RSS

ಪ್ರೇಮ ಪಥದಲ್ಲಿ ಸಾಧನೆಯ ಬೆಳಕು…

17 ಸೆಪ್ಟೆಂ

ಮೋಹಮತಿ ಕಥಾಮುಖಿ//ರಘುನಂದನ ಕೆ.

ಬಿಹಾರದ ಗಯಾ ಜಿಲ್ಲೆಯ ಕಲ್ಲುಗುಡ್ಡದ ತಪ್ಪಲಲ್ಲಿ ಒಂದು ಪುಟ್ಟ ಊರು. ಊರೆಂದಮೇಲೆ ಅದಕ್ಕೊಂದು ಹೆಸರು. ಊರ ಎದುರು ಕಾದ ಬಂಡೆಗಳ ಗುಡ್ಡ. ಗುಡ್ಡದ ಬುಡದಲ್ಲೊಂದು ಗುಡಿಸಲಂತ ಮನೆ. 1960ರ ಕಾಲ ಅದು. ಬದುಕಿಗೆ ಪ್ರೀತಿ ಇದ್ದರೆ ಸಾಕು, ಹಣವಿಲ್ಲದೆಯೂ ನಡೆದೀತು ಎಂದು ನಂಬಿ ಬದುಕುತ್ತಿದ್ದ ಜನರ ಕಾಲ. ಅಲ್ಲೊಂದು ಗಂಡು ಹೆಣ್ಣು, ದಾಂಪತ್ಯದ ಸೊಬಗು. ಪ್ರೀತಿಯನ್ನೇ ಉಸಿರಾಗಿಸಿಕೊಂಡು ಒಲವ ಬೆಸುಗೆಯಲ್ಲಿ ಜೀವನ ನಡೆಸುತ್ತಿದ್ದ ಜೀವಗಳು. ಕೈ ತುತ್ತು ಊಟದ ಖುಷಿಯಲ್ಲಿ, ಒಂದಷ್ಟು ದಿನ ಗಂಜಿಯಲ್ಲಿ, ಒಂದಿಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಉಸಿರಾಡುತ್ತಿದ್ದ ಗಂಡ ಹೆಂಡಿರ ತಂಪು ಗುಡಿಸಲದು. ಅಲ್ಲಿ ಪ್ರೀತಿ ಬಿಟ್ಟು ಯಥೇಚ್ಛವಾಗಿ ಸಿಗುತ್ತಿದ್ದ ಮತ್ತೊಂದೇನಾದರೂ ಇದ್ದರೆ ಅದು ಬಿಸಿಲು ಮಾತ್ರ. ಅಂಥ ಊರಲ್ಲಿ ನೀರೆಂದರೆ ಹೊಳೆದಂತೆ ತಾರೆ. ತಾರೆ-ಚುಕ್ಕೆಗಳಾದರೂ ದಿನ ರಾತ್ರಿಯೂ ಬಂದಾವು. ನೀರು ಮಾತ್ರ ಸಿಕ್ಕಷ್ಟು, ಮೊಗೆದಷ್ಟು. ಇಲ್ಲಿ ಜೀವ ಜಲ ಬೇಕಿದ್ದರೆ ಜೀವದ ಹಂಗು ತೊರೆದು ಕಾದ ಬಂಡೆಗಳ ಗುಡ್ಡವೇರಿ ಅದರಾಚೆಗಿನ ಪುಟ್ಟ ಕೊಳದಿಂದ ಹೊತ್ತು ತರಬೇಕು.

ಚಂದ್ರನಿಲ್ಲದ ರಾತ್ರಿ. ತಾರೆಗಳೆಲ್ಲ ಮಿನುಗುತ್ತಿದ್ದ ಹೊಳೆ ಹೊಳೆವ ರಾತ್ರಿ.
ಮುಚ್ಚಿದ ಕಣ್ಣೊಳಗೆ ಚಲಿಸುವ ಚಿತ್ರಗಳ ಸಂತೆ.
ಭವಿಷ್ಯತ್ ಘಟನೆಗಳೆಲ್ಲ ಮನದ ಮೂಲೆಯಲ್ಲಿ ಅರೆ ಎಚ್ಚರದಲ್ಲಿ ಚಲಿಸುತ್ತಿರುವ ಅಸ್ಪಷ್ಟ ಕನಸು.
ಕಣ್ಮುಚ್ಚಿದಾಗ ಕಾಡುತ್ತವೆ, ತೆರೆದರೆ ಮಾಯ.

ಕಾಲ ಸಂಚು ಹೂಡಿ ಅರಳಿದ್ದ ನಸುಕೊಂದರಲ್ಲಿ ನೀರ ತರಲು ಹೊರಟಿದ್ದು ಅವಳು. ಅವನ ಮನದ ಒಡತಿ. ಗುಡ್ಡದಾಚೆಯ ನೀರ ತೀರವ ಸೇರಿ ತುಂಬಿದ ಭಾರದೊಂದಿಗೆ ತುಳಿದ ಹಾದಿ. ಗುಡ್ಡ ಇಳಿವಾಗ ಜಾರಿದ್ದು ಕಾಲೊಂದೇ ಅಲ್ಲ, ಬದುಕು ಕೂಡ. ಚೆಲ್ಲಿದ ನೀರು ನೆಲ ತಾಗುವ ಮೊದಲೇ ಇಂಗಿತ್ತು. ಹರಿದ ರಕ್ತಕ್ಕೆ ಕರುಣೆಯಿಲ್ಲ. ಗಂಡ ಈತ. ಮದುವೆಯಾಗಿ ವರ್ಷಗಳೆಷ್ಟೋ ಕಳೆದು ಹೊಂದಿ ಬೆಸೆದ ಜೀವ ಭಾವ. ನೀರ ತರುವೆನೆಂದು ಹೋದ ಮಡದಿ ಇನ್ನೂ ಬರಲಿಲ್ಲವದ್ಯಾಕೆಂದು ಹೊರಟಿದ್ದು ಹುಡುಕಿ. ಗುಡ್ಡದ ಪದತಲದಲ್ಲಿ ಕೆಂಪು ಚಿತ್ತಾರಗಳ ಮೈ ತುಂಬ ಹೊದ್ದು ಪ್ರಜ್ಞೆ ತಪ್ಪಿ ಬಿದ್ದ ಹೆಂಡತಿಯ ಕಂಡು ಎದೆಯೊಡೆದು ಅತ್ತ. ಒಡೆದ ಬಿಂದಿಗೆ, ಮುರಿದ ಬದುಕು. ಗಂಡ ಹೆಂಡಿರಿಬ್ಬರೂ ಬಡಿದಾಡಿದ್ದು ಯಮನೊಡನೆ ಎರಡು ದಿನ. ಇವ ಪುರಾಣ ಪುರುಷನಲ್ಲ. ನಮ್ಮ ನಿಮ್ಮಂತೆ ಬದುಕಿದವ. ಪ್ರೀತಿ ಎಂಬ ದೇವರ ನಂಬಿ ಬಾಳಿದವ. ಕೊನೆಗೂ ಗೆದ್ದದ್ದು ಸಾವು. ಬದುಕಿಗೊಂದು ಕೊನೆ. ದೇಹ ಹೋದದ್ದು, ಭಾವವಲ್ಲ, ಪ್ರೀತಿಯಲ್ಲ. ಆತ ಇದ ಅರಿಯಲಿಲ್ಲ. ಕುಸಿದ ಕುದಿದ. ಸತ್ತದ್ದು ಹೆಂಡತಿ, ಸಮಾಧಿಯಾದದ್ದು ಆತ. ಕಾಲ ಸವೆಯಿತು, ಗಡ್ಡ ಬೆಳೆಯಿತು. ನೀರಿಲ್ಲದೂರಲ್ಲಿ ಕಣ್ಣೀರಿಗೆ ಬರವಿಲ್ಲ. ಸುರಿಸುರಿದು ಹರಿಯಿತು. ಉರಿವ ಸೂರ್ಯನಿಗೆ ಇಂಗದ ದಾಹ. ಹರಿದ ಕಣ್ಣೀರ ಕಲೆ ಉಳಿದದ್ದು. ಗುಡ್ಡ ಅಚಲ.

ದಿಗ್ಗನೆದ್ದ. ಕಣ್ಣು ತೆರೆದು ಎಚ್ಚರ. ಕಂಡದ್ದು ಕನಸು. ಅರೆ ತಿಳಿದ ಎಚ್ಚರಕ್ಕೆ ನಂಬಿಕೆ ಕಷ್ಟ.
ಪಕ್ಕದಲ್ಲಿದ್ದ ಹೆಂಡತಿಗೆ ನವಿರು ನಿದ್ದೆ. ಕೊಂಚ ಕೊಂಚ ಕಾಲ ಸ್ಪಷ್ಟ. ಅರಿವು ಬಾಹ್ಯಕ್ಕೆ.

ತನ್ನ ಮನದೊಡತಿ, ಪ್ರೇಮ ಕನಸಲ್ಲಿ ಮುರಿದಿದ್ದು, ಬದುಕಲ್ಲಿ ಅಲ್ಲ. ಬದುಕಲ್ಲಿ ಮುಗಿಯಬಾರದೆಂದೇನೂ ಇಲ್ಲ. ಅರೆ ತೆರೆದ ಅರಿವು ಸ್ಪಷ್ಟವಾಗುವ ಮೊದಲೇ ಮರೆವಿನ ಹೊದಿಕೆ. ಒಂದಷ್ಟು ದಿನ ಕಳೆಯಿತು. ನೀರ ತರಲು ಎಂದಿನಂತೆ ಹೊರಟ ಹೆಂಡತಿ ಗುಡ್ಡದಿಂದ ಜಾರಿ ಬಿದ್ದ ದಿನವೊಂದು ಕಾದಿತ್ತು. ಹೋಗಬಹುದಾಗಿದ್ದ ಪ್ರಾಣ ಉಳಿಯಿತು, ಕಾಲು ಉಳುಕಿತು. ಎಂದೋ ಬಿದ್ದ ಕನಸಿಗೆ ಮತ್ತೆ ಎಚ್ಚರದ ರೂಪ. ಕಾಲ ಕಳೆದಂತೆ ಅವನ ಮನಸ್ಸು ವಿಚಾರದ ಕುಲುಮೆ. ಸ್ವಪ್ನ ಲೋಕದಲ್ಲಿ ಎಂದೋ ಮುರಿದು ಹೋದ ಜೀವದ ಪ್ರೇಮ ಭಾವ ಇನ್ನೂ ಕಾದಿತ್ತು. ಕಾದಿದ್ದು ಕಾಡಿತು. ಒಂದು ದಿನ ಅವನೆದೆಯಲ್ಲಿ ನಿಚ್ಚಳ ಬೆಳಕು. ಸ್ವಪ್ನದಾಚೆಗೂ ಎಚ್ಚರದ ಮಡಿಲಿಗೂ ಪ್ರೇಮ ಸೋಕಿತು. ಪ್ರೇಮ ತಾಕಿದಾಗ ಆನಂದವೇ ಹುಟ್ಟಬೇಕಿಲ್ಲ. ಹುಟ್ಟಿದ್ದು ಬೇಗುದಿ, ಹಠ. ತನ್ನ ಒಲವ ಎಂದಾದರೂ ನಿರ್ಧಯವಾಗಿ ತನ್ನ ಪದತಲದಲ್ಲಿ ಕೊಂದು ಕೆಡವಬಹುದಾದ ಗುಡ್ಡದ ತಲೆ ಕತ್ತರಿಸುವ ಹಠ. ಕಾದ ಕಲ್ಲುಗಳ ಚೂರಾಗಿಸಿ ನಾಟ್ಯವಾಡುವ ರುದ್ರ ಛಲ.

ಕನಸು ಎಚ್ಚರದೊಳಗೆ ಸೇರಿದಾಗ ಅಚ್ಚರಿ ಸಂಭಾವ್ಯ.
ಕನಸೆಂದು ಕಳೆದವರೇ ಹೆಚ್ಚು. ಉಳಿಸಿಕೊಂಡವರು ಸಾಧಕರಾದಾರು.
ಸಾಧನೆಗೆ ಅರಿವಿತ್ತು. ಇವನೊಂದಿಗೆ ತನ್ನ ಪಥವಿದೆ.
ಕನಸು ಹಗಲಿರುಳೂ ಕಾಡಿತು, ಕೆಣಕಿತು.

ಮಡದಿಯ ಪ್ರೇಮ ಕಣ್ಣೆದುರು ಸುಳಿದಾಗಲೆಲ್ಲಾ ಅರಿವು ನಿಚ್ಚಳವಾಯಿತು. ಕೊನೆಗೂ ಆತ ನಿರ್ಧರಿಸಿದ. ಒಂದು ಉಳಿ, ಮತ್ತೊಂದು ಸುತ್ತಿಗೆ, ಹೆಗಲಿಗೆ ಹಗ್ಗದ ಸುರಳಿ. ಎದುರಿಗೆ ಎದೆಯುಬ್ಬಿಸಿ ಎತ್ತರ ನಿಂತು ಸವಾಲೆಸೆವ ಕಲ್ಲು ಬಂಡೆಗಳ ಗುಡ್ಡ. ಅದರೆದುರು ಮೂರಡಿಯ ಗಡ್ಡ ಬಿಟ್ಟು ನಿಂತ ಈತ. 1962ರ ಒಂದು ಸುದಿನ. ಅಂದಿನಿಂದ ಶುರುವಾದದ್ದು ಹೋರಾಟದ ಆಟ. ಸಾಧನೆಗೆ ಅವನ ಶಿರವೇರಬೇಕಿತ್ತು. ಕಾಲ ಹೂಡಿದ ಆಟ. ಗುಡ್ಡದ ಶಿರವುರಳಲು, ಸಾಧನೆಯ ಗರಿ ಮೂಡಲು. ಹರಿದ ನೆತ್ತರು ಸಂಗಾತಿಯದು, ಕುದಿವ ನೆತ್ತರು ಇವನದು. ಕಲ್ಲು ಬಂಡೆ ಸುಟ್ಟಿದ್ದು ಪಾದಗಳ, ಸೂರ್ಯ ಸುಟ್ಟಿದ್ದು ತಲೆಯನ್ನ.

ಜಗವ ಬೆಳಗುವ ದೇವ ಸೂರ್ಯ. ತಲೆಯೊಳಗೆ ಸುಡಬೇಕಿತ್ತು ಸುಡುಗಾಡುಗಳ.
ಬೆಳಕ ಕಾವು ಕತ್ತಲೆಯ ಕೂಡಬೇಕಿತ್ತು.
ಸೂರ್ಯ ಹುಟ್ಟುವ ಮೊದಲೇ ಕಲ್ಲು ಕುಟ್ಟುವ ಕೆಲಸ.
ಸೂರ್ಯ ಮುಳುಗಿದ ಅವನ ತಲೆಯೊಳಗೆ.

ಇವನ ಹಠದೆದುರು ಚಟಪಟ ಸಿಡಿವ ಬಂಡೆಗಳು. ಕಣ್ಣಲ್ಲಿ ಒಂದಷ್ಟು ದುಃಖ, ಒಂದಷ್ಟು ಖುಷಿ. ಗುಡ್ಡದಡಿ ಇಂಗಿದ್ದ ಸ್ವಪ್ನ ಸಂಗಾತಿಗಳ ರಕ್ತ ಹುಡುಕಿ ಪ್ರೀತಿಸುವೆ ಎಂಬಂತೆ ಗುಡ್ಡ ಕಡಿಯುತ್ತಲೇ ಹೋದ. ಜನ ಇದ್ದರು ಅಲ್ಲಿ ನಮ್ಮ ನಿಮ್ಮಂತೆ. ನೋಡಿ ನಕ್ಕರು.

ತಿಳಿದು ನಕ್ಕರೆ ಬೆಳಗು. ಅಪಹಾಸ್ಯದ ನಗು ಕತ್ತಲು.
ಹುಚ್ಚು ತಲೆಗೇರಿದೆ ಎಂದರು. ಅವನ ತಲೆಯೊಳಗೆ ಜನ ಕಾಣದ ಬೆಳಕು.

ಇವನೂ ಅದೇ ಗುಡ್ಡದಲ್ಲಿ ಸತ್ತಾನು, ಪ್ರೇಮ ಪ್ರೇತವಾಗಿ ಕಾಡುತ್ತಿದೆ ಎಂದರು. ಆತ ಗುಡ್ಡವನ್ನೇ ಪ್ರೀತಿಸಿದ, ಗುಡ್ಡ ಅವನೆದುರು ಮಗುವಾಗಿತ್ತು. ಜನಕ್ಕೆ ಆಡಿಕೊಳ್ಳುವ ಆಟ, ಅವನಿಗೆ ಹೂಡಿ ಗೆಲ್ಲುವ ಹಠ. ಜನರ ಮಾತಿಗೆ ಆತ ಕಿವುಡ. ಮನದ ಮಾತ ಆಲಿಸಿ ನಡೆದವ. ಕಳೆದದ್ದು ವರ್ಷ ಒಂದೆರಡಲ್ಲ. ಲೆಕ್ಕಕ್ಕೆ ಇಪ್ಪತ್ತು. ವಾರ, ದಿನ, ಕ್ಷಣಗಳ ಲೆಕ್ಕದಲ್ಲಿ ಸಾವಿರ ಸಹಸ್ರ. ಕಾಲ ಆತನೆದೆಯ ಮಿಡಿತ. ಇಳಿದ ಬೆವರು, ಬಸಿದ ನೆತ್ತರ ಬಿಸಿಗೆ ಕರಗಿದ್ದು ಕಲ್ಲು ಬಂಡೆಗಳ ಗುಡ್ಡ. ಎದ್ದು ನಿಂತಿದ್ದ ಗುಡ್ಡ ಮಂಡಿಯೂರಿ ಅವನ ಮಡಿಲ ಸೇರಿದಾಗ 1982ರ ಸುದಿನವೊಂದು ಅರಳಿ ನಲಿದಿತ್ತು.

* * * * * * * *

ಅವನೂರಿನಿಂದ ಪಕ್ಕದೂರಿಗೆ ಗುಡ್ಡ ಬಳಸಿ ಬಂದರೆ ಎಪ್ಪತ್ತು ಮೈಲು, ಸಹಸ್ರ ಹೆಜ್ಜೆ. ಗುಡ್ಡ ಕಡಿದುರುಳಿ ಪಥವ ಬಿಟ್ಟಾಗ ಏಳು ಮೈಲು, ನೂರು ಪಾದ. ನಕ್ಕಿದ್ದ ಜನ ಕೈ ಮುಗಿದರು. ಅವನ ಕಣ್ಣಲ್ಲಿ ತಲೆಯೊಳಗಿನ ಸೂರ್ಯ ಮಿನುಗುವ ಕಾಲ, ಪ್ರೇಮ ಪಕ್ವವಾಗಿತ್ತು.

ವೃದ್ದಾಪ್ಯ ದೇಹಕ್ಕೆ, ಚೈತನ್ಯಕ್ಕಲ್ಲ.
ಪ್ರೇಮದ ಅಮೃತ ಕುಡಿದವರಿಗೆ ಚೈತನ್ಯ ಪದತಲದ ಶರಣಾರ್ಥಿ.

ಹುಚ್ಚನೆಂದವರು ಸಂತನೆಂದರು. ಗುಡ್ಡ ತಲೆಯೇರಲಿಲ್ಲ. ಆತ ಅಹಂಕಾರವಾಗಲಿಲ್ಲ. ಗುಡ್ಡದ ಅಹಂಕಾರ ಕಳೆದವ, ಪ್ರೇಮವಾಗೇ ಉಳಿದವ. ನನ್ನದೇನಿದೆ ಶ್ರಮ, ಎಲ್ಲಾ ಅವಳ ಪ್ರೇಮ ಎಂದು ಮೇಲೆ ಕೈ ತೋರಿದ. ಜನಕ್ಕೆ ಮುಗಿಲೆತ್ತರದ ವ್ಯಾಪ್ತಿ ತಿಳಿಯದು. ಪ್ರೇಮದ ಪಥಿಕನೆಂದು ಪೂಜಿಸಿದರು. ಸೂರ್ಯ ಸಾಹಸಕ್ಕೆ ನಿರಹಂಕಾರಕ್ಕೆ ಸಾಕ್ಷಿಯಾದ. ಗೆದ್ದದ್ದು ಹಠವಲ್ಲ, ಪ್ರೇಮ.

ಅವಳು ಇರುವವರೆಗೆ ಮನುಷ್ಯ ಬೆಳೆವವರೆಗೆ ಪ್ರೇಮ ಅವಳ ಸೊತ್ತು. ಸೀಮಿತ ವೃತ್ತ.
ಅವಳು ಅಳಿದ ಮೇಲೆ, ಒಳಗೆಂಬುದು ಬೆಳಗಿದ ಮೇಲೆ ಪ್ರೇಮ ಜಗದ ತುತ್ತು.
ಪ್ರೇಮದಾಚೆಗೂ ಕಾಣ್ಕೆಯಿರಬಹುದು.
ಪ್ರೇಮ ವಿಶ್ವವ್ಯಾಪ್ತವಾಗಲು ನಮ್ಮ ಕಾಣ್ಕೆಯಿದು. ನಮ್ಮೊಳಗಿನ ತಿಳಿವು.

ಇದು ಕಥೆಯಲ್ಲ. ಬದುಕು. ಕಥೆಯಾಗುವ ಶಕ್ತಿಯಿರುವುದೂ ಬದುಕಿಗೇ ಅಲ್ಲವೇ? ಪ್ರೀತಿಗಾಗಿ ಕೊಂದ, ಸತ್ತ ಜನರ ಕಂಡಿದ್ದ ಭೂಮಿ ಪ್ರೀತಿಗಾಗಿ ಬದುಕ ಗೆಲ್ಲಿಸಿದ, ಪಥವ ನಿರ್ಮಿಸಿದ ಪ್ರೇಮ ಪಥಿಕನ ಶಕ್ತಿಗೂ ಸಾಕ್ಷಿ. ಗುಡ್ಡ ಕಡಿವಾಗ ಆತ ಬಡಿದ ಪ್ರತಿ ಏಟೂ ಮಾನವ ಜನಾಂಗದ ಎದೆಯೊಳಗಿಂದ ದ್ವೇಷಾಸೂಯೆ ಸ್ವಾರ್ಥಗಳ ಪರ್ವತ ಪುಡಿಗಟ್ಟಿ ಪ್ರೇಮದೆಡೆಗೆ ಪಥವ ಬೆಳಗಲಿ.

ಪ್ರೇಮ ಇಬ್ಬರ ನಡುವಿನ ಬಂಧನವಾದರೆ ಚೆಂದ – ಮಲ್ಲಿಗೆಯಂತೆ. ಮಲ್ಲಿಗೆಗೂ ಪರಿಮಳವಿದೆ, ಅಂದವಿದೆ. ಬದುಕಲ್ಲಿ ಯಾವುದೂ ವ್ಯರ್ಥವಲ್ಲ. ಅರ್ಥವಿಲ್ಲದೆಯೂ ಇಲ್ಲ. ಅರ್ಥಗಳ ಮೀರಿದರೆ ಪರಮಾರ್ಥ. ಪ್ರೇಮದ ಹರಿವು ಬಟ್ಟಲ ಹಾಲಿಂದ ಹರಿವ ನದಿಯಾದರೆ, ಹಾಲ್ಬೆಳದಿಂಗಳಾದರೆ ಜಗಕೆಲ್ಲ ತಂಪು. ಪ್ರೇಮಿಯಾಗಿದ್ದವ ಅರ್ಥ ಕಾಮಗಳ ಮೀರಿದರೆ ಪರಮಾರ್ಥಗಳ ಪಡೆದಂತೆ, ಪರಮಾತ್ಮನೆಡೆಗೆ ನಡೆದಂತೆ.

ನಂಬಿದ ಪರಮಾತ್ಮ ನಂಬಿಕೆಯ ತಳದಲ್ಲಿ.
ಕಾಣ್ಕೆಯ ಪರಮಾತ್ಮ ಸಾಧನೆಯ ಶಿಖರದಲ್ಲಿ.
ಗೆದ್ದವ ಬೀಗಲಾರ, ಬೀಗಿದರೆ ಸಂತನಾಗಲಾರ.

ಈತ ಪ್ರೇಮ ಸಂತ – ಜನ ಕರೆದದ್ದು. ಆತ ಮಾತ್ರ ಮಗುವಂತೆ ವಿಶ್ವವ ಪ್ರೇಮಿಸಿ ಜಗವ ತೊರೆದದ್ದು. ಸಮಾಧಿ ಮಹಲು ನೋಟಕ್ಕೆ ಚಂದ. ಬದುಕಿಗೆ ಮಾರ್ಗ ಬೇಕು ನಡೆಯುವುದಕ್ಕೆ, ಗೆಲ್ಲುವುದಕ್ಕೆ. ನಂಬಿದ್ದಾರೆ ಜನ ಅವನೂರಲ್ಲಿ. ನಂಬಿದಂತೆ ನಟಿಸಿರಲೂಬಹುದು. ಎಲ್ಲ ಮೀರಿ ಎಲ್ಲರೆದೆಯಲ್ಲಿ ಹುಟ್ಟಬೇಕಿದೆ ಆತ. ಕನಸ ತಿಳಿದೆಚ್ಚರದ ಅರಿವು ಮೂಡಬೇಕಿದೆ ಈಗ.

* * * * * * * *

ಬಿಹಾರದ ಗಯಾ ಜಿಲ್ಲೆಯ ಗೌಲ್ಹಾರ್ ಎಂಬ ಊರು. ಅಲ್ಲಿ ಉಳಿ, ಸುತ್ತಿಗೆ, ಹಗ್ಗಗಳ ಬಳಸಿ 25 ಅಡಿ ಎತ್ತರದ ಕಲ್ಲು ಗುಡ್ಡವ ಕಡಿದು 360 ಅಡಿ ಉದ್ದದ 30 ಅಡಿ ಅಗಲದ ರಸ್ತೆ ನಿರ್ಮಿಸಿದವನ ಹೆಸರು ದಶರಥ ಮಾಂಜಿ. ನಿರಂತರ 20 ವರ್ಷಗಳ ಅವನೊಬ್ಬನ ಹೋರಾಟ ಅಲ್ಲಿನ ರಸ್ತೆ ಎನ್ನುತ್ತಾರೆ. ಅಲ್ಲಿನ ಜನ ನೆನೆಯುತ್ತಾರೆ ಅವನನ್ನು. ಅವನಿಗಾಗಿ ಪುಟ್ಟ ಸ್ಮಾರಕವೊಂದಿದೆಯಂತೆ ಅಲ್ಲಿ. ಸ್ಮರಣೆಗೆ ಸ್ಮಾರಕದಾಚೆಯದನ್ನು ಕೊಟ್ಟವ ಆತ. ಸ್ಮಾರಕದಲ್ಲಿಟ್ಟು ಮರೆಯುವವರು ನಾವು. ನಮ್ಮೊಳಗಿನ ತಿಳಿವಿಗೆ ಬೆಳಕ ಚೆಲ್ಲಿ ಅಕ್ಷರವಾದ ಅವನ ಪ್ರೇಮ ಎಲ್ಲ ಗುಡ್ಡಗಳ ಕಳೆದು ಮಾನವನೆದೆಯ ಸೇರಿ ಜಗವ ಪ್ರೇಮಧಾಮವಾಗಿಸಲಿ.

* * * * * * * *

ದಿನಾಂಕ: 16.09.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ –  http://avadhimag.com/?p=63693 .

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)
Advertisements
 

3 responses to “ಪ್ರೇಮ ಪಥದಲ್ಲಿ ಸಾಧನೆಯ ಬೆಳಕು…

 1. Veena Bhat

  ಸೆಪ್ಟೆಂಬರ್ 17, 2012 at 6:41 AM

  ವಾವ್…ಅದ್ಬುತ.

  ಪ್ರೀತಿ ಬದುಕಿನ ಸರದಾರ..

  ಅಮಿತ ಪ್ರೀತಿಗೆ, ಅವನ ಚಾತಿಗೆ ಮರೆ ಹೋದವು ಮಾತುಗಳು…

   
 2. Naresh Hegde Dodmari

  ಸೆಪ್ಟೆಂಬರ್ 17, 2012 at 6:51 AM

  Super ….. Really inspiring…

   
 3. Sandhya Bhat

  ಸೆಪ್ಟೆಂಬರ್ 28, 2012 at 5:54 AM

  ಓದಲು ಕುಳಿತಾಗೆಲ್ಲ ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಶಕ್ತಿ ನಿಮ್ಮ ಬರಹಗಳಲ್ಲಿದೆ…
  ಇದೆ ಕಥೆಯನ್ನು ಮೊದಲು ೨-೩ ಸಲ ಕೇಳಿದ್ದೆ… ಆದರೆ ಕಲ್ಪನೆಯ ಲೋಕಕ್ಕೆ ಏಣಿ ಹಾಕಿ ಚಿತ್ರಿಸಿಕೊಟ್ಟಿದ್ದು ನಿಮ್ಮ ಲೇಖನ
  ಧನ್ಯವಾದ ರಘುನಂದನ್…

   

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: