RSS

Category Archives: ನಿಜಘನ ಮಕರಂದ

ಕ್ಷಣಗಳ ಇಬ್ಬನಿಯಲ್ಲಿ – ನವ ಪಲ್ಲವಕ್ಕೊಂದು ಪಲ್ಲವಿ…

ನಿಜಘನ ಮಕರಂದ//ರಘುನಂದನ ಕೆ.

ಇರುಳ ನಕ್ಷತ್ರ ಜಾರಿ ಹಿಮಬಿಂದುವಿನ ಹೊಳೆವ ಮುತ್ತಾಗಿ,
ಕಾಡು ಮಲ್ಲಿಗೆಯ ಮೊಗ್ಗಿನ ಮೇಲೆ ಪಲ್ಲವಿಸಿ,
ಅರುಣ ಕಿರಣಗಳ ಪ್ರತಿಫಲಿಸಲು ಕಾದಿರುವಾಗ….

ಮೆಲ್ಲನೆ ಜಾರಿಹೋಗಿದೆ ಮತ್ತೊಂದು ವರ್ಷ, ಸರಿವ ಕಾಲನ ಕಾಯಕ್ಕೆ ನೆರಳಿಲ್ಲ, ಮತ್ತೆ ಮರಳುವ ಹಂಗಿಲ್ಲ, ಮನುಷ್ಯನಿಗೆ ಬೇಕು ಕಾಲನ ಲೆಕ್ಕ, ಒಂದು ಚೌಕಟ್ಟು… ಮುಗಿದ ವರ್ಷಕ್ಕೊಂದು ನೆನಹು, ಬರುವ ವರ್ಷಕ್ಕೊಂದು ಕನಸು… ಒಂದರ ಮುಕ್ತಾಯ ಮತ್ತೊಂದರ ಆರಂಭ ಕೂಡ… ಕಳೆದ ವರ್ಷದ ಮಂಗಳ ಗೀತೆ ಕಾಲನ ನಡಿಗೆಯಲ್ಲಿ ಹೊಸ ವರ್ಷದ ಸ್ವಾಗತ ಗೀತೆ ಕೂಡ…

ಎಂದೋ ಭುವಿಗೆ ಬಂದ ಕುರುಹಿನ ಆಚರಣೆಗೆ ಹಬ್ಬದ ಸಡಗರ, ಜಗವೆಲ್ಲ ಹೊಸ ವರ್ಷವಾಚರಿಸಿ ಎಂಟು ದಿನಗಳ ನಂತರ ನನ್ನ ಹೊಸ ವರ್ಷದ ಗಂಟು ಬಿಚ್ಚುತ್ತದೆ, ಜನ್ಮ ದಿನದ ಹರುಷ ವರುಷಗಳ ಲೆಕ್ಕದಲ್ಲಿ ಜಮೆಯಾಗುತ್ತದೆ. ಒಳಹೊರಗಿನ ಪ್ರಪಂಚಗಳು ಹೊಳೆಹಿಸಿದ ಹೊಸ ಅನುಭವ ವಿಚಾರಗಳ ಕ್ಷಣಗಳಲ್ಲಿ ಬಂಧಿಸಿ, ಭವಿಷ್ಯತ್ತಿನ ದಿನಗಳಿಗೆ ಪಾಠವಾಗಿ, ಭೂತ ಕಲಿಸಿದ ಜ್ಞಾನವಾಗಿ, ವರ್ತಮಾನದ ಅಚ್ಚರಿಯಾಗಿ… ಒಳಸ್ಪಂದನ ತಾಳಗಳ, ಕಪ್ಪೆಚಿಪ್ಪೊಳಗಿನ ಘರ್ಷಣೆ ಸೃಷ್ಠಿಸುವ ಮುತ್ತುಗಳ ಪುಟಗಟ್ಟಿದ ಹೊತ್ತಿಗೆಯಾಗಿ ಜಾರಿದೆ ಬದುಕಿನ ಲೆಕ್ಕದಿಂದ ವರ್ಷ ಮತ್ತೊಂದು…

ಪ್ರತಿ ದಿನ ಉದಯಿಸುವ ಸೂರ್ಯಂಗೆ ಯಾವತ್ತು ಹುಟ್ಟಿದ ಹಬ್ಬ…? ಪ್ರತಿ ಸಂಜೆ ಅಸ್ತಮಿಸುವ ಸೂರ್ಯ ನಾಳೆ ಹೊಸ ಅನುಭವಗಳ ಸಿಹಿ ಕಹಿ ಹೊತ್ತು ಮತ್ತೆ ಬರುತ್ತೇನೆ ಎಂದೇ ಹೋಗುತ್ತಾನೆ. ಹಳೇ ವರ್ಷ ಕೂಡ ಹೊಸ ಕ್ಷಣಗಳ ಭರವಸೆಯಲ್ಲಿ ಕಳೆದಿದೆ…

ದೇವ ಕೊಟ್ಟ ಪುಟ್ಟ ಉಡುಗೊರೆ ಈ ಬದುಕು,
ಪ್ರತಿ ದಿನವೂ ಸೂರ್ಯ ದೇವನಿಂದ ಹೊಸ ಬೆಳಕು,
ಪ್ರತಿ ಕ್ಷಣದ ಪ್ರತಿ ಉಸಿರಲ್ಲೂ ಹೊಸ ಪ್ರಾಣವಾಯುವಿನದೇ ಸಂಚಾರ,
ಕಾಲದ ಕಣ ಕಣದಲ್ಲೂ ಅನುಭವಗಳ ಇಂಚರ…

ಈ ಗೂಢ ಪ್ರಪಂಚದಲ್ಲಿ ನನ್ನ ಭವಿಷ್ಯತ್ತಿನ ಮೂಢ ಕನಸುಗಳು ರೆಕ್ಕೆ ಬಿಚ್ಚಿ ಹಾರುತ್ತವೆ. ಭೂತ ಕಾಲದ ಮಳೆ ನಿಂತ ಮೇಲಿನ ಹನಿಗಳ ತಂಪು ಘಮಘಮಿಸುತ್ತದೆ. ವರ್ತಮಾನದ ಭಾವ ಭವ ತರಂಗಗಳುದ್ಭವಿಸುತ್ತವೆ. ಯಾವುದೋ ಚಿತ್ರ ಚೆಲ್ಲಿದ ಬಣ್ಣ, ಯಾವುದೋ ಪುಸ್ತಕ ಹೊಳೆಹಿಸಿದ ಬೆಳಕು, ಯಾವುದೋ ಹಾಡು ಕದಲಿಸಿದ ನೆನಪು, ಯಾವುದೋ ಘಟನೆ ಕಲಿಸಿದ ಪಾಠ… ಮನಸ್ಸಿನ ಭಾವಕೋಟೆಗೆ ಲಗ್ಗೆಯಿಟ್ಟು ಕನವರಿಸಿದಾಗ ಹೊಸ ವರ್ಷದ ಕ್ಷಣಗಳು ನೇವರಿಕೆಯಾಗುತ್ತವೆ. ತಪ್ಪಿ ಇಟ್ಟ ಹೆಜ್ಜೆ, ಇಡಬೇಕೆಂದುಕೊಳ್ಳುತ್ತಾ ಹಿಂತೆಗೆದುಕೊಂಡ ಹೆಜ್ಜೆಯ ಗುರುತು, ವೇದನೆ ಉಳಿಸಿ ಹೋಗುವ ಆನಂದ, ಮನವರಳಿಸುವ ಕಲ್ಯಾಣಿ ರಾಗ ತರಂಗ, ನನ್ನೆದೆಯ ಬೆಚ್ಚನೆಯ ಗೂಡಿಂದ ಹೊರಬಂದ ಗುಬ್ಬಚ್ಚಿ ರೆಕ್ಕೆಯ ಪಟಪಟ… ಸೂರ್ಯನ ಕಿರಣಗಳ ಮೀಟುವಿಕೆಗೆ ಸ್ಪಂದಿಸುತ್ತಾ ಸುಖದಿಂದರಳುವ ತಾವರೆಯ ದಳದಂತೆ…

ಬದುಕೆನ್ನುವುದು ಅರಳುವ ಮೊಗ್ಗಿನೊಳಗೆ ಜಾರುವ ಇಬ್ಬನಿಯ ಹನಿ,
ಪ್ರತಿ ದಿನವೂ ಹೂವಾಗಿ,
ಕಾಲ ಕರಗುವ ಹಿಮಮಣಿಯಾಗಿ ಪಿಸುಗುಡುತ್ತಲೇ ಇರುತ್ತದೆ…
ಹನಿ ಹನಿ ಹಜಾರ್ ಕಹಾನಿ…

ಅವಲೋಕನ ಮುಗಿದಿದೆ, ಸಂಕಲನ ಮುಗಿಯಬೇಕಲ್ಲ, ಜೀವನದಲ್ಲಿ ಕಾಲ ಸದಾ ವ್ಯವಕಲನವೇ ಆದರೂ ಏನೇನನ್ನೋ ಕೂಡಿರುತ್ತದೆ, ಕೂಡಿಸಿರುತ್ತದೆ – ಒಂದು ಮನಸನ್ನು, ನೂರು ಕನಸನ್ನು, ಸಹಸ್ರ ನಕ್ಷತ್ರಗಳ ನಗುವನ್ನು, ಸೂರ್ಯನಾಚೆಯ ಜ್ಞಾನದ ಕಿರಣದಿಂದೊಂದು ಬಿಂದುವನ್ನ, ದಿಗಂತದಾಚೆಯ ಅವ್ಯಕ್ತ ಸಂದೇಶವನ್ನು, ಎಲ್ಲವನ್ನೂ… ಕೂಡಿಸುತ್ತದೆ ಕಾಲ, ಕೂಡುತ್ತಾ ಕಳೆಯುತ್ತಾ ಬೆಳೆವ ಬೆಳೆಸುವ ಕಾಲಕ್ಕೆ ವಂದಿಸುತ್ತಾ… ಮತ್ತೊಂದು ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತು ಹೊಸ ಹೊಸ ಸೂರ್ಯೋದಯಗಳ ಅನುಭವಗಳ ಉಸಿರ ಕಲರವವನ್ನು ನೆನಪ ಸರಿಗಮದ ಸಲುವಾಗಿ ಅಣು ಮಾತ್ರದಷ್ಟಾದರೂ ಹಿಡಿದಿಡಲು ಹೊಸ ಕ್ಷಣಗಳೊಡನೆ ಸಂಭಾಷಣೆ… ಬದುಕೆಂಬ ಬಾವಿಯಿಂದ ತಣ್ಣಗಿನ ಅನುಭವಗಳನ್ನು ಮೊಗೆಮೊಗೆದು ಸದ್ದಿಲ್ಲದೆ ಹೊಟ್ಟೆಯೊಳಗಿನ ಸಂತೋಷಗಳನ್ನು ಸಂಗತಿಗಳನ್ನು ಹೂವಾಗಿಸುವ ಗುಲಾಬಿಯ ಲವಲವಿಕೆಯೊಂದಿಗೆ…

ಕ್ಷಣಗಳ ಸುಪ್ತ ಭಾವ ದಿನಚರಿಯಲ್ಲಿ ಜಂಜಾಟಗಳ ಟಿಪ್ಪಣಿಯಿಲ್ಲ, ನೋವು ನಲಿವಿನ ಚಿತ್ರಣದೊಳಗಿಂದ ಉದ್ಭವಿಸಿದ ಚಿಂತನೆಯಿದೆ. ವ್ಯಕ್ತಿ ಭಕ್ತಿಗಳ ವಿಮರ್ಷೆಯಾಚೆ ವ್ಯಕ್ತಿತ್ವ ಅರಳಿಸುವ ಸಂಘರ್ಷವಿದೆ… ಮತ್ತೊಮ್ಮೆ ವಿದಾಯ ಹೇಳಬೇಕಿದೆ ಈಗ, ಕನಸು ಕೊಟ್ಟ ವರ್ಷಕ್ಕೆ ಮನಸುಗಳ ಬೆಸೆದ ವರ್ಷಕ್ಕೆ, ಮನಸ್ಸಿನ ಮೂಲೆಯಲ್ಲೊಂದು ಪೊರೆ ಅಹಂನ ತೆರೆ… ಅಷ್ಟಷ್ಟೆ ಸರಿಸಿ, ಹರಸಿ ಮೌನದಿಂದ ಮಾತಿಗೆ, ಮಾತಿನಿಂದ ಮೌನಕ್ಕೆ, ಮೌನದಾಚೆಯ ಲೋಕಕ್ಕೆ, ಚಿಕ್ಕ ಚಿಕ್ಕ ಕ್ಷಣಗಳ ಜೀವದ ಪಯಣ ಮುಗಿದು, ಮೃದು ಮಧುರ ಜೊನ್ನ ಜೇನ ಬಂಧ ಬೆಸೆದು, ತುಂಬಾ ತುಂಬಾ ಬೆಳೆಸಿದ ಕಳೆಸಿದ ಜೀವ ಭಾವ ಮೇಳೈಸಿದ ಹರುಷ ವರುಷದ ವಿದಾಯದಂಚಲ್ಲಿ… ಚಲಿಸಿದೆ ಅನುರಾಗ ಪವನ ಪರಿಮಳ, ಸರಿದಿದೆ ಕಾಲ ಸರಸರ…

ಹುಣ್ಣಿಮೆಯ ಚಂದ್ರ ಉದಯಿಸಿ ಇಬ್ಬನಿಗೆ ಬೆಳ್ಳಿ ರಂಗ ಲೇಪಿಸುತ್ತಿರುವಾಗ ಜೀವನದ ಸಂಗೀತದಲ್ಲಿ ಪ್ರತಿಯೊಂದು ವರ್ಷವೂ ಒಂದೊಂದು ರಾಗ. ಹಂಸಗಳ ಧ್ವನಿಯಲ್ಲಿ ಅಮೃತ ವರ್ಷಿಸುವಾಗ ಬೃಂದಾವನದಲ್ಲಿ ಸಾರಂಗ ರೆಕ್ಕೆ ಬಿಚ್ಚಿ ನವಿಲಿನೊಡಗೂಡಿ ಕುಣಿಯುತ್ತದೆ. ಕ್ಷಣಗಳ ಅನುಭಾವಗಳ ಸ್ವರಗಳ ನುಡಿಸಿ, ಮೌನ ರಾಗದ ಮನೋ ವಿಲಾಸಗಳ ಉಸಿರಾಗಿಸಿ, ಸಂತಸಕ್ಕೊಂದು ಸಾಂತ್ವನಕ್ಕೊಂದು ಸಂಭ್ರಮ ನೀಡಿ ಮುದಗೊಳಿಸಿ ಕೊನೆಗೂ ಮುಗಿದಿದೆ ವರ್ಷ. ಪ್ರಿಯ ವರ್ಷವೇ, ನಿನ್ನ ನೆನಪು ಮನೋ ವೇದಿಕೆಯಲ್ಲಿ ಸದಾ ನರ್ತಿಸುತ್ತಲೇ ಇರುತ್ತದೆ.

“ಮೇರೆ ಮನ ಮಯೂರ ನಾಚೆ, ತೇರೇ ಯಾದೋಂಕೆ ಆಂಗನ ಮೇ”

ಉಸಿರು… ನಿನ್ನ ಕ್ಷಣಗಳ ಉಸಿರಲ್ಲಿ ನನ್ನ ಜೀವದ ಉಸಿರ ಬೆರೆಸಿ ಬದುಕ ತುಂಬ ಲಾಲಿ ಹಾಡ ಗುನುಗುತ್ತಲೇ ಇರುತ್ತದೆ. ಅಕ್ಕರೆ ಕಲ್ಲುಸಕ್ಕರೆ ಕರಗದೇ ಉಳಿಯಬಲ್ಲದೇ, ಕರಗದಿದ್ದರೂ ಸಿಹಿ ಕ್ಷಣಗಳ ಸ್ಫುರಿಸಬಲ್ಲದೇ… ತಂಗಾಳಿ ಬೀಸ್ವ ತಂಪಿರುಳ ಬಯಲಲ್ಲಿ ನಿಂತು ಮುಗಿಲ ನೀಲಿಯಲ್ಲಿ ನಕ್ಷತ್ರಗಳ ಎಣಿಸುವ, ಸಂಘರ್ಷಗಳಲ್ಲಿ ಸಂಚರಿಸಿ ಸ್ವಚ್ಛವಾಗಿ ಸ್ವಚ್ಛಂದವಾಗಿ ವಿಹರಿಸುವ – ಪುಟ್ಟ ಪೋರ, ಕನಸುಗಳನ್ನ ಇಬ್ಬನಿಯಲ್ಲಿ ನೆನೆಸುತ್ತ, ಮನಸ ತುಂಬ ಮೌನ ಗಾನದ ಲಹರಿ ಹರಿಸುತ್ತ, ಹೋಗುತ್ತಿರುವ ನಿನಗೆ ವಿದಾಯ ಕೋರುತ್ತಾನೆ, ಬರುವ ಹೊಸತಿಗಾಗಿ ಸಂಭ್ರಮಿಸುತ್ತಾನೆ…

* * * * * * * * *

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ – http://www.samudrateera.blogspot.in/)

 

ಕಾಡುವ ಕಾಡಲ್ಲಿ ಮಳೆಯ ಹಾಡು…

ನಿಜಘನ ಮಕರಂದ//ರಘುನಂದನ ಕೆ.

ಮಳೆ ನಾಡಲ್ಲಿ ಸುರಿದ ಮಳೆಯ ಚಿತ್ರಗಳ ತಂಪು…
ತೊಟ್ಟಿಕ್ಕುತ್ತಿದೆ ನೆನಪುಗಳ ರೂಪ ತಾಳಿ…

ಛೆ, ಈ ಷಹರದಲ್ಲಿ ಮಳೆಯ ಸುಳಿವೇ ಇಲ್ಲ. ಮಲೆನಾಡ ನನಗೆ ಮಳೆಯಿಲ್ಲದ ಮಳೆಗಾಲವೆಂದರೆ ಬೇಜಾರು. ಒಮ್ಮೆ ಈ ನಗರದಲ್ಲಿ ಮಳೆ ಬಂದರೂ ಜರ್ರಂತ ಸುರಿದು ಪುರ್ರಂತ ಹಾರಿ ಹೋಗುತ್ತದೆ. ಇಲ್ಲಿನ ಜನರ ಪ್ರೀತಿಯಂತೆ. ಇಲ್ಲಿ ಮನಸೋ ಇಚ್ಛೆ ಮಳೆ ನೀರ ಪುಳಕವೂ ಇಲ್ಲ, ಕಪ್ಪೆಗಳ ಗುಟುರೂ ಇಲ್ಲ… ಮಳೆಯೊಳಗೆ ಇಳಿದು ನೆನೆಯುವುದಕ್ಕಾಗಿ, ಮನಸೊಳಗೆ ಮಳೆ ಹನಿಗಳ ತುಂಬಿಕೊಳ್ಳುವ ದಾಹಕ್ಕಾಗಿ, ಮಳೆಯ ಪ್ರೇಮಧಾರೆಯಲ್ಲಿ ತೋಯ್ದು ಹರ್ಷದಿಂದ ಕಂಗೊಳಿಸುವ ನಿಸರ್ಗದ ಸೊಬಗ ಸವಿಯುವ ಮೋಹಕ್ಕಾಗಿ, ನೆನೆದ ಮಣ್ಣ ಮೋಹದಲ್ಲಿ ಆಟವಾಡುವ ಸಂಭ್ರಮಕ್ಕಾಗಿ, ಉಂಬಳವೆಂಬ ಜೀವಿಯ ತುಟಿಯ ಪುಳಕಕ್ಕೆ ರಕ್ತ ಸುರಿಸುವ ಸುಖಕ್ಕಾಗಿ… ಪಯಣಿಸುವ ಖುಷಿಯ ಆಯ್ಕೆ ದಾಂಡೇಲಿ ಸಮೀಪದ ಗುಂದಾ. ಇಲ್ಲಿ ಸ್ವಚ್ಛಂದ ಹಸಿರಿನ ನಡುವೆ ಅಷ್ಟೇ ಸ್ವಚ್ಛ ಮನಸ್ಸಿನ ಮೊಗೆ ಮೊಗೆದು ಪ್ರೀತಿ ಕೊಡುವ ಮಾನವ ಜೀವಿಗಳಿದ್ದಾರೆಂದು ಗೊತ್ತೇ ಇರಲಿಲ್ಲ ಇದುವರೆಗೆ. ನನ್ನಂತೆ ಮಳೆಗೆ ದಾಹಗೊಂಡು ಸೆಟೆದು ಕಾಯ್ದು ಬಿದ್ದಿದ್ದ ಉಂಬಳದಂತಹ ಗೆಳೆಯರೊಂದಿಗೆ ನಡೆದದ್ದು ದಾಂಡೇಲಿಯ ಕಾಡಿನೆಡೆಗೆ… ಅಲ್ಲಿ ಸುರಿದ ಮಳೆ ಹನಿಗಳೊಂದಿಗಿನ ಕ್ಷಣಗಳ ಸ್ಮೃತಿ ಚಿತ್ರಗಳ ಅಕ್ಷರದಲ್ಲಿ ಹಿಡಿದಿಡುವ ಬಯಕೆಯೊಂದಿಗೆ ಇಲ್ಲಿ ನಾನು ನಿಮ್ಮೆದುರು…

* * * * * * * * *

ಅಂಗಳದಿಂದ ಹತ್ತು ಮೆಟ್ಟಿಲೆತ್ತರದ ಮನೆ,
ಮನೆ ಮಾಡಿಗೆ ಜೋತು ಬಿದ್ದ
ಕರೆಂಟಿಲ್ಲದ ಮಸಿ ಹಿಡಿದ ವಾಯರ್ ಗಳು,
ಅವುಗಳಿಗೆ ಬೆಸೆದ ಜೇಡ ನಿವಾಸ,
ಅದರ ಕೆಳಗೆ ಬದುಕುವ ಪ್ರೀತಿ ತುಂಬಿದ ಮಂದಿ,
ಒಳಗೆ ಮಂತ್ರೋಚ್ಛಾರದ ರಿಂಗಣ,
ಮನಸ್ಸು ಮಳೆ ಸುರಿವ ತೆರೆದ ಪ್ರಾಂಗಣ,
ಹಂಚಿಕೊಂಡ ಕ್ಷಣಗಳಿಗೆ ಮಾತು ನಗುವಿನ ಮದರಂಗಿ,
ಬೀಳ್ಕೊಡುಗೆಗೆ ಕಣ್ಣ ಹನಿಯ ಅಭಿಷೇಕ,
ಮಳೆ ಹನಿಗೆ ಅಪ್ಪುವ ಪುಳಕ,
ದೊಡ್ಡ ಅಂಗಳದಲ್ಲಿ ಹರಡಿಬಿದ್ದ ಹೆಜ್ಜೆ ಗುರುತು,
ಅರಳಿ ನಿಂತ ದಾಸವಾಳದ ಹಾಡು,
ಅಂಗಳದಂಚಿನ ತುಳಸಿಯೆದುರು ಕೆಂಬಣ್ಣದ ನೀರು,
ಹೆಜ್ಜೆ ಇಟ್ಟರೆ ಜಾರುವ ಕಾಲು,
ಬಿದ್ದರೆ ಮೋಡ ನಗುತ್ತದೆ,
ನೀರು ತೂಗುತ್ತದೆ…

(ಒಂದರ ಕೆಳಗೊಂದು ಬರೆದರೆ ಕವನ, ಒಂದರ ಪಕ್ಕ ಇನ್ನೊಂದು ಜೋಡಿಸಿದರೆ ಲೇಖನ, ಅರ್ಥವೇ ಆಗದ ಸಾಹಿತ್ಯ ಪ್ರಕಾರ)

* * * * * * * * *

ಕಾಡೊಳಗಿನ ಅರಮನೆಯಂತ ಗೂಡಿಂದ ಮತ್ತೆ ಕಾಡೊಳಗೆ ನಡೆಯುವ ಆಟ, ಗದ್ದೆಯಾಚೆಗಿನ ಶಿವ ಮಂದಿರದಲ್ಲಿ ಘಂಟಾ ನಾದ, ನಡೆವ ದಾರಿಯಲಿ ಸಂಕ ದಾಟುವ ಮೋದ, ಮೊಳಕಾಲವರೆಗೆ ಹುಗಿವ ಗದ್ದೆಯ ರಾಡಿಯಲ್ಲಿ ಹೆಜ್ಜೆ ಹುಡುಕಬೇಕು, ಕಾಲೆತ್ತಿ ತಲೆವರೆಗೆ ಮಣ್ಣ ಸಿಡಿಸಿ ಓಡಬೇಕು, ನಾ ಮೊದಲೋ ನೀ ಮೊದಲೋ ಓಡಿ ಕೂಗಬೇಕು… ದಾರಿಗಡ್ಡ ಬಿದ್ದ ಮರಗಳ ಹಾರುತ್ತ ನಡೆಯಬೇಕು ಕಾಡುವ ಕಾಡ ಕಾಣಲು, ಜಿಟಿ ಜಿಟಿ ಹನಿವ ಮಳೆ, ಪಿಚಿ ಪಿಚಿ ರಾಡಿಯ ದಾರಿ, ಹೆಜ್ಜೆಗೊಂದು ಉಂಬಳ ತಲೆಯೆತ್ತಿ ಸ್ವಾಗತ ಕೋರಿ ಕಾಲೇರುತ್ತದೆ, ಮರೆತರೆ ತಲೆವರೆಗೂ ಸಾಗುತ್ತದೆ ಸರಾಗವಾಗಿ ಸದ್ದಿಲ್ಲದೆ, ಬಿಡದೆ ಸುರಿವ ವರ್ಷಧಾರೆಯಲ್ಲಿ ತೋಯ್ದು ಮೈ ಮನಸೆಲ್ಲ ಕರಗಿ ಹಗುರಾಗಿ ಸ್ವಚ್ಛ ಸ್ವಚ್ಛ… ಮಳೆ ನೀರ ಹಾಡಿಗೆ ಮನಸು ಕುಣಿಯಬೇಕು, ಹೃದಯ ಮೀಯಬೇಕು…

ಕಾಡೊಳಗೊಂದು ಸೂರು, ಮೈ ಉರಿಸುವ ನೊರಜುಗಳ ಓಡಿಸಲು ಅಡಿಕೆ ಸಿಪ್ಪೆಯ ಹೊಗೆ ಹಾಕಿ ಕೆಮ್ಮಿದ್ದು ನಾವು, ಒಂದಿಷ್ಟು ಆಟ, ನೆನೆದ ಮನಸುಗಳ ಸೊಗಸುಗಾರಿಕೆಯ ಮಾಟ, ಯಕ್ಷಗಾನದ ಕುಣಿತ, ಗೆಜ್ಜೆ ಕಾಲ್ಗಳ ನೆಗೆತ.. ಬಾಲ್ಯ ಮರುಕಳಿಸಿದಂತೆ, ಕಾಡ ಹಸಿರು ಜೊತೆ ಸೇರಿ ಹಾಡಿದಂತೆ, ಹಸಿದ ಹೊಟ್ಟೆಗೆ ಹೊತ್ತು ನಡೆದಿದ್ದ ಆಹಾರಗಳ ಉಪಚಾರ, ಚಕ್ಕುಲಿಯ ಮುರಿತಕ್ಕೆ ಹಲ್ಲುಗಳ ಕೆನೆತ, ತಿಂದುಂಡು ಕುಣಿದಾಡಿ ತೋಯ್ದು ಮುದ್ದೆಯಾಗಿ ಒದ್ದೆಯಾಗಿ ಮರಳಿ ಗೂಡು ಸೇರಿದಾಗ ಕಾಡು ಕತ್ತಲ ಸೆರಗೊಳಗೆ…

ರಾತ್ರಿಯೆಲ್ಲ ಮಳೆಯ ಜೋಗುಳ ಕೇಳಿ ಅದೆಷ್ಟು ಯುಗ ಸಂದಿತ್ತೋ… ಕಪ್ಪೆಗಳ ವಟರ್ ಗುಟರ್ ನಾದ, ಬೀಸುವ ಗಾಳಿಯ ಮೋದ, ಎಲ್ಲೊ ಮುರಿದು ಬಿದ್ದ ಟೊಂಗೆಯ ಸದ್ದು, ತುಂಬಿ ಹರಿವ ನೀರ ಜುಳು ಜುಳು, ಛಳಿಯ ಚಾದರ ಹೊದ್ದು ನಡಗುವ ಮೈಗೆ ಹಂಡೆ ತುಂಬಿದ ಬಿಸಿ ನೀರ ಜಳಕದ ಪುಳಕ, ಬಚ್ಚಲೊಲೆಯ ಬೆಂಕಿಯೆದುರು ಸುಡುವ ಮೊಣಕಾಲ ಮುಚ್ಚಿ ಉರಿಯ ಸುಖಿಸುವ ಬಯಕೆ, ಬಚ್ಚಲೊಳಗೆ ಕಣ್ಣುರಿದಿದ್ದು ಸಾಬೂನು ನೊರೆಯಿಂದಲಾ, ಹೊಗೆಯಿಂದಲಾ…?? ಅಲ್ಲೆಲ್ಲೊ ಮೂಲೆಯಲ್ಲಿ ಬಿದ್ದಿದ್ದ ಗೇರು ಬೀಜಗಳ ಚೀಲ ಹೊರಬಂತು ಈಗ, ಯಾವುದೋ ತಗಡಿನ ಮುಚ್ಚಳಕ್ಕೆ ತೂತು ಹೊಡೆದು ಗೇರು ಬೀಜ ಸುಡಬೇಕು, ಅದರ ಘಮಕ್ಕೆ ಮೂಗರಳಿಸಿ ಸುಖಿಸಬೇಕು, ಸಿಡಿವ ಸದ್ದಿಗೆ ಬೆಚ್ಚಿ ಹಾರಬೇಕು, ಕೈಯೆಲ್ಲ ಮಸಿಯಾಗಿಸಿಕೊಂಡು ಕಲ್ಲುಗುಂಡಿನಲ್ಲಿ ಒಡೆದು ಬೆಚ್ಚಗಿನ ಗೇರುಬೀಜವ ಬಾಯಿಗಿಟ್ಟರೆ ಆಹಾ… ಸೊನೆ ತಾಕಿದ ತುಟಿಗಳಿಗೆ ತಿಂದ ಬೀಜದ ಮಧುರ ವಿರಹ…

ಕರೆಂಟಿಲ್ಲದ ಮಳೆಗಾಲದ ರಾತ್ರಿಗಳು, ಎಲ್ಲ ಚಿಮಣಿಗಳಿಗೆ ಎಣ್ಣೆ ತುಂಬಾಗಿದೆ, ಚಿಮಣಿಯ ಕೆಂಪು ಬೆಳಕಲ್ಲಿ ಕತ್ತಲು ಕರಗುತ್ತದೆ, ನೆಂಟರು ಬಂದಾಗ ಹಚ್ಚಲೆಂದು ಇಟ್ಟಿದ್ದ ಗ್ಯಾಸ್ ದೀಪದ ಬಲೂನು ಉದುರಿದೆ, ಹೊಸತ ಹುಡುಕಿ ಕಟ್ಟಲಾಗಿದೆ ಈಗ ಹರಸಾಹಸಪಟ್ಟು, ತಂಡಿ ಹಿಡಿದ ಬೆಂಕಿ ಪೆಟ್ಟಿಗೆಯ ಎಲ್ಲ ಕಡ್ಡಿಗಳ ಕಡಿದು ಅಂತೂ ಹಚ್ಚಿದಂತಾಯಿತು ಬೆಳಕ, ಆದರೆ ಪಂಪು ಹೊಡೆದರಷ್ಟೆ ಅದಕ್ಕೆ ಬೆಳಕು, ಬಿಟ್ಟರೆ ಉರಿಯೆನೆನ್ನುವ ಹಠ ಅದಕ್ಕೂ…

ಎಷ್ಟಂತ ಬರೆಯಲಿ ಸುಖದ ಕ್ಷಣಗಳ ತುಣುಕುಗಳ, ಕಾಲನ ಕನವರಿಕೆಗಳ ಹಿಡಿಯಲು ಅಕ್ಷರ ಸೋಲುತ್ತದೆ… ಮಲೆನಾಡಿನ ಧೋ ಮಳೆ, ಎಲ್ಲೆಲ್ಲೂ ಹರಿವ ಜೀವ ಜಲ, ರಾಡಿ ಗದ್ದೆಯ ಹೊರಳಾಟ, ಕಂಬಳಿ ಕೊಪ್ಪೆ ತೊಟ್ಟು ನೆಟ್ಟಿ ಹಾಕುವ ಮಂದಿ, ತುಂಬಿ ತುಳಕುವ ಝರಿ ತೊರೆ ಒರತೆಗಳ ಗರ್ಭ, ಕಾಡುವ ಕಾಡು ಹಾಡುವ ಹಕ್ಕಿ, ಹಲಸಿನ ಕಾಯಿಯ ಹುಳಿ, ದಾಸವಾಳದ ಅಂದ ಕಾಡ ಕುಸುಮದ ಗಂಧ… ಊರೊಳಗಿನ ಮನೆ ಮನಗಳಲ್ಲಿ ಕಲರವ ಹರಡಿದ್ದು, ಜೋಕಾಲಿಯಲ್ಲಿ ಕುಳಿತು ನೆನಪುಗಳ ತೂಗಿದ್ದು, ಕತ್ತಲ ಗೂಡುನಲ್ಲಿನ ಡಬ್ಬಿಗಳ ಹುಡುಕಿ ಹಪ್ಪಳ ಸಂಡಿಗೆಗಳ ಕುರುಂ ಕುರುಂ ಸದ್ದು ಮಾಡುತ್ತ ಖಾಲಿ ಮಾಡಿದ್ದು, ಹೊಡತ್ಲು ಒಟ್ಟಿ ಬೆಚ್ಚಗೆ ಕುಳಿತು ಹರಟೆ ಹೊಡೆದಿದ್ದು, ಸಿಕ್ಕಾಪಟ್ಟೆ ಮಳೆಯಲ್ಲಿ ಬೈಕಿನಲ್ಲಿ ಕುಳಿತು ಛಳಿಯಾಗಿ ಕಂಪಿಸಿದ್ದು, ಜೊತೆ ನಿಂತು ಕ್ಯಾಮರಾದೊಳಗೆ ಬಂಧಿಯಾಗಿ ಚಿತ್ರವಾದದ್ದು, ತೋಟ ತಿರುಗಿ ಮನಸ್ಸು ಮೌನವಾಗಿ ಕಾಡಿದ್ದು, ಎರಡು ದಿನಗಳಲ್ಲಿ 25 ಕಿಲೊಮೀಟರ್ ಗೂ ಹೆಚ್ಚು ನಡೆದು ಪದ ಹೇಳುವ ಕಾಲ್ಗಳಿಗೆ ಸಾಂತ್ವನಿಸಿದ್ದು, ಉಂಬಳಗಳ ಕಿತ್ತು ಉಂಡೆ ಕಟ್ಟಿ ಎಸೆದಿದ್ದು, ಕಾಳಿ ನದಿಯ ಅಗಾಧತೆಯೆದುರು ಹಗ್ಗ ಜಗ್ಗಿ ದಡಗಳ ಬೆಸೆವ ತೆಪ್ಪದೊಳಗೆ ಕುಳಿತಿದ್ದು, ಹರಿವ ತೊರೆ ಝರಿಗಳಲ್ಲಿ ಆಟವಾಡಿದ್ದು…

ಮುಖವಾಡಗಳಿಲ್ಲದ ಮನುಷ್ಯರ ನಿರ್ಮಲ ಪ್ರೀತಿ, ಅಕ್ಕರೆಗಳ, ಬೀಳ್ಕೊಡುಗೆಯ ಕಣ್ಣ ಬಿಂದುಗಳ ಭಾವಗಳಿಗೆ ಅಕ್ಷರಗಳ ಚೌಕಟ್ಟು ಬೇಕೇ..?? ಮಲೆನಾಡ ಮಳೆ ಸದಾ ಸುರಿಯುತ್ತಿರಲಿ ಹೀಗೆ ನಿರಂತರ, ಬತ್ತದಿರಲಿ ಸಹಜ ಪ್ರೇಮದ ಒರತೆ…

ಬರೆದು ಮುಗಿಸಲಾಗದು ಅನುಭಾವದ ಸೊಗಸು, ಹಂಚಿಕೊಳ್ಳುವ ಖುಷಿಗೆ ಇಷ್ಟು ಸಾಕು…

* * * * * * * * *

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)

ಪಯಣಗಳ ಜೊತೆಗಾರ ಮಿತ್ರನ ಬ್ಲಾಗ್ http://bhaavagalagonchalu.blogspot.in/2012/08/blog-post_16.htmlನಲ್ಲಿ ದಾಂಡೇಲಿಯ ಸುಖದ ಕ್ಷಣಗಳ ಚಿತ್ರಗಳಿವೆ, ಒಮ್ಮೆ ವಿಹರಿಸಿ…