RSS

Category Archives: ದೇವಾಮೃತ ಗಂಗೆ

ಗರ್ಭ ಕೂಗಿನ ಋತುಗಾನ

ದೇವಾಮೃತಗಂಗೆ//ರಘುನಂದನ ಕೆ.

ಸ್ವಪ್ನ ಸಂತೆಯ ಬೀದಿಯಲ್ಲಿ
ದ್ವೀಪದೂರಿನ ರಾಜಕುಮಾರ
ಎದೆಯ ತುಡಿತದ ಬಿಗುವಲ್ಲಿ
ಕುದುರೆ ಖುರಪುಟದ ನಾದ
ದೇಹದೊಡಲ ಬಯಕೆ ವಸಂತಗಾನ
ಹೊಕ್ಕುಳ ಸುಳಿಯ ತಿರುವಲ್ಲಿ
ಹೊಸ ಹರೆಯ ಹೂ ಕಂಪನ

ಅಂತರಾಳದಾಸೆ ಪಟಪಟಿಸಲು
ಹಸಿ ನೆಲದ ಕನಸಿಗೂ ಹಸಿವು
ರೆಕ್ಕೆ ಬಿಚ್ಚಿ ಹರೆಯ ತೆರೆಯಲು
ಮೌನ ರಾಗದ ಬಯಕೆ ಬಿಸುಪು
ಕೊರಳ ಕೊಳಲಿಗೆ ತುಟಿ ಸೋಕಿ
ಸ್ವಪ್ನಲೋಕದ ತುಂಬ ಪಿಸುಮಾತು
ಬಯಕೆ ಹೂ ಗಂಧ; ಸುಡುವ ಬೆಳದಿಂಗಳು

ಚಿಟ್ಟೆ ರೆಕ್ಕೆ ಬಿಚ್ಚುವ ಬೆರಗು
ಎದೆ ಮೊಳಕೆಯೊಡೆವ ಪುಳಕ
ಹರೆಯ ಕುಡಿಯೊಡೆವ ದುಗುಡ
ಚೈತ್ರ ಚಿಗುರಿನ ಸಂಭ್ರಮ
ಮೊದ ಮೊದಲ ಮೊಗ್ಗು ಬಿರಿದಂತೆ
ಗರ್ಭ ಕೂಗಿನ ಋತುಗಾನ
ತಾಯ ತೊಟ್ಟಿಲ ಸಂಕಲನ

* * * * * * * * *
2015ರ ಹೊಸದಿಗಂತ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿಸಲ್ಪಟ್ಟಿದೆ & ದಿನಾಂಕ: 08.04.2016ರಂದು ‘ಅವಧಿ’ ಯಲ್ಲಿ ಪ್ರಕಟಿಸಲ್ಪಟ್ಟಿದೆ.

Advertisements
 

ಬದಲಾಗೋ ಬಣ್ಣಗಳ ಪವಾಡ – ಮುಖವಾಡ

ದೇವಾಮೃತಗಂಗೆ//ರಘುನಂದನ ಕೆ.

ಬದುಕ ಬವಣೆಯ ಬೀದಿಗಳಲ್ಲಿ
ಹೆಜ್ಜೆಗೊಂದು ಮುಖವಾಡ ಸಿಕ್ಕು
ನಂಬಿಸುತ್ತದೆ, ಕಥೆ ಹೇಳುತ್ತದೆ
ತಾನಿಲ್ಲದ ಬದುಕು ಬಯಲಾಟ
ಮುಚ್ಚಿಟ್ಟರಷ್ಟೆ ಚೆಲುವು ನೋಟ
ಎಂದೆಲ್ಲ ಪಿಸುನುಡಿದು ಗಹಗಹಿಸುತ್ತದೆ

ಮುಖವಾಡಕ್ಕೆ ತಲೆಯಿಲ್ಲ, ಕಣ್ಣಿಲ್ಲ
ಹಿಂದೆ ಅಡಗಿದ ಮುಖಕ್ಕೆ ನೆಲೆಯಿಲ್ಲ
ಕಣ್ಣ ಓದಲು ಮರೆತವರ ಸಾಲಲ್ಲಿ
ತೋರಿಕೆಯ ಪ್ರೀತಿ ಗೀತಿ ಇತ್ಯಾದಿ
ಮುಖದೊಂದಿಗೆ ಮನಸಿಗೂ ಮುಚ್ಚಳ
ಸುತ್ತಮುತ್ತೆಲ್ಲ ಕೃತಕತೆಯ ಸಪ್ಪಳ

ಅರೆರೆ, ನನ್ನ ಮುಖದ ಮೇಲೂ
ಇರಬಹುದಲ್ಲ ಚೆಂದ ಮುಖವಾಡ
ನನ್ನದೆನ್ನುವುದೆಲ್ಲ ಚಂದವೇ ಆಗಬೇಕಿಲ್ಲ
ಕನ್ನಡಿ ನೋಡುವಾಗೆಲ್ಲ ಗೊಂದಲ
ಪ್ರತಿಬಿಂಬ ನನ್ನದಾ, ಅದರದಾ
ಕನಸಲ್ಲೂ ವಿವಿಧ ರೂಪ – ಸ್ವರೂಪ

ನಿಜ ಮುಖಗಳಿಲ್ಲದ ಜಗದಲಿ
ಬಣ್ಣದ ಮುಖವಾಡಗಳ ಸಂತೆ
ಒಂದಕ್ಕಿಂತ ಇನ್ನೊಂದು ಚೆಂದ
ನೋಟವ ನಂಬಿಸುವ ಮಾಟಕ್ಕೆ
ಬದಲಾಗೋ ಬಣ್ಣಗಳ ಪವಾಡ
ಕಣ್ಣಿಲ್ಲದ ತೂತು ಮುಖವಾಡ

* * * * * * * * *

 ದಿನಾಂಕ: 10.11.2014ರಂದು ‘ಕಹಳೆ’ ಯಲ್ಲಿ ಪ್ರಕಟಿಸಲ್ಪಟ್ಟಿದೆ – http://www.kahale.gen.in/2014/11/10-Nov.html  

 

ನೀನಿಲ್ಲದ ಗೋಕುಲದ ಬೇಸರ

ದೇವಾಮೃತಗಂಗೆ//ರಘುನಂದನ ಕೆ.

ನಿನ್ನ ತುಟಿಯಂಚಿನ ಕೊಳಲಾಗುವೆ
ಬಿಸಿಯುಸಿರ ಪುಳಕದಿ ರಾಗವಾಗುವೆ
ಅನುರಾಗದ ರವಳಿಯ
ತೇಲಿ ಬಿಡು ಶ್ಯಾಮ
ಯಮುನಾ ತೀರದಿ
ಹಾಡಾಗಿ ಹರಿಯಲಿ ಪ್ರೇಮ

ನನ್ನೆದೆಯ ರಾಗ ಕೇಳು
ಸಾಕು ಮಾಡೊ ವಿರಹಿ ಬಾಳು
ನಿಂತೆ ಇದೆ ಜೀವ ಗೋಕುಲದಲ್ಲಿ
ಜೀವಾಮೃತವಿದೆ ಎದೆಯಲ್ಲಿ
ದ್ವಾರಕೆ, ಮಧುರೆಗಳು ಸಾಕು
ಬಾ ನನ್ನೊಲವ ಬೃಂದಾವನಕೆ

ಗೋಧೂಳಿ ದೀಪ ಮನದಲ್ಲಿ
ಒಮ್ಮೆ ಹರಿವ ಯಮುನೆ ಕಣ್ಣಲ್ಲಿ
ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ
ಕಾಯುತ್ತ ನಿಂತೆ ಇದೆ ಜೋಕಾಲಿ
ಯಾರಿಗೆ ಹೇಳಲೋ ಗಿರಿಧರ
ನೀನಿಲ್ಲದ ಗೋಕುಲದ ಬೇಸರ

ಜೀವನವೇ ನದಿಯೋ
ನೀನಿರದೆ ಎಲ್ಲಿಯ ದಡವೋ
ನಾ ನಿನ್ನವನೆ
ನೀ ನನ್ನೊಳಗಾದವನೆ
ಶರಣಾರ್ಥಿಯು ನಾ ನಿನಗೆ
ಕರುಣಾಮೂರ್ತಿ ಜೊತೆಯಾಗೊ.

* * * * * * * * * *

ದಿನಾಂಕ: 29.12.2014ರಂದು ‘ಪಂಜು’ ಅಂತರ್ಜಾಲ ವಾರಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟಿದೆ.
http://www.panjumagazine.com/?p=9736

 

ಸಂಸ್ಕೃತದ ಸೊಬಗು ಬೆಳಗಲಿ…

ದೇವಾಮೃತಗಂಗೆ//ರಘುನಂದನ ಕೆ.

ಸಂಸ್ಕೃತ ಭಾಷೆಯ ಅಭ್ಯುದಯದ ಪ್ರಯತ್ನಗಳ ಕುರಿತಂತೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆ. ದೇವಭಾಷೆಯ ಮಡಿವಂತಿಕೆಯಿಂದ ಹೊರಬಂದು ಅದು ಬೇಡ ಎನ್ನುವ ಮತ್ತೊಂದು ಮಡಿವಂತಿಕೆ ಶುರುವಾಗಿದೆಯಾ. ಚರ್ಚೆಯ ಸಾರ ಏನೇ ಇರಲಿ, ಎಲ್ಲ ಭಾಷೆಯಲ್ಲಿ ಅದರದ್ದೇ ಆದ ಜ್ಞಾನ ಸಂಪತ್ತಿದೆ, ಆ ಭಾಷೆ ಏಕಿಲ್ಲ ಎನ್ನುವುದರ ಜೊತೆಯಲ್ಲೆ ಈ ಭಾಷೆಯ ಬೆಳಕಿಗೂ ಅವಕಾಶವಿರಲಿ ಎನ್ನುವ ಆಶಯ.

ಕವನ ಕಟ್ಟುವ ಪ್ರಕ್ರಿಯೆಯಲ್ಲಿ ಹೀಗೊಂದು ವಿಷಯವನ್ನ ಇಟ್ಟು, ನನಗೆ ಹೊಸದೆನಿಸುವ ಶೈಲಿಯ ಪ್ರಯತ್ನ ಮಾಡಿದ್ದಷ್ಟೆ, ಇದು ಕವನವಾಗಿದೆಯಾ ಎನ್ನುವುದು ಗೊತ್ತಿಲ್ಲ. ಬರಹಕ್ಕಾಗಿಯೇ ಬರೆದ ಬರಹವಿದು, ರಸ ಸ್ವಾದ ಕಡಿಮೆಯಾದರೆ ಕ್ಷಮೆಯಿರಲಿ.

* * * * * * * * *

ಮಡಿಯ ಮಡಿ ಒಂದೆಡೆಯಾದರೆ
ಮೈಲಿಗೆಯ ಮಡಿಯೊಂದೆಡೆ ಮೂಡುತಿದೆ,
ಹಿರಿಯವ್ವ ತಾಯಿಯ ತೊರೆದು
ಸುಕುಮಾರಿ ಮಗಳೊಂದೆ ಸಾಕೆನುತಲಿ
ಅಬ್ಬರಿಸುತಿಹ ಆಧುನಿಕ ಸಂಜಾತರೆದುರು
ಹಿರಿತನದ ಅರಿವು ಸಾಯುತಿದೆ ಕಾಣಾ;
ಶ್ರದ್ಧೆಯ ಶ್ರಾದ್ಧವ ನೋಡೋ ಯುಗ ಪುರುಷ!!

ಜನಭಾಷೆ ನುಡಿಭಾಷೆಗಳ ಮಿತಿಯೊಳ್
ಮುದಿಭಾಷೆಯ ಜ್ಞಾನಸಾಗರವು ಲವಣವಾಗಿ,
ಯುವಲತೆಯ ಲಾವಣ್ಯದ ಸೊಗಸೊಳ್
ಹಳೆ ಬೇರು ವಿಸ್ಮೃತಿಗೆ ಸರಿಯದಿರಲೆನುತ
ನೀರ ಹಾಯಿಸುವ ಆಸಕ್ತರ ಭಕ್ತಿಯನು
ಧಿಕ್ಕರಿಸುವ ಒಣ ಉನ್ಮಾದವಿರದಿರಲಿ;
ತೆಕ್ಕೆಯೊಳಗೆಳೆದು ಬೆಳೆಯಲಿ ಸಿರಿ ಹರುಷ!!

ಮುಚ್ಚಿದ ಬಿರು ಮೋಡಗಳ ಬೆಟ್ಟ ಸರಿಸಿ
ಅಭ್ಯದಯದೊಳ್ ಕಿರಣ ಚೆಲ್ವ ನೇಸರನ
ತಿಳಿವ ತಂಬೆಲರ ಬೆಳಕ ರಾಶಿಯೊಳ್,
ಚರಿತ್ರೆಯ ಮೇಲ್ಗಣ ಹಿಮ ಕರಗಿ
ಗುಪ್ತಾಕಾಶದ ಮಹಾ ತಾರೆ ಮಿನುಗಲ್
ಮಹಾತಾಯಿಗೀಗ ವಾರ್ಧಕ್ಯ ಕಳೆದು
ಸಂಸ್ಕೃತದ ಸೊಬಗ ದೊರಕಿಸೊ ಅನವರತ !!

 

ಶಬ್ದ ಕರಗಿಸು ಮೌನ ಕರುಣಿಸು – ಪ್ರಾರ್ಥನೆ

ದೇವಾಮೃತಗಂಗೆ//ರಘುನಂದನ ಕೆ.

1
ತಿರುಗುವ ಚಕ್ರ
ಓಡುವ ಕಾಲ
ಉರಿಯುತ್ತಿದೆ ದೀಪ
ಜೀವದ ಬತ್ತಿಗೆ
ಜನ್ಮಾಂತರದ ಎಣ್ಣೆ ಪಾಪ;

ಕಾಯುತ್ತಿದ್ದೇನೆ
ಸೂರ್ಯ ಮುಳುಗುತ್ತಾನೆಂದು
ಮಾತು ನಿಲ್ಲುತ್ತದೆಂದು
ಮೌನಕ್ಕೆ ನಾಲಿಗೆ ಬೇಡ
ಕರುಣೆಯಿರಲಿ, ಆಮೆನ್

2
ಪೇರಿಸಿಟ್ಟ ಕಲ್ಲುಗಳ ಗೋಡೆ
ಹಾರಾಡುವ ಶಬ್ದ ಭಂಡಾರ
ಅರೆ ಬರೆ ಎಚ್ಚರ
ಬದುಕಿನ ಪುಸ್ತಕದಲ್ಲಿ
ಬೇಕೇ ಅಷ್ಟೆಲ್ಲ ಅಕ್ಷರ

ಗೊತ್ತಿದೆ, ಸುಲಭವಲ್ಲ
ಶಬ್ದಕೋಶ ಓದುವುದು
ಮುಗಿಯಲಿ ಬೇಗ
ಮೌನಕ್ಕೆ ಗ್ರಂಥಗಳಿಲ್ಲ
ದಯೆಯಿರಲಿ, ಆಮೆನ್

3
ಅರೆರೆ, ಎಷ್ಟೊಂದು ಶಬ್ದಗಳಿವೆ
ಮಾತೇ ಮುಗಿಯುತ್ತಿಲ್ಲ ಇಲ್ಲಿ
ಮನಸ್ಸಿಗೂ ಶಬ್ದಗಳದೇ ಹಂಗು
ಇನ್ನು ಮನುಷ್ಯನ ಮಾತೇಕೆ..??

ಮಾತು ಮಥಿಸಿ
ಅರ್ಥ ಅರಳುವ ವೇಳೆಗೆ
ಸೂರ್ಯನೂ ಕರಗಿ ರೆಪ್ಪೆ ಭಾರ
ಅರ್ಥ ನಿರರ್ಥಕವಾಗಿ
ಕಾಲ ವ್ಯರ್ಥವಾಗದಂತೆ
ಸ್ವಲ್ಪ ಎಚ್ಚರ ಕೊಡು,
ಹಾಗೇ ಮೌನವನ್ನೂ…!!

 

ಶಿಶಿರ ಸಲ್ಲಾಪ – 2

ದೇವಾಮೃತಗಂಗೆ//ರಘುನಂದನ ಕೆ.

1
ಮಾಗಿಯ ಇರುಳ
ಬೆರಳ ಹಿಡಿಯಲ್ಲಿ,
ಚಂದ್ರ ಕರಗಲು
ನಾಡಿ ನಾಡಿಗಳಲ್ಲಿ ಸುಖವರಳಿ
ಉನ್ಮತ್ತ ಪೂರ್ಣ ಕುಂಭ; ರಸಪಾತ್ರೆ

ಎಲ್ಲಿಯೋ ರಸ ಸ್ಪರ್ಶ
ಮತ್ತೆಲ್ಲಿಯೋ ಉದ್ದೀಪನ
ಅಮೃತ ರಸೋನ್ಮತ್ತದಲ್ಲಿ
ಮುದುಡಿ ಮಲಗಿದ್ದ ಸರ್ಪಕ್ಕೀಗ
ಸಹಸ್ರಾರದ ಬಯಕೆ

2
ಶಿಶಿರದ ಕನಸುಗಳಲ್ಲಿ
ಹಿಮಕನ್ಯೆಯ ಬಿಸಿ
ಉಸಿರಿಗೂ ಪುಳಕ..
ಮಂಜು ಮುಸುಕಿದ
ಹರೆಯದ ಮುಂಜಾವಲ್ಲಿ
ನೆನಪುಗಳಿಗೂ ನಡುಕ;

ಎದೆಯಂತಃಪುರದ
ತಲೆಬಾಗಿಲ ಮುಕುಟದಲ್ಲಿ
ಸ್ಪರ್ಶಮಣಿ ಮೀಂಟಲು
ಸಕಲಾಶೆಯ ಸುರತ
ಮಾಗಿಯ ಹೂ ಚುಂಬನ
ಶೃಂಗಾರ ಅಭ್ಯಂಜನ

3
ಆಕಾಶದಂಗಳದ ಕೆಳಗೆ
ಅಂಗಾತ ಮೈ ತೆರೆದು
ಮಲಗಿ ಲೆಕ್ಕ ಹಾಕಿದ್ದು
ತಾರೆಗಳನ್ನಲ್ಲ
ಮೈಯ ಮಚ್ಚೆಗಳನ್ನ
ಚಂದ್ರಕಲಾ ಶೋಭಿತೆ..

ಬಿಸಿಯುಸಿರ ಏರಿಳಿತಕ್ಕೆ
ಲೆಕ್ಕತಪ್ಪಿ ಕಂಗಾಲಾದವಗೆ
ದಾರಿತೋರಿ; ಇರುಳ
ಕೆರಳಿಸಿದ ರೀತಿಗೆ
ಸಾಂಖ್ಯಾ ಶಾಸ್ತ್ರ ದಿಕ್ಕುತಪ್ಪಿ
ವಾತ್ಸಾಯನ ಬಾಚಿ ತಬ್ಬಲು

ಇರುಳ ರಂಗ ಮಂಚದಲ್ಲಿ
ಶೃಂಗಾರ ಶತಕ ಸಂಕೀರ್ತನ!!

 

ಶಿಶಿರ ಸಲ್ಲಾಪ – 1

ದೇವಾಮೃತಗಂಗೆ//ರಘುನಂದನ ಕೆ.

1
ಮಾಗಿಯ ಬಿರು ಛಳಿಯ
ಇರುಳಲ್ಲೇ ಇರಬೇಕು
ಹೀಗೆಲ್ಲ ಜ್ಞಾನೋದಯವಾಗುವುದು;

ಮತ್ತೇನಿಲ್ಲ ಇಷ್ಟೇ
ಶರಣಾಗದೇ ಭಾವ ಸ್ಪುರಿಸದು
ಬೆತ್ತಲಾಗದೇ ಭವ ಕಳೆಯದು!!

2
ಸಮುದ್ರ ತೀರದ ಬಯಲ
ಇರುಳ ನೆರಳ ಸೆರಗಲ್ಲಿ
ಶಿಶಿರದ ಛಳಿ ಬೆಚ್ಚಗಾದಂತೆ

ಅರಳಿ ಕೆರಳಿ ಹೊರಳಿ
ಬಳಲಿದಾಗ
ಬೆವರಿದ ನಮ್ಮಿಬ್ಬರ ಮೈ ತುಂಬ
ಮರಳು ಮರಳು !!

ಅಲೆಯ ಸಪ್ಪಳಕ್ಕೀಗ
ಪುರುಷ ಸೂಕ್ತದ ಮೊಳಗು !!
ಯತ್ ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ?

3
ಶಿಶಿರದ ನಾಭಿ ಕಂಪನಕೆ
ಇರುಳೊಳಗೆ ಹರೆಯ ಬಿರಿದು
ಹೂವೆದೆ ಅರಳಿ ಘಮ ಕೆರಳಿ
ಸ್ವಪ್ನ ಸುಖದ ಅಮಲು

ನಮ್ಮೊಳಗು ಕರಗಿ
ಚಡಪಡಿಸೊ ಹೊತ್ತು
ಪರವಶದ ಉಸಿರಲ್ಲಿ
ಸುಮಧುರ ನೋವ ಘಮಲು

ಉನ್ಮತ್ತ ಸುಪ್ತ ಸರ್ಪಿಣಿಯ ಠೇಂಕಾರಕೆ
ಮೂಲಾಧಾರ, ಸ್ವಾಧಿಷ್ಟಾನ ಪ್ರಕಂಪನ