RSS

ಬದುಕಿನಂಗಳದಲ್ಲಿ ಜೀವಂತಿಕೆಯ ಹಾಡು

05 ಡಿಸೆ

ಜಲಾಂತರ್ಗತ ಸಹಚರ//ರಘುನಂದನ ಕೆ.

ಈಗಷ್ಟೆ ಬಾಲ ಭಾಸ್ಕರ ಕಣ್ಣು ತೆರೆಯಲೋ ಬೇಡವೋ ಎನ್ನುವಂತೆ ಅರಳುತ್ತಿರುವಾಗ, ಹಕ್ಕಿಗಳ ಚಿಲಿಪಿಲಿ ನಾದ ತರಂಗ ಪ್ರಕೃತಿಯ ಸ್ಪರ್ಶಿಸುತ್ತಿರುವಾಗ ಮನೆಯಂಗಳದಲ್ಲಿ ಮಧುರ ಕಂಠದಿಂದ ಮೆಲುವಾಗಿ ಸುಪ್ರಭಾತದ ಸೊಗಸು, ಸರಸರನೆ ಬೆರಳ ನಡುವಿಂದ ಜಾರುವ ರಂಗೋಲಿ ಪುಡಿ ಚಿತ್ರಿಸಿದ ರೇಖೆಗಳ ಹೊಳಪು. ಅಂಗಳದಂಚಿನ ತುಳಸಿಗೆ ನೀರುಣಿಸಿ ನಮಸ್ಕರಿಸಿ ದೈನಿಕ ದಾರಾವಾಹಿ ಆರಂಭವಾಗುತ್ತದೆ. ಈಗಷ್ಟೆ ಅರಳುತ್ತಿರುವ ಮೊಗ್ಗುಗಳ ಮೃದುವಾಗಿ ನೇವರಿಸಿ ದೇವ ಪೂಜೆಗೆಂದು ಆರಿಸಿ, ತುಸು ಬೆಳಕು ಮೂಡಿದಾಗ ಮನೆಯಂಚಿನ ಕೊಟ್ಟಿಗೆಯ ಸೇರಿ ಗಂಗೆ ಗೌರಿಯರ ಬೆನ್ನ ಮೇಲೆ ಕೈಯಾಡಿಸಿ ಒಲವ ಹಂಚಿಕೆಯೊಂದಿಗೆ ದಿನಚರಿಯ ಕೆಲಸಗಳು ಮೊದಲ್ಗೊಳ್ಳುತ್ತವೆ. ಹಂಡೆಯ ತುಂಬ ಹಬೆಯಾಡುವಂತೆ ನೀರು ಬಿಸಿಯಾಗಿಸಿ, ಪುಟ್ಟ ಪುಟ್ಟ ಮಕ್ಕಳ ಎಬ್ಬಿಸಿ ಅವರ ಸ್ನಾನ ಪಾನಗಳ ಮುಗಿಸುವಾಗ ಶಾಲೆಗೆ ಕಳಿಸುವ ಗಡಿಬಿಡಿ. ಈ ಮಧ್ಯದಲ್ಲೆ ಮನೆಯವರೆಲ್ಲರೂ ದೋಸೆಯ ಉಪಹಾರ ಮುಗಿಸಿದರೆ ಬೆಳಗಿನ ಕೆಲಸಗಳಿಗೆ ಒಂದು ಆರಾಮ. ವಿಶಾಲವಾದ ಮನೆಯನ್ನ ಸ್ವಚ್ಛಗೊಳಿಸಿ, ದನಗಳ ಮೇಯಲು ಬಿಟ್ಟು ತಾನು ದನಗಳ ಮೇವಿಗೆ ಹುಲ್ಲು ಕೊಯ್ದು ತೋಟ ತಿರುಗಿ, ಅಡಿಕೆ ಆರಿಸಿ ಮನೆಗೆ ಬಂದರೆ ಒಂದು ಹಂತದ ಕೆಲಸ ಮುಗಿದಂತೆನಿಸಿ ಪುಟ್ಟ ಚಹಾ ವಿರಾಮ.

ನಂತರ ಮಧ್ಯಾಹ್ನದ ಊಟದ ತಯ್ಯಾರಿ. ಶಾಲೆಯ ಮಕ್ಕಳು ಬರುವ ಮೊದಲೇ ಅಡಿಗೆ ಸಿದ್ಧವಾಗಬೇಕು ಎನ್ನುವ ಧಾವಂತ. ಹಿತ್ತಲ ಸೌತೆಯ ಸೊಳ್ಳಿ, ಅಂಗಳದ ಬದನೆಯ ಪಲ್ಯ, ಸಂತೆಯ ತರಕಾರಿಯ ಸಾರು, ಕಡೆದಿಟ್ಟ ಮಜ್ಜಿಗೆಯ ತಂಪು ಸೇರಿ ಮಧ್ಯಾಹ್ನ ಊಟವಾಗುತ್ತದೆ. ನಂತರದ ತುಸು ಹೊತ್ತು ನಿದ್ದೆಯೊಂದಿಗೆ ಅರ್ಧವಾದ ದೈನಿಕಕ್ಕೊಂದು ವಿಶ್ರಾಂತಿ. ಮಲಗಿದ ಅಜ್ಜ, ಅಪ್ಪ ಏಳುವ ವೇಳೆಗೆ ಬಿಸಿ ಬಿಸಿ ಕಷಾಯ ಸಿದ್ಧ. ಶಾಲೆಯಿಂದ ಬರುವ ಮಕ್ಕಳಿಗೆ ಒಂದಿಷ್ಟು ತಿಂಡಿ ತೀರ್ಥಗಳ ಉಪಚಾರ, ಆಟ ಪಾಠಗಳಲ್ಲಿ ತಾನೂ ಬಾಗಿ. ಸಂಜೆಯ ನಸುಬೆಳಕು ಆರುವ ಮೊದಲು ತೋಟದಂಚಿನ ಕೆರೆಯ ಬಳಿ ಹೋಗಿ ಪೂಜೆಗೆಂದು ದುರ್ಬೆ ಕೊಯ್ದು, ದನಗಳಿಗೆ ಬಾಳೆ ದಿಂಡುಗಳ ಆರಿಸಿ ತಂದು ಕೊಟ್ಟಿಗೆಯ ಕೆಲಸವ ಮುಗಿಸುವ ವೇಳೆಗೆ ಮುಸ್ಸಂಜೆಯ ಹೊಳಪು ಕೊನೆಯ ಚರಣದಲ್ಲಿ ತೆವಳುತ್ತಿರುತ್ತದೆ. ದೇವರೆದುರು ಬಾಗಿಲೆದುರು ದೀಪವ ಹಚ್ಚಿ, ಆಡಿ ಬಂದ ಮಕ್ಕಳ ಕೈ ಕಾಲು ತೊಳೆಸಿ ಒಂದಿಷ್ಟು ಭಜನೆ, ಮಕ್ಕಳಿಗೆ ಬಾಯಿಪಾಠದ ಕಲಿಕೆ. ಭಜನೆ ಮುಗಿಯುವ ವೇಳೆಗೆ ರಾತ್ರಿಯ ಅಡುಗೆಯೂ ಸಿದ್ಧ. ಆಕಾಶವಾಣಿಯಲ್ಲಿನ ಸಂಜೆಯ ವಾರ್ತೆಗಳು ಮುಗಿಯುವ ವೇಳೆಗೆ ಊಟ ಮುಗಿದಿರುತ್ತದೆ. ಊಟದಾಚೆಯ ಎಲ್ಲ ಕೆಲಸ ಮುಗಿದಾಗ ದೈನಿಕ ದಾರಾವಾಹಿಯ ಮುಕ್ತಾಯ. ಇಷ್ಟವಾದರೆ, ಬೇಕೆನ್ನಿಸಿದರೆ, ಕರೆಂಟಿದ್ದರೆ ಅರ್ಧ ಘಂಟೆ ಟಿ.ವಿ., ಸ್ವಲ್ಪ ಹೊತ್ತು ವಿವಿಧ ಭಾರತಿಯ ಹಳೇ ಹಿಂದಿ ಹಾಡುಗಳು, ಮಕ್ಕಳ ಆಟ ಪಾಠಗಳು, ಒಂದಿಷ್ಟು ಪ್ರೇಮ, ಇರುಳ ಗಾನದಲ್ಲಿ ಸೊಂಪಾದ ನಿದ್ದೆ.

ಈಕೆ ದಟ್ಟ ಕಾನನಗಳ ನಡುವಿನ ಪುಟ್ಟ ಪುಟ್ಟ ಹಳ್ಳಿಗಳಲ್ಲಿರುವ ಮಲೆನಾಡ ಸೊಬಗಿನ ನಮ್ಮೆಲ್ಲರ ಆಯಿ. ದೈನಿಕದಾಚೆಗೂ ಒಂದಷ್ಟು ಕೆಲಸಗಳಿಗೆ ಈಕೆಗೆ ಪುರುಸೊತ್ತಿದೆ. ಅಡಿಕೆ ಸೀಜನ್‍ನಲ್ಲಿ ಅಂಗಳಕ್ಕೆ ಸಗಣಿ ನೀರು ಹಾಕುವುದು, ಅಡಿಕೆ ಸುಲಿಯುವುದು, ಅಡಿಕೆ ಹರಡುವುದು, ಆಳುಗಳಿಗೆ ಆಸರಿ ಕೊಡುವುದು ಸೇರಿದಂತೆ ಅಪ್ಪನಿಗೆ ಹೆಗಲಾಗುತ್ತಾಳೆ. ಹಲಸಿನ ಹಣ್ಣಿನ ಕಾಲದಲ್ಲಿ ಮಕ್ಕಳಿಗಾಗಿ, ನೆಂಟರಿಗಾಗಿ ಸಂಡಿಗೆ ಹಪ್ಪಳಗಳ ಮಾಡುತ್ತಾಳೆ. ದಿನನಿತ್ಯ ತನ್ನ ಪುಟ್ಟ ಹಿತ್ತಲಿಗೆ ನೀರೆರೆಯಲು ಮರೆಯುವುದಿಲ್ಲ. ನೆಂಟರ ಮನೆಯಿಂದ ಬರುವಾಗ ತಂದ ಹೂ ಗಿಡಗಳೊಡನೆ ಪಿಸುಮಾತ ತಪ್ಪಿಸುವುದಿಲ್ಲ. ನೆಂಟರ ಮನೆಗಳಿಗೂ ಹೋಗುತ್ತಾ, ಮದುವೆ ಮುಂಜಿ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾ, ಮಕ್ಕಳ ಬೇಕು ಬೇಡಗಳ ಅರಿಯುತ್ತಾ, ಸಂಪ್ರದಾಯ ಸಂಸ್ಕಾರಗಳ ಕಲಿಸುತ್ತಾ, ಹಬ್ಬ ಹರಿದಿನಗಳ ಆಚರಿಸುತ್ತಾ ಕೆಲಸ ಮಾಡುತ್ತಾಳೆ.

ನಮ್ಮ ಅಜ್ಜಿಯರು ನೆಟ್ಟಿ ಹಾಕುವುದು, ಗದ್ದೆ ಕಂಠ ಮಾಡುವುದು, ಕಳೆ ಕೀಳುವುದು, ಗೊಬ್ಬರದ ಬುಟ್ಟಿ ಹೊತ್ತು ತೋಟಕ್ಕೆ ಗೊಬ್ಬರ ಹಾಕುವುದೂ ಸೇರಿದಂತೆ ಆಯಿಯ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರಂತೆ. ಜೊತೆಗೆ ಮನೆ ತುಂಬ ಜನವಿದ್ದ ಕಾಲವದು, ಕೆಲಸಗಳಿಗೇನೂ ಕೊರತೆಯಿರುತ್ತಿರಲಿಲ್ಲ. ಆಯಿಗೆ, ಅಜ್ಜಿಗೆ ಎಷ್ಟೊಂದು ಭಕ್ತಿ ಗೀತೆ, ಜನಪದ ಗೀತೆ, ಮಕ್ಕಳ ಗೀತೆಗಳು ಬರುತ್ತವೆ. ಎಷ್ಟೊಂದು ಶ್ಲೋಕಗಳು, ಸಹಸ್ರನಾಮಗಳು, ಪುರಾಣ ಮಹಾಭಾರತದ ಕಥೆಗಳು ನೆನಪಿವೆ. ಅವರ ಬತ್ತಳಿಕೆಯಲ್ಲಿ ಮರಹತ್ತಿ ನೆಲ್ಲಿಕಾಯಿ ಕೊಯ್ದು ತಿಂದದ್ದು, ಮೈಲುಗಟ್ಟಲೆ ನಡೆದು ಶಾಲೆ ಕಲಿತಿದ್ದು, ಜಾತ್ರೆಗಳಲ್ಲಿ ಸಿನೆಮಾ ನೋಡಿದ್ದು, ಸಂಪಿಗೆ ಹಣ್ಣು ಕೊಯ್ಯುವಾಗ ಮುಳ್ಳು ಚುಚ್ಚಿ ಜ್ವರ ಬಂದು ಮಲಗಿದ್ದು, ಬಿಳಿ ಮುಳ್ಳೆಹಣ್ಣ ಹುಡುಕುತ್ತ ಕಾಡೆಲ್ಲ ಅಲೆದದ್ದು, ಅಜ್ಜಿಯ ಮಗ್ಗುಲಲ್ಲಿ ಮಲಗಿ ರಾಜಕುಮಾರನ ಕಥೆ ಕೇಳಿ ಪುಳಕಗೊಂಡಿದ್ದು, ಅಜ್ಜನ ಕೈ ಹಿಡಿದು ಯಕ್ಷಗಾನ ನೋಡಲು ರಾತ್ರಿಗಳಲ್ಲಿ ನಡೆದದ್ದು, ಅಣ್ಣಂದಿರ ಕಾಡಿದ್ದು, ಅಮ್ಮಂದಿರ ಅಳಿಸಿದ್ದು ಎಂದೆಲ್ಲ ಕಿಲಾಡಿ ನೆನಪುಗಳಿವೆ. ಗುರೂಜಿಯ ಬೆತ್ತದ ಏಟು, ಕುಂಟು ಮಾಸ್ತರರ ನಶ್ಯದ ಘಾಟು, ಅಕ್ಕೋರು ಹೇಳಿಕೊಟ್ಟ ಗೋವಿನ ಪದ್ಯ, ಶಾಲೆಯ ಸುತ್ತನೆಟ್ಟ ಹೂವಿನ ಗಿಡಗಳ ಪರಿಮಳ, ಕಂಪಾಸಿನಲ್ಲಿ ಅಡಗಿಸಿಟ್ಟ ಹುಣಸೆಹಣ್ಣಿನ ರುಚಿ ಎನ್ನುವಂತಹ ಸಂಗತಿಗಳಿವೆ. ಹೆಣ್ಣು ನೋಡ ಬರುವ ತವಕ, ಹೊಸ ಪರಿವಾರ ಸೇರಿದ ತಲ್ಲಣ, ಗಂಡನೊಂದಿಗೆ ನೋಡಿದ ಮೊದಲ ಸಿನೆಮಾ, ಬಾಲ್ಯ ಕಳೆದು ಬದುಕು ಶುರುವಾಗಿದ್ದೇ ತಿಳಿಯದ ಅಚ್ಚರಿಯ ವಿಷಯಗಳಿವೆ. ತವರಿನ, ಸೇರಿದ ಮನೆಯ ಸಂಬಂಧಿಕರೆಲ್ಲರ ಹೆಸರು, ತಲೆಮಾರುಗಳು, ಸಂಬಂಧಗಳು, ದೂರದೂರಿನ ನೆಂಟರು, ವರ್ಷಕ್ಕೊಮ್ಮೆ ಬರುವ ಸಂಭಾವನೆ ಭಟ್ಟರುಗಳ ಜನರ ಜಾತ್ರಗಳಿವೆ ತಲೆಯಲ್ಲಿ.

ಇವರೆಲ್ಲರಿಗೂ ವಯಸ್ಸಾಗುತ್ತಿದೆ. ಆಗಾಗ ಕಾಡುವ ರೋಗ, ನೋವುಗಳಿವೆ. ಬದಲಾದ ಮಲೆನಾಡ ಮನೆಗಳಲ್ಲಿ ದಾರಾವಾಹಿಗಳ ಬಾಗಿಲು ತೆರೆದಿದೆ. ಸ್ತ್ರೀವಾದ, ಮಹಿಳಾ ಸಬಲೀಕರಣದಂತಹ ವಿಷಯಗಳ ಚರ್ಚೆಗಳಿವೆ. ಆದರೆ ಎಂದೂ ಇವರು ಅದೇ ಕೆಲಸಗಳು ಎಂದು ಬೇಸರಿಸಿದ್ದ ಕಂಡಿಲ್ಲ, ಎಷ್ಟೊಂದು ಕೆಲಸಗಳಿವೆ, ಎಷ್ಟೆಲ್ಲ ಮಾಡ್ತೀನಿ ಗೊತ್ತಾ ಎಂದು ಹೇಳಿಕೊಂಡಿದ್ದ ಕೇಳಿಲ್ಲ. ಒತ್ತಡ, ಆಗಲ್ಲ ಎಂದಿದ್ದ ನೋಡಿಲ್ಲ. ಸ್ವಚ್ಛ ಶಾಂತ ಮನಸ್ಸು, ನಿರ್ಮಲ ಪ್ರೇಮ, ಸದಾ ನಗುವ ಮುಖಾರವಿಂದ, ಕಣ್ಣಲ್ಲಿ ಜೀವನ ಪ್ರೇಮದೊಂದಿಗೆ ಬದುಕ ಗೆಲ್ಲಿಸುತ್ತಿರುವ ಇವರಿಗೆ ರಜೆಗಳೇ ಇಲ್ಲ. ಇವರ ಜೀವಂತಿಕೆ ಇಂದಿನ ತಲೆಮಾರಿಗೇಕೆ ಸಾಧ್ಯವಾಗುತ್ತಿಲ್ಲ ಎನ್ನುವ ಅಚ್ಚರಿಗಳೂ ಅವರಲ್ಲಿ ಇಲ್ಲ. ಬದಲಾದ ಕಾಲ ಇವರ ಭಾವಗಳ, ಬದುಕ ಜೀವಂತಿಕೆಗಳ ಕದ್ದಿಲ್ಲ.

ಮಲೆನಾಡ ಹಳ್ಳಿಗಳಲ್ಲಿರುವಂತೆ ದೇಶ ಕಾಲದ ಎಲ್ಲ ಹಳ್ಳಿಗಳಲ್ಲೂ ಇಂತಹ ಆಯಿ, ಅಜ್ಜಿಯರಿದ್ದಾರೆ. ಕೆಲಸದ ಸ್ವರೂಪ, ಬದುಕಿನ ಪಾತ್ರ ಬದಲಿರಬಹುದಷ್ಟೆ. ಆದರೆ, ಅಂತರಂಗದ ಜೀವಂತಿಕೆ, ದೈನಿಕ ದಾರಾವಾಹಿಗಳಲ್ಲೂ ಖುಷಿಯರಳಿಸುವ ವ್ಯಕ್ತಿತ್ವದ ತುಂಬು ಬದುಕಿನ ವೈಶಾಲ್ಯತೆಯಲ್ಲಿ ವ್ಯತ್ಯಾಸವಿಲ್ಲ. ಒಂದಿಡೀ ಕುಟುಂಬವನ್ನು ಸಲಹುವ, ಮಕ್ಕಳಿಗೆ ಸಂಸ್ಕಾರಯುತ ವ್ಯಕ್ತಿತ್ವ ಕಟ್ಟಿಕೊಡುವ ಇವರ ಶಕ್ತಿ, ಕುಟುಂಬಕ್ಕೆ, ವiಕ್ಕಳಿಗೆ ಕೊಡಲು ಸಮಯವೇ ಇಲ್ಲ ಎನ್ನುವ ಪದಗಳೇ ಗೊತ್ತಿರದ, ಅಗಾಧ ಕಾಲವನ್ನು ನಿಯಂತ್ರಿಸುವ ಗೋಜಿಗೇ ಹೋಗದೆ ಬದುಕುವ ಸರಳತೆ ಹೊಸ ತಲೆಮಾರಿಗೂ ರವಾನೆಯಾಗಲಿ. ವೃದ್ದಾಪ್ಯವನ್ನು ಅನುಭವಗಳಿಂದ ಶ್ರೀಮಂತಗೊಳಿಸಿ, ವೃದ್ಧಾಶ್ರಮಗಳಿಗೆ ಕಳಿಸದಂತೆ ಮಕ್ಕಳ ಬದುಕ ರೂಪಿಸಿ ಹೊಸ ತಲೆಮಾರಿಗೂ ಹಳೆ ಬೇರಿಂದ ಜೀವದ್ರವ್ಯ ಹರಿಯುವಂತಾಗಲಿ. ಇವರೆಲ್ಲರಿಂದ ಬದುಕಿನ ಮೂಲ ಸತ್ವಗಳು ಎಲ್ಲ ದಿಕ್ಕಿಗೂ ಹರಡಿ ಸಮೃದ್ಧ ಹಸಿರಿನ ಜೀವಗಳು ಜೀವನಗಳು ನಳನಳಿಸಲಿ.

* * * * * * * *

ಇದು ‘ಕಹಳೆ’ಯ ನಾಡಹಬ್ಬಕ್ಕಾಗಿ ಬರೆದ ಲೇಖನ. ‘ಕಹಳೆ’ಯಲ್ಲಿ ದಿನಾಂಕ: 06.11.2013ರಂದು ಪ್ರಕಟಿಸಲ್ಪಟ್ಟಿದೆ. ‘ಕಹಳೆ’ಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://www.kahale.gen.in/2013/11/06-Nov.html

Advertisements
 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: