RSS

ಅಂತರಂಗದಲ್ಲೊಂದು ಮಗುವಿನ ಕಲರವ

11 ಆಕ್ಟೋ

                                    ಕಡಲಕಿನಾರೆಯ ಕಿನ್ನರ//ರಘುನಂದನ ಕೆ.

ಓಡುವ ಕಾಲದೊಂದಿಗೆ ಜಿದ್ದಿಗೆ ಬಿದ್ದವರಂತೆ ಓಡುತ್ತ, ಮನಸ್ಸಿನ ಆಸೆ ಆಕಾಂಕ್ಷೆಗಳ ಹತ್ತಿಕ್ಕಿಕೊಳ್ಳುತ್ತ, ವ್ಯಾವಹಾರಿಕ ಪ್ರಪಂಚದಲ್ಲಿ ಮನುಷ್ಯರ ನಡುವಿನ ಬಂಧಗಳು ಸಡಿಲವಾಗಿ, ಮಿಡಿವ ಹೃದಯವ ಮರೆತು ಮೆದುಳಿನ ತರ್ಕ ಲೋಕದಲ್ಲೇ ಬದುಕಬೇಕಿರುವ ಗೊಂದಲಗಳಿಗೆ ವ್ಯಗ್ರವಾಗುತ್ತ, ಹಣ ಗಳಿಸುವುದೇ ಬದುಕಿನ ಗುರಿಯಾಗಿ, ಮನದ ಮಾತನ್ನೂ ಆಲಿಸಲು ಪುರುಸೊತ್ತಿಲ್ಲದೆ ಬದುಕುತ್ತಿರುವ ಮನುಷ್ಯನೊಳಗೊಂದು ಮಗುವಿನ ನಗು ಅರಳಿ ಎಷ್ಟು ಕಾಲವಾಯಿತು…!!?? ಅಂತರಂಗದಲ್ಲಿ ತಂಪನೆಯ ಗಾಳಿಯುರುಳಿ ಆಹ್ಲಾದಪೂರ್ಣ ಮಂದಹಾಸವರಳಿ ಎಷ್ಟು ದಿನಗಳಾದವು..?? ನಮ್ಮೊಳಗಿದ್ದ ಪುಟ್ಟ ಮಗು, ಬಾಲ್ಯದ ಕನವರಿಕೆಗಳನ್ನೆಲ್ಲ ಕಳೆದುಕೊಂಡಿದ್ದು ಅರಿವಾಗದಂತೆ ನಮ್ಮನ್ನು ಆವರಿಸಿರುವ ಮಾಯಾ ಪದರ ಅದ್ಯಾವುದು…?? ಮಗುವಾಗಲಾಗದ ನಮ್ಮ ಅನಿವಾರ್ಯತೆಗಳ ನೋಡಿ ವಯಸ್ಸು ಅಪಹಾಸ್ಯ ಮಾಡಿದಂತಿದೆ. ನಗುವುದನ್ನೇ ಮರೆತ ಮುಖವಾಡದ ಗಾಂಭೀರ್ಯದೆದುರು ಮನದೊಳಗಿನ ಮಗು ಮನಸ್ಸು ಉಸಿರುಗಟ್ಟಿ ನರಳುತ್ತಿದೆ. ಕಾಲನ ರಥ ಹಿಂದೆ ಓಡಿದ್ದರೆ ಎಷ್ಟು ಚೆನ್ನವಿತ್ತು…!! ನೆನಪುಗಳ ರಥವೇರಿ ಹಿಂದೆ ಹಿಂದೆ ಸರಿದು ವಿಹರಿಸಲು ಇಂದಿನ ಹಳವಂಡದ ಬದುಕಲ್ಲಿ ಕ್ಷಣ ಮಾತ್ರದ ಬಿಡುವಾದರೂ ಇರಬಹುದಾ ನಮ್ಮ ಕಾಲದ ಬುತ್ತಿಯಲ್ಲಿ.

ದಿನದ ಕೆಲಸ ಕಾರ್ಯಗಳ ಮುಗಿಸಿ ಮನೆಗೆ ಹಿಂತಿರುಗುವ ದಾವಂತದಲ್ಲಿರುವಾಗ ತುಂಬಿದ ಬಸ್ಸೊಳಗಿನ ಗಜಿಬಿಜಿಗೆ ಮನಸ್ಸು ಸಿಡಿಮಿಡಿ ಎನ್ನುತ್ತಿರುವ ಕ್ಷಣದಲ್ಲಿ ಪುಟ್ಟ ಪಾಪು ತನ್ನ ಚಿಗುರು ಬೆರಳುಗಳಿಂದ ಸ್ಪರ್ಶಿಸಿ ನಗುತ್ತದೆ. ಮನದಲ್ಲಿ ಮಂದಾರ ಅರಳಿ ಮನಸ್ಸೀಗ ನಿರಾಳ. ಅಪರೂಪಕ್ಕೆಂಬಂತೆ ಬಿಚ್ಚಿಕೊಳ್ಳುವ ಮಗುವಿನ ಅಂಗೈಯೊಳಗೆ ಕಿರು ಬೆರಳಿಟ್ಟು, ತಟ್ಟನೆ ಮುಚ್ಚಿಕೊಂಡ ಮೃದು ಬಿಸುಪಿನ ಲೋಕದೊಳಗೆ ಸೇರಿದ ಕಿರುಬೆರಳ ಆನಂದ ಮನದ ಮೂಲೆಗೂ ಸಂಚರಿಸಿ ನಾವೂ ಮಗುವಾದಂತೆ. ಕಣ್ಣೋಟದಿಂದ ಹರಿದ ಮಿಂಚು ಅಂತರಂಗದೊಳಗೆ ಸೇರಿ ತರಂಗವೆಬ್ಬಿಸಿದಂತೆ. ಮಗುವೆಂದರೆ ಮಮತೆ, ಪ್ರೀತಿಯ ಒರತೆ. ಗುಲಾಬಿ ಪಾದಗಳ ಗೆಜ್ಜೆ ಸದ್ದು, ಹಾಲ್ಗೆನ್ನೆಯ ಮೃದು ಸ್ಪರ್ಶ, ಚಿಗುರು ಬೆರಳಿನಾಟ – ನೋಡುತ್ತ ನಿಲ್ಲುವ ನಮ್ಮೊಳಗೊಂದು ಹೊಸ ಪುಳಕ. ಪ್ರಪಂಚದ ಯಾವ ಮೂಲೆಗೆ ಹೋದರೂ ಮಗುವೆಂದರೆ ಹೀಗೆ, ಗಂಡು-ಹೆಣ್ಣು, ಶ್ರೀಮಂತ-ಬಡವ, ಪೂರ್ವ-ಪಶ್ಚಿಮ, ಭಾರತ, ಅಮೇರಿಕ, ಆಫ್ರಿಕಾ ಎಲ್ಲಿಯ ಮಗುವೇ ಆಗಲಿ, ಮಗುವೆಂದರೆ ಸಂಭ್ರಮ. ಎಲ್ಲ ಪಾಪುಗಳ ಭಾಷೆಯೆಂದರೆ ಸ್ವಚ್ಛ ನಿರ್ಮಲ ನಗು ಇಲ್ಲವೆ ಕಣ್ತುಂಬಿ ಸುರಿವ ಅಳು, ಎಲ್ಲ ಪಾಪುಗಳ ಭಾಷೆ, ಬಿಸುಪು, ಪ್ರೀತಿ, ಮೌನ, ನಿದ್ರೆ, ಗಂಧ ಸೀಮಿತ ಅವಧಿಯವರೆಗೆ ಒಂದೇ ಎನಿಸುವ ಸೋಜಿಗ.

ಮಗುವಿನ ಭಾಷೆ ನಮಗರ್ಥವಾದೀತಾ, ನಮ್ಮ ಮಾತು, ಶಬ್ದ, ವ್ಯಾಕರಣ ಅದಕ್ಕರ್ಥವಾದೀತಾ…?? ನಮ್ಮೆಲ್ಲ ಜ್ಞಾನ, ಕಲಿಕೆ, ಶಬ್ದ ಭಂಡಾರಗಳ ಮರೆತು ಮಗುವಿನ ಮಾತನ್ನೇ ನಮ್ಮದಾಗಿಸಿಕೊಂಡು ಲಲ್ಲೆಗೆರೆಯುತ್ತಾ ಆನಂದಿಸುತ್ತೇವೆ ನಾವು. ಅರ್ಥವಾಗದ ಭಾಷೆಯೂ ಅಂತಃಕರಣದೊಳಗೆ ಸ್ಪುರಿಸಿ ಬಾಹ್ಯ ಶಬ್ದಗಳ ನುಂಗಿ ಆನಂದವಾಗಿ ಹೃದಯವ ತೀಡಿದಂತೆ. ನಮ್ಮರಿವ ಮೀರಿ ಮಗುವಾಗುವ ಬಯಕೆ. ಮಗುವನ್ನ ಸುತ್ತುವರೆದ ಗುಂಪಿನಲ್ಲಿ ಅದು ನಮ್ಮನ್ನೇ ಗಮನಿಸಲಿ ಎನ್ನುವ ಹಂಬಲ, ನಗುವೊಂದು ಅರಳಿದರೆ ಅದು ನಮ್ಮ ಚೇಷ್ಟೆಗಳಿಗೇ, ನಮ್ಮ ಮಾತಿಗೇ ನಕ್ಕಿದ್ದು ಎನ್ನುವ ಸ್ವಯಂ ತೃಪ್ತಿ. ಎಲ್ಲ ಮನ್ನಣೆಗಳ ಮೀರಿ ಅಂತರಂಗಕ್ಕೆ ಕಚಗುಳಿಯಿಡುವ ಮಗುವಿನ ಒಂದೇ ಒಂದು ಕಣ್ಣೋಟದೆದುರು, ಕಿಲಕಿಲ ನಗುವಿನ ಉಸಿರ ಸೌಗಂಧದೆದುರು ಎಲ್ಲ ಅಧಿಕಾರ, ಅಹಂಕಾರಗಳೆಲ್ಲ ಅಳಿದು ಸ್ವಚ್ಛ ಸ್ವಚ್ಛ. ಮಗುವಿಗೆ ಮಾತ್ರ ತನ್ನ ಸುತ್ತ ನೆರೆದವರೆಲ್ಲ ಯಾವುದೋ ಲೋಕದ ಜೀವಿಗಳಂತೆ ಕಾಣಿಸಿರಬಹುದಾ ಅಥವಾ ಗೊಂಬೆಗಳ ಸಂತೆಯಂತೆ ಕಂಡು ಖುಷಿಯಾಗಿರಬಹುದಾ…?? ಸಾಮಾನ್ಯ ಮನುಷ್ಯನ ಅರಿವಿಗೆ ನಿಲುಕದ ಮಗುವಿನ ಆಂತರಂಗಿಕ ಪ್ರಪಂಚದ ನಿರ್ಮಲತೆಯೆದುರು ಅನಂತ ವರ್ಷಗಳ ಅನುಭವ, ಶೋಧನೆ ಎಲ್ಲ ಶೂನ್ಯವಾಗಿ ಗೋಚರಿಸುವ ಅಪ್ರಿಯ ಸತ್ಯ. ಎಲ್ಲ ಸಾಧನೆಗಳ ಕೊನೆಗೆ ಮತ್ತೆ ಮಗುವಾದಾಗ ಮಾತ್ರ ಹೊಸತೇನೋ ದಕ್ಕೀತೇನೋ.

ದೊಡ್ಡವರೆನಿಸಿಕೊಂಡವರ ವಿಚಿತ್ರ ಗಡಿಬಿಡಿ, ಪದೇ ಪದೇ ಮುಖ ಗಂಟಿಕ್ಕುವ ಸಿಡಿಮಿಡಿ, ಅರ್ಥವಾಗದ ಅಸಹಾಯಕ ನೋವು ದುಮ್ಮಾನಗಳ ದಗ್ಧ ಪ್ರಪಂಚ, ಕೆಲವೊಮ್ಮೆ ಯಾವ ಭರವಸೆಗಳೂ ಇಲ್ಲದ ತೀರಕ್ಕೆ ಬಂದು ನಿಲ್ಲುವ ಬದುಕು, ಬಿಡಲಾಗದ ಅಹಂಕಾರ, ಎಲ್ಲ ತಿಳಿದವರಂತೆ ಬದುಕುವ ಹಮ್ಮು, ಮರಳ ತೀರದಂತÀ ಮುಗಿಯದ ಆಸೆಗಳ ಮುಷ್ಟಿಯಲ್ಲಿ ಹಿಡಿದಿಡುವ ಬಯಕೆ, ನಿನ್ನೆಗಳ ಬಗ್ಗೆ ಕನವರಿಕೆ, ನಾಳೆಗಳ ಬಗೆಗಿನ ಅಸಹಜ ನಿರೀಕ್ಷೆ, ಬಂದಂತೆ ಒಪ್ಪಿಕೊಳ್ಳಲಾಗದ ಬದುಕು, ಕಂಡ ಕನಸುಗಳ ನನಸಾಗಿಸಲಾಗದ ಅಸಹಾಯಕತೆ –  ಇವೆಲ್ಲವುಗಳ ನಡುವೆ ಮಗುವಿನೆದುರು ನಿಂತಾಗ ಎಲ್ಲ ಕರಗಿ ಶಾಂತ ಪ್ರಪಂಚವೊಂದು ತರೆದುಕೊಳ್ಳುವ ರೀತಿಗೆ, ಹೊಸತೊಂದು ಭರವಸೆಯ ಬೆಳಕು ಗೋಚರಿಸುವ ಸೊಗಸಿಗೆ ಬದುಕು ಮತ್ತೆ ಮಗುವಾಗಿ ಅರಳುತ್ತದೆ. ಆ ಕ್ಷಣಕ್ಕಾದರೂ ಮನುಷ್ಯ ಮಗುವಾಗುತ್ತಾನೆ. ಮಗು ಗುರುವಾಗುತ್ತದೆ. ಅರಿವಿನ ಕಣ್ಣು ತೆರೆದಿರಬೇಕಷ್ಟೆ. ಯಾವುದನ್ನೂ ಯಾರನ್ನೂ ಲೆಕ್ಕಿಸದೆ ತನ್ನ ಕ್ಷಣಮಾತ್ರದ ನಿರ್ಮಲ ನಗೆಯಿಂದ ಎಲ್ಲವನ್ನೂ ಕರಗಿಸಿ ತನ್ನ ಆಹ್ಲಾದಕರ ಪ್ರಪಂಚದೊಳಗೆ ನಮ್ಮನ್ನು ಸೆಳೆದುಬಿಡುವ ಮಗುವಿನೆದುರು ಮನುಷ್ಯ ದೊಡ್ಡವನಾ, ಚಿಕ್ಕವನಾ…?? ಸಹಜ ದಿನಗಳಲ್ಲಿ ನಮಗೇ ಅಪರಿಚಿತವೆನಿಸುವ, ಬಯಸಿದರೂ  ಆಡಲಾಗದ ಮುದ್ದು ಮುದ್ದು ಲಲ್ಲೆ ಮಾತುಗಳ ಭಾಷೆ ನಮಗರಿವಿಲ್ಲದೆಯೇ ಮಗುವಿನೆದುರು ಸರಳವಾಗಿ ಅನಾವರಣಗೊಳ್ಳುವ ಜಾದೂವಿನೆದುರು ಮನಸ್ಸು ಹೋತೋಟದೊಳಗಿನ ಪಾತರಗಿತ್ತಿ. ಇಲ್ಲಿ ನಾಯಿ – ಬೌಬೌ ಆಗುತ್ತದೆ, ನಿದ್ದೆ – ಕೋಕೋ ತಾಚಿಯೆನಿಸುತ್ತದೆ. ಶಬ್ದ, ವಾಕ್ಯಗಳೆಲ್ಲ ಕರಗಿ ಒಂದೇ ಅಕ್ಷರದೊಳಗಿನ ಭಾವಾನಂದವಾಗಿ ಅಲೆಲೆ…ಲೆ…ಲೆ…..ಲೆ…..ಲಾ…ಲಾ… ಎನ್ನುತ್ತ ಸುಲಲಿತ ಸರಾಗ ರಾಗವಾಗಿ, ಪಕ್ಕನೆ ಮುದ್ದು ಮದ್ದಾದ ಬೊಚ್ಚು ಬಾಯಲ್ಲಿ ಹಾಲ್ಗೆನ್ನೆಯರಳಿಸಿ ನಗುವ ಮಗುವಿನೆದುರು ಮಾಮೂಲಿ ಪದಗಳೆಲ್ಲ ಬದಲಾಗಿ ವಿಶೇಷ ರೂಪ ತಾಳಿ ಪರಿಮಳವಾಗಿ ಸುತ್ತೆಲ್ಲ ಪಸರಿಸಿ, ಎಲ್ಲರ ಮನದಲ್ಲೂ ಆ ಕ್ಷಣ ಸಂತೃಪ್ತಿಯ ಚಿಗುರು.

ಮಗು, ಕಂದ, ಪಾಪುವೆಂಬ ಶಬ್ದವೇ ನಮ್ಮೊಳಗೊಂದು ಮಗುವನ್ನರಳಿಸುವ ಕಾಲ ಬಂದೀತಾ..!! ನವಮಾಸಗಳ ಕಳೆದು ಮಗುವೊಂದು ಮೂಡಿದಾಗ ಅಮ್ಮನಿಗೆ ಅಮ್ಮನಾಗಿದ್ದೇ ಮಗುವಾಗುವ ಸಂಭ್ರಮ. ಮತ್ತೊಮ್ಮೆ ಬಾಲ್ಯ ಸಿಕ್ಕಂತೆ, ಕಾಲ ಹಿಂದೋಡಿ ಮತ್ತೆ ಶುರುವಾದಂತೆ. ಮಗುವಿನ ಬಿಸಿನೀರ ಜಳಕ, ತಿಕ್ಕಿ ತೀಡುವ ಎಣ್ಣೆ, ಬೆಚ್ಚನೆಯ ಕುಂಚಕ, ಒದ್ದೆ ಒದ್ದೆಯಾಗಿರುವ ಹಾಸಿಗೆಯ ಅಂಚು, ತೂಗುವ ತೊಟ್ಟಿಲು, ಹಾಡುವ ಜೋಜೋ ಲಾಲಿ, ಎಳೆ ಬಿಸಿಲ ಕಾವು, ಬೆಚ್ಚನೆಯ ಉಡುಪಿನೊಳಗೆ ಗೊಂಬೆಯಂತ ಮಗು – ಇವೆಲ್ಲ ಮನುಷ್ಯನೊಳಗೆ ತನ್ನದೇ ಆದ ಕಂಪನವನ್ನ, ಭಾವುಕತೆಯನ್ನ ನಿರ್ಮಿಸುವ ನಿಸರ್ಗದೊಡಲ ಪ್ರಶಾಂತ ಕ್ಷಣಗಳ ಜೀವಂತಿಕೆಯ ಸೊಗಸು. ಮನೆತುಂಬ ದೇವಲೋಕದ ಗಂಧ. ಅಳುವ ಮಗುವಿನ ರಾಗ, ನಗುವ ಮಗುವಿನ ಕೇಕೆ, ಕಣ್ತೆರೆದು ಆಲಿಸುವ ಏಕಾಗ್ರ ಭಾವ, ಕಣ್ಮುಚ್ಚಿ ನಗುವ ಸೌಂದರ್ಯ, ಕಾಲ್ಬೆರಳ ಹಿಡಿದು ಆಡುವ ಆಟದ ಚಂದ, ಸುತ್ತ ಸುಳಿವ ಮನುಷ್ಯರೆಂಬ ಗೊಂಬೆಗಳ ಸಂತೆಯ ನೋಡಿ ಅಬ್ಬರಿಸುವ ರೀತಿಗೆ ಮನುಷ್ಯನ ಮನಸ್ಸು ಸ್ವಚ್ಛವಾಗಿ ತನ್ನಷ್ಟಕ್ಕೆ ತಾನೇ ಧ್ಯಾನಸ್ತವಾಗಿ ಆನಂದವಾಗುತ್ತದೆ. ಇಲ್ಲಿ ಜಂಜಡಗಳ ಗೊಡವೆಯಿಲ್ಲ, ನೆನ್ನೆಗಳ ನೋವು ಕನವರಿಕೆಗಳಿಲ್ಲ, ನಾಳೆಗಳ ಭಯ, ಭ್ರಮ ನಿರಸನಗಳಿಲ್ಲ. ಇಂದು, ಈ ಕ್ಷಣ ಮಾತ್ರ ನಿತ್ಯ ಸತ್ಯ.

ಮಗುವಿನ ಮನಸ್ಸೆಂದರೆ ಸಮುದ್ರ. ಇಲ್ಲಿ ಎಲ್ಲ ಒಳಗೊಳ್ಳುವಿಕೆಯೂ ಇದೆ. ಯಾವ ಅಂತರ, ಭೇದಗಳಿಲ್ಲದೆ ಅಪ್ಪುವ ಮಿಡಿತವಿದೆ. ಜಲಚರಗಳ ಜೀವ, ಹಸಿರಿನ ಉಸಿರು, ಎಲ್ಲವನ್ನ ಸೆಳೆಯುವ, ಒಳಗೆಳೆದು ತುಯ್ಯುವ ಆಹ್ಲಾದಕರ ತಂಪನೆಯ ಬಿಸಿಯಿದೆ. ಶಾಂತತೆಯ ಕಪ್ಪೆಚಿಪ್ಪೊಳಗೆ ಮುಚ್ಚಿದ ಹೂದಳದಂತ ರೆಪ್ಪೆಗಳಡಿ ಕನಸ ಮುತ್ತೊಂದು ಹೊಳೆದು, ಮೀನ ಮರಿಯ ಕಣ್ಣೋಟದೊಳಗಿನ ಶಾಂತಿಯಾಗಿ ನಿದ್ದೆಗಣ್ಣಲ್ಲೇ ನಗುವ ಸೊಗಸಿದೆ. ಇಲ್ಲಿ ಆರ್ಭಟಿಸುವ ರಚ್ಚೆ, ಹಠವೂ ಇದೆ. ಆರ್ಭಟಿಸಿದ್ದೇ ಮರೆತಂತೆ ತಕ್ಷಣದಲ್ಲಿ ಶಾಂತವಾಗುವ ಸಂಭ್ರಮವಿದೆ. ಮಗುವಿನ ಮನವೆಂದರೆ ಎಲ್ಲ ಒಳಗೊಳ್ಳುವ, ಒಳಗೊಂಡೂ ಸ್ವಚ್ಛಂದವಾಗಿರುವ ಸದಾ ಸಂತಸದಿಂದ ತುಂಬಿದ ಸಾಗರ. ಮಗು ಬೆಳೆಯುತ್ತ ಬೆಳೆಯುತ್ತ ಕಡಲ ತಡಿಯಾಗುತ್ತದೆ. ಬಾಲ್ಯದ ಅಲೆಗಳು ಬಂದು ಪಾದ ಸ್ಪರ್ಶಿಸಿದಾಗ ಪುಳಕಗೊಳ್ಳುತ್ತ, ಕಡಲ ತಡಿಯಲ್ಲಿ ನಶ್ವರದ ಮರಳ ಗೂಡು ಕಟ್ಟುತ್ತ, ಸೀಮೆಗಳ ಗೆರೆ ಎಳೆಯುತ್ತ, ದೊಡ್ಡವರೆನಿಸಿಕೊಂಡವರು ಎಸೆವ ವಸ್ತುಗಳ ಜೋಡಿಸುತ್ತ ಮನುಷ್ಯನಾಗಿ ಬಿಡುವ ಸೋಜಿಗದಲ್ಲಿ ಅಲೆಯ ಸಪ್ಪಳ ಕ್ರಮೇಣ ಕರಗಿ ನಮ್ಮದೇ ಧ್ವನಿಗಳ ಗೌಜು ಗದ್ದಲ ಬದುಕ ತುಂಬುತ್ತದೆ. ಬಾಲ್ಯ ಮರೆಯುತ್ತದೆ.

ಮಗುವೆಂದರೆ ಬೇಸರವಿಲ್ಲದ ಕ್ಷಣಗಳೊಡನೆ ಒಡನಾಟ. ಪುಟ್ಟ ಪಾಪುವಿನ ನಗು ಅಳುಗಳ ಆಲಿಸುತ್ತ ಅದರೊಡನೆ ಸಂಭಾಷಿಸುತ್ತ ಇರುವ ಧ್ಯಾನಸ್ತ ಏಕಾಗ್ರತೆಯ ಏಕಾಂತದೆದುರು ದೇವರು ಕೂಡ ಕಣ್ತೆರೆದಂತೆ ಭಾಸ. ದೇವರೂ ಇರಬಹುದಾ ಹೀಗೆಯೇ ಎಂಬ ವಿಚಿತ್ರ ಯೋಚನಾ ತರಂಗ. ಮನೆಯೊಳಗೆ ಸಂಭ್ರಮ ಪುಳಕಗಳ ಬೆಳಕಿನೊಂದಿಗೆ ಉದಯಿಸುವ ಕಂದ, ಆ ಕಂದನ ಅಳು ನಗುವಿನ ಕಾಲ, ದೇಹದುಸಿರುಗಳ ಸೌಗಂಧದ ಮೃದುತ್ವ ಮನೆಯೊಳಗಿನ ಎಲ್ಲ ಮನಗಳನ್ನೂ ಆತ್ಮೀಯತೆಯ ಗಾಢ ಸಂಬಂಧಗಳ ಬಂಧದಿಂದ ಬೆಸೆಯುತ್ತದೆ. ಬಿಗಿದ ವಾತಾವರಣ, ಒಡಗೂಡಿಸಿಕೊಂಡ ಕಾಠೀಣ್ಯ, ಆವಹಿಸಿಕೊಂಡ ಹಿರಿತನದ ಗಾಂಭೀರ್ಯ ಎಲ್ಲ ಮಗುವಿನ ಸ್ಪರ್ಶದೆದುರು ಕರಗಿ ನಿರ್ಮಲ ಪ್ರೇಮದ ಜಲಧಾರೆಯಾಗಿ ತಂಪೆರೆಯುತ್ತದೆ.

ಮನುಷ್ಯ ಮತ್ತೆ ಮಗುವಾಗಲಾರನಾ…?? ಈ ಕ್ಷಣ ಮಾತ್ರ ಸತ್ಯವೆನ್ನುವ ತೀವ್ರತೆಯೊಂದಿಗೆ, ಹೊಸ ಶಬ್ದ-ಭಾಷೆಗಳ ಆಲಿಸುವಿಕೆಯ ಖುಷಿಯೊಂದಿಗೆ, ಹೊಸತನಗಳ ಕಲಿಯುವ ಕುತೂಹಲ, ಸೋತಷ್ಟೂ ಬಿದ್ದಷ್ಟೂ ನಿಲ್ಲುವ ನಡೆಯುವ ಹಠ, ಅಧಮ್ಯ ಉತ್ಸಾಹದ ಚಿಲುಮೆ, ಪುಟ್ಟ ಪುಟ್ಟ ಪಾದಗಳಿಂದ ಜಗವ ಅಳೆವ ಹೆಜ್ಜೆ, ಅಹಂಕಾರವಿಲ್ಲದ ಸಂತೃಪ್ತಿ, ಕೆಲಸವಿಲ್ಲವೆನಿಸಿದರೂ ಎನಾದರೊಂದರೆಡೆಗೆ ಸದಾ ತುಡಿಯುತ್ತಲೇ ಇರುವ ಪುರುಸೊತ್ತಿರದ ಕಾಯಕ, ಬದುಕಲ್ಲಿ ಅಸಾಧ್ಯವೆನಿಸುವಷ್ಟು ಮಗ್ನತೆಯೊಂದಿಗೆ ನಿರ್ಮಲವಾಗಿ ಶಾಂತತೆಯೊಂದಿಗೆ ಬದುಕಬೇಕಿದೆ ಮನುಷ್ಯ, ಮತ್ತೆ ಮಗುವಾಗಬೇಕಿದೆ. ಎಲ್ಲ ಗದ್ದಲ ಧಾವಂತಗಳಾಚೆ ಎಲ್ಲರ ಮನಸ್ಸಲ್ಲೂ ಮಗುವೊಂದು ಜನ್ಮ ತಾಳಲಿ, ಧ್ಯಾನ ಅಂತರಂಗದ ಮಗುವಿನೊಂದಿಗಿನ ಲಲ್ಲೆಯಾಗಲಿ. ಮುಗ್ಧ ಮಂದಹಾಸದ ಬೆಳಕು ಬಂಧಗಳ ಬೆಸೆಯಲಿ. ದ್ವೀಪವಾಗುತ್ತಿರುವ ಮನುಷ್ಯನ ಒತ್ತಡಗಳ ತೊಳೆದು ಎಲ್ಲ ದ್ವೀಪಗಳ ಬೆಸೆಯುವ ಸಮುದ್ರದಂತ ಮಗು ಮನಸ್ಸು ಜನಿಸಲಿ. ಮಾನವ ನಿರ್ಮಿತ ಕಾಲಮಾಪನದ ಕೆಲವು ಹೆಜ್ಜೆಗಳಲ್ಲಾದರೂ ಮಗುವಾಗಿ ಆನಂದಿಸುವ ಬಿಡುವು ಎಲ್ಲ ಜೀವಗಳಿಗೆ ದೊರೆಯಲಿ. ಬಾಲ್ಯ ತನ್ನ ಆಯಸ್ಸಿನ ಕ್ಷಣಗಳ ವೃದ್ದಾಪ್ಯದವರೆಗೂ ವಿಸ್ತರಿಸಲಿ. ತಿಳಿದವನೆಂಬ ಹಮ್ಮು ಕರಗಿ ತಿಳಿವ ಬೆಳೆವ ಆಸೆಯ ಮಗುವಿನ ಅಂತರಂಗದ ಚೆಲುವು ಬದುಕಿನ ನಂದನವಾಗಲಿ.

 * * * * * * * *

ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:06-05-2012ರ ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ.

ದಿನಾಂಕ: 11.10.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿhttp://avadhimag.com/?p=66124 .

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)
Advertisements
 

One response to “ಅಂತರಂಗದಲ್ಲೊಂದು ಮಗುವಿನ ಕಲರವ

  1. ಚಿನ್ಮಯ ಭಟ್ಟ

    ಅಕ್ಟೋಬರ್ 21, 2012 at 9:51 AM

    ಲೇಖನ ಇಷ್ಟವಾಯ್ತು…ಚಿತ್ರಗಳೂ ಜೊತೆಗಿದ್ದರೆ ಇನ್ನಷ್ಟು ಪರಿಣಾಮಕಾರಿಯಾದೀತೇನೋ…..

     

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: