RSS

Category Archives: ಜ್ಷಾನಜ್ವಾಲೆಯ ಶಿಶು

ಸೂರ್ಯ ಚಂದ್ರರ ಬೆಳಕ ಪಥದಲ್ಲಿ – ಬೆಳವಣಿಗೆಯ ಜಾಡು ಹಿಡಿದು

ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ.

ಸೂರ್ಯ, ಅವ ಜಗದ ಒಡೆಯ, ಬೃಹ್ಮಾಂಡದಲ್ಲಿ ಅರಿವಿಗೆ ನಿಲುಕಿದ ಜೀವರಾಶಿಯ ಜೀವ ಆತ. ಭೂಮಿಗೆ ಅವನಿಂದಲೇ ಬೆಳಕು, ಬದುಕಿಗೆ ಕಾರಣಕರ್ತ, ಕಾಲದ ಗೆಳೆಯ. ಅವನ ಚಲನೆಯ ಕಾಲು ನಮಗೆ ಕಾಲ. ಅವ ಸ್ವಯಂ ಪೂರ್ಣ, ದೇಹದೊಳಗೆ ಅಗ್ನಿಯಾದವ, ಆತ್ಮದೊಳಗೆ ಜ್ಞಾನವಾಗಬಲ್ಲವ, ಭೂಮಿ, ಆಕಾಶ, ಮತ್ತು ಅಂತರಿಕ್ಷಗಳನ್ನೆಲ್ಲ ಆವರಿಸಿದ ತೇಜೋಮಯನಾದವ, ಬುದ್ಧಿ ವಿವೇಕಗಳನ್ನು ಬೆಳಕಿನೆಡಗೆ ನಡೆಸುವವ ಎನ್ನುತ್ತದೆ ಆಧ್ಯಾತ್ಮ.

ಚಂದ್ರ, ರಾತ್ರಿಯ ಆಕಾಶದ ಲಾಂದ್ರ. ವಿಜ್ಞಾನಕ್ಕೆ ಧೂಳ ಕಣದ ರಾಶಿ, ಮಕ್ಕಳಿಗೆ ಚುಕ್ಕಿಗಳ ರಾಜ, ವಿರಹಿಗಳ ಮೋಹ, ಸಮುದ್ರದ ದಾಹ. ಮನಸಃ ಚಂದ್ರಮಾ ಎಂದಿದೆ ಉಪನಿಷತ್ತು. ಮನಸ್ಸಿನ ಅಧಿದೇವತೆ ಚಂದ್ರ, ಸಮುದ್ರಕ್ಕೂ ಚಂದ್ರನಿಗೂ ನೇರ ನಂಟು. ಮನಸ್ಸು ಸಮುದ್ರವಾಗುತ್ತದೆ ಬೆಳದಿಂಗಳಲ್ಲಿ ಎನ್ನುತ್ತದೆ ಕಾವ್ಯ ಪ್ರಪಂಚ. ಚಂದ್ರ ಯಾವತ್ತಿಗೂ ಸ್ವಯಂ ಪೂರ್ಣನಲ್ಲ. ಬೆಳಕಿಗೆ ಸೂರ್ಯನನ್ನ ಬದುಕಿಗೆ ಭೂಮಿಯನ್ನ ನಂಬಿದವ. ಮನಸ್ಸೂ ಅವನಂತೆ, ಆಸೆ, ಬೆಳದಿಂಗಳ ತಾಪ ಆದರೆ ಪೂರ್ಣತೆಯಿಲ್ಲ.

* * * * * * * * * *

ದೊಡ್ಡದು ಚಿಕ್ಕದನ್ನ ಆಕರ್ಷಿಸುತ್ತದೆ, ನುಂಗುತ್ತದೆ, ಆವರಿಸುತ್ತದೆ. ಭೂಮಿ ಚಂದ್ರನನ್ನ, ಸೂರ್ಯ ಭೂಮಿಯನ್ನ ಆಕರ್ಷಿಸುವಂತೆ. ಶಿಶ್ಯನೂ ಗುರುವಾಗಬಲ್ಲ, ಗುರು ಶಿಶ್ಯನೂ. ಚಿಕ್ಕ ಸಂಗತಿಯಿಂದ ದೊಡ್ಡ ಪಾಠ ಕಲಿತವರ್ಯಾರೂ ಚಿಕ್ಕವರಾಗಿ ಉಳಿಯುವುದಿಲ್ಲ. ಹಗಲಿನ ಬೆಳಕು, ಬದುಕಿಸುತ್ತದೆ ಹಾಗೇ ಸುಡುತ್ತದೆ ಕೂಡ. ಬದುಕಿಸುವುದೆಲ್ಲ ಹಾಗೇ, ಬೇಯಿಸುತ್ತದೆ, ಉರಿಯುತ್ತದೆ. ರಾತ್ರಿಯ ಕತ್ತಲಿನೊಳಗೊಂದು ಬೆಳಕು, ಬೆಳದಿಂಗಳು. ಅದು ಸ್ವಂತ ಬೆಳಕಲ್ಲ, ಪ್ರತಿಫಲನ. ಒಂದು ಹಗಲು ಸುಡುತ್ತದೆ, ಇನ್ನೊಂದು ಇರುಳು ತಂಪೆರೆಯುತ್ತದೆ. ಒಂದು ಇನ್ನೊಂದನ್ನು ಹಾಯ್ದು ಬರುವಾಗ ಈ ಬದಲಾವಣೆ, ಜಗದ ಸೊಬಗು. ಬದಲಾಯಿಸುವುದು ಸಾಮಾನ್ಯದ ಕಾರ್ಯವಲ್ಲ. ಚಂದ್ರನಾಗುವುದು ಸುಲಭದ ಮಾತಲ್ಲ.

ಬದುಕಿನಲ್ಲೂ ಹೀಗೇಯೇ, ದೊಡ್ಡ ಸಂಗತಿಗಳೆಲ್ಲ ದೊಡ್ಡವರಂತೆ ಪ್ರಖರವಾಗಿಯೇ ಉರಿಯುತ್ತದೆ, ಸೂರ್ಯನಂತೆ. ದೂರದಲ್ಲಿ ಪಡೆದವರಿಗೆ ಬೆಳಕು, ಹಿತವಾದ ಶಾಖ. ಹತ್ತಿರ ಹೋದಂತೆ ಪ್ರಖರತೆಯ ತಾಪ. ಹತ್ತಿರವಿದ್ದೂ ತಡೆದವ ಬೆಳೆದಾನು. ತಡೆಯಬಲ್ಲವ ಮಾತ್ರ ಶಾಖವನ್ನೂ ಕರಗಿಸಿ ತಂಪಾಗಿಸಿಯಾನು. ಚಂದ್ರ ಬೆಳಕಿನ ಪರಿವರ್ತನೆಗೊಂದು ಮಾಧ್ಯಮ. ಸ್ವಂತದ್ದಲ್ಲ ಆದರೂ ಚಂದ್ರಮನ ಬೆಳಕು ಹಿತ. ಭೂಮಿಗಿಂತ ಹತ್ತಿರದಿಂದ ಕಂಡವ ಸೂರ್ಯನ ಆತ. ಅವನೊಡಲಿಗೆ ಬೀಳ್ವ ಬೆಳಕು ಪ್ರಖರವೇ ಇದ್ದೀತು. ಪ್ರಖರತೆ ಅವನ ಹಾಯ್ದು ಬರುವಾಗ ತಂಪು. ಮಾಧ್ಯಮವಾಗುವುದು ಸುಲಭವಲ್ಲ. ತನ್ನದಲ್ಲದ್ದನ್ನ ಹಂಚುವುದೂ ಸಾಧನೆಯಲ್ಲದ್ದಲ್ಲ. ಎಲ್ಲ ಸೂರ್ಯರಾಗದಿರಬಹುದು, ಚಂದ್ರನಾಗುವುದು ಕಡಿಮೆಯದ್ದಲ್ಲ.

* * * * * * * * * *

ಚಂದ್ರ ಬುದ್ಧಿಯ ಕೆಣಕುತ್ತಾನೆ, ಸೂರ್ಯ ಹೃದಯವನ್ನ ಬೆಳಗುತ್ತಾನೆ. ಮನಸ್ಸಿನ ದೇವತೆ ಬುದ್ಧಿಯ ಕೆಡಿಸಲೂ ಬಲ್ಲ, ಉಳಿಸಲೂ ಬಲ್ಲ. ಜ್ಞಾನದ ದೇವತೆ ಉರಿಸಲೂ ಬಲ್ಲ, ಬೆಳಗಲೂ. ತಂಪೆರೆಯುವುದೆಲ್ಲ ಬದುಕಿಸುವುದಿಲ್ಲ, ಸುಡುವುದೆಲ್ಲ ಕೊಲ್ಲುವುದೂ ಇಲ್ಲ. ಯಾರಿಗೆ ಯಾರು ಕಡಿಮೆ. ಹೊಳೆವುದು ಬೇರೆ, ತಿಳಿವುದು ಬೇರೆ. ಹೊಳೆಯುವುದು ಹೃದಯದ ಹಸಿವೆ, ತಿಳಿವುದು ಬುದ್ಧಿಯ ಕಸರತ್ತು. ಹೃದಯ ಹಸಿದಾಗ ಹೊಳೆದದ್ದು ಸಿಕ್ಕೀತು. ಹೊಳೆದದ್ದು ಬುದ್ಧಿಗೆ ನಿಲುಕಿದಾಗ ತಿಳಿವು ಧಕ್ಕೀತು. ಒಂದು ಜ್ಞಾನ, ಇನ್ನೊಂದು ವಿಜ್ಞಾನ. ಜ್ಞಾನವಿಲ್ಲದೆ ವಿಜ್ಞಾನವಿಲ್ಲ. ಹೃದಯ ನಿಂತಂದು ಬುದ್ಧಿ ಓಡುವುದಿಲ್ಲ. ಬುದ್ಧಿಗೆ ಶಕ್ತಿ ಹೃದಯ ಬಡಿತದಿಂದ. ಹೃದಯದಲ್ಲಿ ಹಸಿವೆ ಇದ್ದವ ಬೆಳೆದಾನು, ಬುದ್ಧಿ ಹಸಿದವ ಕಳೆದಾನು.

ಒಂದು ಹಗಲ ಬೆಳಕು, ಇನ್ನೊಂದು ಇರುಳ ಬೆಳಕು. ಜೀವರಾಶಿಯ ಬದುಕಿಗೆ ದಿನನಿತ್ಯದ ದೀಪಾವಳಿ. ಕಲಿಕೆಗೆ ಹಗಲು ರಾತ್ರಿಗಳ ಪಾಠ. ಕಾಲನ ದಾರಿಯಲ್ಲಿ ಕಲಿಕೆ ನಿರಂತರ. ಒಂದಕ್ಕೊಂದು ಬೆಸೆದು ಒಂದರೊಳಗೊಂದು ಸೇರಿ ವಿಶ್ವ ಚಲನೆಯ ಸೂತ್ರ. ಇಲ್ಲಿ ಅಲ್ಲದ್ದು ಇಲ್ಲ, ಎಲ್ಲವೂ ಸಲ್ಲುವಂತದ್ದೆ. ಒಳಗಿನ ಉರಿ ಜಗವನ್ನೇ ಬೆಳಗೀತು. ಇಲ್ಲವೆ ಮಾಧ್ಯಮವಾಗುವಷ್ಟಾದರೂ ಧಕ್ಕೀತು. ಚಲನೆ, ಬೆಳವಣಿಗೆ ಜೀವಂತಿಕೆಯ ಲಕ್ಷಣ. ಅಂತರಂಗದಲ್ಲೂ ಬಹಿರಂಗದಲ್ಲೂ ಚಲನೆ ನಿಲ್ಲದಿರಲಿ. ನುಡಿವ ಬೆರಗಲ್ಲೂ ನಡೆವ ಪಥ ತೆರೆಯಲಿ. ಬೆಳಕ ಪಥ ಬದುಕನ್ನ ಪ್ರಚೋದಿಸಲಿ.

* * * * * * * * * *
ದಿನಾಂಕ: 02.12.2014ರಂದು ‘ಅವಧಿ’ಯಲ್ಲಿ ಪ್ರಕಟಿಸಲ್ಪಟ್ಟಿದೆ.

Advertisements
 

ಕತ್ತಲೊಡಲಿನ ಬೆಳಕ ಕಾಣ್ಕೆಗೊಂದು ಹಬ್ಬ

ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ.

ಬೆಳಕ ಹಬ್ಬ ಬೆಳಗುವ ಹಬ್ಬ ದೀಪಾವಳಿ. ಬೆಳಕನ್ನೇ ಬೆಳಗಿಸಲು ಬೆಳಕಿನ ಹಬ್ಬ. ಅರೆ, ಬೆಳಕಿರದ ಕತ್ತಲೆಗೂ ಬೇಕಿತ್ತಲ್ಲ ಒಂದು ಹಬ್ಬ. ಇಲ್ಲ, ಕತ್ತಲೆನ್ನುವುದು ಅಜ್ಞಾನ ಬೆಳಕೆನ್ನುವುದು ಜ್ಞಾನ, ಅಜ್ಞಾನಕ್ಕೆ ಹಬ್ಬವಿಲ್ಲ; ಇದು ನಂಬಿಕೆ, ನಾವು ನಂಬಿದ್ದು ನಂಬಿಸಿಕೊಂಡಿದ್ದು ನಂಬಿಕೆಯಾಗುತ್ತದೆ. ಎಲ್ಲ ನಂಬಿಕೆಗಳೂ ಸತ್ಯವಲ್ಲ. ಕತ್ತಲು ಅಜ್ಞಾನವೂ ಅಲ್ಲ. ಬೆಳಕನ್ನ ಬೆಳಗಿಸಿದ್ದೇ ಕತ್ತಲು. ಬೆಳಗಿಸಿದ ಪೂರ್ಣತೆಗೆ ಅಜ್ಞಾನದ ಲೇಪ ನಮ್ಮದು. ಕತ್ತಲಿನ ಬೆಳಕ ಹುಡುಕುವ ಹಬ್ಬವೂ ಆದೀತು ದೀಪಾವಳಿ. ಬರೆದ ಗಾಢ ಸಾಲುಗಳ ಮಾತಿನ ನಡುವೆ ಮೌನವಿರುತ್ತದೆ. ಹಚ್ಚಿದ ಸಾಲು ಹಣತೆಗಳ ಬೆಳಕ ಬುಡದಲ್ಲಿ ಕತ್ತಲೆ ಇಣುಕುತ್ತದೆ. ಬೆಳಕಿನ ಸಾಲಿನ ನಡುವೆ ಕತ್ತಲೆಯ ಕಾಲು. ಎಲ್ಲವನ್ನೂ ಬೆಳಕು ಬೆಳಗಿಸುತ್ತದೆ. ಬೆಳಕನ್ನ ಬೆಳಗಿಸಿದ್ದು ಕತ್ತಲೆಯಾ..?? ದೀಪಗಳ ಸಾಲಿನಲ್ಲಿ, ದೀಪಾವಳಿಯ ಬೆಳಕಿನಲ್ಲಿ ಕತ್ತಲೆಯ ಹೊಳಪನ್ನು ಕಂಡವಗೆ ಬದುಕೂ ಹಬ್ಬವಾದೀತು.

* * * * * * * *

“ಎಲ್ಲರನ್ನೂ ಬೆಳಕು ಬೆಳೆಸುತ್ತದೆ, ಎಲ್ಲವನ್ನೂ ಬೆಳಕು ಬೆಳಗಿಸುತ್ತದೆ”
“ಬೆಳಕನ್ನ ಬೆಳೆಸುವಂತದ್ದೂ ಒಂದಿರಬೇಕಲ್ಲ..?”
“ಬೆಳಕು ಬೆಳೆಯುವುದೂ ಅಳಿಯುವುದೂ ಕತ್ತಲಲ್ಲಿ”
“ವಿಚಿತ್ರ, ಕತ್ತಲ ಗರ್ಭದಿಂದಲೇ ಬೆಳಕಿನ ಹುಟ್ಟು, ಆದರೂ ಕತ್ತಲು-ಬೆಳಕು ವಿರುದ್ಧ ಯಾಕೆ ಹೀಗೆ?”
“ಹುಟ್ಟು-ಸಾವು ವಿರುದ್ಧವಲ್ಲ, ಎರಡು ಧ್ರುವ, ಎರಡು ತುದಿ. ತನ್ನರಿವಿಗೆ ನಿಲುಕಿದಂತೆ ವ್ಯಾಖ್ಯಾನ ಮನುಷ್ಯ ಗುಣ. ಸಾವೆಂದರೆ ಹುಟ್ಟು, ಕತ್ತಲೆಂದರೆ ಬೆಳಕು. ಅರಿವು ವಿಸ್ತರಿಸಿದಂತೆ ಎರಡೂ ಒಂದೇ ಆದೀತು.”
“ಕತ್ತಲು ಬೆಳಗುವ ಜ್ಯೋತಿಯೇ, ಹೇಗೆ ಇದು?”
“ಕತ್ತಲಲ್ಲಿ, ಕಣ್ಮುಚ್ಚಿದ ಅಂತರಂಗದ ಗಾಢ ಕಾರ್ಗತ್ತಲಲ್ಲಿ ಬೆಳಕಿನ ಹುಟ್ಟು, ಕತ್ತಲು ಕತ್ತಲಲ್ಲ ಆತ್ಮದ ಬೆಳಕು, ಅಲ್ಲಿ ಜ್ಞಾನ ಅರಳುತ್ತದೆ, ಬೆಳಗುತ್ತದೆ.”

* * * * * * * *

ಇಂದ್ರಿಯಕ್ಕೆ ನಿಲುಕಿದ್ದು ಬೆಳಕು, ಇಂದ್ರಿಯಾತೀತ ಕತ್ತಲು. ಕಾಣದಿರುವುದೆಂದರೆ ಕತ್ತಲಲ್ಲಿರುವುದು. ಕತ್ತಲನ್ನೇ ಕಂಡವಗೆ ಕಾಣುವುದು ಇನ್ನೇನು? ಕಾಣ್ಕೆಗೆ ಬೆಳಕಾದರೂ ಆದೀತು, ಕತ್ತಲಾದರೂ ಸರಿಯೇ. ಶೂನ್ಯದಿಂದ ಏನು ತೆಗೆದರೂ ಶೂನ್ಯವೇ, ಪೂರ್ಣದಿಂದ ಏನು ತೆಗದರೂ ಪೂರ್ಣವೇ. ಕತ್ತಲಿಂದ ಕತ್ತಲನ್ನು ತೆಗೆದರೂ ಕತ್ತಲೆಯೇ ಅಥವಾ ಬೆಳಕೂ ಕತ್ತಲೆಯಲ್ಲಿ ಪೂರ್ಣವಾದೀತು. ಕಾಣುವವರಿಗೆ ಕತ್ತಲು ಕತ್ತಲೂ ಅಲ್ಲ, ಬೆಳಕು ಬೆಳಕೂ ಅಲ್ಲ. ಬೆಳಕಲ್ಲಿ ತೋರುವುದಕ್ಕಿಂತ ಕತ್ತಲಲ್ಲಿ ಅಡಗಿರುವುದೇ ಹೆಚ್ಚು, ಆಂತರ್ಯದಲ್ಲೂ ಬಾಹ್ಯದಲ್ಲೂ. ಎಲ್ಲವೂ ಆರಂಭ ಬೆಳಕಿನಿಂದ ಅಥವಾ ಬೆಳಕಿಗೆ ಬಂದಂದಿನಿಂದ, ಜೀವದಲ್ಲೂ ಜೀವನದಲ್ಲೂ. ಮುಕ್ತಾಯ ಬೆಳಕು ಮುಗಿದಾಗ ಅಥವಾ ನಾವು ಬೆಳಗಿದಾಗ, ಮುಕ್ತಾಯ ಪೂರ್ಣಗೊಂಡಾಗ, ಕತ್ತಲಲ್ಲಿಳಿದಾಗ ಕೂಡ ಆದೀತು.

ಲೋಕದ ಬೆಳಕು ಸೂರ್ಯ, ಬೆಳಕಿನ ಗೋಳ. ಎಲ್ಲ ಬಣ್ಣಗಳ ನುಂಗಿ ಬೆಳ್ಳಗಾದವ. ಶಕ್ತಿ ಮುಗಿದಾಗ ಆತನಿಗೂ ಕತ್ತಲ ಮಡಿಲು ಬೇಕು. ಮಹಾದೈತ್ಯ ಪೂರ್ಣನಾದಾಗ ಕಪ್ಪು ರಂಧ್ರ ಎನ್ನುತ್ತದೆ ವಿಜ್ಞಾನ. ಮುಗಿದ ಸೂರ್ಯ ಬೆಳಕನ್ನೂ ನುಂಗುತ್ತಾನೆ ಕತ್ತಲ ಗರ್ಭದಲ್ಲಿ ಕುಳಿತು. ಪೂರ್ಣತೆಗೆ ಕತ್ತಲೆಯ ಮಡಿಲು. ಸೂರ್ಯನಂತ ಸಹಸ್ರ ನಕ್ಷತ್ರಗಳು ತೇಲಾಡುತ್ತಿರುವುದು ಬ್ರಹ್ಮಾಂಡವೆಂಬ ಕತ್ತಲ ಒಡಲಲ್ಲಿ. ಸಹಸ್ರಬಾಹುಗಳ ಬೆಳಕಿನ ಕಿರಣಗಳಿಗೂ ಕತ್ತಲೆಯ ಅಗಾಧ ಆಕಾಶದ ಅವಕಾಶ ಬೇಕು ಅಸ್ತಿತ್ವಕ್ಕೆ. ಕತ್ತಲೆಯ ಸೆರಗಿಗೆ ನಕ್ಷತ್ರಗಳ ಸಿಂಗಾರದ ಸೊಬಗು. ಆಯಸ್ಸು ತೀರಿದಾಗ ನಿಶ್ಚಲವಾಗುವುದೂ ಕತ್ತಲಲ್ಲೇ ಅದು ನಕ್ಷತ್ರವಾದರೂ, ಹಣತೆಯಾದರೂ..!!

ಬೆಳಕಿರುವಾಗ ಕತ್ತಲೆಯ ಭ್ರಮೆ, ಕತ್ತಲಿರುವಾಗ ಬೆಳಕೇ ಭ್ರಮೆ. ಕಾಣ್ಕೆಗೆ ಬೆಳಕು ಬೇಕೆಂದೇನೂ ಇಲ್ಲ. ಮನಸ್ಸು, ಜ್ಞಾನ, ಅರಿವು ಸಾಕು. ಅರಿವು ಬೆಳಕೊಂದೇ ಅಲ್ಲ, ಕತ್ತಲೂ ಹೌದು. ವಿಶ್ವಕ್ಕೆ ಬ್ರಹ್ಮಾಂಡಕ್ಕೆ ಹಗಲು ಇರುಳುಗಳ, ಬೆಳಕು ಕತ್ತಲುಗಳ ವ್ಯತ್ಯಾಸವೆಲ್ಲಿಯದು. ಕತ್ತಲ ನೋಡಲು ಬೆಳಕು ಬೇಕಾ? ಹುಟ್ಟಿದ ಗರ್ಭ, ಸತ್ತು ಸಮಾಧಿ ಎರಡೂ ಕತ್ತಲೇ. ಕತ್ತಲೆ ಇದ್ದರೆ ಮಾತ್ರ ಬೆಳಕಿಗೂ ಜಾಗ. ಮನ ಬೆಳಗಿಸಿಕೊಂಡವರಿಗೆ ಕತ್ತಲೂ ಬೆಳಕ ರಾಶಿ, ಬೆಳಕ ರಾಶಿಯೂ ತುಂಬಿಕೊಳ್ಳುವಷ್ಟು ಕತ್ತಲೆ. ಬೆಳಕು ಬೆಳೆದಷ್ಟೂ ಮಂದ, ಕತ್ತಲು ಬೆಳೆದಷ್ಟೂ ಗಾಢ. ಕತ್ತಲು ಶಾಂತ, ಬೆಳಕು ಅಶಾಂತ ಅಹಂಕಾರ. ಎಲ್ಲ ಬಣ್ಣಗಳು ಸೇರಿದಾಗ ಬೆಳಕು, ಎಲ್ಲ ಬಣ್ಣಗಳ ನುಂಗುವುದು ಕತ್ತಲು. ಬೆಳಕೆಂದರೆ ಬಿಳಿಯ ಬಣ್ಣ ಅಥವಾ ಬಣ್ಣದಿಂದ ಗುರುತಿಸಲ್ಪಡುವ ಅನುಭವ ಎನ್ನುವುದು ವ್ಯಾಖ್ಯಾನ. ಕತ್ತಲೆಂದರೆ ಕಪ್ಪು ಅಥವಾ ಪ್ರಪಂಚದ ಎಲ್ಲ ಬಣ್ಣಗಳ ನುಂಗಿದ ಕೃಷ್ಣ, ಮತ್ತವನ ವರ್ಣ.

* * * * * * * *

ಹೊರ ಪ್ರಪಂಚದ ದರ್ಶನಕ್ಕೆ ಬೆಳಕು ಬೇಕು. ಸ್ವಯಂ ಅರಿವಿನ ಬೆಳಕು ಅರಳಲು ಕತ್ತಲು ಬೇಕು. ಕಣ್ಣು ಜೀವದ ಬೆಳಕು, ಜೀವನದ ಸೂರ್ಯ. ಕಣ್ಣಿರದವನಿಗೂ ಅವನ ಬೆಳಕು ಇದ್ದೀತು, ದೇಹದ ಕಣ ಕಣದಲ್ಲೂ ಬೆಳಕು ಸ್ಪುರಿಸೀತು. ಕಣ್ಮುಚ್ಚಿದವನಿಗೂ ಅಂತರಂಗದಲ್ಲಿ ಬೆಳಕು ಹೊಳೆದೀತು. ಮೇಲ್ಮುಖ ಜ್ವಾಲೆಯ ಹಣತೆ, ದೀಪ ಅಂತರಾಳದಲ್ಲೂ ಉರಿದರೆ ಬೆಳವಣಿಗೆ. ಎಲ್ಲ ಕಣ್ಣುಗಳ ಮುಚ್ಚಿದಾಗ ಸಿಗುವ ಕತ್ತಲೆಯೇ ಪೂರ್ಣತ್ವ. ಅದೇ ಧ್ಯಾನದ ಬೆಳಕೂ ಕೂಡ. ಅಲ್ಲಿ ಬೆನ್ನ ಹುರಿಯ ಕಣ್ಣು ತೆರದೀತು, ಕುಂಡಲಿನಿಯ ಕತ್ತಲು ಕರಗೀತು. ಕತ್ತಲ ಪರಿಚಯವಾಗಲು ಬೆಳಕ ಪಥ ಅನಿವಾರ್ಯ. ಬೆಳಕು ಹೆಚ್ಚಾದರೆ ಆಗಲೂ ಕತ್ತಲೆಯೇ. ನೋಡುವ ಕಣ್ಣಿನ ಅಳಿವಿಗೆ ತಕ್ಕಷ್ಟು, ಒಳಗಣ್ಣಿಗೆ ಸಿಕ್ಕಷ್ಟು. ಬೆಳಕು ಚೆಲ್ಲುವ ಸುರ್ಯ ಜೀವನಕ್ಕೂ ಸುಡು ಬೆಂಕಿಗೂ ಕಾರಕ. ಬೆಳಕಿನಿಂದ ವಸ್ತುಗಳ ಗುರುತು, ಜ್ವಲಿತ ಬೆಳಕನ್ನು ನೋಡುವುದೂ ಸುಲಭವಲ್ಲ. ಕತ್ತಲೊಳಗಿನ ಬೆಳಕಿನಿಂದಲೇ ದರ್ಶನ, ಅಂತರಂಗಕ್ಕೂ ಬಹಿರಂಗಕ್ಕೂ.

ಕತ್ತಲನ್ನ ಜೀರ್ಣಿಸಿಕೊಂಡ ಬದುಕಿಗೆ ಬೆಳಕು ಸರಳ, ಬೆಳಕಿಲ್ಲದಿರುವುದೂ ಸುಲಭ, ಅರಿವು ಮೂಡಬೇಕು ಅಷ್ಟೆ. ಪ್ರಪಂಚದಲ್ಲಿ ಯಾವುದೂ ಮುಗಿಯುವುದಿಲ್ಲ. ಕೆಡುಕನ್ನ ಕತ್ತಲಿಗೆ ಒಳಿತನ್ನ ಬೆಳಕಿಗೆ ಆರೋಪಿಸುವುದು ಮಾನವನ ಬುದ್ಧಿಯ ಮಿತಿ. ಒಳಿತಲ್ಲದ ಕೆಡುಕಲ್ಲದ ಸ್ಥಿತಿಯೂ ಇದ್ದೀತು, ಅದು ಕತ್ತಲು ಬೆಳಕಾಗುವ, ಬೆಳಕು ಕತ್ತಲಾಗುವ ಸ್ಥಿರ ನಿಶ್ಚಲ ನಿರ್ವಾತ. ಬೆಳಕು ಕತ್ತಲು ಒಂದರೊಳಗೊಂದು ಬೆರೆತಿವೆ, ನಮಗೆ ಬೇರೆ ಮಾಡಿ ನೋಡುವ ಆಟ. ಬೆಳಗುವ ಹಬ್ಬ ದೀಪಾವಳಿ ಬೆಳಕ ಮಡಿಲಲ್ಲಿ ಕತ್ತಲನ್ನೂ ಕತ್ತಲೊಡಲಿನ ಬೆಳಕನ್ನೂ ನಮಗೆ ತೋರಿಸಲಿ. ಅಂತರಂಗದ ಕತ್ತಲಲ್ಲಿ ಬಾಹ್ಯದ ಬಣ್‍ಬಣ್ಣದ ಬೆಳಕು ಕರಗಿ ನಮ್ಮನ್ನ ಹಣತೆಯಾಗಿಸಲಿ. ಬದುಕು ಧನ್ಯವಾಗಲಿ.

ದಿನಾಂಕ: 03.11.2013ರಂದು ‘ಅವಧಿ’ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/2013/11/03/%E0%B2%95%E0%B2%A4%E0%B3%8D%E0%B2%A4%E0%B2%B2%E0%B3%8A%E0%B2%A1%E0%B2%B2%E0%B2%BF%E0%B2%A8-%E0%B2%AC%E0%B3%86%E0%B2%B3%E0%B2%95-%E0%B2%95%E0%B2%BE%E0%B2%A3%E0%B3%8D%E0%B2%95%E0%B3%86%E0%B2%97%E0%B3%8A/

 

ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ…

ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ.

“A Thing Lost is Valued The Most” ನಿಜ, ಕಳೆದ ವಸ್ತು ಯಾವಾಗಲೂ ಅತ್ಯಂತ ಬೆಲೆಯುಳ್ಳದ್ದು, ಅಥವಾ ಇಲ್ಲವಾದಾಗ ಮಾತ್ರ ಅದರ ಬೆಲೆ ಅರ್ಥವಾಗುತ್ತದೋ ಏನೋ. ಎಷ್ಟೋ ಸಲ ಅದು ನಮ್ಮೊಡನೆ ಇದ್ದುದರ ಅರಿವೂ ಇಲ್ಲದಂತೆ ಇದ್ದುಬಿಟ್ಟಿರುತ್ತೇವೆ ನಾವು.

ಈಗ ಬೆಂಗಳೂರಿನ ಎಷ್ಟೋ ರಸ್ತೆಗಳು ತಮ್ಮೊಡಲ ಮರಗಳನ್ನು ಕಳೆದುಕೊಂಡು ಝಳಪಿಸುತ್ತಿವೆ. ಎಷ್ಟೋ ವರ್ಷಗಳಿಂದ ಇದ್ದೂ ಇಲ್ಲದಂತಿದ್ದುಬಿಟ್ಟಿದ್ದ ಆ ಮರಗಳು ಅಭಿವೃದ್ಧಿಯ ಕನಸಿನ ನಾಳೆಗಾಗಿ ನಿಶ್ಯಬ್ದವಾಗಿ ಜಾರಿಹೋಗಿವೆ.

ಬಿದಿರ ಸೀಳಿ ಬುಟ್ಟಿ ನೇಯುವವರ ಆಸರೆಯಾಗಿ,
ಎಲೆಯ ಸಂದಿಯಿಂದ ಜಾರುವ ಬೆಳಕಿನ ಕಿರಣಗಳ ಹುಡುಕುತ್ತಿದ್ದ ಹರಿದ ತಡಿಕೆಯ ಗುಡಿಸಲಿನೊಳಗಿನ ಕಂದಮ್ಮಗಳ ಕಣ್ಣ ಬೆಳಕಾಗಿ,
ಹದಿಹರೆಯದವರ ಸ್ವಪ್ನ ಭೂಮಿಯ ಮಾತುಗಳಿಗೆ ಕಿವಿಯಾಗಿ,
ಹಕ್ಕಿಗಳ ಕಲರವಕ್ಕೆ ಎಲೆಗಳ ಮರ್ಮರವ ಸೇರಿಸುತ್ತ ಜೊತೆಯಾಗಿ ನಿಂತಿದ್ದ ಮರಗಳೆಲ್ಲ ಈಗ ಮುರಿದು ಬಿದ್ದಿವೆ, ಅಲ್ಲ ಕಡಿದು ಕೆಡವಲಾಗಿದೆ.

ಈಗ ಅಲ್ಲುಳಿದಿರುವುದು; ಉರುಳಿದ ಉಸಿರಿನ ಅವಶೇಷಗಳ ಚಡಪಡಿಕೆ ಮಾತ್ರ – ಕಾಲೇಜಿನ ಮಕ್ಕಳೆಸೆದ ಕಸದಂತೆ, ಸೀಳಿಬಿದ್ದ ಬಿದಿರಿನ ಚೂರುಗಳಂತೆ.

* * * * * * * * 

ನಿಜ, ಇದ್ದಾಗ ಬೆಲೆ ಅರ್ಥವಾಗದು. ನಮ್ಮ ಹೆತ್ತವರು ಹೆಮ್ಮರದಂತೆ ನಮ್ಮ ಹಿಂದೆ ನಿಶ್ಶಬ್ದವಾಗಿ ನಿಂತಿರುವುದು ಮರೆತುಹೋಗಿದ್ದೇವೆ ನಾವೀಗ. ಅವರೂ ಮರಗಳಂತೆ ನಿಂತೇ ಇರುತ್ತಾರೆ – ಬೆಳೆಯಬೇಕೆಂಬ ಧಾವಂತದಲ್ಲಿ ಮಗ – ಮಗಳು ನಾಳೆಗಳ ಬೆನ್ನತ್ತಿ ಓಡುತ್ತ ತಮ್ಮನ್ನ ಮರೆತಾಗಲೂ.
‘ನಮ್ಮ ಭಾವನೆಗಳೇ ಅವರಿಗೆ ಅರ್ಥವಾಗುವುದಿಲ್ಲ, Genaration Gap ಅಂತ ತಿರಸ್ಕರಿಸಿದಾಗಲೂ,
‘ಸುಮ್ಮನೆ ಬಾಯಿ ಮುಚ್ಚಿಕೊಂಡಿರುತ್ತೀರಾ’ ಎನ್ನುತ್ತ ಕೋಪದ ಜ್ವಾಲೆಗಳ ಅಪ್ಪಳಿಸಿದಾಗಲೂ –
ನಿಂತೇ ಇರುತ್ತಾರೆ,

ಮಕ್ಕಳು ಸೋತು ಹಿಂತಿರುಗಿದರೆ ಆಸರೆಗೆ, ಧೈರ್ಯಕ್ಕೆ, ಏನೋ ಬೇಕೆಂದು ತುಡಿವ ಮಕ್ಕಳ ಕಂಗಳ ಗೊಂದಲ ಕಳೆಯಲು ತಮ್ಮ ಬದುಕನ್ನೇ ಸವೆಸುತ್ತ, ಎಂದೋ ಒಂದು ದಿನ ನಿಶ್ಶಬ್ಧವಾಗಿ ಧರಶಾಯಿಗಳಾಗುತ್ತಾರೆ ಮರಗಳಂತೆ. ಅವರ ಬೆಲೆ ಈಗಲಾದರೂ ಅರ್ಥವಾದೀತಾ?

ಬಿಸಿಲ ಝಳ ಮೈ ಸುಡುವಾಗ, ಧೂಳು-ಹೊಗೆ ಆವರಿಸಿ ಕಣ್ತುಂಬುವಾಗ, ತಂಪ ನೀಡುತ್ತಿದ್ದ ಮರಗಳು ನೆನಪಾಗುತ್ತವೆ. ಉರುಳಿದ ಮರಗಳ ಕೊನೆಯುಸಿರು ಕಳೆವ ಮೊದಲೇ ನಾವು ಅವುಗಳ ಮರೆತು ಮತ್ತೆ ಜಂಜಾಟಗಳ ಹಿಂದೆ ಹೊರಟಿದ್ದೇವೆ.

ನಮ್ಮ ನಾಳೆಯ ಕನಸುಗಳಲ್ಲಿ ನಾವಿದ್ದೇವೆ, ನಮ್ಮ ಸಂಸಾರ, ಮಕ್ಕಳಿದ್ದಾರೆ. ಅದರಲ್ಲಿ ಹಿಂದೆ ನಿಂತು ನಮ್ಮನ್ನೇ ಕನಸಾಗಿಸಿಕೊಂಡವರಿಲ್ಲ.
ಒಂದೊಮ್ಮೆ, ಅವರೂ ನಾಳೆಯ ಕನಸುಗಳಲ್ಲಿ ನಿನ್ನೆಗಳನ್ನ ಮರೆತಿದ್ದಿರಬಹುದೇ… ಗೊತ್ತಿಲ್ಲ, ನಾವಂತೂ ಮರೆತಿದ್ದೇವೆ.

ನಮಗೀಗ ಬಿಸಿಲ ಝಳ, ಹೊಗೆ-ಧೂಳುಗಳು ಅಭ್ಯಾಸವಾಗಿ ಬಿಟ್ಟಿವೆ. ತಿಂಗಳು ಕಳೆಯುವುದರೊಳಗೆ ಅಪ್ಪ-ಅಮ್ಮ ಮರೆತೇ ಹೋಗುತ್ತಾರೆ,
ಬದುಕು ಕೈ ಬೀಸಿ ಕರೆಯುತ್ತದೆ, ಕಾಲ ಸರಿಯುತ್ತಲೇ ಇರುತ್ತದೆ, ಮನಸ್ಸು ಹೀಗೆ ಏನೇನೋ ಧ್ಯಾನಿಸುತ್ತಲೇ ಇರುತ್ತದೆ.

* * * * * * * * *

ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:21-12-2008ರ ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ.

ದಿನಾಂಕ: 27.02.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/?p=78985 

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ – http://www.samudrateera.blogspot.in/)

 

ಅಕ್ಷರ – ಅರಿವಿನ ಸಮುದ್ರ

ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ

ಅಕ್ಷರ ಪ್ರಪಂಚದ ವಿಸ್ತಾರವನ್ನ ಜ್ಞಾನ-ವಿಜ್ಞಾನವನ್ನ ಬೆರಗುಗಣ್ಣಿಂದ ನೋಡುತ್ತ, ನನ್ನದೆನ್ನುವ ಅಕ್ಷರಗಳ ವಿನ್ಯಾಸ ಮೂಡಿಸುವ ಪ್ರಯತ್ನದಲ್ಲಿ ಈ ಅಂತರ್ಜಾಲ ಬರವಣಿಗೆಯನ್ನ ಆರಂಭಿಸಿಯಾಗಿದೆ. “ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್” – ಏನು ಬರೆದರೂ ಅದು ವ್ಯಾಸನ ಉಗುಳೇ ಎಂದಿದೆ ಮಹಾಭಾರತ. ಅಲ್ಲಿಗೆ ನಾನು ಬರೆಯುವುದ್ಯಾವುದೂ ಹೊಸತಲ್ಲ, ಹೊಸತನ್ನೇ ಬರೆಯುತ್ತೇನೆ ಎನ್ನುವಷ್ಟು ಪ್ರಬುದ್ಧನೂ ಅಲ್ಲ, ಆ ಅಹಂ ಕೂಡ ನನಗಿಲ್ಲ. ಪ್ರಪಂಚದ ವಿಸ್ತಾರದಲ್ಲಿ ಹರಿದಾಡುತ್ತಿರುವ ಜ್ಞಾನ ತುಣುಕು ತಲೆ ಸೇರಿ ವಿಚಾರದ ಅಲೆಯನ್ನೆಬ್ಬಿಸಿದಾಗ ಅಕ್ಷರದಲ್ಲಿ ಹಿಡಿದಿಡುವ ಪ್ರಯತ್ನ ನನ್ನದು. ಇವೆಲ್ಲ ಹಿಂದಿನವರು ಹೇಳಿದ್ದೇ, ಮುಂದಿನವರು ಹೇಳುವಂತದ್ದೆ. ಅಭಿವ್ಯಕ್ತಿಯ ಮಾಧ್ಯಮ, ಸ್ವರೂಪ ಬೇರೆ ಅಷ್ಟೆ.

ಸಮುದ್ರ ತೀರದ ಮರಳ ಮೇಲೆ ಎಷ್ಟು ಜನ ತಮ್ಮ ಕನಸುಗಳ ಅರಳಿಸಿಲ್ಲ, ಎಷ್ಟು ಪಾದಗಳ ಹೆಜ್ಜೆ ಗುರುತು ಬಿದ್ದಿಲ್ಲ, ಎಷ್ಟು ತೋರು ಬೆರಳ ತುದಿ ಚಿತ್ತಾರಗಳ ಮೂಡಿಸಿಲ್ಲ, ಎಷ್ಟು ಸೃಜನಶೀಲ ಮನಸ್ಸುಗಳು ಮರಳಲ್ಲಿ ಕಲೆ ಅರಳಿಸಿಲ್ಲ, ಎಷ್ಟು ಮಾನವ ಪ್ರಯತ್ನ ನಗರಗಳನ್ನೇ ಕಟ್ಟಿಲ್ಲ, ಇದೆಲ್ಲ ಸಮುದ್ರ ರಾಜನ ಪ್ರೀತಿಗೆ ಬಲಿಯಾಗಿ ಸಾಗರದಾಳ ಸೇರಿದಂತೆ… ಅಕ್ಷರವೆಂಬ ಅರಿವಿನ ಸಮುದ್ರ ತೀರದಲ್ಲಿ ಹಿಂದೆ ಯಾರೋ ತೋರಬೆರಳ ತುದಿಯಿಂದ ಬಿಡಿಸಿರಬಹುದಾದ ವಿನ್ಯಾಸವನ್ನ ನನ್ನದೇ ರೀತಿಯಲ್ಲಿ ಮೂಡಿಸುವ ಬಯಕೆ, ಕಾಲನ ಅಲೆ ಅಳಿಸಿ ಹಾಕಿದ್ದನ್ನ, ಅಳಿಸಿ ಹಾಕಬಹುದಾದ್ದನ್ನ ಹೀಗೆ ಸುಮ್ಮನೆ ಬರೆಯುವ ಬಯಕೆ. ಅಲೆ ಅಳಿಸುತ್ತದೆ ಎಂದು ಗೊತ್ತಿದ್ದೂ ಮರಳಲ್ಲಿ ಹೆಸರ ಬರೆದು, ಚಿತ್ರ ಬಿಡಿಸಿ, ಗೂಡು ಕಟ್ಟಿ ಕುಣಿದು ಕುಪ್ಪಳಿಸುತ್ತೇವಲ್ಲ ನಾವು ಹಾಗೆ.

ಅಕ್ಷರ – ಅರಿವಿನ ಸಮುದ್ರ.

ಕ್ಷರ ಎಂದರೆ – ಲೀನವಾದದ್ದು, ನಾಶವಾಗುವಂತದ್ದು

ಅಕ್ಷರ – ಉಳಿದಿದ್ದು, ಅವಿನಾಶಿ ಎನ್ನುತ್ತದೆ ಅರ್ಥ ಪ್ರಪಂಚ.

ವಿಚಾರ, ಚಿಂತನ, ಮಾತುಗಳೆಲ್ಲ ಲಿಪಿಯಾಗುವ ಹಂತ ಅಕ್ಷರ.

 ಅಕ್ಷರದ ಬೆಳಕಲ್ಲಿ ಅರಿವು ಬೆಳೆಸಿಕೊಂಡವರು ಈಗಷ್ಟೆ ಹೆಜ್ಜೆ ಇಡುತ್ತಿರುವ ನನಗೆ ದಾರಿ ತೋರಿಸಿದರೆ ಜ್ಞಾನ ಸಾಗರದ ಅರಿವು ವಿಸ್ತರಿಸೀತು. ಭಾಷಾ ಜ್ಞಾನ, ಲಿಪಿ ಜ್ಞಾನ, ಚಿಹ್ನೆ, ವಿನ್ಯಾಸ, ಅಲಂಕಾರ, ಸಮಾಸ, ಶಬ್ದ, ಸಾಲುಗಳ ಕುರಿತು ನನಗಿರುವುದು ಅಲ್ಪ ತಿಳುವಳಿಕೆ ಮಾತ್ರ. ಕೆಲವೊಮ್ಮೆ ಅಕ್ಷರ ಲಿಪಿಗೆ ಏಕರೂಪತೆ ಇಲ್ಲದಿರುವುದೂ ತಪ್ಪಿಗೆ ಕಾರಣವಾದೀತು. ಗಮನಿಸಿ ತಿಳಿಸಿದರೆ ತಿದ್ದಿಕೊಳ್ಳುವೆ, ಕಲಿಯುವೆ. ಬರಹ ಅಂತರಂಗ ವಿಸ್ತಾರಕ್ಕೂ, ಸೃಜನಶೀಲತೆಯನ್ನ ಉಳಿಸಿಕೊಳ್ಳುವ ಬಯಕೆಯದೇ ಆದರೂ ಕ್ರಮ ತಪ್ಪಬಾರದಲ್ಲ..! ನಿಮ್ಮ ಅಭಿಪ್ರಾಯಗಳಿಗೆ, ಅರಿವು ವಿಸ್ತರಿಸುವ ಚರ್ಚೆಗೆ, ತಪ್ಪನ್ನ ಸರಿಯಾಗಿಸುವ ಸಲಹೆಗೆ ಈ ಜಾಗ ಮೀಸಲಿಟ್ಟು ಕಾದಿರುತ್ತೇನೆ. ಸಹಕರಿಸಿ, ಬೆಳಸಿ. ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಗುರು ಅರಳಲಿ…

 ಶ್ರೀ ಗುರುಭ್ಯೋ ನಮಃ

 ಸರ್ವಃ ಸರ್ವಂ ನ ಜಾನಾತಿ ಸರ್ವಜ್ಞೋ ನಾಸ್ತಿ ಕಶ್ಚನ !

ನೈಕತ್ರ ಪರಿನಿಷ್ಠಾಸ್ತಿ ಜ್ಞಾನಸ್ಯ ಪುರುಷೇ ಕ್ವಚಿತ್ !!

 – ಎಲ್ಲರೂ ಎಲ್ಲ ವಿಚಾರಗಳನ್ನೂ ತಿಳಿದಿರುವುದಿಲ್ಲ. ಪ್ರಪಂಚದಲ್ಲಿ ಯಾರೂ ಸಹ ಸರ್ವಜ್ಞರಲ್ಲ ಹಾಗೂ ಒಬ್ಬ ವ್ಯಕ್ತಿಯಲ್ಲಿ ಸಂಪೂರ್ಣ ಜ್ಞಾನದ ಘನತೆಯಿರುವುದಿಲ್ಲ.