಲ, ಕೆರಳಿಸಲೂ ಇಲ್ಲ, ಕೊರಳ ತಬ್ಬಿ ಮಲಗಿದಾಗಲೂ ತಣ್ಣನೆಯ ಶಿವನಾಗಿಬಿಟ್ಟವ ನೀನು.

ನೋಡು ಪ್ರಕೃತಿ ಮಾತ್ರ ಶಾಶ್ವತ, ಪುರುಷನಲ್ಲ. ಪ್ರಕೃತಿ ತನ್ನ ಪೂರ್ಣತೆಗಾಗಿ ಸೃಷ್ಟಿಸಿಕೊಂಡಿದ್ದು ಪುರುಷನನ್ನ. ಅದು ಪುರುಷನನ್ನ ಸೃಷ್ಟಿಸುತ್ತೆ, ಲಾಲಿಸುತ್ತೆ, ಬೆಳೆಸುತ್ತೆ, ಗೆಲ್ಲಿಸುತ್ತೆ, ಕೊನೆಗೆ ತನ್ನೊಡಲಲ್ಲೇ ಶಾಶ್ವತ ನಿದ್ರೆಯನ್ನೂ ದಯಪಾಲಿಸುತ್ತೆ. ಆದರೆ ಪುರುಷನಿಗೆ ಎಲ್ಲಾ ತನ್ನಿಂದಲೇ ಎನ್ನುವ ಅಹಂಕಾರ. ಆದರೆ ಅವನೆಷ್ಟು ನಿಸ್ಸಾಯಕ ಗೊತ್ತಾ, ಅವನ ಸೋಲಿಗೆ ಸಾಂತ್ವನಕ್ಕೂ, ಅವನ ಗೆಲುವಿನ ವಿಜೃಂಭಣೆಗೂ, ಅವನ ಬೇಸರದ ಏಕಾಂತಕ್ಕೂ ಹೆಣ್ಣು ಬೇಕು. ಅವನಿಗೆ ಆಸರೆಯಿಲ್ಲದೆ ಬದುಕಲಾರ. ಅದು ಅವನಿಗೂ ಗೊತ್ತು. ಭಯ ಅವನಿಗೆ, ಆದ್ದರಿಂದಲೇ ಹೆಣ್ಣನ್ನ ನಿಯಂತ್ರಿಸುವ ಹಿಡಿದಿಟ್ಟುಕೊಳ್ಳುವ ಹಠ ಅವನದು. ಚರಿತ್ರೆ ಪೂರ್ತಿ ಇಂಥ ಹಠದ ಪುಟಗಳೇ. ಥೇಟ್ ಹೆಣ್ಣಿನಂತೆಯೇ ಈ ಕಾಡು ಕೂಡ. ಪ್ರತಿ ಕಾಡು ಬೇರೆಯೇ, ನಿಗೂಢವೇ, ವಿಸ್ಮಯವೇ. ಕಾಡನ್ನ ಅರಿಯುವುದು ಅಷ್ಟು ಸುಲಭವಲ್ಲ, ಒಮ್ಮೆ ಒಳಹೊಕ್ಕರೆ ಸಾಕು ಅದು ಕಾಡುತ್ತದೆ.

ನೀ ಹೀಗೆಲ್ಲ ಮಾತಾಡಿಯೇ ಇರಬೇಕು, ನನ್ನೊಳಗೂ ಕಾಡು ಸೇರಿಹೋಗಿದ್ದು. ಒಂದಿನ ನೀನು ಕಳೆದುಹೋದೆ. ಎಲ್ಲಿ ಹೋದೆ, ನಾ ಕೇಳಲಿಲ್ಲ. ನೀನೇ ಕಲಿಸಿದ್ದ ಪಾಠ ಅದು, ಸಂಬಂಧಗಳು ಅದಾಗೇ ಹುಟ್ಟಿ ಅದಾಗೇ ಕಳೆದುಹೋಗಿಬಿಡಬೇಕು. ನಾವು ಬೆನ್ನಟ್ಟಬಾರದು. ಬೆನ್ನಟ್ಟಿ ಹಿಡಿದರೆ, ಅದನ್ನು ದಕ್ಕಿಸಿಕೊಳ್ಳ ಹೊರಟರೆ ಅದು ಸತ್ತೋಗುತ್ತೆ ಕಣೆ. ಯಾವ ಸಂಬಂಧಗಳೂ ಸಾಯಬಾರದು ಅಷ್ಟೆ ಎಂದವ ನೀನು. ಇಲ್ಲ, ನಿನ್ನ ಹುಡುಕಲಿಲ್ಲ ನಾ. ನನ್ನೊಳಗೆ ನಿನ್ನ ಮುಚ್ಚಿಟ್ಟುಕೊಂಡು ನಿನ್ನನ್ನೇ ಅರಿಯುವ ಹುಡುಕಾಟಕ್ಕೆ ಬಿದ್ದುಬಿಟ್ಟೆ. ನೀನಿಲ್ಲದೆಯೂ ಕಾಡ ದಾರಿಗಳ ತುಳಿದೆ. ಬದುಕ ಬೀದಿಗಳಲ್ಲಿ ನಡೆದೆ. ಇವತ್ತು ಹೀಗೆ ಇವನೆದುರು ಕೂತಿದ್ದೇನೆ. ಪುಟ್ಟಿ ಎನ್ನುತ್ತಾನೆ ಎನ್ನುವುದು ಬಿಟ್ಟರೆ ಥೇಟ್ ನಿನ್ನಂತವನೇ ಇವನು. ತಿರುಗಿದ್ದು ಸಾಕು ಎಂದು ಈ ಕಾಡಲ್ಲಿ ಬಂದು ಕುಳಿತಂತಿದೆ ನೀನು.

* * * * * * * *

ಅಂಗಳದ ಎದುರು ಪುಟ್ಟ ಹೂತೋಟ ಮಾಡಿದ್ದಾನೆ ಇವ. ಅದರಾಚೆ ಯಾವುದೋ ತೋಟವೂ ಇದೆ. ಬದುಕಿಗೆ ಸಾಕಾಗುವಷ್ಟು ಬೆಳೆದುಕೊಳ್ಳುತ್ತಾನೇನೋ. ಇಲ್ಲ ಬೆಳೆದದ್ದರಲ್ಲೆ ಬದುಕಿಕೊಳ್ಳುತ್ತಾನೋ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಕಾಲ ಹೋಯಿತು, ಕಾಲು ಚಾಚಬೇಕೆನಿಸುವಷ್ಟು ಹಾಸಿಗೆಯನ್ನೆ ದೊಡ್ಡದಾಗಿಸಿ ಎಂದು ಮ್ಯಾನೆಜ್ಮೆಂಟ್ ಪಾಠ ಕೇಳಿ ಬೇಳೆದವಳು ನಾನು. ಹಾಸಿಗೆ ಬೆಳೆಸುವುದರಲ್ಲೆ ಬದುಕು ಕಳೆದುಕೊಳ್ಳುತ್ತಿದ್ದೆನೇನೋ, ನೀನು ಸಿಗದೆ ಹೋಗಿದ್ದರೆ. ಯಾಕೋ ಕಳೆದುಹೋದವಳು ನಾನು ಅನ್ನೋದೆ ಮರೆತು ಹೋಯ್ತು ನೋಡು ಇವನಿಂದ. ನಿನ್ನಷ್ಟು ಮಾತಾಡುವುದಿಲ್ಲ ಇವ. ಹೆಚ್ಚು ಕಾಡು ಕಂಡವನು, ಅಲ್ಲಾ ಬದುಕು ಕಂಡವನೂ ಇರಬಹುದು.

ಸಣ್ಣ ಕುತೂಹಲ ನನಗೆ, ನಿಮ್ಮ ಬದುಕು ಹೇಳಿ ಅಂದೆ. ಬದುಕು ಹೇಳುವುದಕ್ಕಲ್ಲ, ಬದುಕುವುದಕ್ಕೆ ಮಾತ್ರ. ಹೇಳಿದಷ್ಟು ಸಣ್ಣಗಾಗುತ್ತದೆ ಅದು. ಹೀಗೆ ಮಾಡಬಹುದಿತ್ತು, ಮಾಡಬಾರದಿತ್ತು, ಏನೆಲ್ಲ ಮಾಡಿದೆ ಉಫ್ ಮುಖವಾಡಗಳ ಧರಿಸಿ ಬಿಡುತ್ತದೆ ಅಂದ. ಹೆಸರೇನು ಅಂದೆ, ಹೆಸರು ಕಳೆದೋಗಿದೆ ಈ ಕಾಡಲ್ಲಿ, ಹುಡುಕಿಕೋ ಎಂದ. ತುಂಟತನವಾ, ಮುಖವನ್ನಾ ದಿಟ್ಟಿಸಿ ನೋಡಿದೆ, ಗೊತ್ತಾಗಲಿಲ್ಲ. ಅವನ ಜ್ಞಾಪಕ ಚಿತ್ರಶಾಲೆಯಲ್ಲಿ ಬದುಕಿನ ಏನೆಲ್ಲ ಇದೆಯೋ. ಬದುಕನ್ನ ಧಿಕ್ಕರಿಸಿ ಹೀಗೆ ಕಾಡು ಸೇರುವುದು ತಪ್ಪಲ್ಲವೇ ಎಂದೆ. ಬದುಕು ದಕ್ಕಿದೆ ಎನಿಸಿದ ಮೇಲೆ ಕಾಡು ಸೇರಿ ಮತ್ತೆ ತನಗಾಗಿ ಬದುಕುವುದನ್ನ ವಾನಪ್ರಸ್ಥ ಎನ್ನುತ್ತಾರೇನೋ ಎಂದ. ಕುಟುಂಬ ಸಂಸಾರದ ಜವಾಬ್ದಾರಿಗಳಿಂದ ಓಡಿ ಬಂದಿದ್ದೀರಾ ಎಂದೆ, ಬದುಕಲು ಕಲಿಸಿದ್ದೇ ಅವಳು, ಕಲಿತೆ ಎನಿಸಿತೇನೋ ಮುಂದೆ ಹೋಗಿದ್ದಾಳೆ ಎಂದ. ಕಾಡು ತೋರಿಸಿ ಅಂದೆ, ಕಾಡು ಕಾಣ್ಕೆ, ತೋರಿಸಲಾಗದು ಕಾಣಬೇಕು ಅಷ್ಟೆ ಎಂದ. ಒಂದಷ್ಟು ಜೊತೆಗೆ ನಡೆದೆ, ಮತ್ತಷ್ಟು ಒಬ್ಬಳೆ. ಅವನಿದ್ದೂ ಇಲ್ಲದಂತೆ ಇದ್ದ, ನೀನೂ ಕೂಡ. ಸಾಕು ಹೊರಡುತ್ತೇನೆ ಎಂದೆ. ದಾರಿ ತೋರಿಸಿ ನಡೆಯುತ್ತಿರು ಎಂದ. ನೀನು ಇದನ್ನೇ ಅಲ್ಲವೇ ಹೇಳಿದ್ದು. ನಡೆಯುತ್ತಿದ್ದೇನೆ ಈಗ ನಿರಂತರ. ನಿನ್ನನ್ನು, ನಿನ್ನಂತ ಅವನನ್ನು, ನನ್ನನ್ನು, ಕಾಡುವ ಕಾಡನ್ನು, ಮುಗಿಯುತ್ತಿರುವ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ.

* * * * * * * *

(ದಿನಾಂಕ: 18.03.2014ರಂದು ‘ಅವಧಿ’ಯಲ್ಲಿ ಪ್ರಕಟಿಸಲ್ಪಟ್ಟಿದೆ)

 

ಪ್ರೇಮ ಪಥದಲ್ಲಿ ಸಾಧನೆಯ ಬೆಳಕು…

ಮೋಹಮತಿ ಕಥಾಮುಖಿ//ರಘುನಂದನ ಕೆ.

ಬಿಹಾರದ ಗಯಾ ಜಿಲ್ಲೆಯ ಕಲ್ಲುಗುಡ್ಡದ ತಪ್ಪಲಲ್ಲಿ ಒಂದು ಪುಟ್ಟ ಊರು. ಊರೆಂದಮೇಲೆ ಅದಕ್ಕೊಂದು ಹೆಸರು. ಊರ ಎದುರು ಕಾದ ಬಂಡೆಗಳ ಗುಡ್ಡ. ಗುಡ್ಡದ ಬುಡದಲ್ಲೊಂದು ಗುಡಿಸಲಂತ ಮನೆ. 1960ರ ಕಾಲ ಅದು. ಬದುಕಿಗೆ ಪ್ರೀತಿ ಇದ್ದರೆ ಸಾಕು, ಹಣವಿಲ್ಲದೆಯೂ ನಡೆದೀತು ಎಂದು ನಂಬಿ ಬದುಕುತ್ತಿದ್ದ ಜನರ ಕಾಲ. ಅಲ್ಲೊಂದು ಗಂಡು ಹೆಣ್ಣು, ದಾಂಪತ್ಯದ ಸೊಬಗು. ಪ್ರೀತಿಯನ್ನೇ ಉಸಿರಾಗಿಸಿಕೊಂಡು ಒಲವ ಬೆಸುಗೆಯಲ್ಲಿ ಜೀವನ ನಡೆಸುತ್ತಿದ್ದ ಜೀವಗಳು. ಕೈ ತುತ್ತು ಊಟದ ಖುಷಿಯಲ್ಲಿ, ಒಂದಷ್ಟು ದಿನ ಗಂಜಿಯಲ್ಲಿ, ಒಂದಿಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಉಸಿರಾಡುತ್ತಿದ್ದ ಗಂಡ ಹೆಂಡಿರ ತಂಪು ಗುಡಿಸಲದು. ಅಲ್ಲಿ ಪ್ರೀತಿ ಬಿಟ್ಟು ಯಥೇಚ್ಛವಾಗಿ ಸಿಗುತ್ತಿದ್ದ ಮತ್ತೊಂದೇನಾದರೂ ಇದ್ದರೆ ಅದು ಬಿಸಿಲು ಮಾತ್ರ. ಅಂಥ ಊರಲ್ಲಿ ನೀರೆಂದರೆ ಹೊಳೆದಂತೆ ತಾರೆ. ತಾರೆ-ಚುಕ್ಕೆಗಳಾದರೂ ದಿನ ರಾತ್ರಿಯೂ ಬಂದಾವು. ನೀರು ಮಾತ್ರ ಸಿಕ್ಕಷ್ಟು, ಮೊಗೆದಷ್ಟು. ಇಲ್ಲಿ ಜೀವ ಜಲ ಬೇಕಿದ್ದರೆ ಜೀವದ ಹಂಗು ತೊರೆದು ಕಾದ ಬಂಡೆಗಳ ಗುಡ್ಡವೇರಿ ಅದರಾಚೆಗಿನ ಪುಟ್ಟ ಕೊಳದಿಂದ ಹೊತ್ತು ತರಬೇಕು.

ಚಂದ್ರನಿಲ್ಲದ ರಾತ್ರಿ. ತಾರೆಗಳೆಲ್ಲ ಮಿನುಗುತ್ತಿದ್ದ ಹೊಳೆ ಹೊಳೆವ ರಾತ್ರಿ.
ಮುಚ್ಚಿದ ಕಣ್ಣೊಳಗೆ ಚಲಿಸುವ ಚಿತ್ರಗಳ ಸಂತೆ.
ಭವಿಷ್ಯತ್ ಘಟನೆಗಳೆಲ್ಲ ಮನದ ಮೂಲೆಯಲ್ಲಿ ಅರೆ ಎಚ್ಚರದಲ್ಲಿ ಚಲಿಸುತ್ತಿರುವ ಅಸ್ಪಷ್ಟ ಕನಸು.
ಕಣ್ಮುಚ್ಚಿದಾಗ ಕಾಡುತ್ತವೆ, ತೆರೆದರೆ ಮಾಯ.

ಕಾಲ ಸಂಚು ಹೂಡಿ ಅರಳಿದ್ದ ನಸುಕೊಂದರಲ್ಲಿ ನೀರ ತರಲು ಹೊರಟಿದ್ದು ಅವಳು. ಅವನ ಮನದ ಒಡತಿ. ಗುಡ್ಡದಾಚೆಯ ನೀರ ತೀರವ ಸೇರಿ ತುಂಬಿದ ಭಾರದೊಂದಿಗೆ ತುಳಿದ ಹಾದಿ. ಗುಡ್ಡ ಇಳಿವಾಗ ಜಾರಿದ್ದು ಕಾಲೊಂದೇ ಅಲ್ಲ, ಬದುಕು ಕೂಡ. ಚೆಲ್ಲಿದ ನೀರು ನೆಲ ತಾಗುವ ಮೊದಲೇ ಇಂಗಿತ್ತು. ಹರಿದ ರಕ್ತಕ್ಕೆ ಕರುಣೆಯಿಲ್ಲ. ಗಂಡ ಈತ. ಮದುವೆಯಾಗಿ ವರ್ಷಗಳೆಷ್ಟೋ ಕಳೆದು ಹೊಂದಿ ಬೆಸೆದ ಜೀವ ಭಾವ. ನೀರ ತರುವೆನೆಂದು ಹೋದ ಮಡದಿ ಇನ್ನೂ ಬರಲಿಲ್ಲವದ್ಯಾಕೆಂದು ಹೊರಟಿದ್ದು ಹುಡುಕಿ. ಗುಡ್ಡದ ಪದತಲದಲ್ಲಿ ಕೆಂಪು ಚಿತ್ತಾರಗಳ ಮೈ ತುಂಬ ಹೊದ್ದು ಪ್ರಜ್ಞೆ ತಪ್ಪಿ ಬಿದ್ದ ಹೆಂಡತಿಯ ಕಂಡು ಎದೆಯೊಡೆದು ಅತ್ತ. ಒಡೆದ ಬಿಂದಿಗೆ, ಮುರಿದ ಬದುಕು. ಗಂಡ ಹೆಂಡಿರಿಬ್ಬರೂ ಬಡಿದಾಡಿದ್ದು ಯಮನೊಡನೆ ಎರಡು ದಿನ. ಇವ ಪುರಾಣ ಪುರುಷನಲ್ಲ. ನಮ್ಮ ನಿಮ್ಮಂತೆ ಬದುಕಿದವ. ಪ್ರೀತಿ ಎಂಬ ದೇವರ ನಂಬಿ ಬಾಳಿದವ. ಕೊನೆಗೂ ಗೆದ್ದದ್ದು ಸಾವು. ಬದುಕಿಗೊಂದು ಕೊನೆ. ದೇಹ ಹೋದದ್ದು, ಭಾವವಲ್ಲ, ಪ್ರೀತಿಯಲ್ಲ. ಆತ ಇದ ಅರಿಯಲಿಲ್ಲ. ಕುಸಿದ ಕುದಿದ. ಸತ್ತದ್ದು ಹೆಂಡತಿ, ಸಮಾಧಿಯಾದದ್ದು ಆತ. ಕಾಲ ಸವೆಯಿತು, ಗಡ್ಡ ಬೆಳೆಯಿತು. ನೀರಿಲ್ಲದೂರಲ್ಲಿ ಕಣ್ಣೀರಿಗೆ ಬರವಿಲ್ಲ. ಸುರಿಸುರಿದು ಹರಿಯಿತು. ಉರಿವ ಸೂರ್ಯನಿಗೆ ಇಂಗದ ದಾಹ. ಹರಿದ ಕಣ್ಣೀರ ಕಲೆ ಉಳಿದದ್ದು. ಗುಡ್ಡ ಅಚಲ.

ದಿಗ್ಗನೆದ್ದ. ಕಣ್ಣು ತೆರೆದು ಎಚ್ಚರ. ಕಂಡದ್ದು ಕನಸು. ಅರೆ ತಿಳಿದ ಎಚ್ಚರಕ್ಕೆ ನಂಬಿಕೆ ಕಷ್ಟ.
ಪಕ್ಕದಲ್ಲಿದ್ದ ಹೆಂಡತಿಗೆ ನವಿರು ನಿದ್ದೆ. ಕೊಂಚ ಕೊಂಚ ಕಾಲ ಸ್ಪಷ್ಟ. ಅರಿವು ಬಾಹ್ಯಕ್ಕೆ.

ತನ್ನ ಮನದೊಡತಿ, ಪ್ರೇಮ ಕನಸಲ್ಲಿ ಮುರಿದಿದ್ದು, ಬದುಕಲ್ಲಿ ಅಲ್ಲ. ಬದುಕಲ್ಲಿ ಮುಗಿಯಬಾರದೆಂದೇನೂ ಇಲ್ಲ. ಅರೆ ತೆರೆದ ಅರಿವು ಸ್ಪಷ್ಟವಾಗುವ ಮೊದಲೇ ಮರೆವಿನ ಹೊದಿಕೆ. ಒಂದಷ್ಟು ದಿನ ಕಳೆಯಿತು. ನೀರ ತರಲು ಎಂದಿನಂತೆ ಹೊರಟ ಹೆಂಡತಿ ಗುಡ್ಡದಿಂದ ಜಾರಿ ಬಿದ್ದ ದಿನವೊಂದು ಕಾದಿತ್ತು. ಹೋಗಬಹುದಾಗಿದ್ದ ಪ್ರಾಣ ಉಳಿಯಿತು, ಕಾಲು ಉಳುಕಿತು. ಎಂದೋ ಬಿದ್ದ ಕನಸಿಗೆ ಮತ್ತೆ ಎಚ್ಚರದ ರೂಪ. ಕಾಲ ಕಳೆದಂತೆ ಅವನ ಮನಸ್ಸು ವಿಚಾರದ ಕುಲುಮೆ. ಸ್ವಪ್ನ ಲೋಕದಲ್ಲಿ ಎಂದೋ ಮುರಿದು ಹೋದ ಜೀವದ ಪ್ರೇಮ ಭಾವ ಇನ್ನೂ ಕಾದಿತ್ತು. ಕಾದಿದ್ದು ಕಾಡಿತು. ಒಂದು ದಿನ ಅವನೆದೆಯಲ್ಲಿ ನಿಚ್ಚಳ ಬೆಳಕು. ಸ್ವಪ್ನದಾಚೆಗೂ ಎಚ್ಚರದ ಮಡಿಲಿಗೂ ಪ್ರೇಮ ಸೋಕಿತು. ಪ್ರೇಮ ತಾಕಿದಾಗ ಆನಂದವೇ ಹುಟ್ಟಬೇಕಿಲ್ಲ. ಹುಟ್ಟಿದ್ದು ಬೇಗುದಿ, ಹಠ. ತನ್ನ ಒಲವ ಎಂದಾದರೂ ನಿರ್ಧಯವಾಗಿ ತನ್ನ ಪದತಲದಲ್ಲಿ ಕೊಂದು ಕೆಡವಬಹುದಾದ ಗುಡ್ಡದ ತಲೆ ಕತ್ತರಿಸುವ ಹಠ. ಕಾದ ಕಲ್ಲುಗಳ ಚೂರಾಗಿಸಿ ನಾಟ್ಯವಾಡುವ ರುದ್ರ ಛಲ.

ಕನಸು ಎಚ್ಚರದೊಳಗೆ ಸೇರಿದಾಗ ಅಚ್ಚರಿ ಸಂಭಾವ್ಯ.
ಕನಸೆಂದು ಕಳೆದವರೇ ಹೆಚ್ಚು. ಉಳಿಸಿಕೊಂಡವರು ಸಾಧಕರಾದಾರು.
ಸಾಧನೆಗೆ ಅರಿವಿತ್ತು. ಇವನೊಂದಿಗೆ ತನ್ನ ಪಥವಿದೆ.
ಕನಸು ಹಗಲಿರುಳೂ ಕಾಡಿತು, ಕೆಣಕಿತು.

ಮಡದಿಯ ಪ್ರೇಮ ಕಣ್ಣೆದುರು ಸುಳಿದಾಗಲೆಲ್ಲಾ ಅರಿವು ನಿಚ್ಚಳವಾಯಿತು. ಕೊನೆಗೂ ಆತ ನಿರ್ಧರಿಸಿದ. ಒಂದು ಉಳಿ, ಮತ್ತೊಂದು ಸುತ್ತಿಗೆ, ಹೆಗಲಿಗೆ ಹಗ್ಗದ ಸುರಳಿ. ಎದುರಿಗೆ ಎದೆಯುಬ್ಬಿಸಿ ಎತ್ತರ ನಿಂತು ಸವಾಲೆಸೆವ ಕಲ್ಲು ಬಂಡೆಗಳ ಗುಡ್ಡ. ಅದರೆದುರು ಮೂರಡಿಯ ಗಡ್ಡ ಬಿಟ್ಟು ನಿಂತ ಈತ. 1962ರ ಒಂದು ಸುದಿನ. ಅಂದಿನಿಂದ ಶುರುವಾದದ್ದು ಹೋರಾಟದ ಆಟ. ಸಾಧನೆಗೆ ಅವನ ಶಿರವೇರಬೇಕಿತ್ತು. ಕಾಲ ಹೂಡಿದ ಆಟ. ಗುಡ್ಡದ ಶಿರವುರಳಲು, ಸಾಧನೆಯ ಗರಿ ಮೂಡಲು. ಹರಿದ ನೆತ್ತರು ಸಂಗಾತಿಯದು, ಕುದಿವ ನೆತ್ತರು ಇವನದು. ಕಲ್ಲು ಬಂಡೆ ಸುಟ್ಟಿದ್ದು ಪಾದಗಳ, ಸೂರ್ಯ ಸುಟ್ಟಿದ್ದು ತಲೆಯನ್ನ.

ಜಗವ ಬೆಳಗುವ ದೇವ ಸೂರ್ಯ. ತಲೆಯೊಳಗೆ ಸುಡಬೇಕಿತ್ತು ಸುಡುಗಾಡುಗಳ.
ಬೆಳಕ ಕಾವು ಕತ್ತಲೆಯ ಕೂಡಬೇಕಿತ್ತು.
ಸೂರ್ಯ ಹುಟ್ಟುವ ಮೊದಲೇ ಕಲ್ಲು ಕುಟ್ಟುವ ಕೆಲಸ.
ಸೂರ್ಯ ಮುಳುಗಿದ ಅವನ ತಲೆಯೊಳಗೆ.

ಇವನ ಹಠದೆದುರು ಚಟಪಟ ಸಿಡಿವ ಬಂಡೆಗಳು. ಕಣ್ಣಲ್ಲಿ ಒಂದಷ್ಟು ದುಃಖ, ಒಂದಷ್ಟು ಖುಷಿ. ಗುಡ್ಡದಡಿ ಇಂಗಿದ್ದ ಸ್ವಪ್ನ ಸಂಗಾತಿಗಳ ರಕ್ತ ಹುಡುಕಿ ಪ್ರೀತಿಸುವೆ ಎಂಬಂತೆ ಗುಡ್ಡ ಕಡಿಯುತ್ತಲೇ ಹೋದ. ಜನ ಇದ್ದರು ಅಲ್ಲಿ ನಮ್ಮ ನಿಮ್ಮಂತೆ. ನೋಡಿ ನಕ್ಕರು.

ತಿಳಿದು ನಕ್ಕರೆ ಬೆಳಗು. ಅಪಹಾಸ್ಯದ ನಗು ಕತ್ತಲು.
ಹುಚ್ಚು ತಲೆಗೇರಿದೆ ಎಂದರು. ಅವನ ತಲೆಯೊಳಗೆ ಜನ ಕಾಣದ ಬೆಳಕು.

ಇವನೂ ಅದೇ ಗುಡ್ಡದಲ್ಲಿ ಸತ್ತಾನು, ಪ್ರೇಮ ಪ್ರೇತವಾಗಿ ಕಾಡುತ್ತಿದೆ ಎಂದರು. ಆತ ಗುಡ್ಡವನ್ನೇ ಪ್ರೀತಿಸಿದ, ಗುಡ್ಡ ಅವನೆದುರು ಮಗುವಾಗಿತ್ತು. ಜನಕ್ಕೆ ಆಡಿಕೊಳ್ಳುವ ಆಟ, ಅವನಿಗೆ ಹೂಡಿ ಗೆಲ್ಲುವ ಹಠ. ಜನರ ಮಾತಿಗೆ ಆತ ಕಿವುಡ. ಮನದ ಮಾತ ಆಲಿಸಿ ನಡೆದವ. ಕಳೆದದ್ದು ವರ್ಷ ಒಂದೆರಡಲ್ಲ. ಲೆಕ್ಕಕ್ಕೆ ಇಪ್ಪತ್ತು. ವಾರ, ದಿನ, ಕ್ಷಣಗಳ ಲೆಕ್ಕದಲ್ಲಿ ಸಾವಿರ ಸಹಸ್ರ. ಕಾಲ ಆತನೆದೆಯ ಮಿಡಿತ. ಇಳಿದ ಬೆವರು, ಬಸಿದ ನೆತ್ತರ ಬಿಸಿಗೆ ಕರಗಿದ್ದು ಕಲ್ಲು ಬಂಡೆಗಳ ಗುಡ್ಡ. ಎದ್ದು ನಿಂತಿದ್ದ ಗುಡ್ಡ ಮಂಡಿಯೂರಿ ಅವನ ಮಡಿಲ ಸೇರಿದಾಗ 1982ರ ಸುದಿನವೊಂದು ಅರಳಿ ನಲಿದಿತ್ತು.

* * * * * * * *

ಅವನೂರಿನಿಂದ ಪಕ್ಕದೂರಿಗೆ ಗುಡ್ಡ ಬಳಸಿ ಬಂದರೆ ಎಪ್ಪತ್ತು ಮೈಲು, ಸಹಸ್ರ ಹೆಜ್ಜೆ. ಗುಡ್ಡ ಕಡಿದುರುಳಿ ಪಥವ ಬಿಟ್ಟಾಗ ಏಳು ಮೈಲು, ನೂರು ಪಾದ. ನಕ್ಕಿದ್ದ ಜನ ಕೈ ಮುಗಿದರು. ಅವನ ಕಣ್ಣಲ್ಲಿ ತಲೆಯೊಳಗಿನ ಸೂರ್ಯ ಮಿನುಗುವ ಕಾಲ, ಪ್ರೇಮ ಪಕ್ವವಾಗಿತ್ತು.

ವೃದ್ದಾಪ್ಯ ದೇಹಕ್ಕೆ, ಚೈತನ್ಯಕ್ಕಲ್ಲ.
ಪ್ರೇಮದ ಅಮೃತ ಕುಡಿದವರಿಗೆ ಚೈತನ್ಯ ಪದತಲದ ಶರಣಾರ್ಥಿ.

ಹುಚ್ಚನೆಂದವರು ಸಂತನೆಂದರು. ಗುಡ್ಡ ತಲೆಯೇರಲಿಲ್ಲ. ಆತ ಅಹಂಕಾರವಾಗಲಿಲ್ಲ. ಗುಡ್ಡದ ಅಹಂಕಾರ ಕಳೆದವ, ಪ್ರೇಮವಾಗೇ ಉಳಿದವ. ನನ್ನದೇನಿದೆ ಶ್ರಮ, ಎಲ್ಲಾ ಅವಳ ಪ್ರೇಮ ಎಂದು ಮೇಲೆ ಕೈ ತೋರಿದ. ಜನಕ್ಕೆ ಮುಗಿಲೆತ್ತರದ ವ್ಯಾಪ್ತಿ ತಿಳಿಯದು. ಪ್ರೇಮದ ಪಥಿಕನೆಂದು ಪೂಜಿಸಿದರು. ಸೂರ್ಯ ಸಾಹಸಕ್ಕೆ ನಿರಹಂಕಾರಕ್ಕೆ ಸಾಕ್ಷಿಯಾದ. ಗೆದ್ದದ್ದು ಹಠವಲ್ಲ, ಪ್ರೇಮ.

ಅವಳು ಇರುವವರೆಗೆ ಮನುಷ್ಯ ಬೆಳೆವವರೆಗೆ ಪ್ರೇಮ ಅವಳ ಸೊತ್ತು. ಸೀಮಿತ ವೃತ್ತ.
ಅವಳು ಅಳಿದ ಮೇಲೆ, ಒಳಗೆಂಬುದು ಬೆಳಗಿದ ಮೇಲೆ ಪ್ರೇಮ ಜಗದ ತುತ್ತು.
ಪ್ರೇಮದಾಚೆಗೂ ಕಾಣ್ಕೆಯಿರಬಹುದು.
ಪ್ರೇಮ ವಿಶ್ವವ್ಯಾಪ್ತವಾಗಲು ನಮ್ಮ ಕಾಣ್ಕೆಯಿದು. ನಮ್ಮೊಳಗಿನ ತಿಳಿವು.

ಇದು ಕಥೆಯಲ್ಲ. ಬದುಕು. ಕಥೆಯಾಗುವ ಶಕ್ತಿಯಿರುವುದೂ ಬದುಕಿಗೇ ಅಲ್ಲವೇ? ಪ್ರೀತಿಗಾಗಿ ಕೊಂದ, ಸತ್ತ ಜನರ ಕಂಡಿದ್ದ ಭೂಮಿ ಪ್ರೀತಿಗಾಗಿ ಬದುಕ ಗೆಲ್ಲಿಸಿದ, ಪಥವ ನಿರ್ಮಿಸಿದ ಪ್ರೇಮ ಪಥಿಕನ ಶಕ್ತಿಗೂ ಸಾಕ್ಷಿ. ಗುಡ್ಡ ಕಡಿವಾಗ ಆತ ಬಡಿದ ಪ್ರತಿ ಏಟೂ ಮಾನವ ಜನಾಂಗದ ಎದೆಯೊಳಗಿಂದ ದ್ವೇಷಾಸೂಯೆ ಸ್ವಾರ್ಥಗಳ ಪರ್ವತ ಪುಡಿಗಟ್ಟಿ ಪ್ರೇಮದೆಡೆಗೆ ಪಥವ ಬೆಳಗಲಿ.

ಪ್ರೇಮ ಇಬ್ಬರ ನಡುವಿನ ಬಂಧನವಾದರೆ ಚೆಂದ – ಮಲ್ಲಿಗೆಯಂತೆ. ಮಲ್ಲಿಗೆಗೂ ಪರಿಮಳವಿದೆ, ಅಂದವಿದೆ. ಬದುಕಲ್ಲಿ ಯಾವುದೂ ವ್ಯರ್ಥವಲ್ಲ. ಅರ್ಥವಿಲ್ಲದೆಯೂ ಇಲ್ಲ. ಅರ್ಥಗಳ ಮೀರಿದರೆ ಪರಮಾರ್ಥ. ಪ್ರೇಮದ ಹರಿವು ಬಟ್ಟಲ ಹಾಲಿಂದ ಹರಿವ ನದಿಯಾದರೆ, ಹಾಲ್ಬೆಳದಿಂಗಳಾದರೆ ಜಗಕೆಲ್ಲ ತಂಪು. ಪ್ರೇಮಿಯಾಗಿದ್ದವ ಅರ್ಥ ಕಾಮಗಳ ಮೀರಿದರೆ ಪರಮಾರ್ಥಗಳ ಪಡೆದಂತೆ, ಪರಮಾತ್ಮನೆಡೆಗೆ ನಡೆದಂತೆ.

ನಂಬಿದ ಪರಮಾತ್ಮ ನಂಬಿಕೆಯ ತಳದಲ್ಲಿ.
ಕಾಣ್ಕೆಯ ಪರಮಾತ್ಮ ಸಾಧನೆಯ ಶಿಖರದಲ್ಲಿ.
ಗೆದ್ದವ ಬೀಗಲಾರ, ಬೀಗಿದರೆ ಸಂತನಾಗಲಾರ.

ಈತ ಪ್ರೇಮ ಸಂತ – ಜನ ಕರೆದದ್ದು. ಆತ ಮಾತ್ರ ಮಗುವಂತೆ ವಿಶ್ವವ ಪ್ರೇಮಿಸಿ ಜಗವ ತೊರೆದದ್ದು. ಸಮಾಧಿ ಮಹಲು ನೋಟಕ್ಕೆ ಚಂದ. ಬದುಕಿಗೆ ಮಾರ್ಗ ಬೇಕು ನಡೆಯುವುದಕ್ಕೆ, ಗೆಲ್ಲುವುದಕ್ಕೆ. ನಂಬಿದ್ದಾರೆ ಜನ ಅವನೂರಲ್ಲಿ. ನಂಬಿದಂತೆ ನಟಿಸಿರಲೂಬಹುದು. ಎಲ್ಲ ಮೀರಿ ಎಲ್ಲರೆದೆಯಲ್ಲಿ ಹುಟ್ಟಬೇಕಿದೆ ಆತ. ಕನಸ ತಿಳಿದೆಚ್ಚರದ ಅರಿವು ಮೂಡಬೇಕಿದೆ ಈಗ.

* * * * * * * *

ಬಿಹಾರದ ಗಯಾ ಜಿಲ್ಲೆಯ ಗೌಲ್ಹಾರ್ ಎಂಬ ಊರು. ಅಲ್ಲಿ ಉಳಿ, ಸುತ್ತಿಗೆ, ಹಗ್ಗಗಳ ಬಳಸಿ 25 ಅಡಿ ಎತ್ತರದ ಕಲ್ಲು ಗುಡ್ಡವ ಕಡಿದು 360 ಅಡಿ ಉದ್ದದ 30 ಅಡಿ ಅಗಲದ ರಸ್ತೆ ನಿರ್ಮಿಸಿದವನ ಹೆಸರು ದಶರಥ ಮಾಂಜಿ. ನಿರಂತರ 20 ವರ್ಷಗಳ ಅವನೊಬ್ಬನ ಹೋರಾಟ ಅಲ್ಲಿನ ರಸ್ತೆ ಎನ್ನುತ್ತಾರೆ. ಅಲ್ಲಿನ ಜನ ನೆನೆಯುತ್ತಾರೆ ಅವನನ್ನು. ಅವನಿಗಾಗಿ ಪುಟ್ಟ ಸ್ಮಾರಕವೊಂದಿದೆಯಂತೆ ಅಲ್ಲಿ. ಸ್ಮರಣೆಗೆ ಸ್ಮಾರಕದಾಚೆಯದನ್ನು ಕೊಟ್ಟವ ಆತ. ಸ್ಮಾರಕದಲ್ಲಿಟ್ಟು ಮರೆಯುವವರು ನಾವು. ನಮ್ಮೊಳಗಿನ ತಿಳಿವಿಗೆ ಬೆಳಕ ಚೆಲ್ಲಿ ಅಕ್ಷರವಾದ ಅವನ ಪ್ರೇಮ ಎಲ್ಲ ಗುಡ್ಡಗಳ ಕಳೆದು ಮಾನವನೆದೆಯ ಸೇರಿ ಜಗವ ಪ್ರೇಮಧಾಮವಾಗಿಸಲಿ.

* * * * * * * *

ದಿನಾಂಕ: 16.09.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ –  http://avadhimag.com/?p=63693 .

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)
 

ತಾರಾಲೋಕದಲ್ಲಿ ಪುಟಾಣಿ ಮಿಂಚು…

ಮೋಹಮತಿ ಕಥಾಮುಖಿ//ರಘುನಂದನ ಕೆ.

ತುಂತುರು ಮಳೆ, ಮನಸ್ಸು ಮಗುವಾಗಿ ಮೆದುವಾಗಿಬಿಟ್ಟಿತ್ತು. ಮನಸ ತುಂಬಾ ಕಥೆಗಳ ಸಾಲು. ಪುಟಾಣಿ ಮಕ್ಕಳ ಸುತ್ತ ಕೂರಿಸಿಕೊಂಡು ಕಥೆ ಹೇಳುವ ಬಯಕೆ. ಈ ಶಹರದಲ್ಲಿ ಎಲ್ಲಿ ಹುಡುಕಲಿ, ಕನ್ನಡದ ಕಥೆ ಕೇಳೋ ಮಕ್ಕಳ. ಅದ್ಕೆ ಇಲ್ಲಿ ಹೇಳೋಣಾ ಅಂತ ಬಂದೆ. ತುಂಬಾ ಹಿಂದೆ ಕತ್ತಲ ರಾತ್ರಿಯಲ್ಲಿ ದೊಡ್ಡ ಆಟದ ಮೈದಾನವೊಂದರಲ್ಲಿ ವಿಶಾಲವಾದ ನೀಲ ಆಕಾಶವನ್ನ ನೋಡುತ್ತಾ, ಹೊಳೆವ ನಕ್ಷತ್ರಗಳ ಎಣಿಸುತ್ತಾ ಹೀಗೊಂದು ಕಥೆ ಹುಟ್ಟಿತ್ತು. ಪುಟಾಣಿ ಮರಿಯೊಂದಕ್ಕೆ ಅದನ್ನು ಹೇಳಿ, ಅದರ ಕಣ್ಣ ಪಿಳಿಪಿಳಿಯಲ್ಲಿ ಖುಷಿಯ ಮಿಂಚ ಕಂಡು ಆನಂದಿಸಿದವ ನಾನು. ಈಗ ನಿಮ್ಮೆದುರಿಗೆ ಹರವಿ ಕೂತಿದ್ದೇನೆ…

* * * * * * * * * *

ಅನಂತ ನೀಲ ಅಂತರಿಕ್ಷದ ಸಾಗರ, ತೇಲಿ ಗಿರ ಗಿರ ಸುತ್ತುವ ಭೂಮಿಯ ಲೋಕದಾಚೆ ಹರಡಿಬಿದ್ದ ನಕ್ಷತ್ರಗಳ ಉಂಡೆ, ಚಿಮ್ಮಿ ಒಂದರೊಳಗೊಂದು ಬೆರೆತ ಬೆಳಕ ಕಿರಣ, ದೃಕ್ಪಥದಾಚೆ ಕ್ಷೀರಪಥದ ದಾರಿಯಲಿ – ಬೆಳಕ ಲಂಗ ಧರಿಸಿ ಆಟವಾಡುವ ಕಿನ್ನರಿ…

ಅಂತರಂಗದಾಚೆಯೊಂದು ಅಂತರಿಕ್ಷ. ಅಲ್ಲೊಂದಿಷ್ಟು ನಕ್ಷತ್ರಗಳ ಗುಂಪು. ಅವುಗಳ ಜೊತೆ ಮುದ್ದು ರಾಜಕುಮಾರಿಯಂತ ಪುಟಾಣಿಮರಿಯ ಆಟ. ನಕ್ಷತ್ರ ಚಿಮ್ಮುವ ಕಿರಣಗಳ ಜೋಡಿಸಿ ಕಿರೀಟ ಮಾಡುವ ಆಟ. ಸುತ್ತುಗಟ್ಟಿದ ಕಿರಣಗಳ ಸಾಲು. ಕಣ್ಣಾ ಮುಚ್ಚಾಲೆ ಆಡೋ ತಾರೆಗಳ ಮೋಜು.

ಜೋಡಿಸಿ ಬೆಸೆಯ ಹೊರಟ ಬೆಳಕ ದಾರಗಳೆಲ್ಲ ಸಿಕ್ಕು ಸಿಕ್ಕಾಗಿ ಗಂಟುಗಳಾಗಿ… ಅವುಗಳ ಹಿಡಿದು ಕಿರೀಟವಾಗಿಸೋದು ಹೇಗೆ? ಬೆಳಕ ರೇಖೆಗಳ ಮೈ ಸುತ್ತ ಸುತ್ತಿಕೊಂಡ ಪುಟಾಣಿ ಮರಿಗೆ ಸುಸ್ತಾಗಿ ಹೋಗಿ, ಇನ್ನೂ ಆರಂಭವೇ ಆಗಿಲ್ಲ ಕಿರೀಟದಾಟ, ದಾರ ಜೋಡಿಸುವ ಮೊದಲೇ ನಿರಾಸೆಯ ಮಾಟ, ಕಿರಣಗಳ ಹಿಡಿದು, ಒಂದರೊಳಗೊಂದು ನೇಯ್ದು ಅದ್ಯಾವಾಗ ಆದೀತು ಹೊಳೆವ ಬೆಳಕ ಕಿರೀಟ, ಹೊರಟು ಬಿಡಲೇ ಭೂಮಿಗೆ, ಕನಸ  ಕಂಗಳಲ್ಲಿ ತುಂಬಿ ಜಾರಲು ನಿಂತ ಇಬ್ಬನಿಯ ಬಿಂದು…

ಪುಟಾಣಿ ಮರಿಯ ನೋವ ಕಂಡು ದೂರ ದೂರ ನಕ್ಷತ್ರ ಲೋಕದ ತೀರದಿಂದ ಮುದ್ದು ಮುಖದ ಜೀವಮಾತೆ ತಾರಾ ಕುವರಿ ಬಂದಳು. ಸುಂದರ ಗುಂಗುರು ಕೂದಲ ಮೇಲೊಂದು ನಕ್ಷತ್ರ ಸಿಂಗರಿಸಿದ ಹೊಳೆವ ಕಿರೀಟ, ನೀಲ ಕಣ್ಣ ಹೊಳಪು, ಮಂದಹಾಸದ ಸೊಗಸು… ಪುಟಾಣಿ ಎದುರಲ್ಲಿ ನಿಂತು ತಲೆ ನೇವರಿಸಿ ಮಧುರ ಪಾರಿಜಾತದ ಪರಿಮಳವ ಚೆಲ್ಲಿ, ಏನಾಯ್ತು ಪುಟ್ಟಾ ಎಂದಳು.

ಪುಟ್ಟ ಮರಿಯ ಕಂಗಳಲ್ಲಿ ಅಚ್ಚರಿಗಳ ದೀಪ, ಎದುರು ನಿಂತ ಸೊಗಸು ಕಿನ್ನರಿಯ ರೂಪ, ಯಾರಿರಬಹುದು ತೇಲುತ್ತ ಬಂದ ಗುಲಾಬಿ ಪಾದದ ಬಾಲೆ, ಅಣ್ಣನ ಕಥೆಯ ದೇವತೆನಾ ಅಂತ ಅನುಮಾನ…?

ಯಾರು ನೀನು, ದೇವತೆಯಾ ಕಿನ್ನರಿಯಾ – ಕೆಳಿದ್ದು ಪುಟಾಣಿ ಮರಿ

ನಾನು ನಕ್ಷತ್ರದೊಳಗಿಂದ ಬಂದ ಮಂಜಿನ ಬಾಲೆ, ಕಿರಣದ ಲೀಲೆ, ಅದ್ಸರಿ, ನೀನ್ಯಾರು ಮರಿ, ನಿನ್ನ ಕಂಗಳಲ್ಯಾಕೆ ಮೋಡ ಮುಸುಕಿದೆ, ಇಲ್ಲಿಗ್ಯಾಕೆ ಬಂದೆ? – ಕೇಳಿದ್ದು ಕಿನ್ನರಿ

ಆಗ, ಪುಟಾಣಿ ಮರಿ ಆ ಬಾಲೆಯ ಪುಟ್ಟ ಪುಟ್ಟ ಕೈ ಬೆರಳ ಹಿಡಿಯುತ್ತ ಹೆಳಿದ್ದು – ತಾರೆಗಳ ಲೋಕದಿಂದ ನಿಂಗೆ ತೇರನ್ನೆಳೆದು ತರುವೆ ಎಂದ ಅಣ್ಣ, ತಂದಿದ್ದು ಬೆಳಕ ದಾರದೆಳೆಗಳನ್ನ, ಅಂದಿದ್ದು – ನೀ ಹಿಡಿಯಬೇಕೀಗ ನಾ ತಂದ ಬೆಳಕ ಮಿಂಚ, ಹಿಡಿದು ಕಿರೀಟವಾಗಸ್ತೀಯಾ ಕೊಂಚ..

ಓಹೋ, ನೀ ಬೆಳಕ ಕಿರೀಟ ಮಾಡ ಬಂದ ಪುಟಾಣಿಯಾ, ನಿನ್ನಣ್ಣ ಕಾಮನಬಿಲ್ಲ ತಗೊಂಡು ಹೋದವನಾ, ಸೂರ್ಯನ್ನ ಗೆದ್ದವನಾ ಅಂತು ದೇವತೆ.

ಹ್ಞೂಂ ಹೌದು, ಅದಿರಲಿ ಅತ್ತ, ಇಲ್ಲಿ ನೋಡು, ಬೆಳಕ ರೇಖೆಗಳೆಲ್ಲ ಸಿಕ್ಕು ಸಿಕ್ಕಾಗಿ ಬಿಟ್ಟಿವೆ. ಬಿಡಿಸಲಾಗದು, ನೇಯಲಾಗದು, ಸುತ್ತಿ ಸುತ್ತಿ ನನ್ನ ಮುತ್ತಿದೆ, ನಂಗೆ ಅಳು ಬರ್ತಿದೆ, ಭೂಮಿಗೆ ಹೋಗೋಣಾ ಅನ್ನಿಸ್ತಿದೆ, ಏನ್ಮಾಡ್ಲಿ..??

ಏನ್ಮಾಡೋದು ಅಂತ ಅಣ್ಣ ಹೇಳಿಲ್ವಾ ಪುಟ್ಟಾ ನಿಂಗೆ..?

ಹ್ಞೂಂ ಅಣ್ಣ ಹೇಳಿದ್ದ, ನಿಂಗೆ ಸಾಕಾಗಿ ನೀ ಸೋತು ಕುಳಿತಾಗ ಕಣ್ಣಿಂದ ಜಿಟಿ ಜಿಟಿ ಮಳೆ ಸುರಿವ ವೇಳೆಯಲಿ, ಏಳು ಸಮುದ್ರ ದಾಟಿ ದೇವ ಮಾನವರು ಬರ್ತಾರೆ, ಕೆದರಿದ ನಿನ್ನ ಕೂದಲ ಬಾಚಿ ತಾರೆಗಳ ಮಾಲೆ ಮುಡಿಸ್ತಾರೆ, ಬೆಳಕ ಗೋಳವ ಲಾಲಿಸಿ ಕಿರೀಟ ಮಾಡಿ ತಲೆ ಮೇಲೆ ಇಡ್ತಾರೆ – ಅಂದಿದ್ದ.

ಅಷ್ಟೇನಾ ಹೇಳಿದ್ದು..??

ಉಹ್ಞೂಂ, ಪಾಚು ಮರಿ ನೀನು ಸುಸ್ತಾಗದೆ, ಅವರು ಬರೊದ್ರೊಳ್ಗೆ ಕಿರೀಟ ಮಾಡಿ ತೊಟ್ಟಿರಬೇಕು. ದೇವ ಮಾನವರು ನಿನ್ನ ಗೆಲುವ ನೋಡಬೇಕು, ಗೆದ್ದ ಕಥೆಯ ಹಾಡಬೇಕು, ಮಕ್ಕಳೆಲ್ಲ ಕೇಳಿ ಸ್ಪೂರ್ತಿ ಪಡೆಯಬೇಕು, ನೀ ಗೆಲ್ಲಬೇಕು ಆಟದಲ್ಲಲ್ಲ ಆಟ ಆಡುವ ಮಾಟದಲ್ಲಿ, ಗೆಲುವಿಗಾಗಿ ಕಾಯ್ವ, ಗೆಲ್ಲಿಸುವವರಿಗಾಗಿ ಕಾದು ನಿಲ್ಲುವ ಜೀವವಾಗಬಾರದು ನನ್ನ ತಂಗಿ, ಗೆಲುವಿನಾಚೆಯ ಆಟ ದಕ್ಕಬೇಕು, ದೇವ ಮಾನವರು ಹರಸಬೇಕು ಅಂದಿದ್ದ. ಹೌದು ಅಷ್ಟಕ್ಕೂ ನೀನ್ಯಾರು, ಸಮುದ್ರ ದಾಟಿ ಬಂದ ದೇವ ಕುವರಿಯಾ, ಸಪ್ತ ಸಾಗರವ ದಾಟಿ ಬಂದ್ಯಾ..?

ಹೊಳೆವ ನೀಲ ಕಂಗಳ ಬಾಲೆ ನಗ್ತಾ ನಗ್ತಾ ನುಡಿದಳು – ಸಪ್ತ ಸಾಗರವ ದಾಟಿ ನೀನು ಬಂದೆ, ಚುಕ್ಕಿಗಳ ಎಡವುತ್ತ ನಾನು ಬಂದೆ, ಕಾಮನ ಬಿಲ್ಲ ಸೂರ್ಯನಿಂದ ನಿನಗೆಂದೇ ಕೊಡೊಯ್ದ ಅಣ್ಣ ನಿನ್ನಣ್ಣ ಮತ್ತೇನ್ ಹೇಳಿ ಕೊಟ್ಟ ನಿಂಗೆ..?

ಪುಟಾಣಿ ಹೇಳಿದ್ಲು – ನೀರಿನ ಹನಿಯ ಹೃದಯದಲ್ಲಿ ಏಳು ಬಣ್ಣವಿದೆಯೆಂದು ಸೂರ್ಯ ಕಿರಣ ಸ್ಪರ್ಶಿಸುವವರೆಗೂ ತಿಳೀದು, ನಮ್ಮ ಹೃದಯದ ಶಕ್ತಿ ನಮ್ಮುಸಿರ ಸ್ಪರ್ಶದಲ್ಲರಳಬೇಕು. ಎಲ್ಲರಿಗೂ ಬೆಳ್ಳಿ ಕಿರಣದಲ್ಲಿ ಏಳು ಬಣ್ಣ ಕಂಡ್ರೆ ನನ್ನಣ್ಣ ನಂಗೆ ನೀರ ಹನಿಯ ಹೃದಯದಲ್ಲಿ ಕಾಮನ ಬಿಲ್ಲ ಬಣ್ಣ ಕರಗಿರುವುದ ತೋರಿಸಿದ, ಹಾರುವ ಪಾತರಗಿತ್ತಿಯ ರೆಕ್ಕೆಗಳಲ್ಲಿ, ಅರಳುವ ಹೂವ ಚೆಲುವ ದಳಗಳಲ್ಲಿ ಬಣ್ಣಗಳ ಕಾಣಿಸಿದ.

ಸರಿ ಪುಟ್ಟ, ನಿನ್ನಣ್ಣ ನಿಂಗೆ ಸಾಕಾಗೋಷ್ಟು ಹೇಳೇ ಕಳ್ಸಿದಾನಲ್ಲ, ಮತ್ಯಾಕೆ ಅಳ್ತಾ ಇದ್ದೀಯಾ ನೀನೀಗ ಅಂದಳು ಕಿನ್ನರ ಬಾಲೆ.

ನಂಗೆ ಭೂಮಿದು ಗೊತ್ತು, ಈ ತೆರೆದ ಆಗಸದ ಅಂತರಂಗದಲ್ಲಿ ಹೆಂಗೆ ಆಟಾ ಆಡ್ಲಿ ಅಂದಳು ಪುಟಾಣಿ ಮರಿ.

ಆಗ ಆ ದೇವತೆ ಏನು ಹೇಳಿದ್ದು ಗೊತ್ತಾ..?

ಪುಟಾಣಿ ಮರಿ, ಹುಲ್ಲಿನ ಮೈದಾನವಿರಲಿ, ಮಣ್ಣಿನ ಮೈದಾನವಿರಲಿ, ಬಾನಂಗಳವೇ ಇರಲಿ, ಬದುಕ ಬಯಲೇ ಇರಲಿ, ಆಟ ಆಡುವವರಿಗೆ ಮೈದಾನವಾಗಬಾರದು ಮುಖ್ಯ…

ಮತ್ತೇನ್ ಫಲಿತಾಂಶವಾ..? ಅಂದಳು ಮಧ್ಯೆ ಪುಟಾಣಿ ಮರಿ

ಅಲ್ಲ ಮರಿ, ಆಟ ಆಡೋರಿಗೆ ಆಟ ಮಾತ್ರ ಮುಖ್ಯ, ಆಟವೊಂದೇ ಉಳಿದು ಉಳಿದಿದ್ದೆಲ್ಲ ಕಳೆದು, ಏಕಾಗ್ರವಾಗಿಬಿಡಬೇಕು, ಮೈದಾನವೂ ಮರೆವಂತೆ, ಆಗ ಬಯಸಿದ ಫಲಿತಾಂಶವೂ ಅದಾಗೇ ಬರುತ್ತೆ, ಸೋಲೂ ಗೆಲುವಿನಂತೆ ಆನಂದವಾಗುತ್ತೆ, ಆಟದಾಚೆಯ ಕಾಣ್ಕೆಯದು, ಆಟ ಆಡುವಾಗಲೇ ಆನಂದವರಳಿಸಬೇಕು ಫಲಿತಾಂಶವಾದಾಗ ಅಲ್ಲ ಮರಿ, ಹೀಗೇ ನೋಡು – ಎಷ್ಟೆಲ್ಲ ಬೆಟ್ಟ ಗುಡ್ಡ ಮೋಡ ರಾಶಿಗಳೇ ಬಂದರೂ ಸೂರ್ಯ ನಿಲ್ಲಸ್ತಾನಾ ಸಂಚಾರಾ.. ಇರ್ಲಿ ಬಿಡು ಇದೆಲ್ಲಾ, ನಾ ನಿಂಗೆ ಕಿರಣಗಳ ಹಿಡಿಯೋಕೆ ಸಹಾಯ ಮಾಡ್ಲಾ..?

ಅಣ್ಣನಾಡಿದ ಮಾತುಗಳ ರಿಂಗಣ ಕಿವಿಯಲ್ಲಿ, ದೇವ ಕಿನ್ನರಿ ನುಡಿದ ಪಾಠದ ಸ್ಪಂದನ ಎದೆಯಲ್ಲಿ

ಪುಟಾಣಿ ಮರಿ ಅಂತು – ಬೇಡ ಬೇಡ, ನೀನು ಸಹಾಯ ಮಾಡೋದು ಬೇಡ ಕಣೆ ಬಾಲೆ, ನನ್ನಾಟ ನಂದು, ನನ್ನ ಬದುಕಿನ ಆಟಕ್ಕೆ ಕಥೆಗೆ ನಾನೇ ನಾಯಕಿ, ಆಟಾನೂ ನಂದೆ, ಫಲಿತವೂ ನಂದೆ, ಕಿರೀಟವೂ ನಂದೆ.. ಅಣ್ಣನಂತೆ ಮಾತಾಡ್ತೀಯಾ ನೀನು ಕೂಡ, ನಾನು ಆಗಸದಂಗಳಕ್ಕೆ ಹೊರಟಾಗ ಅಣ್ಣ ಅಂದಿದ್ದ – ನೀನು ಎಲ್ಲಿದ್ದಿ ಅಂತ ಭೂಮಿಗೆ ಗೊತ್ತು, ಆದರೂ ಅದು ನಿನ್ನನ್ನೇ ಹುಡುಕಬೇಕು, ಹುಡುಕುವಂತಾಗಬೇಕು, ಅದಕ್ಕಾಗೇ ನೀನು ಆಟ ಆಡಬೇಕು, ಒಂದೊಂದೇ ಕಿರಣಗಳ ಬಿಡಿಸುತ್ತಾ ಸೇರಿಸುತ್ತಾ ನೀನೇ ಆಟವಾಡಬೇಕು, ಕಿರೀಟದಾಟವನ್ನೂ… ಬದುಕಿನಾಟವನ್ನೂ…

ಸರಿ ಹಾಗಾದ್ರೆ ನಾನು ಹೊರಡ್ಲಾ ಅಂತು ಕಿನ್ನರಿ,

ಎಲ್ಲಿಗೆ ಹೋಗ್ತಿ ನೀನೀಗ ಅಂತು ಪುಟಾಣಿಮರಿ

ಆಗ ಆ ಕಿನ್ನರಿ ನುಡಿದಳು – ಶಶಿ ತೇಲುವ ನೀಲಿಯೊಳಗೆ, ಪ್ರತಿ ಇರುಳ ತಾರೆ ಬಳಿಗೆ, ಉಳಿದ ಬದುಕಿನ ಇಂದುಗಳೊಳಗೆ, ಬರುವ ನಾಳೆಗಳ ಕನಸಿನೊಳಗೆ…

ಎನ್ನುತ್ತಾ ಅಂತರಿಕ್ಷದಂಗಳದಲ್ಲಿ ತೇಲಿ ತೇಲಿ ದೂರವಾದಳು…

ಕಿರಣಗಳ ಮಣಿಸಿ ಕಿರೀಟವಾಗಿಸಲು ತಲೆ ತುಂಬ ಕನಸುಗಳ ಹೊತ್ತು ತಾರೆಗಳ ಸೊಗಸ ಬೆಳಕ ಮಿಂಚ ಹಿಡಿದು ಪುಟಾಣಿ ಮರಿ ಆಟವಾದಳು, ಫಲಿತಗಳ ಹಂಗಿಲ್ಲದ ಪಾತ್ರವಾದಳು…

* * * * * * * * * *

ಮುಂದೇನಾಯ್ತು..?? ಕಥೆ ಕೇಳ್ತಾ ಕೇಳ್ತಾ ಮಲಗುವ ಮಕ್ಕಳ ಕನಸಿನಲ್ಲಿ ಕಥೆ ಮುಂದುವರೆಯಲಿ… ಗೆಲುವ ಸೊಗಸ ಹೊಳೆವ ಕಂಗಳಲ್ಲಿ ತುಂಬಲಿ…

ಈಗ ಮುಂದಿನ ಕಥೆ ನಿಮ್ಮದು, ಹೇಳಿ ಬದುಕಿನಾಟವ ಗೆದ್ದು ಕಿರೀಟ ಮುಡಿದು ಸಿಂಹಾಸನದಲ್ಲಿ ಯಾವಾಗ ಕುಳಿತುಕೊಳ್ತೀರಿ, ನೀರ ಹೃದಯದ ಕಾಮನ ಬಿಲ್ಲಿಗೆ ಯಾವಾಗ ಬಣ್ಣ ತುಂಬ್ತೀರಿ, ತಾರೆಗಳ ತೇರಲ್ಲಿ ಯಾವಾಗ ಮೌನ ಜೋಗುಳವ ಹಾಡ್ತೀರಿ, ಮಕ್ಕಳ ಕನಸಲ್ಲಿ ನಕ್ಷತ್ರಗಳ ಮಿಂಚ ಯಾವಾಗ ಕೊಡ್ತೀರಿ, ಅಪ್ಪ ಅಮ್ಮನ ಪ್ರೀತಿಯಾಗಿ ಬೆಚ್ಚಬೆಯ ಕಥೆಗಳ ಯಾವಾಗ ಮಕ್ಕಳ ಬಾಳಲ್ಲಿ ತುಂಬ್ತೀರಿ..

ಅರ್ಧಕ್ಕೆ ನಿಂತ ಮಾತು, ಮುಗಿಯದ ಕಥೆ ಅರ್ಧಕ್ಕೆ ಮುಗಿದು ಬಿಡುವ ಬದುಕು ಕಾಡುತ್ತದೆ, ಉಳಿದಿದ್ದು ಅಳಿಯದೆ ಮನಸ್ಸುಗಳಲ್ಲಿ ಮುಂದುವರೆಯಲಿ… ಜಾಗತೀಕರಣದ ಕಥೆಗಳಾಚೆ, ಕಾರ್ಟೂನ್ ಲೋಕದಾಚೆ ಮಕ್ಕಳಿಗೂ ಹಿರಿಯರಿಗೂ ರಾತ್ರಿಯ ಆಕಾಶ ಪಾಠಶಾಲೆಯಾಗಲಿ. ಆಕಾಶ, ನಕ್ಷತ್ರ, ಸೂರ್ಯ, ನೀರ ಹನಿಯೊಳಗಿನ ಕಾಮನಬಿಲ್ಲು – ಮಕ್ಕಳ ಆಸಕ್ತಿ, ವಿಜ್ಞಾನದ ಅರಿವೂ ಆಗಲಿ. ಅಣ್ಣ ತಂಗಿಯ ಭಾವ, ರಾತ್ರಿ ಕಥೆ ಕೇಳುತ್ತ ಹ್ಞೂಂ ಗುಡುತ್ತಲೆ ನಿದ್ದೆ ಹೋಗುವ ಮಕ್ಕಳ ಬಿಸುಪು ಅಪ್ಪ ಅಮ್ಮಂದಿರಿಗೆ ಮತ್ತೆ ಸಿಕ್ಕುವ ಕಾಲ ಬರಲಿ, ಬದುಕು ಭಾವ ಬಂಧದ ಸೊಗಸಾಗಿ ಸಂಭ್ರಮಿಸಲಿ…

* * * * * * * * * *

ಮುಗಿಸುವ ಮೊದಲು ಎಂದೋ ಓದಿದ್ದ ನಾಲ್ಕು ಸಾಲುಗಳ ನಿಮ್ಮೆದುರು ಹರವಿ ಮುಗಿಸುವ ಬಯಕೆ… ಈ ಸಾಲುಗಳ ಬರೆದ ಜೀವಕ್ಕೆ ನಾ ಕೃತಜ್ಞ…

“ಗಗನದಲಿ ಗೃಹತಾರೆ ಬುಗುರಿಗಳ ನಿಲ್ಲದ ಗಿರಿ ಗಿರಿ ಸದ್ದು…  ಶೃತಿಗಿದೆ ಕ್ಷೀರಪಥ, ಕಪ್ಪೆ ಚಿಪ್ಪಲ್ಲಿ ಮೂಢ ಕನಸುಗಳ ಏನೋ ಸ್ಪಂದನ ತಾಳ, ಕಡಲಿನಾ ನಾಲಗೆ ಉಲಿವ ಸುಸ್ವರ

ಓಂಕಾರದ ಜೇನ್ನಾದ, ಹೊಳೆದದ್ದು ತಾರೆ, ಉಳಿದಿದ್ದು ಆಗಸ..”

ಈ ಕಥೆಯ ತುಂಬ ಇಣುಕಿದ ಪುಟಾಣಿ ಮರಿಯ ಅಣ್ಣನ ಕಥೆಯನ್ನೂ ನಿಮಗೆ ಹೇಳೀಯೇನು ಒಂದಿನ… ಕೇಳ್ತೀರಲ್ವಾ…??

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)