RSS

ತಾರಾಲೋಕದಲ್ಲಿ ಪುಟಾಣಿ ಮಿಂಚು…

16 ಜುಲೈ

ಮೋಹಮತಿ ಕಥಾಮುಖಿ//ರಘುನಂದನ ಕೆ.

ತುಂತುರು ಮಳೆ, ಮನಸ್ಸು ಮಗುವಾಗಿ ಮೆದುವಾಗಿಬಿಟ್ಟಿತ್ತು. ಮನಸ ತುಂಬಾ ಕಥೆಗಳ ಸಾಲು. ಪುಟಾಣಿ ಮಕ್ಕಳ ಸುತ್ತ ಕೂರಿಸಿಕೊಂಡು ಕಥೆ ಹೇಳುವ ಬಯಕೆ. ಈ ಶಹರದಲ್ಲಿ ಎಲ್ಲಿ ಹುಡುಕಲಿ, ಕನ್ನಡದ ಕಥೆ ಕೇಳೋ ಮಕ್ಕಳ. ಅದ್ಕೆ ಇಲ್ಲಿ ಹೇಳೋಣಾ ಅಂತ ಬಂದೆ. ತುಂಬಾ ಹಿಂದೆ ಕತ್ತಲ ರಾತ್ರಿಯಲ್ಲಿ ದೊಡ್ಡ ಆಟದ ಮೈದಾನವೊಂದರಲ್ಲಿ ವಿಶಾಲವಾದ ನೀಲ ಆಕಾಶವನ್ನ ನೋಡುತ್ತಾ, ಹೊಳೆವ ನಕ್ಷತ್ರಗಳ ಎಣಿಸುತ್ತಾ ಹೀಗೊಂದು ಕಥೆ ಹುಟ್ಟಿತ್ತು. ಪುಟಾಣಿ ಮರಿಯೊಂದಕ್ಕೆ ಅದನ್ನು ಹೇಳಿ, ಅದರ ಕಣ್ಣ ಪಿಳಿಪಿಳಿಯಲ್ಲಿ ಖುಷಿಯ ಮಿಂಚ ಕಂಡು ಆನಂದಿಸಿದವ ನಾನು. ಈಗ ನಿಮ್ಮೆದುರಿಗೆ ಹರವಿ ಕೂತಿದ್ದೇನೆ…

* * * * * * * * * *

ಅನಂತ ನೀಲ ಅಂತರಿಕ್ಷದ ಸಾಗರ, ತೇಲಿ ಗಿರ ಗಿರ ಸುತ್ತುವ ಭೂಮಿಯ ಲೋಕದಾಚೆ ಹರಡಿಬಿದ್ದ ನಕ್ಷತ್ರಗಳ ಉಂಡೆ, ಚಿಮ್ಮಿ ಒಂದರೊಳಗೊಂದು ಬೆರೆತ ಬೆಳಕ ಕಿರಣ, ದೃಕ್ಪಥದಾಚೆ ಕ್ಷೀರಪಥದ ದಾರಿಯಲಿ – ಬೆಳಕ ಲಂಗ ಧರಿಸಿ ಆಟವಾಡುವ ಕಿನ್ನರಿ…

ಅಂತರಂಗದಾಚೆಯೊಂದು ಅಂತರಿಕ್ಷ. ಅಲ್ಲೊಂದಿಷ್ಟು ನಕ್ಷತ್ರಗಳ ಗುಂಪು. ಅವುಗಳ ಜೊತೆ ಮುದ್ದು ರಾಜಕುಮಾರಿಯಂತ ಪುಟಾಣಿಮರಿಯ ಆಟ. ನಕ್ಷತ್ರ ಚಿಮ್ಮುವ ಕಿರಣಗಳ ಜೋಡಿಸಿ ಕಿರೀಟ ಮಾಡುವ ಆಟ. ಸುತ್ತುಗಟ್ಟಿದ ಕಿರಣಗಳ ಸಾಲು. ಕಣ್ಣಾ ಮುಚ್ಚಾಲೆ ಆಡೋ ತಾರೆಗಳ ಮೋಜು.

ಜೋಡಿಸಿ ಬೆಸೆಯ ಹೊರಟ ಬೆಳಕ ದಾರಗಳೆಲ್ಲ ಸಿಕ್ಕು ಸಿಕ್ಕಾಗಿ ಗಂಟುಗಳಾಗಿ… ಅವುಗಳ ಹಿಡಿದು ಕಿರೀಟವಾಗಿಸೋದು ಹೇಗೆ? ಬೆಳಕ ರೇಖೆಗಳ ಮೈ ಸುತ್ತ ಸುತ್ತಿಕೊಂಡ ಪುಟಾಣಿ ಮರಿಗೆ ಸುಸ್ತಾಗಿ ಹೋಗಿ, ಇನ್ನೂ ಆರಂಭವೇ ಆಗಿಲ್ಲ ಕಿರೀಟದಾಟ, ದಾರ ಜೋಡಿಸುವ ಮೊದಲೇ ನಿರಾಸೆಯ ಮಾಟ, ಕಿರಣಗಳ ಹಿಡಿದು, ಒಂದರೊಳಗೊಂದು ನೇಯ್ದು ಅದ್ಯಾವಾಗ ಆದೀತು ಹೊಳೆವ ಬೆಳಕ ಕಿರೀಟ, ಹೊರಟು ಬಿಡಲೇ ಭೂಮಿಗೆ, ಕನಸ  ಕಂಗಳಲ್ಲಿ ತುಂಬಿ ಜಾರಲು ನಿಂತ ಇಬ್ಬನಿಯ ಬಿಂದು…

ಪುಟಾಣಿ ಮರಿಯ ನೋವ ಕಂಡು ದೂರ ದೂರ ನಕ್ಷತ್ರ ಲೋಕದ ತೀರದಿಂದ ಮುದ್ದು ಮುಖದ ಜೀವಮಾತೆ ತಾರಾ ಕುವರಿ ಬಂದಳು. ಸುಂದರ ಗುಂಗುರು ಕೂದಲ ಮೇಲೊಂದು ನಕ್ಷತ್ರ ಸಿಂಗರಿಸಿದ ಹೊಳೆವ ಕಿರೀಟ, ನೀಲ ಕಣ್ಣ ಹೊಳಪು, ಮಂದಹಾಸದ ಸೊಗಸು… ಪುಟಾಣಿ ಎದುರಲ್ಲಿ ನಿಂತು ತಲೆ ನೇವರಿಸಿ ಮಧುರ ಪಾರಿಜಾತದ ಪರಿಮಳವ ಚೆಲ್ಲಿ, ಏನಾಯ್ತು ಪುಟ್ಟಾ ಎಂದಳು.

ಪುಟ್ಟ ಮರಿಯ ಕಂಗಳಲ್ಲಿ ಅಚ್ಚರಿಗಳ ದೀಪ, ಎದುರು ನಿಂತ ಸೊಗಸು ಕಿನ್ನರಿಯ ರೂಪ, ಯಾರಿರಬಹುದು ತೇಲುತ್ತ ಬಂದ ಗುಲಾಬಿ ಪಾದದ ಬಾಲೆ, ಅಣ್ಣನ ಕಥೆಯ ದೇವತೆನಾ ಅಂತ ಅನುಮಾನ…?

ಯಾರು ನೀನು, ದೇವತೆಯಾ ಕಿನ್ನರಿಯಾ – ಕೆಳಿದ್ದು ಪುಟಾಣಿ ಮರಿ

ನಾನು ನಕ್ಷತ್ರದೊಳಗಿಂದ ಬಂದ ಮಂಜಿನ ಬಾಲೆ, ಕಿರಣದ ಲೀಲೆ, ಅದ್ಸರಿ, ನೀನ್ಯಾರು ಮರಿ, ನಿನ್ನ ಕಂಗಳಲ್ಯಾಕೆ ಮೋಡ ಮುಸುಕಿದೆ, ಇಲ್ಲಿಗ್ಯಾಕೆ ಬಂದೆ? – ಕೇಳಿದ್ದು ಕಿನ್ನರಿ

ಆಗ, ಪುಟಾಣಿ ಮರಿ ಆ ಬಾಲೆಯ ಪುಟ್ಟ ಪುಟ್ಟ ಕೈ ಬೆರಳ ಹಿಡಿಯುತ್ತ ಹೆಳಿದ್ದು – ತಾರೆಗಳ ಲೋಕದಿಂದ ನಿಂಗೆ ತೇರನ್ನೆಳೆದು ತರುವೆ ಎಂದ ಅಣ್ಣ, ತಂದಿದ್ದು ಬೆಳಕ ದಾರದೆಳೆಗಳನ್ನ, ಅಂದಿದ್ದು – ನೀ ಹಿಡಿಯಬೇಕೀಗ ನಾ ತಂದ ಬೆಳಕ ಮಿಂಚ, ಹಿಡಿದು ಕಿರೀಟವಾಗಸ್ತೀಯಾ ಕೊಂಚ..

ಓಹೋ, ನೀ ಬೆಳಕ ಕಿರೀಟ ಮಾಡ ಬಂದ ಪುಟಾಣಿಯಾ, ನಿನ್ನಣ್ಣ ಕಾಮನಬಿಲ್ಲ ತಗೊಂಡು ಹೋದವನಾ, ಸೂರ್ಯನ್ನ ಗೆದ್ದವನಾ ಅಂತು ದೇವತೆ.

ಹ್ಞೂಂ ಹೌದು, ಅದಿರಲಿ ಅತ್ತ, ಇಲ್ಲಿ ನೋಡು, ಬೆಳಕ ರೇಖೆಗಳೆಲ್ಲ ಸಿಕ್ಕು ಸಿಕ್ಕಾಗಿ ಬಿಟ್ಟಿವೆ. ಬಿಡಿಸಲಾಗದು, ನೇಯಲಾಗದು, ಸುತ್ತಿ ಸುತ್ತಿ ನನ್ನ ಮುತ್ತಿದೆ, ನಂಗೆ ಅಳು ಬರ್ತಿದೆ, ಭೂಮಿಗೆ ಹೋಗೋಣಾ ಅನ್ನಿಸ್ತಿದೆ, ಏನ್ಮಾಡ್ಲಿ..??

ಏನ್ಮಾಡೋದು ಅಂತ ಅಣ್ಣ ಹೇಳಿಲ್ವಾ ಪುಟ್ಟಾ ನಿಂಗೆ..?

ಹ್ಞೂಂ ಅಣ್ಣ ಹೇಳಿದ್ದ, ನಿಂಗೆ ಸಾಕಾಗಿ ನೀ ಸೋತು ಕುಳಿತಾಗ ಕಣ್ಣಿಂದ ಜಿಟಿ ಜಿಟಿ ಮಳೆ ಸುರಿವ ವೇಳೆಯಲಿ, ಏಳು ಸಮುದ್ರ ದಾಟಿ ದೇವ ಮಾನವರು ಬರ್ತಾರೆ, ಕೆದರಿದ ನಿನ್ನ ಕೂದಲ ಬಾಚಿ ತಾರೆಗಳ ಮಾಲೆ ಮುಡಿಸ್ತಾರೆ, ಬೆಳಕ ಗೋಳವ ಲಾಲಿಸಿ ಕಿರೀಟ ಮಾಡಿ ತಲೆ ಮೇಲೆ ಇಡ್ತಾರೆ – ಅಂದಿದ್ದ.

ಅಷ್ಟೇನಾ ಹೇಳಿದ್ದು..??

ಉಹ್ಞೂಂ, ಪಾಚು ಮರಿ ನೀನು ಸುಸ್ತಾಗದೆ, ಅವರು ಬರೊದ್ರೊಳ್ಗೆ ಕಿರೀಟ ಮಾಡಿ ತೊಟ್ಟಿರಬೇಕು. ದೇವ ಮಾನವರು ನಿನ್ನ ಗೆಲುವ ನೋಡಬೇಕು, ಗೆದ್ದ ಕಥೆಯ ಹಾಡಬೇಕು, ಮಕ್ಕಳೆಲ್ಲ ಕೇಳಿ ಸ್ಪೂರ್ತಿ ಪಡೆಯಬೇಕು, ನೀ ಗೆಲ್ಲಬೇಕು ಆಟದಲ್ಲಲ್ಲ ಆಟ ಆಡುವ ಮಾಟದಲ್ಲಿ, ಗೆಲುವಿಗಾಗಿ ಕಾಯ್ವ, ಗೆಲ್ಲಿಸುವವರಿಗಾಗಿ ಕಾದು ನಿಲ್ಲುವ ಜೀವವಾಗಬಾರದು ನನ್ನ ತಂಗಿ, ಗೆಲುವಿನಾಚೆಯ ಆಟ ದಕ್ಕಬೇಕು, ದೇವ ಮಾನವರು ಹರಸಬೇಕು ಅಂದಿದ್ದ. ಹೌದು ಅಷ್ಟಕ್ಕೂ ನೀನ್ಯಾರು, ಸಮುದ್ರ ದಾಟಿ ಬಂದ ದೇವ ಕುವರಿಯಾ, ಸಪ್ತ ಸಾಗರವ ದಾಟಿ ಬಂದ್ಯಾ..?

ಹೊಳೆವ ನೀಲ ಕಂಗಳ ಬಾಲೆ ನಗ್ತಾ ನಗ್ತಾ ನುಡಿದಳು – ಸಪ್ತ ಸಾಗರವ ದಾಟಿ ನೀನು ಬಂದೆ, ಚುಕ್ಕಿಗಳ ಎಡವುತ್ತ ನಾನು ಬಂದೆ, ಕಾಮನ ಬಿಲ್ಲ ಸೂರ್ಯನಿಂದ ನಿನಗೆಂದೇ ಕೊಡೊಯ್ದ ಅಣ್ಣ ನಿನ್ನಣ್ಣ ಮತ್ತೇನ್ ಹೇಳಿ ಕೊಟ್ಟ ನಿಂಗೆ..?

ಪುಟಾಣಿ ಹೇಳಿದ್ಲು – ನೀರಿನ ಹನಿಯ ಹೃದಯದಲ್ಲಿ ಏಳು ಬಣ್ಣವಿದೆಯೆಂದು ಸೂರ್ಯ ಕಿರಣ ಸ್ಪರ್ಶಿಸುವವರೆಗೂ ತಿಳೀದು, ನಮ್ಮ ಹೃದಯದ ಶಕ್ತಿ ನಮ್ಮುಸಿರ ಸ್ಪರ್ಶದಲ್ಲರಳಬೇಕು. ಎಲ್ಲರಿಗೂ ಬೆಳ್ಳಿ ಕಿರಣದಲ್ಲಿ ಏಳು ಬಣ್ಣ ಕಂಡ್ರೆ ನನ್ನಣ್ಣ ನಂಗೆ ನೀರ ಹನಿಯ ಹೃದಯದಲ್ಲಿ ಕಾಮನ ಬಿಲ್ಲ ಬಣ್ಣ ಕರಗಿರುವುದ ತೋರಿಸಿದ, ಹಾರುವ ಪಾತರಗಿತ್ತಿಯ ರೆಕ್ಕೆಗಳಲ್ಲಿ, ಅರಳುವ ಹೂವ ಚೆಲುವ ದಳಗಳಲ್ಲಿ ಬಣ್ಣಗಳ ಕಾಣಿಸಿದ.

ಸರಿ ಪುಟ್ಟ, ನಿನ್ನಣ್ಣ ನಿಂಗೆ ಸಾಕಾಗೋಷ್ಟು ಹೇಳೇ ಕಳ್ಸಿದಾನಲ್ಲ, ಮತ್ಯಾಕೆ ಅಳ್ತಾ ಇದ್ದೀಯಾ ನೀನೀಗ ಅಂದಳು ಕಿನ್ನರ ಬಾಲೆ.

ನಂಗೆ ಭೂಮಿದು ಗೊತ್ತು, ಈ ತೆರೆದ ಆಗಸದ ಅಂತರಂಗದಲ್ಲಿ ಹೆಂಗೆ ಆಟಾ ಆಡ್ಲಿ ಅಂದಳು ಪುಟಾಣಿ ಮರಿ.

ಆಗ ಆ ದೇವತೆ ಏನು ಹೇಳಿದ್ದು ಗೊತ್ತಾ..?

ಪುಟಾಣಿ ಮರಿ, ಹುಲ್ಲಿನ ಮೈದಾನವಿರಲಿ, ಮಣ್ಣಿನ ಮೈದಾನವಿರಲಿ, ಬಾನಂಗಳವೇ ಇರಲಿ, ಬದುಕ ಬಯಲೇ ಇರಲಿ, ಆಟ ಆಡುವವರಿಗೆ ಮೈದಾನವಾಗಬಾರದು ಮುಖ್ಯ…

ಮತ್ತೇನ್ ಫಲಿತಾಂಶವಾ..? ಅಂದಳು ಮಧ್ಯೆ ಪುಟಾಣಿ ಮರಿ

ಅಲ್ಲ ಮರಿ, ಆಟ ಆಡೋರಿಗೆ ಆಟ ಮಾತ್ರ ಮುಖ್ಯ, ಆಟವೊಂದೇ ಉಳಿದು ಉಳಿದಿದ್ದೆಲ್ಲ ಕಳೆದು, ಏಕಾಗ್ರವಾಗಿಬಿಡಬೇಕು, ಮೈದಾನವೂ ಮರೆವಂತೆ, ಆಗ ಬಯಸಿದ ಫಲಿತಾಂಶವೂ ಅದಾಗೇ ಬರುತ್ತೆ, ಸೋಲೂ ಗೆಲುವಿನಂತೆ ಆನಂದವಾಗುತ್ತೆ, ಆಟದಾಚೆಯ ಕಾಣ್ಕೆಯದು, ಆಟ ಆಡುವಾಗಲೇ ಆನಂದವರಳಿಸಬೇಕು ಫಲಿತಾಂಶವಾದಾಗ ಅಲ್ಲ ಮರಿ, ಹೀಗೇ ನೋಡು – ಎಷ್ಟೆಲ್ಲ ಬೆಟ್ಟ ಗುಡ್ಡ ಮೋಡ ರಾಶಿಗಳೇ ಬಂದರೂ ಸೂರ್ಯ ನಿಲ್ಲಸ್ತಾನಾ ಸಂಚಾರಾ.. ಇರ್ಲಿ ಬಿಡು ಇದೆಲ್ಲಾ, ನಾ ನಿಂಗೆ ಕಿರಣಗಳ ಹಿಡಿಯೋಕೆ ಸಹಾಯ ಮಾಡ್ಲಾ..?

ಅಣ್ಣನಾಡಿದ ಮಾತುಗಳ ರಿಂಗಣ ಕಿವಿಯಲ್ಲಿ, ದೇವ ಕಿನ್ನರಿ ನುಡಿದ ಪಾಠದ ಸ್ಪಂದನ ಎದೆಯಲ್ಲಿ

ಪುಟಾಣಿ ಮರಿ ಅಂತು – ಬೇಡ ಬೇಡ, ನೀನು ಸಹಾಯ ಮಾಡೋದು ಬೇಡ ಕಣೆ ಬಾಲೆ, ನನ್ನಾಟ ನಂದು, ನನ್ನ ಬದುಕಿನ ಆಟಕ್ಕೆ ಕಥೆಗೆ ನಾನೇ ನಾಯಕಿ, ಆಟಾನೂ ನಂದೆ, ಫಲಿತವೂ ನಂದೆ, ಕಿರೀಟವೂ ನಂದೆ.. ಅಣ್ಣನಂತೆ ಮಾತಾಡ್ತೀಯಾ ನೀನು ಕೂಡ, ನಾನು ಆಗಸದಂಗಳಕ್ಕೆ ಹೊರಟಾಗ ಅಣ್ಣ ಅಂದಿದ್ದ – ನೀನು ಎಲ್ಲಿದ್ದಿ ಅಂತ ಭೂಮಿಗೆ ಗೊತ್ತು, ಆದರೂ ಅದು ನಿನ್ನನ್ನೇ ಹುಡುಕಬೇಕು, ಹುಡುಕುವಂತಾಗಬೇಕು, ಅದಕ್ಕಾಗೇ ನೀನು ಆಟ ಆಡಬೇಕು, ಒಂದೊಂದೇ ಕಿರಣಗಳ ಬಿಡಿಸುತ್ತಾ ಸೇರಿಸುತ್ತಾ ನೀನೇ ಆಟವಾಡಬೇಕು, ಕಿರೀಟದಾಟವನ್ನೂ… ಬದುಕಿನಾಟವನ್ನೂ…

ಸರಿ ಹಾಗಾದ್ರೆ ನಾನು ಹೊರಡ್ಲಾ ಅಂತು ಕಿನ್ನರಿ,

ಎಲ್ಲಿಗೆ ಹೋಗ್ತಿ ನೀನೀಗ ಅಂತು ಪುಟಾಣಿಮರಿ

ಆಗ ಆ ಕಿನ್ನರಿ ನುಡಿದಳು – ಶಶಿ ತೇಲುವ ನೀಲಿಯೊಳಗೆ, ಪ್ರತಿ ಇರುಳ ತಾರೆ ಬಳಿಗೆ, ಉಳಿದ ಬದುಕಿನ ಇಂದುಗಳೊಳಗೆ, ಬರುವ ನಾಳೆಗಳ ಕನಸಿನೊಳಗೆ…

ಎನ್ನುತ್ತಾ ಅಂತರಿಕ್ಷದಂಗಳದಲ್ಲಿ ತೇಲಿ ತೇಲಿ ದೂರವಾದಳು…

ಕಿರಣಗಳ ಮಣಿಸಿ ಕಿರೀಟವಾಗಿಸಲು ತಲೆ ತುಂಬ ಕನಸುಗಳ ಹೊತ್ತು ತಾರೆಗಳ ಸೊಗಸ ಬೆಳಕ ಮಿಂಚ ಹಿಡಿದು ಪುಟಾಣಿ ಮರಿ ಆಟವಾದಳು, ಫಲಿತಗಳ ಹಂಗಿಲ್ಲದ ಪಾತ್ರವಾದಳು…

* * * * * * * * * *

ಮುಂದೇನಾಯ್ತು..?? ಕಥೆ ಕೇಳ್ತಾ ಕೇಳ್ತಾ ಮಲಗುವ ಮಕ್ಕಳ ಕನಸಿನಲ್ಲಿ ಕಥೆ ಮುಂದುವರೆಯಲಿ… ಗೆಲುವ ಸೊಗಸ ಹೊಳೆವ ಕಂಗಳಲ್ಲಿ ತುಂಬಲಿ…

ಈಗ ಮುಂದಿನ ಕಥೆ ನಿಮ್ಮದು, ಹೇಳಿ ಬದುಕಿನಾಟವ ಗೆದ್ದು ಕಿರೀಟ ಮುಡಿದು ಸಿಂಹಾಸನದಲ್ಲಿ ಯಾವಾಗ ಕುಳಿತುಕೊಳ್ತೀರಿ, ನೀರ ಹೃದಯದ ಕಾಮನ ಬಿಲ್ಲಿಗೆ ಯಾವಾಗ ಬಣ್ಣ ತುಂಬ್ತೀರಿ, ತಾರೆಗಳ ತೇರಲ್ಲಿ ಯಾವಾಗ ಮೌನ ಜೋಗುಳವ ಹಾಡ್ತೀರಿ, ಮಕ್ಕಳ ಕನಸಲ್ಲಿ ನಕ್ಷತ್ರಗಳ ಮಿಂಚ ಯಾವಾಗ ಕೊಡ್ತೀರಿ, ಅಪ್ಪ ಅಮ್ಮನ ಪ್ರೀತಿಯಾಗಿ ಬೆಚ್ಚಬೆಯ ಕಥೆಗಳ ಯಾವಾಗ ಮಕ್ಕಳ ಬಾಳಲ್ಲಿ ತುಂಬ್ತೀರಿ..

ಅರ್ಧಕ್ಕೆ ನಿಂತ ಮಾತು, ಮುಗಿಯದ ಕಥೆ ಅರ್ಧಕ್ಕೆ ಮುಗಿದು ಬಿಡುವ ಬದುಕು ಕಾಡುತ್ತದೆ, ಉಳಿದಿದ್ದು ಅಳಿಯದೆ ಮನಸ್ಸುಗಳಲ್ಲಿ ಮುಂದುವರೆಯಲಿ… ಜಾಗತೀಕರಣದ ಕಥೆಗಳಾಚೆ, ಕಾರ್ಟೂನ್ ಲೋಕದಾಚೆ ಮಕ್ಕಳಿಗೂ ಹಿರಿಯರಿಗೂ ರಾತ್ರಿಯ ಆಕಾಶ ಪಾಠಶಾಲೆಯಾಗಲಿ. ಆಕಾಶ, ನಕ್ಷತ್ರ, ಸೂರ್ಯ, ನೀರ ಹನಿಯೊಳಗಿನ ಕಾಮನಬಿಲ್ಲು – ಮಕ್ಕಳ ಆಸಕ್ತಿ, ವಿಜ್ಞಾನದ ಅರಿವೂ ಆಗಲಿ. ಅಣ್ಣ ತಂಗಿಯ ಭಾವ, ರಾತ್ರಿ ಕಥೆ ಕೇಳುತ್ತ ಹ್ಞೂಂ ಗುಡುತ್ತಲೆ ನಿದ್ದೆ ಹೋಗುವ ಮಕ್ಕಳ ಬಿಸುಪು ಅಪ್ಪ ಅಮ್ಮಂದಿರಿಗೆ ಮತ್ತೆ ಸಿಕ್ಕುವ ಕಾಲ ಬರಲಿ, ಬದುಕು ಭಾವ ಬಂಧದ ಸೊಗಸಾಗಿ ಸಂಭ್ರಮಿಸಲಿ…

* * * * * * * * * *

ಮುಗಿಸುವ ಮೊದಲು ಎಂದೋ ಓದಿದ್ದ ನಾಲ್ಕು ಸಾಲುಗಳ ನಿಮ್ಮೆದುರು ಹರವಿ ಮುಗಿಸುವ ಬಯಕೆ… ಈ ಸಾಲುಗಳ ಬರೆದ ಜೀವಕ್ಕೆ ನಾ ಕೃತಜ್ಞ…

“ಗಗನದಲಿ ಗೃಹತಾರೆ ಬುಗುರಿಗಳ ನಿಲ್ಲದ ಗಿರಿ ಗಿರಿ ಸದ್ದು…  ಶೃತಿಗಿದೆ ಕ್ಷೀರಪಥ, ಕಪ್ಪೆ ಚಿಪ್ಪಲ್ಲಿ ಮೂಢ ಕನಸುಗಳ ಏನೋ ಸ್ಪಂದನ ತಾಳ, ಕಡಲಿನಾ ನಾಲಗೆ ಉಲಿವ ಸುಸ್ವರ

ಓಂಕಾರದ ಜೇನ್ನಾದ, ಹೊಳೆದದ್ದು ತಾರೆ, ಉಳಿದಿದ್ದು ಆಗಸ..”

ಈ ಕಥೆಯ ತುಂಬ ಇಣುಕಿದ ಪುಟಾಣಿ ಮರಿಯ ಅಣ್ಣನ ಕಥೆಯನ್ನೂ ನಿಮಗೆ ಹೇಳೀಯೇನು ಒಂದಿನ… ಕೇಳ್ತೀರಲ್ವಾ…??

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)

Advertisements
 

4 responses to “ತಾರಾಲೋಕದಲ್ಲಿ ಪುಟಾಣಿ ಮಿಂಚು…

 1. Shrivatsa Kanchimane

  ಜುಲೈ 16, 2012 at 1:28 ಅಪರಾಹ್ನ

  ಅಣ್ಣನಾಗಲಾ…?
  ಪುಟಾಣಿ ಮರಿಯಾಗಲಾ…??
  ತಾರಾ ಲೋಕದ ಕಿನ್ನರಿಯಾಗಲಾ…???
  ಪ್ರಶ್ನೆಗಳ ಸರಮಾಲೆ ತಲೆಯೊಳಗೆ…
  ಇವರೆಲ್ಲರ ಭಾವಗಳನ್ನೂ ಒಳಗೆಳೆದುಕೊಂಡು ಬದುಕಿ ಸಂಭ್ರಮಿಸುವ ಹೆಬ್ಬಯಕೆ ಮನಕೆ…
  ಕಥೆಯ ಒಳಗಿಳಿಯುತ್ತಾ, ಕಥೆಯೊಂದಿಗೆ ಅರಳುತ್ತಾ, ತಾರಾ ಲೋಕದ ಕನಸಲ್ಲಿ ಮೀಯುತ್ತಾ ಬದುಕ ಬಯಲಲ್ಲಿ ನಿಂತ ಕಬೋಜಿಯಾಗಿ ಹೋದೆ…
  :::
  ಇನ್ನೇನ ಹೇಳಲಿ…
  ತುಂಬ ದಿನಗಳ ನಂತರ ನಿನ್ನ ಸಮುದ್ರ ತೀರದಲ್ಲಿ ಅಲೆಗಳೆದ್ದಿವೆ…
  ಭಾವಗಳ ಅಲೆಯಲ್ಲಿ ಮಿಂದೆದ್ದ ಖುಷಿ ನನ್ನದು…
  ಹೀಗೇ ಅಲೆಗಳೇಳುತಿರಲಿ ನಿರಂತರ…

   
  • ಸಮುದ್ರ ತೀರ

   ಜುಲೈ 17, 2012 at 6:06 AM

   Shrivatsa Kanchimane – ನಿನ್ನ ಸುಂದರ ಪ್ರತಿಕ್ರಿಯೆಯ ಅಲೆಯ ಸ್ಪರ್ಶಕ್ಕೆ ಸಲಾಂ,

   ವಿಶಾಲ ಸಮುದ್ರ, ನೀಲ ಆಕಾಶ ಎರಡೂ ಮನುಷ್ಯನ ಪಾಲಿಗೆ ಅಚ್ಚರಿಯೇ, ಪೂರ್ತಿ ಅರಿತುಕೊಳ್ಳಲಾಗದ ಕಾರಣದಿಂದಲೇ ಇವು ಮನುಷ್ಯನನ್ನ ಇನ್ನಿಲ್ಲದೆ ಕಾಡುತ್ತವೆ ಕೂಡ… ಚಿಕ್ಕಂದಿನಲ್ಲಿ ಚಂದಮಾಮನ ಕಥೆ ಕೇಳುತ್ತ ಬೆಳೆದವರು ನಾವು, ಈಗಲೂ ಬೆಳದಿಂಗಳು ತಾರೆಗಳ ಮೋಹದಲ್ಲಿ ಕನಸು ಕಾಣುವವರು ನಾವು… ಆದರೆ ಇಂದಿನ ಮಕ್ಕಳು ಇಂತಹ ಕಥೆಗಳನ್ನ miss ಮಾಡ್ಕೊತಿದಾರಾ..??

   ಸದಾ ನಮ್ಮೊಲ್ಲೊಬ್ಬ ಕಥೆ ಹೇಳುವ ಅಣ್ಣ, ಕಥೆ ಕೇಳುವ ಪುಟಾಣಿ ಮರಿ – ಕಥೆ ಅರಳಿಸುವ ಕಿನ್ನರಿ ಸೇರಿ ಸಂಭ್ರಮವರಳಿಸಲಿ…

    
 2. Sandhya Bhat

  ಜುಲೈ 16, 2012 at 11:09 ಅಪರಾಹ್ನ

  ಆಗಸದಾಚೆಯ ಲೋಕದ ಕಲ್ಪನೆಯನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿತ್ತು ನಿಮ್ಮ ಕಥೆ. ಓದಿ ಮುಗಿಸಿ ಕಂಪ್ಯೂಟರ್ ಪರದೆಯಾಚೆ ಕಣ್ಣು ಹಾಯಿಸಿದರೆ , ಅದೇ ಆಫೀಸ್, ಅದೇ ಸದ್ದುಗಳು. ಛೇ, ರಾತ್ರಿಯಾದರೂ ಓದಿ ಮಲಗಬೇಕಿತ್ತೇನೊ. ಕನಸಲ್ಲಾದರೂ ಕಥೆ ಮುಂದುವರೆಯುತ್ತಿತ್ತೇನೊ.
  “ಆಟ ಆಡುವಾಗಲೇ ಆನಂದವರಳಿಸಬೇಕು ಫಲಿತಾಂಶವಾದಾಗ ಅಲ್ಲ” ತುಂಬಾ ಇಷ್ತವಾಗಿದ್ದು.
  ಚಂದದ ಕಥೆ. ಮತ್ತೆ ಮತ್ತೆ ಕಥೆ ಕೆಳುವ ಆಸೆಯಾಗುತ್ತದೆ. ಆದರೆ ಈ ಕಾಂಕ್ರೀಟ್ ಕಾಡಿನಲ್ಲಿ ಕಥೆ ಹೇಳುವವರಾರು..??

   
  • ಸಮುದ್ರ ತೀರ - ರಘುನಂದನ ಕೆ

   ಜುಲೈ 17, 2012 at 5:48 AM

   Sandhya Bhat – ಪುಟಾಣಿ ಮಕ್ಕಳಿಗೆ ಕಥೆ ಹೇಳುತ್ತಾ ನನ್ನೊಳಗಿನ ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಮಗುವಾಗಲು ಪ್ರಯತ್ನಿಸುವುದರಲ್ಲಿ ಖುಷಿಯಾಗುವವ ನಾನು, ಪುಟ್ಟ ಮಕ್ಕಳ ಕುತೂಹಲ, ಕಥೆ ಹೇಳುವಾಗಿನ ನಮ್ಮ ಸ್ವರ ಸಂಚಾರ, ಮಧ್ಯೆ ಮಧ್ಯೆ ಅವರ ಪ್ರಶ್ನೆ, ಹ್ಞೂಂ ಎನ್ನುತ್ತ ನಿದ್ದೆ ಹೋಗುವ ಸೊಗಸು… ಇವೆಲ್ಲ ಎಷ್ಟೊಂದು ಚೆನ್ನ ಅಲ್ವಾ…?

   ಹೇಳಿದ್ದ ಕಥೆ ಅಕ್ಷರದಲ್ಲಿ ಹಿಡದಿಡಬಹುದಾ, ಅದು ಓದಿಸಿಕೊಳ್ಳುತ್ತದಾ… ಎನ್ನುವ ಅನುಮಾನಗಳೊಂದಿಗೆ ಈ ಪ್ರಯತ್ನ ಮಾಡಿದೆ… ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ…

    

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: